'ದಾರಿತಪ್ಪಿಸುವ ಜಾಹೀರಾತು': ಪತಂಜಲಿಯ 5 ಔಷಧಿ ಉತ್ಪನ್ನಗಳಿಗೆ ನಿಷೇಧ ಹೇರಿದ ಉತ್ತರಾಖಂಡ
ಡೆಹ್ರಾಡೂನ್: ಉತ್ತರಾಖಂಡ (Uttarakhand) ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ರಾಮದೇವ್ ಅವರ ಪತಂಜಲಿ (Patanjali) ಉತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿಗೆ ಸೂಚನೆ ನೀಡಿ ಅದರ ಐದು ಉತ್ಪನ್ನಗಳ ಉತ್ಪಾದನೆ ನಿಲ್ಲಿಸುವಂತೆ ಸೂಚನೆ ನೀಡಿದೆ. ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ಪ್ರದರ್ಶಿಸಲಾಗಿದೆ ಎಂಬ ಕಾರಣವನ್ನು ಈ ಕ್ರಮಕ್ಕೆ ನೀಡಲಾಗಿದೆ ಎಂದು ವರದಿಯಾಗಿದೆ,
BPgrit, Madhugrit, Thyrogrit, Lipidom and Eyegrit Gold, ಎಂಬ ಹೆಸರಿನ ಔಷಧಿಗಳ ಉತ್ಪಾದನೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಇವುಗಳು ಕ್ರಮವಾಗಿ ರಕ್ತದೊತ್ತಡ, ಮಧುಮೇಹ, ಗಾಯಿಟರ್ ಅಥವಾ ಗಂಟಲುವಾಳ ರೋಗ, ಗ್ಲಾಕೋಮಾ ಮತ್ತು ಅಧಿಕ ಕೊಲೆಸ್ಟರಾಲ್ ಸಮಸ್ಯೆಗೆ ಪರಿಹಾರವೆಂದು ಪತಂಜಲಿ ಹೇಳಿಕೊಂಡಿತ್ತು.
ಕೇರಳ ಮೂಲದ ನೇತ್ರ ತಜ್ಞ ಕೆ ವಿ ಬಾಬು ಎಂಬವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಪತಂಜಲಿ ಮೇಲಿನ ಐದೂ ಉತ್ಪನ್ನಗಳಿಗೆ ಸಂಬಂಧಿಸಿದ ಪರಿಷ್ಕೃತ ಫಾಮ್ರ್ಯುಲೇಶನ್ ಶೀಟ್ ಮತ್ತು ಲೇಬಲ್ ಕ್ಲೈಮ್ಗಳನ್ನು ಸಲ್ಲಿಸಿ ಅವುಗಳಿಗೆ ಹೊಸದಾಗಿ ಅನುಮತಿ ಕೋರಬೇಕೆಂದು ಪ್ರಾಧಿಕಾರ ಹೇಳಿದೆ.
ಮೇಲಿನ ಐದು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸದಂತೆ ಪ್ರಾಧಿಕಾರ ಪತಂಜಲಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಸೂಚಿಸಿತ್ತು. ಈ ಉತ್ಪನ್ನಗಳ ಜಾಹೀರಾತುಗಳು ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ಕಾಯಿದೆ ಮತ್ತು ಮ್ಯಾಜಿಕ್ ರೆಮೆಡೀಸ್ ಆಕ್ಟ್ ಇದರ ಉಲ್ಲಂಘನೆಯಾಗಿವೆ ಎಂದು ದೂರುದಾರರು ಆರೋಪಿಸಿದ್ದರು. ಗ್ಲಾಕೋಮಾ, ಗಾಯಿಟರ್, ರಕ್ತದೊತ್ತಡ, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಕುರಿತು ಜಾಹೀರಾತು ಪ್ರದರ್ಶಿಸುವುದನ್ನು ಕಾನೂನು ನಿಷೇಧಿಸುತ್ತದೆ.