ಮಲಯಾನ್ಮ 200 ವರ್ಷಗಳ ಹಿಂದೆ ಕಣ್ಮರೆಯಾದ ಒಂದು ಭಾಷೆ!
ಮಲಾಮೆ, ಮೋಯ ಮಲೆಯಾಳಂ, ಜಸರೀ ಭಾಷೆಗಳ ಬಗ್ಗೆಯೂ ಒಂದು ಇಣುಕುನೋಟ...!
ಕೇರಳ, ದ.ಕ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ತಮಿಳುನಾಡಿನ ಕೆಲವು ಕಡೆ ಮದ್ರಸಾಗಳಲ್ಲಿ ಅರಬಿ ಮಲಯಾಳಂ ಅಕ್ಷರಗಳ ಮೂಲಕ ಅಕ್ಷರಜ್ಞಾನ ನೀಡಲಾಗುತ್ತಿದೆ. ಅರಬಿ ಮಲಯಾಳಂ ಎಂಬ ಅಕ್ಷರ ಪ್ರಕಾರ ಚಲಾವಣೆಗೆ ಬರುವ ಮೊದಲು ಮಲಯಾನ್ಮ ಎನ್ನುವ ಅಕ್ಷರ ಪ್ರಕಾರ ಅಥವಾ ಭಾಷೆ ಕೇರಳದಾದ್ಯಂತ ವಿಶೇಷವಾಗಿ ಮಲಬಾರ್ ಪ್ರದೇಶದಲ್ಲಿ ಚಲಾವಣೆಯಲ್ಲಿತ್ತು. ಆ ಅಕ್ಷರ ಪ್ರಕಾರಕ್ಕೆ ಕೋಲೆಳುತ್ತ್ ಎಂದೂ ಕರೆಯಲಾಗುತ್ತಿತ್ತು.
ಕೋಲೆಳುತ್ತ್ ಎಂಬುದು (ಕೋಲುಗಳನ್ನು ಉಪಯೋಗಿಸಿ ಬರೆಯುವುದು) ಹದಿನೈದನೇ ಶತಮಾನದ ವರೆಗೆ ಸಾಮಾನ್ಯವಾಗಿ ಮಲಯಾನ್ಮ ಭಾಷೆಯನ್ನು ಬರೆಯಲು ಉಪಯೋಗಿಸುತ್ತಿದ್ದ, ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಒಂದು ಲಿಪಿಯಾಗಿದ್ದು, ಬಂಡೆ ಅಥವಾ ತಾಮ್ರದ ತುಂಡುಗಳಲ್ಲಿ ಆ ಪ್ರಕಾರವನ್ನು ಬರೆಯಲಾಗುತ್ತಿತ್ತು ಎನ್ನಲಾಗಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ವ್ಯಾಪಕ ಬಳಕೆಯಲ್ಲಿದ್ದ ಆ ಭಾಷೆಗೆ ಉತ್ತರ ಮಲಯಾನ್ಮ, ದಕ್ಷಿಣ ಮಲಯಾಳಂ, ನಾನಂಮೋನಂ, ಮಲಯಾನ್ಮ, ಮಲಯಾಂ ತಮಿಳ್, ಚೇರ-ಪಾಂಡ್ಯ ಎಳುತ್ತ್, ರಾಯಸವಡಿವ್, ಗಜವಡಿವ್ ಮತ್ತಿತರ ಹೆಸರುಗಳಿಂದಲೂ ಕರೆಯಲ್ಪಡುತ್ತಿದ್ದವು.
