varthabharthi


ತಿಳಿ ವಿಜ್ಞಾನ

ಕೃಷಿ ತ್ಯಾಜ್ಯ ದಹನ ಅನಿವಾರ್ಯವೇ?

ವಾರ್ತಾ ಭಾರತಿ : 13 Nov, 2022
ಆರ್.ಬಿ.ಗುರುಬಸವರಾಜ

ಭಾಗ-1

ಚಳಿಗಾಲ ಬಂತೆಂದರೆ ಸಾಕು ದೇಶದೆಲ್ಲೆಡೆ ಕೃಷಿ ತ್ಯಾಜ್ಯಕ್ಕೆ ಬೆಂಕಿ ಬೀಳುವುದು ಸಾಮಾನ್ಯ. ಕೃಷಿ ತ್ಯಾಜ್ಯದ ಬೆಂಕಿ ಅನಿರೀಕ್ಷಿತವಲ್ಲ, ಉದ್ದೇಶಪೂರ್ವಕ ಎಂಬುದು ಶೋಚನೀಯ ಸಂಗತಿ. ಕೃಷಿ ಜಮೀನಿನಲ್ಲಿರುವ ತ್ಯಾಜ್ಯಕ್ಕೆ ಬೆಂಕಿ ಒಂದೆಡೆಯಾದರೆ, ರಸ್ತೆ ಪಕ್ಕದಲ್ಲಿ ಒಕ್ಕಣೆ ಮಾಡಿದ ಸ್ಥಳದಲ್ಲಿಯೇ ತ್ಯಾಜ್ಯಕ್ಕೆ ಬೆಂಕಿ ಮತ್ತೊಂಡೆದೆ. ಇದನ್ನೆಲ್ಲಾ ಗಮನಿಸಿದರೆ ರೈತರಿಗೆ ಕೃಷಿ ತ್ಯಾಜ್ಯದ ಮಹತ್ವ ತಿಳಿದಿಲ್ಲ ಎಂಬುದು ಗಮನಕ್ಕೆ ಬಾರದಿರದು. ದಿಲ್ಲಿ, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಭಾರತದಲ್ಲಿ ಹೆಚ್ಚು ಕೃಷಿ ಉತ್ಪಾದಕವಾಗಿವೆ. ಕೇವಲ ಪಂಜಾಬ್ ಒಂದೇ ದೇಶದ ಧಾನ್ಯ ಪೂರೈಕೆಯ ಸುಮಾರು ಶೇಕಡಾ 30ನ್ನು ಒದಗಿಸುತ್ತದೆ. ಹಾಗಾಗಿ ಪಂಜಾಬನ್ನು ದೇಶದ ‘ಬ್ರೆಡ್ ಬಾಸ್ಕೆಟ್’ ಎಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳೇ ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಿವೆ.

ಭಾರತದ ವಾಯು ಗುಣಮಟ್ಟ ಮೇಲ್ವಿಚಾರಣಾ ಸಂಸ್ಥೆ (SAFAR) ಯ ಪ್ರಕಾರ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಹುಲ್ಲು ಸುಡುವಿಕೆಯು ರಾಜಧಾನಿ ಹೊಸದಿಲ್ಲಿ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಈ ರಾಜ್ಯಗಳು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಶೇ. 30ರಿಂದ 40ರಷ್ಟು ವಾಯು ಮಾಲಿನ್ಯವನ್ನು ಅನುಭವಿಸುತ್ತಿವೆ.

