ಬಿಜೆಪಿಯೊಳಗಿರುವ ‘ಹಿಂದು’ಳಿದ ವರ್ಗಗಳು ಕೇಳುತ್ತಿರುವ ಪ್ರಶ್ನೆಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆಲವೇ ದಿನಗಳ ಹಿಂದೆ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ಕಲಬುರ್ಗಿಯಲ್ಲಿ ಬೃಹತ್ ಸಮಾವೇಶ ನಡೆದಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲ ಹಿರಿಯ ‘ಮುಂದುವರಿದ ವರ್ಗಗಳ’ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಈ ಸಮಾವೇಶದಲ್ಲಿ ರಾಜಕಾರಣಿಗಳು ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಹಾಗೆಯೇ ಬಿಜೆಪಿಯೊಳಗೆ ಈಶ್ವರಪ್ಪ ಅವರು ಕೂಡ ಆಗಾಗ ಹಿಂದುಳಿದ ವರ್ಗಗಳ ಶಕ್ತಿಯನ್ನು ಆರೆಸ್ಸೆಸ್ ನಾಯಕರಿಗೆ ನೆನಪು ಮಾಡಿಕೊಡುವುದಿದೆ. ಐದು ವರ್ಷಗಳ ಹಿಂದೆ ಈಶ್ವರಪ್ಪ ನೇತೃತ್ವದಲ್ಲಿ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಒಂದು ಸ್ಥಾಪನೆಯಾಗಿರುವುದನ್ನೂ ನಾವಿಲ್ಲಿ ಸ್ಮರಿಸಬಹುದು. ಕಾರಣಾಂತರಗಳಿಂದ ಸಚಿವ ಸ್ಥಾನ ಕಳೆದುಕೊಂಡಿರುವ ಈಶ್ವರಪ್ಪ ಅವರು ಇದೀಗ ಆ ಬ್ರಿಗೇಡ್‌ನ್ನು ಮತ್ತೆ ತಟ್ಟಿ ಎಬ್ಬಿಸುವ ಬೆದರಿಕೆಯನ್ನು ಬಿಜೆಪಿಯ ನಾಯಕರಿಗೆ ನೀಡುತ್ತಿರುವ ಬಗ್ಗೆ ವದಂತಿಗಳಿವೆ. ಅದೇನೇ ಇರಲಿ, ‘ಬಿಜೆಪಿ ಹಿಂದೂಗಳ ಪಕ್ಷ’ ಎಂದು ತನ್ನನ್ನು ತಾನು ಕರೆದುಕೊಂಡರೂ, ಅದರೊಳಗೆ ‘ಹಿಂದುಳಿದ ವರ್ಗಗಳ ಮೋರ್ಚಾ’ ಅಸ್ತಿತ್ವದಲ್ಲಿದೆ ಎನ್ನುವುದು ವಾಸ್ತವ.
ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರ ‘ಹಿಂದೂ’ ಪದದ ಬಗೆಗಿನ ಹೇಳಿಕೆಯ ವಿರುದ್ಧ ಬಿಜೆಪಿಯೊಳಗಿರುವ ‘ಹಿಂದುಳಿದ ವರ್ಗಗಳ ಮೋರ್ಚಾ’ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ಸರ್ವ ಹಿಂದೂಗಳನ್ನು ಪ್ರತಿನಿಧಿಸುತ್ತದೆಯಾದರೆ, ಅದೇ ಬಿಜೆಪಿಯೊಳಗೆ ‘ಹಿಂದುಳಿದ ವರ್ಗಗಳಿಗಾಗಿ’ ಪ್ರತ್ಯೇಕ ಮೋರ್ಚಾವನ್ನು ಸಂಘಟಿಸುವ ಅಗತ್ಯ ಯಾಕೆ ಬಂತು? ಎನ್ನುವ ಪ್ರಶ್ನೆ ‘ಹಿಂದೂ’ ಪದದ ಜೊತೆ ಜೊತೆಗೇ ಮುನ್ನೆಲೆಗೆ ಬಂದಿದೆ. ಆರೆಸ್ಸೆಸ್ ಸಂಘಟನೆಯೊಳಗೆ ಮಾತ್ರವಲ್ಲ, ಬಿಜೆಪಿಯೊಳಗೂ ಉನ್ನತ ಸ್ಥಾನವನ್ನು ತಮ್ಮದಾಗಿಸಿಕೊಳ್ಳಬೇಕಾದರೆ, ನಾಯಕರು ‘ಮೇಲ್ಜಾತಿ’ಯವರಾಗಿರುವುದು ಒಂದು ಪ್ರಮುಖ ಅರ್ಹತೆ ಎನ್ನುವ ಆರೋಪ ಬಿಜೆಪಿಯೊಳಗೇ ಹಲವು ದಶಕಗಳಿಂದ ಜೀವಂತವಿದೆ. ಆ ಕಾರಣಕ್ಕಾಗಿಯೇ, ಬಿಜೆಪಿಯೊಳಗೆ ಮುಂದುವರಿದ ವರ್ಗಗಳ ವಿರುದ್ಧ ಹಿಂದುಳಿದ ವರ್ಗಗಳ ನಾಯಕರು ‘ಹಿಂದುಳಿದ ವರ್ಗಗಳ ಮೋರ್ಚಾ’ವನ್ನು ಸಂಘಟಿಸುವ ಪರಿಸ್ಥಿತಿ ನಿರ್ಮಾಣವಾಯಿತು. ‘ಹಿಂದೂ’ ಮತ್ತು ‘ಹಿಂದುಳಿದ ವರ್ಗ’ ಒಂದೇ ಅಲ್ಲ ಎನ್ನುವುದನ್ನು ಸ್ವತಃ ಬಿಜೆಪಿಯೇ ಈ ಮೂಲಕ ಘೋಷಿಸಿಕೊಂಡಿದೆ. ಹಿಂದುಳಿದ ವರ್ಗಗಳ ನಾಯಕರು ಸಂಘಟಿತರಾಗಿ, ತಮ್ಮ ತಮ್ಮ ಜಾತಿಯ ಹೆಸರನ್ನು ಮುಂದಿಟ್ಟುಕೊಂಡು ಶಕ್ತಿ ಪ್ರದರ್ಶನ ನಡೆಸದೇ ಇದ್ದರೆ ಬಿಜೆಪಿಯಲ್ಲಿ ಅಧಿಕಾರಗಳು ಸಿಗುವುದಿಲ್ಲ ಎನ್ನುವುದು ‘ಹಿಂದೂ’ ಎಂದು ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡುವ ಬಿಜೆಪಿಯ ಎಲ್ಲ ಹಿಂದುಳಿದ ವರ್ಗಗಳ ನಾಯಕರಿಗೂ ಚೆನ್ನಾಗಿಯೇ ತಿಳಿದಿದೆ.
‘ಹಿಂದೂ’ ಪದ ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಸಂದರ್ಭದಲ್ಲಿ, ಹಿಂದೂಗಳೊಳಗೆಯೇ ‘ಹಿಂದುಳಿದ ವರ್ಗ’ಗಳನ್ನು ಸೃಷ್ಟಿ ಮಾಡಿದವರು ಯಾರು? ಎನ್ನುವ ಪ್ರಶ್ನೆಯನ್ನು ಬಿಜೆಪಿಯ ಒಳಗಿರುವ ಹಿಂದುಳಿದ ವರ್ಗದ ನಾಯಕರು, ಬಿಜೆಪಿಯೊಳಗಿರುವ ‘ಮುಂದುವರಿದ ವರ್ಗದ ನಾಯಕ’ರಲ್ಲಿ ಕೇಳುವ ಸಮಯ ಬಂದಿದೆ. ಬಿಜೆಪಿಯ ಹಿಂದೂಗಳೊಳಗೆ ಹಿಂದುಳಿದ ವರ್ಗ ಮತ್ತು ದಲಿತ ವರ್ಗ ಹೇಗೆ ಸೃಷ್ಟಿಯಾಯಿತು? ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆಯೆ? ಅಥವಾ ಮೊಗಲರು, ಬ್ರಿಟಿಷರು ಈ ‘ಹಿಂದುಳಿದ ವರ್ಗ’ಗಳನ್ನು ಸೃಷ್ಟಿಸಿದರೆ? ಹಿಂದೂಗಳೊಳಗೆ ಮುಂದುವರಿದವರು-ಹಿಂದುಳಿದವರು-ಮುಟ್ಟಲೇ ಬಾರದವರು ಎನ್ನುವ ವರ್ಗಗಳು ಬಿಜೆಪಿ ಪಕ್ಷದೊಳಗೂ ಯಾಕೆ ಅಸ್ತಿತ್ವದಲ್ಲಿವೆ? ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಬಿಜೆಪಿಯ ಹಿಂದುತ್ವ ಇನ್ನಷ್ಟು ಬಲ ಪಡೆಯುತ್ತದೆ ಮಾತ್ರವಲ್ಲ, ಸತೀಶ್ ಜಾರಕಿಹೊಳಿಯಂತಹ ‘ಹಿಂದೂ ಪದ ವಿರೋಧಿ’ಗಳ ವಿರುದ್ಧ ಹೋರಾಡುವುದಕ್ಕೆ ಬಿಜೆಪಿಯೊಳಗಿರುವ ಹಿಂದುಳಿದ ವರ್ಗಗಳ ನಾಯಕರಿಗೆ ಇನ್ನಷ್ಟು ಶಕ್ತಿ ಸಿಗುತ್ತದೆ. ಇದೇ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳು ಮುಂದುವರಿಯುವುದಕ್ಕಾಗಿ ಜಾರಿಗೆ ತಂದ ಮೀಸಲಾತಿಯನ್ನು, ಹಿಂದುತ್ವವನ್ನು ಪ್ರತಿಪಾದನೆ ಮಾಡುತ್ತಾ ಬಂದಿರುವ ಆರೆಸ್ಸೆಸ್ ಯಾಕೆ ವಿರೋಧಿಸುತ್ತಿದೆ? ಎನ್ನುವ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕು.