ಕರಾವಳಿ ಮತ್ತು ಕೊಡಗು ಜಿಲ್ಲೆಯಲ್ಲಿ ಮಲಾಮೆ ಎಂದು ಕರೆಯಲಾಗುವ ಭಾಷೆಯು (ಈ ಭಾಷೆಗೆ ಮೋಯ ಮಲಯಾಳಂ ಎಂದೂ ಕರೆಯಲಾಗುತ್ತಿದೆ) ಕೋಲೆಳುತ್ತ್ ಲಿಪಿ ಉಪಯೋಗಿಸಿ ಬರೆಯಲಾಗುತ್ತಿದ್ದ ಮಲಯಾನ್ಮ (ಪ್ರಾಚೀನ ಮಲೆಯಾಳಂ ಭಾಷೆ ಎನ್ನುವಂತೆಯೂ ಇಲ್ಲ. ಕಾರಣ ಮಲೆಯಾಳಂ ಎನ್ನುವ ಪದಬಳಕೆ 200 ವರ್ಷಗಳ ಹಿಂದಿನ ವರೆಗೆ ಚಾಲ್ತಿಯಲ್ಲಿ ಇರಲಿಲ್ಲ ಎಂದು ವಾದಿಸುವವರೂ ಇದ್ದಾರೆ.) ಭಾಷೆಯ ಅಳಿದುಳಿದ ಭಾಗವಾಗಿ ಇಂದಿಗೂ ಜೀವಂತವಾಗಿರುವ ಭಾಷೆಯಾಗಿರಬಹುದೇ ಎಂದು ಅನುಮಾನಿಸಬೇಕಾಗಿದೆ.
ಮಲಯಾನ್ಮ ಲಿಪಿಯ ಬರಹಗಳು ಕೇರಳದಾದ್ಯಂತ ಈಗ ಬಳಕೆಯಲ್ಲಿರುವ ಮಲೆಯಾಳಂ ಭಾಷೆಯಂತೂ ಅಲ್ಲ ಎಂಬುದನ್ನು ಮಲೆಯಾನ್ಮ ಬರವಣಿಗೆಯಲ್ಲಿ ಕಾಣಬಹುದು. ಬಹುತೇಕ ‘ತುಹ್ಫತುಲ್ ಮುಜಾಹಿದೀನ್’ ಕೃತಿ ಬರೆದ ಝೈನುದ್ದೀನ್ ಮಖ್ದೂಮರು ಉಲ್ಲೇಖಿಸಿದ್ದ ಕಾಲಘಟ್ಟದಲ್ಲೂ ಮಲಯಾನ್ಮ ಎಂದು ಕರೆಯಲಾಗುತ್ತಿದ್ದ ಕೋಲೆಳುತ್ತ್ ಪ್ರಚಾರದಲ್ಲಿ ಇತ್ತು.
ಮಲೆಯಾನ್ಮ ಎಂಬ ಪದವನ್ನು ಪ್ರಾದೇಶಿಕವಾಗಿ ‘ಮಲಾಮೆ’ ಎಂದು ಬಳಸಿರಲೂ ಬಹುದು. ಕೋಲೆಳುತ್ತ್ ಎಲ್ಲ ಧರ್ಮೀಯರೂ ಬಳಸುತ್ತಿದ್ದ ಲಿಪಿಯಾಗಿದ್ದರೂ ಹೆಚ್ಚಾಗಿ ಮುಸ್ಲಿಮರು ಬಳಸುತ್ತಿದ್ದ ಬಗ್ಗೆ ಹಲವಾರು ಕೃತಿಗಳಲ್ಲಿ ಉಲ್ಲೇಖವಿದೆ. ಬರಬರುತ್ತಾ ಅರಬಿ ಮಲೆಯಾಳಂ ಚಲಾವಣೆಗೆ ಬಂದಾಗ, ಮುಸ್ಲಿಮರು ಕೋಲೆಳುತ್ತ್ ಲಿಪಿಯಿಂದ ದೂರ ಉಳಿದಿರಬೇಕು ಎಂದು ಅನುಮಾನಿಸಬೇಕಿದೆ.
ಭಾಷೆ ಎಂಬುದು ಹಲವು ಸಂಸ್ಕೃತಿಗಳನ್ನು ಅಳವಡಿಸಿಕೊಂಡವರು ಪರಸ್ಪರ ವಿನಿಮಯಕ್ಕೆ ಬಳಸುವ ಕೊಂಡಿ ಎನ್ನಬಹುದು. ಆದರೆ, ಭಾಷೆ ಎಂಬುವುದು ಆ ಭಾಷೆಯನ್ನಾಡುವವರ ವೃತ್ತಿ, ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುತ್ತದೆ ಎಂಬುದು ಕೆಲವರ ವಾದ. ಮಲಯಾನ್ಮವನ್ನು ನೋಡಿದರೆ, ಆ ಭಾಷೆಯನ್ನು ಕೇವಲ ಮುಸಲ್ಮಾನರು ಮಾತ್ರ ಬಳಸಲಿಲ್ಲ. ಬದಲಾಗಿ ಮಲಬಾರ್ ಪ್ರದೇಶದ ಎಲ್ಲಾ ಧರ್ಮೀಯರೂ ಬಳಸಿದ್ದಾಗಿ ಇತಿಹಾಸ ಹೇಳುತ್ತದೆ. ಹಾಗಿರುವಾಗ ಆ ಭಾಷೆ ಸಂಸ್ಕೃತಿ ಅಥವಾ ವೃತ್ತಿಯೊಂದಿಗೆ ಬೆಸೆದುಕೊಂಡಿದೆ ಎಂಬ ವಾದಕ್ಕೆ ತಿರುಳಿಲ್ಲ ಎನ್ನಲೇ ಬೇಕಾಗುತ್ತದೆ. ಅದೂ ಅಲ್ಲದೆ ಒಂದು ಜನಾಂಗಕ್ಕೆ ಸೀಮಿತವಾದ ಭಾಷೆಯನ್ನು ಇತರ ಜನಾಂಗದವರೂ ಬಳಸುತ್ತಾರೆ ಎಂಬ ವಾದದಲ್ಲಿ ಅರ್ಥವೂ ಇಲ್ಲ.
ಕೊಡಗು ಜಿಲ್ಲೆ ಮತ್ತು ದ.ಕ.ಜಿಲ್ಲೆಗೊಳಪಟ್ಟ ಸುಳ್ಯ, ಪುತ್ತೂರು ಭಾಗದ ಬ್ಯಾರಿ ಮುಸ್ಲಿಮರು ಮಾತನಾಡುವ ಭಾಷೆಗೂ ಕಾಸರಗೋಡಿನಲ್ಲಿ ಮಾತನಾಡುವ ಭಾಷೆಗೂ ಸಾಮ್ಯತೆ ಕಂಡುಬರುತ್ತದೆ. ವಿಟ್ಲ, ಕನ್ಯಾನ, ಸಾಲೆತ್ತೂರು, ಬಾಕ್ರಬೈಲ್, ಮುಡಿಪು, ಮಂಜನಾಡಿ, ಕಿನ್ಯ, ಉಚ್ಚಿಲ ಮುಂತಾದೆಡೆ ಮಾತನಾಡುವ ಭಾಷೆಯಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಕಂಡು ಬಂದರೂ, ತುಳುನಾಡಿನ ಇತರ ಬ್ಯಾರಿ ಮುಸ್ಲಿಮರು ಬಳಸುವ ಭಾಷೆ ಅಥವಾ ಅದರ ಪ್ರಭೇದ ಭಾಷೆಗಳೊಂದಿಗೆ ತುಲನೆ ಮಾಡುವುದು ಸಾಧ್ಯವಿಲ್ಲ. ಅಂತೆಯೇ ಮಲೆಯಾಳಂ ಭಾಷೆಯೊಂದಿಗೆ ಸಂಬಂಧವನ್ನು ಉಳಿಸಿಕೊಂಡಿದೆ ಕೂಡ.
