ನ್ಯಾಯಾಂಗವನ್ನು ನಿಯಂತ್ರಿಸುವ ಮಸಲತ್ತು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಏಳು ವರ್ಷಗಳಲ್ಲಿ ಬಹುತೇಕ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದವರು ಈಗ ನ್ಯಾಯಾಂಗವನ್ನು ನಿಯಂತ್ರಿಸಲು ಹೊರಟಿದ್ದಾರೆ. ನ್ಯಾಯಾಲಯಗಳ ಹಲವು ತೀರ್ಪುಗಳು ತಮಗೆ ಪೂರಕವಾಗಿದ್ದರೂ ಕೆಲ ತೀರ್ಪುಗಳು ತಮ್ಮಿಷ್ಟದಂತೆ ಬರುತ್ತಿಲ್ಲ ಎಂಬ ಅಸಮಾಧಾನ ಅಧಿಕಾರದಲ್ಲಿರುವವರಲ್ಲಿ ಒಳಗೊಳಗೆ ಕುದಿಯುತ್ತಿದೆ. ಒಕ್ಕೂಟ ಸರಕಾರದ ಕಾನೂನು ಸಚಿವ ಕಿರಣ್ ರಿಜಿಜು ಅವರ ಇತ್ತೀಚಿನ ಹೇಳಿಕೆ ಇದಕ್ಕೆ ಉದಾಹರಣೆಯಾಗಿದೆ. ನ್ಯಾಯಮೂರ್ತಿಗಳ ನೇಮಕಾತಿಗಾಗಿ ಈಗಿರುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸಚಿವರು ‘‘ನ್ಯಾಯಮೂರ್ತಿಗಳು ನ್ಯಾಯದಾನ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಸಮಯವನ್ನು ನ್ಯಾಯಮೂರ್ತಿಗಳ ನೇಮಕದ ಬಗ್ಗೆ ನಿರ್ಧಾರ ಕೈಗೊಳ್ಳುವುದರಲ್ಲಿ ವ್ಯಯಿಸುತ್ತಾರೆ’’ ಎಂದು ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೊಲಿಜಿಯಂ ಬಗ್ಗೆ ರಿಜಿಜು ಆಡಿದ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ‘‘ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆ ಸ್ವತಂತ್ರ ನ್ಯಾಯಾಂಗಕ್ಕೆ ಅನಿವಾರ್ಯ’’ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರಕಾರವು ಅನುಮೋದನೆ ನೀಡಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಸಮಿತಿಯನ್ನು(ಎನ್.ಜೆ.ಎ.ಸಿ) ಸುಪ್ರೀಂಕೋರ್ಟ್ ಒಪ್ಪಿಲ್ಲ. ಅದು ಅಸಾಂವಿಧಾನಿಕ ಎಂಬುದು ಸುಪ್ರೀಂಕೋರ್ಟ್ ಅಭಿಪ್ರಾಯವಾಗಿದೆ.