ಆಗ ‘ಹಿಂದೂಗಳ ವಿರೋಧಿ’ಗಳು ಯಾರು ಎನ್ನುವುದು ಬಿಜೆಪಿಯೊಳಗಿರುವ ಹಿಂದೂ ಪರವಿರುವ ‘ಹಿಂದುಳಿದ ವರ್ಗಗಳ ನಾಯಕರಿಗೆ’ ಇನ್ನಷ್ಟು ಸ್ಪಷ್ಟವಾಗಬಹುದು. ಹಿಂದೂಗಳೆಲ್ಲರೂ ಒಂದು, ಆದರೆ ಹಿಂದೂಗಳು ಎಲ್ಲರೂ ಸಮಾನರಲ್ಲ, ಅವರಲ್ಲಿ ಹಿಂದುಳಿದವರ್ಗ, ಅಸ್ಪಶ್ಯ ವರ್ಗಗಳು ಇವೆ ಎನ್ನುವುದನ್ನು ಬಿಜೆಪಿಯೇ ಒಪ್ಪಿರುವಾಗ, ಅವರ ಅಭಿವೃದ್ಧಿಗಾಗಿ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯಾಕೆ ಬಿಜೆಪಿಯ ನಾಯಕರು ಒತ್ತಡ ಹಾಕುತ್ತಿಲ್ಲ? ಹಿಂದುಳಿದ ವರ್ಗಗಳು ಮತ್ತು ದಲಿತರೇ ಹಿಂದೂಗಳಲ್ಲಿ ಶೇ. 90ರಷ್ಟು ಜನರಿದ್ದಾರೆ. ಶೇ. 90 ರಷ್ಟು ಹಿಂದೂಗಳು ಮೀಸಲಾತಿಯ ಮೂಲಕ ಅಭಿವೃದ್ಧಿಯತ್ತ ಮುನ್ನಡೆಯುವುದು ಬಿಜೆಪಿಯ ತಾಯಿ ಸಂಘಟನೆಯಾಗಿರುವ ಆರೆಸ್ಸೆಸ್‌ಗೆ ಯಾಕೆ ಇಷ್ಟವಿಲ್ಲ? ಮೇಲ್ಜಾತಿಯನ್ನು ಒಡಲ ಮಕ್ಕಳಂತೆಯೂ, ಹಿಂದುಳಿದವರ್ಗ, ದಲಿತರನ್ನು ಮಲಮಕ್ಕಳಂತೆಯೂ ಆರೆಸ್ಸೆಸ್ ಯಾಕೆ ಕಾಣುತ್ತಿದೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಬಿಜೆಪಿಯೊಳಗಿರುವ ಹಿಂದುಳಿದ ವರ್ಗಗಳ ನಾಯಕರ ಕರ್ತವ್ಯವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಕೇಂದ್ರ ಸರಕಾರ ಜಾರಿಗೊಳಿಸಿರುವ ‘ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ’ಯ ಬಗ್ಗೆಯೂ ಬಿಜೆಪಿಯೊಳಗಿರುವ ಹಿಂದುಳಿದ ವರ್ಗ ಮೋರ್ಚಾ ಪ್ರಶ್ನಿಸಬೇಕಾಗಿದೆ. ಕೇಂದ್ರ ಸರಕಾರ ಕೇವಲ ಮೇಲ್ಜಾತಿಯ ಶೇ.4ರಷ್ಟಿರುವ ಬಡವರ ಬಗ್ಗೆ ಮಾತ್ರ ಯಾಕೆ ತಲೆಕೆಡಿಸಿಕೊಂಡಿದೆ? ಶೇ.10 ಆರ್ಥಿಕ ಮೀಸಲಾತಿಯ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಬಡವರನ್ನು ಯಾಕೆ ಸೇರಿಸಲಾಗಿಲ್ಲ?’ ಎಂದು ಅದು ಕೇಳಬೇಕಾಗಿದೆ. ಕಡಿಮೆ ಸಂಖ್ಯೆಯಲ್ಲಿರುವ ಮುಂದುವರಿದ ವರ್ಗದ ಬಡವರಿಗೆ ಶೇ.10 ಮೀಸಲಾತಿ. ಅದೇ ಸಂದರ್ಭದಲ್ಲಿ ಅವರಿಗಿಂತ ಹಲವು ಪಟ್ಟು ಹೆಚ್ಚು ಜನಸಂಖ್ಯೆಯಿರುವ, ಆದರೆ ಎಲ್ಲ ಕ್ಷೇತ್ರಗಳಲ್ಲಿಯೂ ತೀರಾ ಹಿಂದುಳಿದಿರುವ ಹಿಂದುಳಿದವರ್ಗಗಳಿಗೆ ಕಡಿಮೆ ಮೀಸಲಾತಿಯನ್ನು ಯಾಕೆ ಇರಿಸಲಾಗಿದೆ? ಈವರೆಗೆ ಹಿಂದೂಧರ್ಮದ ಹಿಂದುಳಿದವರಿಗಾಗಿ ಜಾರಿಯಲ್ಲಿದ್ದ ಮೀಸಲಾತಿಯನ್ನು ವ್ಯಂಗ್ಯ ಮಾಡುತ್ತಿದ್ದ, ಟೀಕೆ ಮಾಡುತ್ತಿದ್ದ ಆರೆಸ್ಸೆಸ್ ಸಂಘಟನೆಯ ನಾಯಕರು ಹಿಂದೂ ಧರ್ಮದೊಳಗಿರುವ ‘ಮುಂದುವರಿದ ಬಡವ’ರಿಗಾಗಿ ಜಾರಿಗೊಳಿಸಿರುವ ಈ ಭರ್ಜರಿ ಮೀಸಲಾತಿಯನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಎನ್ನುವುದರ ಕುರಿತಂತೆಯೂ ಆತ್ಮಾವಲೋಕನ ಮಾಡಬೇಕು.
ಇದೇ ಸಂದರ್ಭದಲ್ಲಿ, ಹಿಂದೂಧರ್ಮದೊಳಗಿನ ‘ಮುಂದುವರಿದ ಜಾತಿ’ಯ ಬಡತನದ ಮಾನದಂಡಗಳು ಹಿಂದುಳಿದ ವರ್ಗದ ಬಡವರ ಮಾನದಂಡಗಳಿಗಿಂತ ಭಿನ್ನವಾಗಿವೆ. ಮಾಸಿಕ 60,000 ರೂಪಾಯಿ ಸಂಪಾದಿಸುವ ಮುಂದುವರಿದವರನ್ನು ಬಡವರು ಎಂದು ಗುರುತಿಸಲಾಗಿದೆ. 5 ಎಕರೆ ಭೂಮಿ ಇರುವವರೂ ಈ ಮೀಸಲಾತಿಗೆ ಅರ್ಹರಾಗುತ್ತಾರೆ. ಈ ಭೇದಭಾವವನ್ನು ಪ್ರಶ್ನಿಸಿ, ಹಿಂದೂಧರ್ಮದೊಳಗಿರುವ ನಿಜವಾದ ಬಡವರಿಗೆ ಬಿಜೆಪಿಯ ಮೇಲ್ಜಾ ತಿಯ ನಾಯಕರು ನ್ಯಾಯಕೊಡಲಿ ಎಂದು ಬಿಜೆಪಿಯೊಳಗಿರುವ ಹಿಂದುಳಿದ ಮತ್ತು ದಲಿತ ವರ್ಗದ ನಾಯಕರು ಒತ್ತಾಯಿಸುವ ಮೂಲಕ ‘ಹಿಂದೂ ಒಂದು’ ಎನ್ನುವ ಪದಕ್ಕೆ ಅರ್ಥ ತುಂಬುವ ಕೆಲಸ ಮಾಡಬೇಕು. ಇಲ್ಲವಾದರೆ, ಹಿಂದೂ ಧರ್ಮದೊಳಗಿರುವ ಹಿಂದುಳಿದ ವರ್ಗ ಇನ್ನಷ್ಟು ಹಿಂದುಳಿಯುತ್ತಾ, ಮುಂದುವರಿದ ವರ್ಗ ಇನ್ನಷ್ಟು ಮುಂದುವರಿಯಲು ಅವಕಾಶ ನೀಡಿದಂತಾಗುತ್ತದೆ. ಸುನೀಲ್ ಕುಮಾರ್, ಸಿ.ಟಿ. ರವಿ, ಈಶ್ವರಪ್ಪರಂತಹ ನಾಯಕರು ಈ ನಿಟ್ಟಿನಲ್ಲಿ ನಾಯಕತ್ವವನ್ನು ಕೈಗೆತ್ತಿಕೊಂಡು ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿರುವ ಎಲ್ಲ ಹಿಂದೂಗಳಿಗೆ ಸಮಾನ ಅವಕಾಶಕ್ಕಾಗಿ ಹೋರಾಟವೊಂದನ್ನು ಸಂಘಟಿಸಬೇಕಾಗಿದೆ.