‘ರೆಡ್ ಡೆಸರ್ಟ್’ - ಹಕ್ಕಿಗಳು ಇನ್ನೆಂದೂ ಇಲ್ಲಿ ಹಾರುವುದಿಲ್ಲ!
ಸುಮಾರು 60 ವರ್ಷಗಳ ನಂತರವೂ ‘ರೆಡ್ ಡೆಸರ್ಟ್’ ಇನ್ನೂ ತಾಜಾ ಎನ್ನಿಸುವುದು, ಬಂಡವಾಳಶಾಹಿಯ ಅಡಿಯಲ್ಲಿನ ಭಾವನೆಗಳನ್ನು ಸಿನೆಮಾದಂಥ ಕಲೆಯೊಂದು ಕಾಲಾತೀತವಾಗಿ ಕಾಣಿಸಬಲ್ಲುದು ಎಂಬುದರಿಂದಾಗಿ. ಮಾನವೀಯತೆ ಎಂಬುದು ಮನುಷ್ಯ ನಿರ್ಮಿತ ವ್ಯಾಪಾರೀ ಲೋಕದಲ್ಲಿ ಒಂದು ನಿರಂತರ ಅಸ್ಪಷ್ಟತೆಯೊಂದಿಗಿರುವುದು ಕಾಡುತ್ತದೆ.
ಮೊದಲ ಶಾಟ್: ಆಕಾಶಕ್ಕೆ ಬಂದೂಕಿನಿಂದ ಗುಂಡು ಹಾರಿಸಿದರೆ ಹೇಗಿರುತ್ತದೊ ಹಾಗೆ ಪೆಟ್ರೊಕೆಮಿಕಲ್ ಸ್ಥಾವರದ ಚಿಮಣಿಯ ತುದಿಯಿಂದ ಕ್ಷಿಪ್ರವಾಗಿ ಒಂದರ ಬೆನ್ನಿಗೊಂದರಂತೆ ಹೊರಹೊಮ್ಮುವ ಜ್ವಾಲೆ ಮತ್ತು ಹೊಗೆ. ಇಟಾಲಿಯನ್ ಚಿತ್ರ ನಿರ್ಮಾಪಕ ಮೈಕೆಲ್ಯಾಂಜೆಲೊ ಆಂಟೋನಿಯೊನಿ ಅವರ 1964ರ ಚಲನಚಿತ್ರ ‘ರೆಡ್ ಡೆಸರ್ಟ್’ನಲ್ಲಿ ಈ ದೃಶ್ಯ ಮುಂದೆ ಬೇರೆ ಬೇರೆ ಬಗೆಯಲ್ಲಿ ವ್ಯಕ್ತವಾಗುತ್ತದೆ.
ಕೈಗಾರಿಕೀಕರಣ, ಬಂಡವಾಳಶಾಹಿಯು ಪ್ರಕೃತಿ ಮತ್ತು ಮಾನವ ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಆಂಟೋನಿಯೊನಿ ಚಿತ್ರವು ಹೇಳಹೊರಟಿರುವುದೇನು ಎಂಬುದರ ಸುಳಿವು ಕೊಡುತ್ತಲೇ ಗಾಢವಾಗಿ ಮನಸ್ಸನ್ನು ಆವರಿಸುತ್ತದೆ ಈ ದೃಶ್ಯ.
ಇಂದಿನ ಸಂಸ್ಕೃತಿಯಲ್ಲಿ ಈ ರೀತಿಯ ಚಿತ್ರ ನಿರ್ಮಾಣವು ಚಾಲ್ತಿಯಲ್ಲಿಲ್ಲ. ಆದರೂ ಆಂಟೋನಿಯೊನಿಯ ‘ರೆಡ್ ಡೆಸರ್ಟ್’ ಮಾನವನ ಭಾವನೆಗಳನ್ನು ಮತ್ತು ಹವಾಮಾನ ಬದಲಾವಣೆ ಮತ್ತು ಬಂಡವಾಳಶಾಹಿಯ ಅಡಿಯಲ್ಲಿನ ದಿನನಿತ್ಯದ ಬಿಕ್ಕಟ್ಟನ್ನು ಇತರ ಇತ್ತೀಚಿನ ಚಲನಚಿತ್ರಗಳಿಗಿಂತ ಉತ್ತಮವಾಗಿ ಕಾಣಿಸುತ್ತದೆ.