ಈಗಿರುವ ಕೊಲಿಜಿಯಂ ವ್ಯವಸ್ಥೆಯಿಂದ ತನಗೆ ಬೇಕಾದವರನ್ನು ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿ ಕೂರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನ ಒಕ್ಕೂಟ ಸರಕಾರಕ್ಕಿದೆ. ಸಿಬಿಐ, ಆದಾಯ ತೆರಿಗೆ ಇಲಾಖೆ, ರಾಷ್ಟ್ರೀಯ ತನಿಖಾ ಆಯೋಗ (ಎನ್.ಐ.ಎ.) ಜಾರಿ ನಿರ್ದೇಶನಾಲಯಗಳಂಥ ಸ್ವಾಯತ್ತ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿರುವ ಸರಕಾರ ಅವುಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಹಣಿಯುತ್ತಿದೆ. ಜನಪರ ಚಳವಳಿಗಳ ನಾಯಕರ ಬಾಯಿ ಮುಚ್ಚಿಸುತ್ತಿದೆ. ಅದೇ ರೀತಿ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಿದರೆ ಪ್ರಶ್ನಿಸುವವರೇ ಇಲ್ಲದಂತಾಗುತ್ತದೆ. ಈ ಕಾರಣದಿಂದ ನ್ಯಾಯಮೂರ್ತಿಗಳ ನೇಮಕದ ಮೇಲೆ ಹಿಡಿತ ಸಾಧಿಸಲು ಸರಕಾರ ಹೊರಟಿದೆ. ನ್ಯಾಯಾಂಗದ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿರುವ ಸರಕಾರ ಈಗಿರುವ ಕೊಲಿಜಿಯಂ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸು ಮಾಡಿರುವ ಹೆಸರುಗಳನ್ನು ಒಪ್ಪುತ್ತಿಲ್ಲ. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕಡತಗಳನ್ನು ಕಾರಣವಿಲ್ಲದೇ ಸುಮ್ಮನೆ ಇಟ್ಟುಕೊಂಡು ಕುಳಿತಿರುವ ಬಗ್ಗೆ ಸುಪ್ರೀಂಕೋರ್ಟ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ ನ್ಯಾಯಾಂಗ ಕೂಡ ಬಹುಮುಖ್ಯ ಸಾಂವಿಧಾನಿಕ ಅಂಗ. ನ್ಯಾಯಾಂಗ ಸಮರ್ಥವಾಗಿ ಕಾರ್ಯನಿರ್ವಹಿಸಬೇಕಾದರೆ ನ್ಯಾಯದಾನದಲ್ಲಿ ವಿಳಂಬವಾಗಬಾರದು. ವಿಳಂಬವಾಗಬಾರದೆಂದರೆ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಸಂಖ್ಯೆ ಸಮರ್ಪಕವಾಗಿರಬೇಕು. ನ್ಯಾಯಾಧೀಶರ ಕೊರತೆ ಇದ್ದರೆ ನ್ಯಾಯದಾನ ವಿಳಂಬವಾಗುತ್ತದೆ. ಇದರ ಹೊಣೆಯನ್ನು ನ್ಯಾಯಾಧೀಶರ ನೇಮಕಾತಿಯ ಶಿಫಾರಸುಗಳನ್ನು ತಡೆ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರಕಾರವೇ ಹೊರಬೇಕಾಗುತ್ತದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನಕಾರಾತ್ಮಕ ನೀತಿಯಿಂದಾಗಿ ನ್ಯಾಯದಾನದಲ್ಲಿ ವಿಳಂಬವಾಗಿ ಜನಸಾಮಾನ್ಯರು ತೊಂದರೆ ಪಡಬೇಕಾಗಿ ಬಂದಿದೆ. ಸುಪ್ರೀಂಕೋರ್ಟ್‌ನಲ್ಲಿ 34 ಹುದ್ದೆಗಳಿದ್ದು ಅವುಗಳಲ್ಲಿ 27 ಮಾತ್ರ ಭರ್ತಿಯಾಗಿವೆ. 37 ಹೈಕೋರ್ಟ್‌ಗಳಲ್ಲಿ 1,108 ನ್ಯಾಯಾಧೀಶರ ಹುದ್ದೆಗಳಿವೆ. ಅವುಗಳಲ್ಲಿ 335 ಹುದ್ದೆಗಳು ಖಾಲಿ ಉಳಿದಿವೆ. ದೇಶದ ಎಲ್ಲ ನ್ಯಾಯಾಲಯಗಳಲ್ಲಿ 4.7 ಕೋಟಿ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಸುಪ್ರೀಂಕೋರ್ಟಿನಲ್ಲಿ 71 ಸಾವಿರ ಪ್ರಕರಣಗಳು ಇತ್ಯರ್ಥಕ್ಕಾಗಿ ಕಾಯುತ್ತಿವೆ.ಹೈಕೋರ್ಟ್‌ಗಳಲ್ಲಿ 58 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಇದಕ್ಕೆ ಕಾರಣ ನ್ಯಾಯಾಧೀಶರ ಕೊರತೆ. ನ್ಯಾಯಾಧೀಶರ ನೇಮಕಾತಿ ಬಗ್ಗೆ ಕೊಲಿಜಿಯಂ ಶಿಫಾರಸುಗಳನ್ನು ಮೋದಿ ಸರಕಾರ ಒಪ್ಪದಿರುವುದೇ ಇದಕ್ಕೆ ಇನ್ನೊಂದು ಮುಖ್ಯ ಕಾರಣ.