ರೈತರ ದೃಷ್ಟಿಕೋನದಿಂದ ಗಮನಿಸಿದರೆ ಕೃಷಿ ತ್ಯಾಜ್ಯದ ದಹನ ಅನಿವಾರ್ಯ ಎನಿಸುತ್ತದೆ. ಮುಂದಿನ ಬಿತ್ತನೆಗಾಗಿ ಕೃಷಿ ಭೂಮಿಯನ್ನು ತ್ವರಿತವಾಗಿ ಹದಮಾಡಲು ಕೊಯ್ಲು ಮಾಡಿದ ನಂತರ ಬೆಳೆ ತ್ಯಾಜ್ಯವನ್ನು ಸುಡುವುದು ಸುಲಭ ಮಾರ್ಗವಾಗಿದೆ. ಕೊಯ್ಲು ಮತ್ತು ಮುಂದಿನ ಬೆಳೆ ಬಿತ್ತನೆಯ ನಡುವಿನ ಸಮಯದ ಕೊರತೆ ತ್ಯಾಜ್ಯವನ್ನು ಸುಡುವುದರ ಹಿಂದಿನ ಮತ್ತೊಂದು ತಾರ್ಕಿಕತೆಯಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭತ್ತದ ಕೊಯ್ಲು ಮುಗಿದಿರುತ್ತದೆ. ಆರ್ಥಿಕ ಅಭಿವೃದ್ಧಿ ಮತ್ತು ಕ್ಷಿಪ್ರ ಜನಸಂಖ್ಯೆಯ ಬೆಳವಣಿಗೆಯು ಹೆಚ್ಚುತ್ತಿರುವ ಕೈಗಾರಿಕಾ ಮತ್ತು ಆಹಾರ ಬೇಡಿಕೆಗಳನ್ನು ಪೂರೈಸಲು ಕೃಷಿ ವಲಯದ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡಿದೆ. ಇದರಿಂದಾಗಿ ರೈತರು ವಾರ್ಷಿಕವಾಗಿ ಎರಡು ಬೆಳೆಗಳನ್ನು ಬೆಳೆಯುವ ಧಾವಂತದಲ್ಲಿದ್ದಾರೆ. ಭತ್ತದ ಕೊಯ್ಲು ಮತ್ತು ಗೋಧಿ ಬಿತ್ತನೆಯ ನಡುವಿನ ಸರಾಸರಿ ಮಧ್ಯಂತರ ಸಮಯ 15ರಿಂದ 20 ದಿನಗಳಾಗಿರುತ್ತದೆ. ತಡವಾಗಿ ಬಿತ್ತನೆ ಮಾಡುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಅತೀ ಕಡಿಮೆ ಅವಧಿಯಲ್ಲಿ ಕೃಷಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗದೆ ಅದನ್ನು ಅಲ್ಲಿಯೇ ಸುಡಲು ಮುಂದಾಗುತ್ತಿದ್ದಾರೆ. ಕೃಷಿ ತ್ಯಾಜ್ಯ ದಹನದಿಂದ ವಾಯುವಿನ ಗುಣಮಟ್ಟ ಹದಗೆಡುತ್ತದೆ.

ಒಂದು ಪ್ರದೇಶದ ಗಾಳಿಯ ಗುಣಮಟ್ಟವನ್ನು ‘ವಾಯು ಗುಣಮಟ್ಟ ಸೂಚ್ಯಂಕ’ (AQI) ಎಂದು ಕರೆಯಲಾಗುವ ಪ್ಯಾರಾಮೀಟರ್‌ನಲ್ಲಿ ವರ್ಗೀಕರಿಸಲಾಗುತ್ತದೆ. ಇದು ವಾಯುಮಾಲಿನ್ಯ ಪ್ರಮಾಣದ ಮಾಪನಗಳ ಶ್ರೇಣಿಯಾಗಿದ್ದು, ಆ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟವನ್ನು ಅರ್ಥೈಸಲು ಸಹಾಯ ಮಾಡುತ್ತದೆ. AQIನ್ನು ಪಿಎಂ10 ಮತ್ತು ಪಿಎಂ2.5 ಎಂದು ಅಳೆಯಲಾಗುತ್ತದೆ. ಪಿಎಂ10 ಎಂದರೆ ಸಾಮಾನ್ಯವಾಗಿ 10 ಮೈಕ್ರೋಮೀಟರ್‌ಗಳು ಮತ್ತು ಚಿಕ್ಕದಾದ ವ್ಯಾಸವನ್ನು ಹೊಂದಿರುವ ಇನ್ಹೇಬಲ್ ಕಣಗಳು ಎಂದರ್ಥ. ಪಿಎಂ2.5 ಎಂದರೆ 2.5 ಮೈಕ್ರೊಮೀಟರ್ ಮತ್ತು ಚಿಕ್ಕದಾದ ವ್ಯಾಸವನ್ನು ಹೊಂದಿರುವ ಸೂಕ್ಷ್ಮವಾದ ಇನ್ಹೇಬಲ್ ಕಣಗಳು ಎಂದರ್ಥ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯುಮಾಲಿನ್ಯದ ಪ್ರಮಾಣವನ್ನು ಅಳೆಯುತ್ತದೆ. ಉತ್ತರ ಭಾರತದ ಹೆಚ್ಚಿನ ಪ್ರದೇಶಗಳು ಸುರಕ್ಷಿತ ಮಿತಿಯನ್ನು ಮೀರಿದ ವಾಯು ಗುಣಮಟ್ಟ ಸೂಚ್ಯಂಕವನ್ನು ಹೊಂದಿವೆ ಎಂದು ಹೇಳಿದೆ. ನವೆಂಬರ್ 2019ರಲ್ಲಿ ದಿಲ್ಲಿಯಲ್ಲಿ 487 AQI, ಘಾಜಿಯಾಬಾದ್ 493 AQI, ಗ್ರೇಟರ್ ನೋಯ್ಡ 480 AQI ದಾಖಲಾಗಿತ್ತು. ಕಳೆದ ವಾರ ದಿಲ್ಲಿ ಮತ್ತು ಸುತ್ತಮುತ್ತ ನಗರಗಳ AQI  ಪ್ರಮಾಣವು ಅಧಿಕವಾಗಿದ್ದರಿಂದ ಇದು ದಿಲ್ಲಿ ಮತ್ತು ಇತರ ಉತ್ತರದ ರಾಜ್ಯಗಳ ಪ್ರಾಥಮಿಕ ಹಂತಗಳಲ್ಲಿ ಶಾಲೆಗಳನ್ನು ಮುಚ್ಚಲು ಕಾರಣವಾಗಿತ್ತು.