ಆಂಟೋನಿಯೋನಿ ತನ್ನ ಚಿತ್ರದ ಉದ್ದೇಶವು ಕೈಗಾರಿಕೀಕರಣದ ವಿರುದ್ಧ ಹೋರಾಡುವುದಲ್ಲ ಎಂದು ಪ್ರತಿಪಾದಿಸಿದ್ದರೂ, ಅದರ ಬೆಳವಣಿಗೆ ಮತ್ತು ಪ್ರಾಮುಖ್ಯತೆಯು ಸರಳವಾಗಿ ನಿಭಾಯಿಸಬಹುದಾದುದಲ್ಲ. 2ನೇ ಜಾಗತಿಕ ಸಮರದ ನಂತರದ ದುರಂತ ಮತ್ತು ತೀವ್ರ ಆರ್ಥಿಕ ಅಲ್ಲೋಲ ಕಲ್ಲೋಲ ಕಂಡಿದ್ದ 1960ರ ದಶಕದ ಇಟಲಿಯ ನೆಲೆಯಲ್ಲಿ ಈ ಚಿತ್ರದ ನೋಟವಿದೆ. ಕೈಗಾರಿಕೀಕರಣ ಮತ್ತು ಆಧುನೀಕರಣ ಮಾತ್ರವೇ ಜನ ಸಂರಕ್ಷಕವಾಗಿ ಕಂಡಿದ್ದ ಕಾಲಘಟ್ಟ ಅದು. ಬೃಹತ್ ಉತ್ಪಾದನೆ ಮತ್ತು ಜಾಗತೀಕರಣವೆಂಬ, ಬಂಡವಾಳಶಾಹಿಯನ್ನು ಪ್ರಪಂಚದಾದ್ಯಂತ ಹರಡುವ ಎರಡು ಅಂಶಗಳು ತಮ್ಮ ಕಠೋರ ಪರಿಣಾಮಗಳನ್ನು ಇನ್ನೂ ಸ್ಪಷ್ಟವಾಗಿ ಕಾಣಿಸಿರದಂತಹ ಹಂತ.
ಮಸುಕಾದ ಕೈಗಾರಿಕಾ ಪ್ರದೇಶದಲ್ಲಿ, ಯುವತಿ ಗಿಯುಲಿಯಾನ ಜೀವನವನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವವಳು. ಸ್ಥಳೀಯ ಸ್ಥಾವರವೊಂದರ ಮ್ಯಾನೇಜರ್ ಉಗೊನನ್ನು ಅವಳು ಮದುವೆಯಾಗಿದ್ದಾಳೆ, ಆದರೆ ಆತನ ಸಹೋದ್ಯೋಗಿಯೊಬ್ಬನೊಡನೆ ಪ್ರೇಮಸಂಬಂಧ ವಿದೆ. ಗಿಯುಲಿಯಾನಳನ್ನು ಅಸ್ಥಿರತೆ ಕಾಡುತ್ತಿದೆ. ತನ್ನ ಪಾತ್ರವೇನು? ಹೆಂಡತಿಯೆ, ತಾಯಿಯೆ ಅಥವಾ ಪ್ರಪಂಚದ ಇನ್ನೊಬ್ಬ ವ್ಯಕ್ತಿ ಮಾತ್ರವೇ ಎಂಬುದು ಅವಳಿಗೆ ಸ್ಪಷ್ಟವಿಲ್ಲ. ಹಾಗೆಂದು ಜೀವನಕ್ಕೆ ವಿಮುಖವಾಗುವ ಅವಳ ಆಲೋಚನೆ ಕೂಡ ಹೆಚ್ಚು ಹೊತ್ತು ನಿಲ್ಲುವಂಥದ್ದಲ್ಲ. ಅವಳೊಂದಿಗೆ ಸಂಬಂಧವಿಟ್ಟುಕೊಂಡಿರುವ ಅವಳ ಗಂಡನ ಸಹೋದ್ಯೋಗಿ ಮಾತ್ರ ತನ್ನ ಅಗತ್ಯಗಳು ಮತ್ತು ಆಸೆಗಳ ಪೂರೈಕೆಗೆ ಅವಳನ್ನು ಬಳಸಿಕೊಳ್ಳುತ್ತಿರುವವನು.