ಕೊಲಿಜಿಯಂ ವ್ಯವಸ್ಥೆಯನ್ನು ಮೋದಿ ಸರಕಾರ ಯಾಕೆ ಇಷ್ಟಪಡುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯಾಸ ಪಡಬೇಕಿಲ್ಲ. ತನಗೆ ಬೇಕಾದ ನ್ಯಾಯಾಧೀಶರನ್ನು ನೇಮಕ ಮಾಡಿ ತನ್ನ ಇಷ್ಟದಂತೆ ತೀರ್ಪು ಬರಬೇಕೆಂಬುದು ಸರಕಾರದ ಒಳ ಬಯಕೆ ಇದ್ದಂತಿದೆ. ಕೊಲಿಜಿಯಂ ಅದಕ್ಕೆ ಅಡ್ಡಿಯಾಗಿದೆ.ಕೊಲಿಜಿಯಂ ಬದಲಾಗಿ ಮೋದಿ ಸರಕಾರ ರೂಪಿಸಿದ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಪರಿಗಣಿಸಿದೆ. ಈಗಿರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರ ಸಮಿತಿಯೇ ನ್ಯಾಯಾಧೀಶರ ನೇಮಕ ಮಾಡುತ್ತದೆ. ಇದು ಮೋದಿ ಸರಕಾರಕ್ಕೆ ಅಪಥ್ಯವಾಗಿದೆ. ಅದಕ್ಕಾಗಿ ನೇಮಕಾತಿ ವ್ಯವಸ್ಥೆಯನ್ನೇ ಬದಲಿಸಿ ನ್ಯಾಯಾಂಗದ ಮೇಲೆ ನಿಯಂತ್ರಣ ಸಾಧಿಸಲು ಈ ಸರಕಾರ ಹೊರಟಿದೆ.
ಒಕ್ಕೂಟ ಸರಕಾರ ಈ ನಕಾರಾತ್ಮಕ ನೀತಿಯನ್ನು ಕೈ ಬಿಡಬೇಕು. ನ್ಯಾಯಾಂಗ ತನ್ನ ಗರಿಷ್ಠ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕೆಂದಿದ್ದರೆ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿಯಬಾರದು.ಹಾಗಾಗಿ ಒಕ್ಕೂಟ ಸರಕಾರ ಈಗ ತಡೆ ಹಿಡಿದಿರುವ ನ್ಯಾಯಾಧೀಶರ ನೇಮಕದ ಕುರಿತ ಕೊಲಿಜಿಯಂ ಶಿಫಾರಸುಗಳನ್ನು ಒಪ್ಪಿನ್ಯಾಯಾಂಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವುದು ಸೂಕ್ತ.
ಈ ಬಗ್ಗೆ ನ್ಯಾಯಾಂಗದ ಜೊತೆಗೆ ಸಂಘರ್ಷಕ್ಕೆ ಇಳಿಯುವ ಬದಲಾಗಿ ಸುಪ್ರೀಂಕೋರ್ಟ್ ಜೊತೆಗೆ ಸಮಾಲೋಚನೆ ನಡೆಸಿ ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ನ್ಯಾಯದಾನದಲ್ಲಿ ವಿಳಂಬವಾದರೆ ಜನಸಾಮಾನ್ಯರು ನ್ಯಾಯಾಲಯಗಳ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ.