varthabharthi


ಈ ಹೊತ್ತಿನ ಹೊತ್ತಿಗೆ

ಕ್ಯಾಸ್ಟ್ ಕೆಮಿಸ್ಟ್ರಿಯೊಳಗಿಂದ...

ವಾರ್ತಾ ಭಾರತಿ : 10 Nov, 2022
ಡಾ. ಬಂಜಗೆರೆ ಜಯಪ್ರಕಾಶ್

ತನ್ನೊಳಗಿನ ಪ್ರೇರಣೆ ಮತ್ತು ಹಂಬಲ ಸಮಾಜದೊಳಗಿನ ಹುಡುಕಾಟವಾಗಿ, ಅದು ಕಡೆಗೆ ತನ್ನ ಜ್ಞಾನ ಕ್ಷೇತ್ರದ ಅಧ್ಯಯನವಾಗಿ ಮಾರ್ಪಡುವ ಮಾದರಿಯ ಬರವಣಿಗೆಯನ್ನು ನಾನು ಸಿ.ಜಿ. ಲಕ್ಷ್ಮೀಪತಿಯವರ ಈ ಕೃತಿಯಲ್ಲಿ ಗುರುತಿಸಿದ್ದೇನೆ.

ಇವರಿಗೆ ಜಾತಿಯನ್ನು ವಿವರಿಸುವಾಗ ಅದರ ಸಾಂಸ್ಥಿಕ ಗುಣ ಲಕ್ಷಣಗಳನ್ನು ಮಾತ್ರ ಮುಂದಿಡುವ ಕ್ರಮ ರೂಢಿಗತವಾದದ್ದು. ಆದರೆ, ಅದರ ಮಾನವಿಕ ಅಭಿವ್ಯಕ್ತಿ ಲಕ್ಷಣಗಳೇನು? ಬದಲಾದ ಕಾಲಘಟ್ಟದಲ್ಲಿ ಜಾತಿ ಕುರುಹುಗಳು ಊರುಗಳಲ್ಲಿನ ಕೇರಿಗಳ ಅಸ್ತಿತ್ವವಾಗಿ, ಉಡುಪು, ಆಹಾರಗಳ ಭಿನ್ನತೆಯಾಗಿ, ಗೃಹ ನಿರ್ಮಾಣ ರೂಪಗಳ ವ್ಯತ್ಯಾಸವಾಗಿ ಪ್ರಕಟಗೊಳ್ಳುವುದು ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ಈ ಕುರುಹುಗಳು ಮತ್ತಷ್ಟು ಮಸುಕಾಗಿರುತ್ತವೆ.

ಜಾತಿ ಎನ್ನುವುದು ಕಟ್ಟುನಿಟ್ಟಾಗಿ ವೈವಾಹಿಕ ಒಳಬಾಂಧವ್ಯಗಳ ಗುಂಪಾಗಿಯೂ ಇಂದು ಉಳಿದುಕೊಂಡಿಲ್ಲ. ಹಲವು ಉಪಜಾತಿ ಗಳು ತಮ್ಮ ವಿವಾಹ ಸಂಬಂಧಗಳ ನಿಷೇಧಗಳನ್ನು ಮುರಿಯ ತೊಡಗಿವೆ. ಸಾಂಸ್ಕೃತಿಕ ಆಚರಣೆಗಳ ದೃಷ್ಟಿಯಿಂದ ನೋಡು ವಾಗಲೂ, ಪ್ರತೀ ಜಾತಿ ಗುಂಪಿಗಿದ್ದ ವಿಭಿನ್ನತೆಗಳು ಹಲವು ಸಂಕರಗಳಿಗೆ ಒಳಗಾಗಿವೆ. ಹೀಗಿರುವಾಗ ಭಾರತದ ಅತ್ಯಂತ ಪುರಾತನವಾದ ಜಾತಿ ಸಂಸ್ಥೆ, ವರ್ತಮಾನದ ಅತ್ಯಂತ ಪ್ರಭಾವಿ ಸಾಮಾಜಿಕ ಧ್ರುವೀಕರಣದ ಸಾಧನವಾಗಿರುವ ಜಾತಿ ಯಾವ ರೂಪಗಳಲ್ಲಿ ತನ್ನ ಚಹರೆಗಳನ್ನು ವ್ಯಕ್ತಪಡಿಸುತ್ತದೆ? ಈ ಬಗ್ಗೆ ಲಕ್ಷ್ಮೀಪತಿಯವರು ನೀಡುತ್ತಾ ಹೋಗುವ ಗುಣಲಕ್ಷಣಗಳ ಪಟ್ಟಿ ನಾವೀನ್ಯತೆಯಿಂದ ಕೂಡಿದೆ.