ವಿಶೇಷವಾಗಿ ಹೇಳಬೇಕಾಗಿರುವುದು ಏನೆಂದರೆ, ಬೆಲ್ಚಪಾಡರು, ಮೋಯರು, ತೀಯರು, ಭೋವಿ ಜನಾಂಗ ಮತ್ತಿತರರು ಈ ಭಾಷೆಯನ್ನೇ ಮನೆಗಳಲ್ಲಿ ಬಳಸುತ್ತಾರೆ. ಅವರು ಬಳಸುವ ಕೆಲವು ಪದಗಳಲ್ಲಿ ವ್ಯತ್ಯಾಸ ಕಂಡುಬಂದರೂ ಅವುಗಳನ್ನು ಉಪ ಪ್ರಭೇದಗಳಾಗಿ ಪರಿಗಣಿಸಬಹುದಾಗಿದೆ. ಆದರೆ, ಪ್ರಭೇದ ಭಾಷೆಗಳಿಗೆ ಒಂದೊಂದು ಹೆಸರು ಜೋಡಣೆಯಾಗುತ್ತಾ ಬಂದಿದ್ದು, ಮಲಾಮೆ ಭಾಷೆಯ ಪ್ರಗತಿಗೆ ತೊಡಕಾಗಿ ಪರಿಣಮಿಸಿದೆ.
ಕರಾವಳಿಯ ಖ್ಯಾತ ಮುಸ್ಲಿಮ್ ಬರಹಗಾರರಾದ ಬೊಳುವಾರು ಮುಹಮ್ಮದ್ ಕುಂಞಿ, ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಬಿ.ಎಂ. ಇಚ್ಚಿಲಂಗೋಡ್ (ಅವರು ಕಾಸರಗೋಡು ಜಿಲ್ಲೆಯ ಇಚ್ಚಿಲಂಗೋಡ್ ಮೂಲದವರು) ಅಲ್ಲದೆ, ಅನೇಕ ಯುವ ಬರಹಗಾರರ ಮಾತೃಭಾಷೆ ಕೂಡ ಮಲಾಮೆಯಾಗಿದೆ. ತುಳು ಚಿತ್ರರಂಗದ ಖ್ಯಾತ ನಟ ಅರವಿಂದ್ ಬೋಳಾರ್ ಕೂಡ ಈ ಭಾಷೆ ಮಾತನಾಡುವ ತೀಯ ಜನಾಂಗದವರಾಗಿದ್ದು, ಅವರ ಕೆಲವೊಂದು ಭಾಷಣಗಳ ತುಣುಕುಗಳಲ್ಲಿ ವಿಶಿಷ್ಟ ಭಾಷಾ ಶೈಲಿಯನ್ನು ನೀವು ಗಮನಿಸಿರಬಹುದು.
ಮಲಾಮೆ ಭಾಷೆಯನ್ನು ‘ಮೋಯ ಮಲೆಯಾಳಂ’ ಅಂತಲೂ ಕರೆಯಲಾಗುತ್ತಿದ್ದು, ಆ ಭಾಷೆಯಲ್ಲಿ ಹಿರಿಯ ಸಾಹಿತಿ ಅಮೃತ ಸೋಮೇಶ್ವರರು ಪದಕೋಶವನ್ನೂ ಹೊರತಂದಿದ್ದಾರೆ.
ಎರಡು ರೀತಿಯ ಲಿಪಿ
‘‘ಆಧುನಿಕ ಮಲಯಾಳಂ ಲಿಪಿಯ ಹಿಂದೆ ಬಳಕೆಯಲ್ಲಿದ್ದ ಪ್ರಮುಖ ರೂಪಗಳಲ್ಲಿ ಮಲಯಾನ್ಮ ಕೂಡ ಒಂದು. ಮಲಯಾಳಂ ಲಿಪಿಯ ಇತಿಹಾಸವು ಹೆಚ್ಚಿನ ಭಾರತೀಯ ಲಿಪಿಗಳಂತೆ ಪ್ರಾಚೀನ ಬ್ರಾಹ್ಮಿ ಲಿಪಿಯಿಂದಲೇ ರೂಪ ತಾಳಿರಬೇಕು. ‘ಮಲಯಾನ್ಮ’ ಎಂದು ಕರೆಯಲ್ಪಡುವ ಲಿಪಿಯ ಪೂರ್ಣ ಹೆಸರು ‘ದಕ್ಷಿಣ ಮಲಯಾನ್ಮ’ ಎಂದಾಗಿದೆ. ಹಿಂದಿನ ಲಿಪಿಯನ್ನು ಉತ್ತರದಲ್ಲಿ ಮಲಯಾಯ್ಮ ಅಥವಾ ಮಲಯಾನ್ಮ ಎಂದೂ ಕರೆಯಲಾಗುತ್ತಿತ್ತು.