ಕೃಷಿ ತ್ಯಾಜ್ಯದ ಬೆಂಕಿಯು ಅನೇಕ ಅವಾಂತರಗಳಿಗೆ ಕಾರಣವಾಗಿದೆ. ಕೃಷಿ ತ್ಯಾಜ್ಯದ ಬೆಂಕಿಯಿಂದ ಗಾಳಿಯ ಗುಣಮಟ್ಟ ದುರ್ಬಲವಾಗುತ್ತದೆ, ವಾತಾವರಣವು ಹೊಗೆಯಿಂದ ಮಬ್ಬಾಗುತ್ತದೆ. ವಾತಾವರಣದಲ್ಲಿ ಶಾಖದ ಅಲೆಗಳು ಹೆಚ್ಚಾಗುತ್ತವೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಕೃಷಿ ತ್ಯಾಜ್ಯದಿಂದ ಉಂಟಾದ ಇಂಗಾಲವನ್ನು ‘ಕಪ್ಪು ಇಂಗಾಲ’ ಎನ್ನಲಾಗುತ್ತದೆ. ಕಪ್ಪು ಇಂಗಾಲವು ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕವಾಗಿದೆ. ಅಂದರೆ ಇದು ಕೆಲವೇ ದಿನಗಳು ಅಥವಾ ವಾರಗಳವರೆಗೆ ಅಸ್ತಿತ್ವದಲ್ಲಿರುತ್ತದೆಯಾದರೂ, ಜಾಗತಿಕ ತಾಪಮಾನ ಏರಿಕೆಯ ಮೇಲೆ ಅದರ ಪ್ರಭಾವವು ಇಂಗಾಲದ ಡೈ ಆಕ್ಸೈಡ್‌ಗಿಂತ 460 ರಿಂದ 1,500 ಪಟ್ಟು ಪ್ರಬಲವಾಗಿದೆ. ಕಪ್ಪುಇಂಗಾಲವು ಮಳೆಯ ಮಾದರಿಗಳನ್ನು ಮಾರ್ಪಡಿಸುತ್ತದೆ, ವಿಶೇಷವಾಗಿ ಏಶ್ಯದ ಮಾನ್ಸೂನ್, ಕೃಷಿಯನ್ನು ಬೆಂಬಲಿಸಲು ಅಗತ್ಯವಾದ ಹವಾಮಾನ ಘಟನೆಗಳನ್ನು ಅಡ್ಡಿಪಡಿಸುತ್ತದೆ. ಕಪ್ಪು ಇಂಗಾಲವು ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಲ್ಲದೆ, ಪಾರ್ಶ್ವವಾಯು, ಕ್ಯಾನ್ಸರ್‌ಗಳಂತಹ ಪ್ರಾಣಾಂತಿಕ ಕಾಯಿಲೆಗಳನ್ನು ತಂದೊಡ್ಡುತ್ತದೆ. ಮಕ್ಕಳಲ್ಲಿ ಮಾನಸಿಕ ಮತ್ತು ವರ್ತನೆಯ ಸಮಸ್ಯೆಗಳನ್ನು ಸಹ ಉಂಟುಮಾಡುತ್ತವೆ. ವಯಸ್ಸಾದವರಲ್ಲಿ ಇದು ಆಲ್ಝೈಮರ್, ಪಾರ್ಕಿನ್ಸನ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಗೂ ಕಾರಣವಾಗುತ್ತದೆ. ಕೃಷಿ ತ್ಯಾಜ್ಯ ದಹನವು ಕೇವಲ ವಾತಾವರಣ ಮತ್ತು ಮಾನವರಿಗೆ ಮಾತ್ರ ತೊಂದರೆಯನ್ನುಂಟು ಮಾಡಿಲ್ಲ. ವಾಸ್ತವವಾಗಿ ನೀರಿನ ಧಾರಣ ಮತ್ತು ಮಣ್ಣಿನ ಫಲವತ್ತತೆಯನ್ನು 25 ರಿಂದ 30 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ ಹೆಚ್ಚಿನ ಇಳುವರಿಗಾಗಿ ರೈತರು ಹೆಚ್ಚಿನ ಪ್ರಮಾಣದ ಹಾಗೂ ದುಬಾರಿ ಬೆಲೆಯ ರಸಗೊಬ್ಬರಗಳು ಮತ್ತು ನೀರಾವರಿ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಕೃಷಿ ತ್ಯಾಜ್ಯ ದಹನವು ಇಂಗಾಲದ ಡೈಆಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳು, ನೈಟ್ರೋಜನ್ ಆಕ್ಸೈಡ್‌ಗಳು, ಮತ್ತು ಹೈಡ್ರೋಕಾರ್ಬನ್‌ಗಳನ್ನು ಹೊರಹಾಕುತ್ತವೆ. ಹೊರಸೂಸುವಿಕೆಯು ಹಾನಿಕಾರಕ ಅನಿಲಗಳಾದ ನೈಟ್ರೋಜನ್ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್ ಮತ್ತು ಮಿಥೇನ್‌ಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ತೀವ್ರವಾಗಿ ಮಾನವ ಹಾಗೂ ಇನ್ನಿತರ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇಂದಿನ ಕೃಷಿಯು ಆಧುನಿಕ ತಂತ್ರಜ್ಞಾನಗಳ ಪರಿಚಯದೊಂದಿಗೆ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಆಶಾದಾಯಕವಾದರೂ, ಸಂಶ್ಲೇಷಿತ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ, ಕೃಷಿ ಭೂಮಿಯನ್ನು ವಿಸ್ತರಿಸುವುದು, ನೈಸರ್ಗಿಕ ಸಂಪನ್ಮೂಲಗಳ ಶೋಷಣೆ ಮತ್ತು ಹೊಸ ಬೆಳೆಗಳ ತಯಾರಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ಜನಸಂಖ್ಯೆ ಮತ್ತು ಆಹಾರದ ಬೇಡಿಕೆಯ ಹೆಚ್ಚಳದೊಂದಿಗೆ ಕೃಷಿ ತ್ಯಾಜ್ಯ ಸುಡುವಿಕೆಯ ಪರಿಣಾಮವು ಹೆಚ್ಚಾಗುವ ಸಾಧ್ಯತೆಗಳಿವೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆಯು 10 ಶತಕೋಟಿಗೆ ಏರಬಹುದು ಎಂದು ವಿಶ್ವಸಂಸ್ಥೆಯ ವರದಿಯು ಸೂಚಿಸಿದೆ. ಇದು ಆಹಾರದ ಬೇಡಿಕೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. 2050 ರ ವೇಳೆಗೆ ಭಾರತದಲ್ಲಿ ಬೆಳೆ ಉತ್ಪಾದನೆಯು ಶೇ. 45ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜೊತೆಗೆ ತ್ಯಾಜ್ಯ ಸುಡುವ ಪ್ರಮಾಣ ಮತ್ತು ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚಲಿದೆ.

ರೈತರು ಕೃಷಿ ತ್ಯಾಜ್ಯ ನಿರ್ವಹಿಸಲು ಪರ್ಯಾಯ ನಿರ್ವಹಣಾ ತಂತ್ರಗಳನ್ನು ಒದಗಿಸಲು ಸರಕಾರವು ಹಲವಾರು ಪ್ರಯತ್ನಗಳನ್ನು ಮಾಡಿದೆ. ಕಟ್ಟುನಿಟ್ಟಾದ ನೀತಿಗಳ ಹೊರತಾಗಿ ಭಾರತದಲ್ಲಿ ಕೃಷಿ ತ್ಯಾಜ್ಯ ಸುಡುವ ಅಭ್ಯಾಸವು ಮಾನವನ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಕೇವಲ ಆರೋಗ್ಯ ಮಾತ್ರವಲ್ಲದೇ ಆರ್ಥಿಕವಾಗಿಯೂ ಹಿಂಜರಿತ ಎದುರಿಸಬೇಕಾಗುತ್ತದೆ. ಕೃಷಿ ತ್ಯಾಜ್ಯ ಸುಡುವಿಕೆಯಲ್ಲಿ ಕರ್ನಾಟಕದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಕಬ್ಬು, ಅಡಿಕೆ, ಮೆಕ್ಕೆಜೋಳ, ಸಜ್ಜೆ, ರಾಗಿ, ಭತ್ತ ಇನ್ನಿತರ ಬೆಳೆಗಳ ತ್ಯಾಜ್ಯಗಳನ್ನು ಕೃಷಿ ಜಮೀನಿನಲ್ಲಿ ಸುಡಲಾಗುತ್ತದೆ. ಇಲ್ಲವೇ ಬಹುತೇಕ ಸಂದರ್ಭಗಳಲ್ಲಿ ಒಕ್ಕಣೆ ಮಾಡಿದ ಸ್ಥಳಗಳಲ್ಲಿ ಸುಡಲಾಗುತ್ತದೆ.

ಉತ್ತರ ಭಾರತದಂತೆ ತಕ್ಷಣವೇ ಬಿತ್ತನೆಯ ತುರಾತುರಿ ಇಲ್ಲದಿದ್ದರೂ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಕೃಷಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುಡುತ್ತಿರುವುದು ವಿಪರ್ಯಾಸದ ಸಂಗತಿ. ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಒಕ್ಕಣೆ ಕಣಗಳಿಲ್ಲದೆ ರಸ್ತೆಯಲ್ಲಿಯೇ ಒಕ್ಕಣೆ ಮಾಡಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದು ಇದಕ್ಕೆ ಕಾರಣವಾಗಿದೆ. ಬೆಳೆಗಳ ಉಳಿಕೆಯನ್ನು ಸುಡುವ ಹಾಗೂ ಬೆಳೆಯುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸಿದರೆ, ಪರಿಸರ ಮತ್ತು ಜನರ ಆರೋಗ್ಯವನ್ನು ಕಾಪಾಡಲು ಸುಸ್ಥಿರ ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಕ್ರಮವು ಆದಾಯವನ್ನು ಹೆಚ್ಚಿಸುವ ಮತ್ತು ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಹೆಚ್ಚುವರಿ ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತದೆ. ಸುಸ್ಥಿರ ಬೆಳೆ ತ್ಯಾಜ್ಯ ನಿರ್ವಹಣಾ ಕ್ರಮಗಳು ಧನಾತ್ಮಕ ಪ್ರಯೋಜನಗಳನ್ನು ಒಳಗೊಂಡಿವೆ. ಇದಕ್ಕೆ ಫಿಲಿಪ್ಪೀನ್ಸ್ ದೇಶವೇ ಸಾಕ್ಷಿ. ಫಿಲಿಪ್ಪೀನ್ಸ್‌ನಲ್ಲಿ ಸುಸ್ಥಿರ ಬೆಳೆ ತ್ಯಾಜ್ಯ ನಿರ್ವಹಣಾ ಕ್ರಮದ ಭಾಗವಾಗಿ ಬೆಳೆ ತ್ಯಾಜ್ಯ ಮರುಬಳಕೆ ಮಾಡಿದ್ದರಿಂದ ಅಲ್ಲಿ ರಸಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಜೊತೆಗೆ ಈ ಕ್ರಮವು ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ.

 ಸುಸ್ಥಿರ ಬೆಳೆ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ರೈತರಿಗೆ ಶಿಕ್ಷಣ ಮತ್ತು ಅರಿವು ನೀಡುವ ಅಗತ್ಯವಿದೆ. ಇದು ಅಭಿಯಾನದ ರೀತಿಯಲ್ಲಿ ಆಗಬೇಕಿದೆ. ಈ ಅಭಿಯಾನದ ಯಶಸ್ಸಿಗೆ ಸರಕಾರಿ ಏಜೆನ್ಸಿಗಳು, ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸುವ ಅಗತ್ಯವಿದೆ. ಅದಕ್ಕಾಗಿ ಚಿಕ್ಕ ಚಿಕ್ಕ ಕಾರ್ಯಾಗಾರಗಳು ಮತ್ತು ಸಮುದಾಯ ಸಜ್ಜುಗೊಳಿಸುವ ಚಟುವಟಿಕೆಗಳು ಹೆಚ್ಚು ಸಕ್ರಿಯವಾಗಬೇಕಿದೆ. ಕೃಷಿ ಸಂಶೋಧನಾ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು ಮತ್ತು ಖಾಸಗಿ ವಲಯವು ರೈತರಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ನವೀನ ಅಭ್ಯಾಸಗಳ ಪ್ರಸರಣಕ್ಕಾಗಿ ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)