ಅವರು ಸೂಚಿಸುವ ‘ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿಯೇ ಜಾತಿಯಾಗಿದೆ’ ಎಂಬ ವಿಶ್ಲೇಷಣೆ ಲೇಖಕರಿಗಿರುವ ಹೊಸ ದೃಷ್ಟಿಕೋನವನ್ನು, ಅಧ್ಯಯನ ಮಾಡುವಾಗ ಅಳವಡಿಸಿಕೊಳ್ಳುವ ಹೊಸ ಪರಿಕರಗಳನ್ನು ನಿದರ್ಶಿಸುತ್ತಿದೆ. ಭಾಷೆ, ಆಂಗಿಕ ಭಾಷೆ, ಸಂಪರ್ಕ ಮತ್ತು ಸಂವಹನ ಕ್ರಮಗಳು ನೆನಪುಗಳ ಜೋಡಣೆ ಮುಂತಾದ ಅಂಶಗಳಲ್ಲಿ ಈ ಜಾತಿ ಲಕ್ಷಣಗಳು ಕೇಂದ್ರೀಕೃತವಾಗಿವೆ ಎಂಬುದನ್ನು ಸೂಚಿಸುವ ರೀತಿ ಅವರು ವರ್ತಮಾನದ ಸಮಾಜದ ಬಗ್ಗೆ ಹೊಂದಿರುವ ಅಧ್ಯಯನಶೀಲತೆಯನ್ನು ಸೂಚಿಸುತ್ತಿದೆ.
ಈ ಲೇಖನ ಮಾಲೆಯಲ್ಲಿ ನಾನು ಮೆಚ್ಚಿಕೊಳ್ಳುವ ಹಲವಾರು ಅಂಶಗಳು ಬೀಜರೂಪಿಯಾಗಿ ಅಡಗಿವೆ.

ಬ್ರಾಹ್ಮಣ ಫೋಬಿಯಾದ ಲಕ್ಷಣಗಳು ವಿವಿಧ ಜನವರ್ಗಗಳಲ್ಲಿ ಪ್ರಕಟಗೊಳ್ಳುವ ರೀತಿಯನ್ನು ವಿವರಣೆಗೊಳಪಡಿಸಿರುವ ರೀತಿಯೂ ಅಧ್ಯಯನದ ಸ್ಪಷ್ಟತೆಯನ್ನೂ, ಲಕ್ಷ್ಮೀಪತಿಯವರಿಗೆ ಇರುವ ಅಧ್ಯಯನದ ಸಾಮರ್ಥ್ಯವನ್ನೂ ಸೂಚಿಸುತ್ತಿದೆ. ನಿರಂತರ ಅಧ್ಯಯನಶೀಲತೆಯ ಜೊತೆಗೆ ಹಲವು ಬಗೆಯ ಸಾಮಾಜಿಕ ಒಡನಾಟಗಳ ಮೂಲಕ ಹಲವಾರು ಸಿದ್ಧಾಂತಗಳು ಸಮಾಜದಲ್ಲಿ ಅಳವಡಿಕೆಯಾಗುತ್ತಿರುವ ರೀತಿಯನ್ನು ಗ್ರಹಿಸಬಲ್ಲವರಾಗಿರುವ ಸಿ.ಜಿ. ಲಕ್ಷ್ಮೀಪತಿಯವರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಈಗ ಬಲಗೊಳ್ಳುತ್ತಿರುವ ಬಹುಶಿಸ್ತೀಯ ಅಧ್ಯಯನ ಕ್ರಮದ ತಲೆಮಾರಿನವರಲ್ಲಿ ಒಬ್ಬರಾಗಿದ್ದು ನಾನು ಭರವಸೆಯಿಟ್ಟಿರುವ ಸಾಮಾಜಿಕ ಚಿಂತಕರಲ್ಲೊಬ್ಬರಾಗಿ ಮೂಡಿಬರುತ್ತಾರೆ.