ಗಿಯುಲಿಯಾನ ಪಾತ್ರದಲ್ಲಿ ಮೋನಿಕಾ ವಿಟ್ಟಿಯ ಛಿದ್ರಗೊಳಿಸುವ ಅಭಿನಯ ಮತ್ತು ಆಂಟೋನಿಯೊನಿ ಆ ಪಾತ್ರವನ್ನು ಕಟ್ಟಿಕೊಟ್ಟಿರುವ ಬಗೆ ಪರಿಣಾಮಕಾರಿ. ಇಟಲಿಯ ಶ್ರೇಷ್ಠ ನಟಿಯರಲ್ಲಿ ಒಬ್ಬರಾದ ವಿಟ್ಟಿ, ಆಧುನೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿಯ ಪರಕೀಯತೆಯನ್ನು ಚಿತ್ರಿಸುವ ಆಂಟೋನಿಯೊನಿಯ ಬಹುತೇಕ ಎಲ್ಲಾ ಚಲನಚಿತ್ರಗಳ ಕೇಂದ್ರಪಾತ್ರದಲ್ಲಿರುವಾಕೆ. ಈ ಚಿತ್ರದಲ್ಲಿ ಉಕ್ಕಿನ ಕೊಳವೆಗಳು ಮತ್ತು ಸುಡುವ ಮಸಿದಿಬ್ಬದ ಬೃಹದೆತ್ತರದ ಕಾಡಿನಲ್ಲಿ ತೀರಾ ಸಣ್ಣಗೆ ಕಾಣಿಸುವ ಜೀವವೊಂದರ ಪಾತ್ರ ಆಕೆಯದು.
ಮನುಷ್ಯರನ್ನು ಕುಬ್ಜವಾಗಿ ಕಾಣಿಸುವ ಈ ಚೌಕಟ್ಟು ಚಿತ್ರದ ಉದ್ದಕ್ಕೂ ಸ್ಥಾಯಿಯಾಗಿದೆ, ಅಲ್ಲಿನ ಯಂತ್ರಗಳು ಮತ್ತು ವಾಹನಗಳು ತಮ್ಮ ಬಳಿ ಅಲೆದಾಡುವ ಮನುಷ್ಯರನ್ನು ಕುಬ್ಜಗೊಳಿಸುತ್ತವೆ. ಆಂಟೋನಿಯೊನಿ ಚಿತ್ರಗಳ ಅಂತರ್ಗತ ವ್ಯಂಗ್ಯವೂ ಹೌದು ಇದು. ಗಾಯ ಮತ್ತು ಸಾವನ್ನು ಉಂಟುಮಾಡುವ, ಉಸಿರಾಡುವ ಗಾಳಿಯಲ್ಲಿ ಕಪ್ಪುಹೊಗೆಯನ್ನು ಉಗುಳುವ ಈ ಯಂತ್ರಗಳನ್ನು ನಿರ್ವಹಿಸುತ್ತಿರುವವರು ಅವುಗಳ ನೆರಳಿನಲ್ಲಿ ನರಳುತ್ತಿರುವ ಮನುಷ್ಯರೇ ಆಗಿದ್ದಾರೆ.
ಗಿಯುಲಿಯಾನ, ಅವಳ ಗಂಡ ಉಗೊ ಮತ್ತು ಆಕೆಯ ಪ್ರೇಮಿ ಕೊರಾಡೊ ಝೆಲ್ಲರ್ ಸೇರಿದಂತೆ ಕೆಲವು ಸ್ನೇಹಿತರೆಲ್ಲ ಸೇರಿ ಕರಾವಳಿಗೆ ಒಂದು ದಿನದ ವಿಹಾರ ಹೊರಟರೂ, ಅಲ್ಲಿಯೂ ಯಾಂತ್ರೀಕರಣ ಮತ್ತು ಪರಿಸರ ಅವನತಿಯ ಹರಿದಾಡುವ ನೆರಳು ಅವರನ್ನು ಕಾಡದೇ ಬಿಡುವುದಿಲ್ಲ. ಅವರ ನಗು ಮತ್ತು ಸಂತೋಷದ ದೃಶ್ಯವು ಬೃಹತ್ ಹಡಗೊಂದು ಆವರಿಸಿಕೊಳ್ಳುವುದರಿಂದ ಥಟ್ಟನೆ ಕಡಿತಗೊಳ್ಳುತ್ತದೆ.
