ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಸೂಚನೆ: ವಿರೋಧದ ಬಳಿಕ ಸುತ್ತೋಲೆ ವಾಪಸ್
ಬೆಂಗಳೂರು, ನ. 9: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನ.11ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಯುಕ್ತ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.
ಆ ಸುತ್ತೋಲೆಗೆ ಭಾರೀ ವಿರೋಧ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್. ಲತಾ, ಸುತ್ತೋಲೆ ವಾಪಸು ಪಡೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನ.11ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಣ ಇಲಾಖೆ ಸುತ್ತೋಲೆ
ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತೊಂದು ಸುತ್ತೋಲೆ ಹೊರಡಿಸಿ, ‘ಈ ಮೊದಲಿನ ಸುತ್ತೋಲೆ ವಾಪಸ್ ಪಡೆದಿರುವುದಾಗಿ’ ತಿಳಿಸಿದ್ದಾರೆ.
--------------------------------------------------
--------------------------------------------------------------
ಆದೇಶ ಕುರಿತು ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ಬಿಜೆಪಿ ಸರ್ಕಾರದ ಅಡಿಯಲ್ಲಿ ಶಿಕ್ಷಣ ಇಲಾಖೆಯು ಒಂದಲ್ಲ ಒಂದು ವಿಷಯದ ಮೇಲೆ ಗೂಂಡಾಗಿರಿ ಮಾಡುತ್ತಿದೆ. ಬಿಜೆಪಿಯ ಸಭೆ, ಸಮಾರಂಭಗಳಿಗೆ ಜನರು ಬರುತ್ತಿಲ್ಲ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಶೋಷಿಸಲು ಯತ್ನಿಸುತ್ತಿದೆ. ಸರ್ಕಾರದ ಈ ನಡೆ ಖಂಡನೀಯ ಎಂದು ಹೇಳಿದ್ದರು.
''ಬಿಜೆಪಿ ತನ್ನ ಸಂಕಲ್ಪ ಯಾತ್ರೆಲೀ ಖಾಲಿ ಚೇರುಗಳನ್ನು ನೋಡಿ ಸುಸ್ತಾಗಿದೆ, ಹಾಗಾಗೇ ಅವರ ರಾಜ್ಯಾಧ್ಯಕ್ಷರೇ ಈ ಯಾತ್ರೆಗಳಲ್ಲಿ ಭಾಗವಹಿಸುತ್ತಿಲ್ಲಾ! ಈಗ ಪ್ರಧಾನಿಗಳ ಕಾರ್ಯಕ್ರಮಕ್ಕೂ ಖಾಲಿ ಚೇರಿನ ಭಯದಲ್ಲಿ ಸರ್ಕಾರಿ ಶಾಲಾ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ಧಮ್ಕಿ ಹಾಕಿ ಸರ್ಕಾರ ಆಜ್ಞೆ ಮಾಡಿದೆ'' ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
► ಸುತ್ತೋಲೆಯಲ್ಲಿ ಏನಿತ್ತು?: ನ.2ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ತಮ್ಮ ಕಾಲೇಜಿನಿಂದ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳನ್ನು ನಿಯೋಜಿಸಿರುವ ಬಸ್ನ ನೋಡಲ್ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಕ್ಷೇಮವಾಗಿ ಕರತರಲು ಹಾಗೂ ಕಾರ್ಯಕ್ರಮ ಮುಗಿದ ನಂತರ ವಾಪಸ್ ಕರೆದುಕೊಂಡು ಹೋಗಲು ಸೂಚಿಸಿದೆ. ತಪ್ಪಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರೇ ಜವಾಬ್ದಾರಿ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಲಿದ್ದಾರೆ.