‘ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿ ಲಕ್ಷ್ಮೀಪತಿಯವರ ಸಾಮರ್ಥ್ಯದ ಸಾಧ್ಯತೆಗಳ ಜೊತೆ ಅವರು ಮುಂದೆ ನಡೆಸಬಹುದಾಗಿರುವ ಅಧ್ಯಯನಗಳ ಹಾದಿಯನ್ನೂ ಬಿಂಬಿಸುತ್ತಿದೆ. ಬ್ರಾಹ್ಮಣರು ಹಿಂದೂಗಳಲ್ಲ ಅವರದು ಪ್ರತ್ಯೇಕ ಬ್ರಾಹ್ಮಣ ಧರ್ಮ ಎಂಬ ಅಂಶವನ್ನು ಮಂಡಿಸುವಾಗ, ಬ್ರಾಹ್ಮಣ ಧರ್ಮದ ಮತಾಂತರದ ರೀತಿ ಹೇಗೆ ತಾತ್ವಿಕ ಮಟ್ಟದಲ್ಲಿ ನಡೆಯುತ್ತದೆ ಹಾಗೂ ಅದರಿಂದ ಇತರರನ್ನು ಮತಾಂತರಗೊಳಿಸಿಯೂ, ಮತಾಂತರಗೊಳಿಸಿದ ಆಪಾದನೆಗೊಳಗಾಗದೆ ಹೇಗೆ ಅದು ಸಂಭಾಳಿಸಿಕೊಂಡು ಬಂದಿದೆ ಎಂಬ ಅಂಶವನ್ನು ಮಂಡಿಸುವಾಗ ಅವರು ವ್ಯಕ್ತಗೊಳಿಸುವ ವಿಷಯ ಸ್ಪಷ್ಟತೆ ಗಮನಾರ್ಹವಾಗಿದೆ. ಅಹಿಂದ ಚಳವಳಿಯಂತಹ ಇತ್ತೀಚಿನ ವಿದ್ಯಮಾನವನ್ನು ಗ್ರಹಿಸುವ ನೆಲೆಗಳಲ್ಲೂ ಅವರ ವಿಶ್ಲೇಷಣೆಯ ಕಸುವು ಕಂಡುಬರುತ್ತದೆ.
(ಮುನ್ನುಡಿಯಿಂದ)


ಪುಸ್ತಕ: ಕ್ಯಾಸ್ಟ್ ಕೆಮಿಸ್ಟ್ರಿ
ಜಾತಿ ಸಂಕಥನಗಳ ನಿರೂಪಣೆ
ಲೇಖಕರು: ಡಾ. ಲಕ್ಷ್ಮೀಪತಿ ಸಿ.ಜಿ.

ಬೆಲೆ: 350ರೂ. ಪ್ರಕಾಶಕರು: ಸಂಚಲನ,
ನಂ:505,18ನೇ ಕ್ರಾಸ್, ನಾರಾಯಣ ನಗರ, 1ನೇ ಬ್ಲಾಕ್, ಕನಕಪುರ ಮುಖ್ಯ ರಸ್ತೆ, ಬೆಂಗಳೂರು-560062

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)