ಮಲಯಾನ್ಮ ಲಿಪಿಯಲ್ಲಿ ಎರಡು ರೀತಿಗಳನ್ನು ಕಾಣಬಹುದಾಗಿದ್ದು, ಒಂದು ಪೌರಾಣಿಕವಾಗಿ ಅಭ್ಯಾಸ ಮಾಡುವ ವೃತ್ತಾಕಾರದ ಲಿಪಿ. (ಇದನ್ನು ಕೋಲೆಳುತ್ತ್ ಎಂದೂ ಕರೆಯುತ್ತಾರೆ) ಚೋನರ್(ಮಪಿಳಾರಿಗೆ ಬಳಸುವ ಇನ್ನೊಂದು ಪದ)ಗೆ ಈ ಲಿಪಿ ಇಂದಿಗೂ ದಾಖಲೆಯಾಗಿದೆ. ಎರಡನೆಯದು ಸಂಸ್ಕೃತ ಪಠ್ಯಗಳಲ್ಲಿ ಮೊದಲು ಬರೆಯಲ್ಪಟ್ಟ ಆರ್ಯ ಬರವಣಿಗೆ. ಅದು ಸರ್ವ ಸಮ್ಮತ ಎಂದೂ ಹೇಳಬಹುದು’’.
(ಗುಂಡರ್ಟ್ ಬರೆದ ಮಲಯಾಳಂ ವ್ಯಾಕರಣ -ಪುಟ 2)
ಕೃತಿಗಳಲ್ಲಿ ಉಲ್ಲೇಖ
500 ವರ್ಷಗಳ ಹಿಂದೆ ಝೈನುದ್ದೀನ್ ಮಖ್ದೂಮರು ರಚಿಸಿದ ತುಹ್ಫತುಲ್ ಮುಜಾಹಿದೀನ್ ಎಂಬ ಕೃತಿಯಲ್ಲಿ ‘ಕೇರಳದ ಹೊರಗೆ ಕರ್ನಾಟಕದ ಕೆನರಾ, ತಮಿಳುನಾಡಿನ ನೀಲಗಿರಿ ಜಿಲ್ಲೆಗಳಲ್ಲಿ ವಾಸವಾಗಿರುವ ಮುಸ್ಲಿಮರು ಮಾಪಿಳಾಗಳಾಗಿರುವ ಕಾರಣ ಅವರ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ’ ಎಂದು ಬರೆಯಲಾಗಿದೆ. ಈ ಬಗ್ಗೆ ಪಾಶ್ಚಾತ್ಯ ಬರಹಗಾರ ರೋಲಂಡ್ ಮಿಲ್ಲರ್ ತನ್ನ ‘ಮಾಪಿಳಾ ಮುಸ್ಲಿಮರು’ ಎಂಬ ಇಂಗ್ಲಿಷ್ ಕೃತಿಯಲ್ಲಿ ಕೂಡ ಉಲ್ಲೇಖಿಸಿದ್ದಾರೆ.
ಅಂದರೆ, 500 ವರ್ಷಗಳ ಹಿಂದೆ ಕೆನರಾ ಅಥವಾ ದ.ಕ.ಜಿಲ್ಲೆಯಲ್ಲಿ ಮಾಪಿಳಾ ಮುಸ್ಲಿಮರು ಹೆಚ್ಚಾಗಿ ವಾಸವಿದ್ದರು ಎಂಬುದನ್ನು ತುಹ್ಫತುಲ್ ಮುಜಾಹಿದೀನ್ ಗ್ರಂಥದ ಆಧಾರದಲ್ಲಿ ಖಾತರಿಪಡಿಸಬಹುದು.
‘ಜಸರೀ’ ಭಾಷೆ
ಮಲಾಮೆ ಭಾಷೆಯೊಂದಿಗೆ ಸಾಮ್ಯತೆ ಇರುವ ಭಾಷೆಯೊಂದು ಲಕ್ಷದ್ವೀಪದಲ್ಲಿದ್ದು, ಅದಕ್ಕೆ ‘ಜಸರೀ’ (ಆ ಪದ ಅರಬಿ ಮೂಲದಿಂದ ಬಂದಿದ್ದು, ‘ದ್ವೀಪ ನಿವಾಸಿ’ ಎಂಬ ಅರ್ಥ ಬರುತ್ತದೆ) ಭಾಷೆ ಎನ್ನಲಾಗುತ್ತಿದೆ. ಚೆತ್ಲತ್, ಬಿತ್ರ, ಕಿಲ್ತಾನ್, ಕಡಮತ್ತ್, ಅಮಿನೀ, ಕವರತ್ತಿ, ಅಂದ್ರೋತ್ತ್, ಅಗತ್ತಿ, ಕಲ್ಪೇನಿ ಮುಂತಾದ ದ್ವೀಪಗಳಲ್ಲಿ ಆ ಭಾಷೆ ಮಾತನಾಡುವವರು ನೆಲೆಸಿದ್ದಾರೆ.
ಆದರೆ, ಪ್ರತೀ ದ್ವೀಪಗಳಲ್ಲೂ ಮಾತನಾಡುವ ಭಾಷೆಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಆ ಭಾಷೆಯನ್ನು ಬಳಕೆ ಮಾಡಲಾದ ‘ಸಿಂಜಾರ್’ ಎನ್ನುವ ಮಲೆಯಾಳಂ ಸಿನೆಮಾವೊಂದು ಇತ್ತೀಚೆಗೆ ಕೇರಳದಾದ್ಯಂತ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ದೇಶೀಯ ಪುರಸ್ಕಾರವನ್ನೂ ಪಡೆದಿತ್ತು.
ಜಸರೀ ಭಾಷೆಯು ಮಲೆಯಾಳಂ ಭಾಷೆಯೊಂದಿಗೆ ಬೆಸೆದುಕೊಂಡಿದ್ದರೂ ಅದು ಕರಾವಳಿಯ ಮಲಾಮೆಯೊಂದಿಗೆ ಹತ್ತಿರದ ಸಂಬಂಧವನ್ನು ಇರಿಸಿಕೊಂಡಿದೆ. ಹಿಂದೆ ವ್ಯವಹಾರಕ್ಕೆ ಲಕ್ಷದ್ವೀಪದವರು ಮಂಗಳೂರನ್ನೇ ನೆಚ್ಚ್ಚಿಕೊಂಡಿದ್ದು, (ಈಗಲೂ ಬಹಳಷ್ಟು ಲಕ್ಷದ್ವೀಪದ ನಿವಾಸಿಗಳು ಮಂಗಳೂರಿನೊಂದಿಗೆ ವ್ಯವಹಾರವನ್ನು ಇರಿಸಿಕೊಂಡಿದ್ದಾರೆ) ಆ ಕಾರಣಕ್ಕೆ ಮಲಾಮೆ ಭಾಷೆಯ ಕೆಲವು ಪದಗಳು ಆ ಭಾಷೆಯೊಂದಿಗೆ ಬೆಸದುಕೊಂಡಿ ರಲೂ ಬಹುದು.