ಗಿಯುಲಿಯಾನ ಜೊತೆಗೆ ಪ್ರೇಮದಲ್ಲಿರುವ ಕೊರಾಡೊ, ಅರ್ಜೆಂಟೀನಾದಲ್ಲಿ ಶುರುವಾಗಲಿರುವ ಕೈಗಾರಿಕೆಗೆ ಕಡಿಮೆ ವೇತನದ ಕಾರ್ಮಿಕರನ್ನು ಹುಡುಕುತ್ತಿದ್ದಾನೆ. ಅಲ್ಲಿಗೆ ಹೋಗಬಯಸುವವರಿಗೆ ಸಂಬಳವೆಷ್ಟು, ವಸತಿಯಿದೆಯೇ, ಅಲ್ಲಿ ಸುರಕ್ಷಿತವಾಗಿರಬಲ್ಲೆವೇ, ಮತ್ತೆ ಇಟಲಿಗೆ ಮರಳಲು ಸಾಧ್ಯವೇ ಎಂಬೆಲ್ಲ ಪ್ರಶ್ನೆಗಳು. ಆದರೆ ಕೊರಾಡೊ ಉತ್ತರವಿಲ್ಲದೆ ಮೂಕವಿಸ್ಮಿತನಾಗಿ ಅವರನ್ನು ನೋಡುತ್ತಾನೆ ಅಥವಾ ಬಹುಶಃ ಅವನಿಗೆ ಉತ್ತರಗಳು ತಿಳಿದಿರಬಹುದು ಮತ್ತು ತಾವು ಅದನ್ನೆಲ್ಲ ವಿಚಾರಿಸುತ್ತಿರುವುದು ಆತನಿಗೆ ಇಷ್ಟವಾಗುತ್ತಿಲ್ಲ ಎಂದು ಕಾರ್ಮಿಕರಿಗೆ ಅನ್ನಿಸುವ ಸನ್ನಿವೇಶ.
ಸುಮಾರು 60 ವರ್ಷಗಳ ನಂತರವೂ ‘ರೆಡ್ ಡೆಸರ್ಟ್’ ಇನ್ನೂ ತಾಜಾ ಎನ್ನಿಸುವುದು, ಬಂಡವಾಳಶಾಹಿಯ ಅಡಿಯಲ್ಲಿನ ಭಾವನೆಗಳನ್ನು ಸಿನೆಮಾದಂತಹ ಕಲೆಯೊಂದು ಕಾಲಾತೀತವಾಗಿ ಕಾಣಿಸಬಲ್ಲುದು ಎಂಬುದರಿಂದಾಗಿ. ಮಾನವೀಯತೆ ಎಂಬುದು ಮನುಷ್ಯ ನಿರ್ಮಿತ ವ್ಯಾಪಾರೀ ಲೋಕದಲ್ಲಿ ಒಂದು ನಿರಂತರ ಅಸ್ಪಷ್ಟತೆಯೊಂದಿಗಿರುವುದು ಕಾಡುತ್ತದೆ. ಗಿಯುಲಿಯಾನ ಕಾರ್ಖಾನೆಗೆ ಭೇಟಿ ನೀಡಿದಾಗ, ಕೆಂಪು ಕಿರಣಗಳ ಸರಣಿಯ ಹಿಂದೆ ಅವಳನ್ನು ಕಾಣಿಸಲಾಗಿದೆ. ಕೊರಾಡೊ ಜೊತೆಗಿನ ಮಾತು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಅಂದಗೊಳಿಸಿದ ಹುಲ್ಲಿನ ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿ ನಡೆಯುತ್ತದೆ, ಒಂದು ಗುಲಾಬಿ ಹೂವು ಸೂಕ್ಷ್ಮವಾಗಿ ನಿಂತಿದೆ. ಹಡಗುಕಟ್ಟೆಗಳಲ್ಲಿ, ಪಾತ್ರಗಳು ದೈತ್ಯಾಕಾರದ ಹಡಗಿನ ಪಕ್ಕದಲ್ಲಿ ಮಂಜಿನಲ್ಲಿ ಮಸುಕಾದ ಸಣ್ಣ ವ್ಯಕ್ತಿಗಳಾಗಿ ಕಂಡುಬರುತ್ತವೆ.
ಮತ್ತೆ, ಚಲನಚಿತ್ರದ ಅಂತ್ಯದ ವೇಳೆಗೆ, ಮುಂಭಾಗದಲ್ಲಿ ಒಂದು ದೊಡ್ಡ ಕೊಳವೆ ರಚನೆಯು ಗಿಯುಲಿಯಾನಳನ್ನು ಸುತ್ತುವಂತೆ ಮತ್ತು ಆವರಿಸುವಂತೆ ಕಾಣುತ್ತದೆ, ಅವಳು ಹೆದರಿದ್ದಾಳೆ. ಚಿತ್ರದ ಕೊನೆಯ ಹತ್ತು ನಿಮಿಷಗಳು ಆಧುನಿಕತೆಯ ಮೂಕ ಚಿತ್ರಗಳ ಸಂಯೋಜನೆಯಾಗಿದೆ - ಎಲೆಕ್ಟ್ರಿಕಲ್ ಗ್ರಿಡ್‌ಗಳು, ಬೀದಿಗಳು, ಕಾರುಗಳು.
ಬದುಕಲು ಯೋಗ್ಯವಾದ ಜಗತ್ತಿಗೆ ತಾಂತ್ರಿಕ ಪ್ರಗತಿ, ಕೈಗಾರಿಕಾ ಪ್ರಗತಿ ಮತ್ತು ಆಧುನಿಕ ಸಮಾಜದ ಇತರ ಪ್ರಮುಖ ಪ್ರಯೋಜನಗಳ ಅಗತ್ಯವಿದೆ. ಆದರೆ ನಮ್ಮ ಜೀವಿತಾವಧಿಯಲ್ಲಿ, ಈ ಬೆಳವಣಿಗೆಗಳು ಬಂಡವಾಳಶಾಹಿಗೆ ಸಂಬಂಧಿಸಿವೆ. ನಮ್ಮ ಉದ್ಯೋಗಗಳು, ವ್ಯವಹಾರಗಳು, ಮನೆಗಳು, ಬೀದಿಗಳು ಮತ್ತು ಸಮಾಜದ ಇತರ ಮೂಲಭೂತ ಅಂಶಗಳು ನಮಗೆ ತಿಳಿದಿರುವ ಮತ್ತು ನಮ್ಮ ಜೀವನಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳು ಕೆಲವರ ಶ್ರೀಮಂತಿಕೆಗೆ ಸಂಬಂಧಿಸಿವೆ ಮತ್ತು ಅವರ ಸೃಷ್ಟಿಯ ಪರಿಣಾಮಗಳನ್ನು ಅನುಭವಿಸುವ ಅನೇಕರಿಂದ ಅವೆಲ್ಲವೂ ನಿರ್ವಹಿಸಲ್ಪಡುತ್ತವೆ.
ಚಿತ್ರದ ಕೊನೆಯಲ್ಲಿ, ಗಿಯುಲಿಯಾನ ತನ್ನ ಮಗನೊಂದಿಗೆ ಕಾರ್ಖಾನೆಯ ಹೊಗೆ ರಾಶಿಯನ್ನು ನೋಡುತ್ತಿದ್ದಾಳೆ. ಅವನು ಕೇಳುತ್ತಾನೆ: ‘‘ಆ ಹೊಗೆ ಹಳದಿ ಏಕೆ?’’ ಅವಳು ಹೇಳುತ್ತಾಳೆ: ‘‘ಇದು ವಿಷಕಾರಿ.’’ ಅವನು ಪ್ರತಿಕ್ರಿಯಿಸುತ್ತಾನೆ: ‘‘ಹಾಗಾದರೆ, ಹಕ್ಕಿಯೊಂದು ಅದರ ಬಳಿ ಹಾರಿದರೆ, ಅದು ಸಾಯುತ್ತದೆಯೇ?’’ ಅವಳು ಹೇಳುತ್ತಾಳೆ: ‘‘ಇನ್ನೆಂದೂ ಇಲ್ಲಿ ಹಾರಬಾರದು ಎಂದು ಪಕ್ಷಿಗಳಿಗೆ ತಿಳಿದಿದೆ.’’