ಬಣ್ಣಗಳ ಬೆರಗಿನ ಮಳೆಬಿಲ್ಲ ಹಳ್ಳಿ
ಇವತ್ತಿನ ಆಕ್ರಮಣಕಾರಿ ಮತ್ತು ದಾಹ ಸ್ವಭಾವದ ಕಾಲದಲ್ಲಿ ಈ ಮಳೆಬಿಲ್ಲ ಹಳ್ಳಿಯ ಕಥೆ ಒಂದು ಪುರಾಣದಂತೆ ಕಾಣಿಸುತ್ತದೆ. ಈ ಕಾಲ ಮರೆತಿರುವ, ಕಳೆದುಕೊಳ್ಳುತ್ತಿರುವ ಅವರ್ಣನೀಯವಾದ ಏನೋ ಒಂದನ್ನು ಮತ್ತೆ ತುಂಬಿಕೊಡಬಲ್ಲ ತಾಕತ್ತಿನ ಸೊಲ್ಲು ಅದರಾಳದಲ್ಲಿದೆ.
ಅದೊಂದು ಪುಟ್ಟ ಹಳ್ಳಿ. ಹಳೇ ಕಾಲದ ಮನೆಗಳು. ಸರಕಾರಕ್ಕೆ ಅವನ್ನೆಲ್ಲ ಕೆಡವಿ ಅಲ್ಲಿ ಆಧುನಿಕ ನಗರ ಕಟ್ಟುವ ಹುಕಿ ಬಂದುಬಿಡುತ್ತದೆ. ಹಳ್ಳಿವಾಸಿಗಳಿಗೆಲ್ಲ ಮನೆ ಖಾಲಿ ಮಾಡಿ, ಕೊಡುವ ದುಡ್ಡು ತೆಗೆದುಕೊಳ್ಳಲು ಇಲ್ಲವೆ ಹೊಸದಾಗಿ ನಿರ್ಮಾಣವಾಗುವ ಮನೆಗಳನ್ನು ಸೇರಿಕೊಳ್ಳಲು ಸೂಚನೆ ಬರುತ್ತದೆ. ಹಳ್ಳಿಗಳೆಲ್ಲ ಖಾಲಿಯಾಗಿಬಿಡುತ್ತವೆ. ಆ ಪುಟ್ಟ ಹಳ್ಳಿಯ ಜನ ಕೂಡ ಹೊರಟುಬಿಡುತ್ತಾರೆ. ಆದರೆ ಒಬ್ಬ ಮಾತ್ರ ಹೋಗಲು ತಯಾರಾಗುವುದಿಲ್ಲ. ಅವನಿಗೆ ಆ ಹಳ್ಳಿಯೇ, ಅದೆಷ್ಟೋ ವರ್ಷಗಳಿಂದ ನೆಲೆಸಿದ್ದ ಆ ಮನೆಯೇ ಸರ್ವಸ್ವ. ಅವನು ತಾನೊಬ್ಬನೇ ಆದರೂ ಸರಿಯೇ, ಅಲ್ಲಿಂದ ಕಾಲ್ತೆಗೆಯದಿರಲು ನಿಶ್ಚಯಿಸಿಬಿಡುತ್ತಾನೆ.
ಸುತ್ತಲ ಹಳ್ಳಿಯಲ್ಲಿ ಮಾತ್ರವಲ್ಲ, ಆ ಹಳ್ಳಿಯಲ್ಲೂ ಮನೆಗಳನ್ನು ನೆಲಸಮಗೊಳಿಸುತ್ತ ಬರುತ್ತದೆ ಸರಕಾರ. ಆಗ ಆತನಿಗೆ ನೆನಪಾಗುವುದು ಚಿಕ್ಕಂದಿನಲ್ಲಿ ಅಪ್ಪಹೇಳಿಕೊಟ್ಟಿದ್ದ ಪೇಂಟಿಂಗ್. ಚಿತ್ರ ಬರೆಯುವುದನ್ನು ಅಪ್ಪ ಹೇಳಿಕೊಟ್ಟಿದ್ದರೂ ಅವನೆಂದೂ ಅದನ್ನು ಮುಂದುವರಿಸಿರಲಿಲ್ಲ. ಆದರೆ ಈಗ ಮೊದಲ ಬಾರಿಗೆ ತನ್ನ ಮನೆಯೊಳಗೆ ಒಂದು ಚಿತ್ರ ಬರೆಯುತ್ತಾನೆ. ಅದು ಹಕ್ಕಿಯ ಚಿತ್ರ.
ತನ್ನ ಮನೆಯೊಳಗನ್ನೆಲ್ಲ ಬಣ್ಣದ ಚಿತ್ರಗಳಿಂದ ಅಲಂಕರಿಸಿದ ಬಳಿಕ ಹೊರಗೋಡೆಗಳ ಮೇಲೂ ಚಿತ್ರ ಬರೆಯುತ್ತಾನೆ. ಬಳಿಕ ತನ್ನ ಮನೆಯ ಸುತ್ತಲಿನ ಖಾಲಿ ಮನೆಗಳ ಗೋಡೆಗಳ ಮೇಲೂ ಬಣ್ಣದ ಚಿತ್ತಾರ ಹರಡುತ್ತಾನೆ. ಹಕ್ಕಿಗಳು, ಸಾಲಿನಲ್ಲಿ ಹೊರಟ ನಾಯಿಗಳು, ಬೆಕ್ಕುಗಳು, ಹಾರುತ್ತಿರುವ ವಿಮಾನಗಳು, ತನ್ನ ಇಷ್ಟದ ತಾರೆಯರು, ಕುಂಗ್ ಫು ದಂತಕತೆ ಬ್ರೂಸ್ ಲೀ ಅವನ ಕುಂಚದ ಬಣ್ಣ ಆ ಇಡೀ ಹಳ್ಳಿಯನ್ನೇ ಬೆಳಗಲು ಹೊರಟಂತೆ ವಿಸ್ತರಿಸಿಕೊಳ್ಳುತ್ತ ಸಾಗುತ್ತದೆ.
ಅದು ಹೇಗೋ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಆತನ ಬಣ್ಣದ ಸಾಹಸ ತಿಳಿಯುತ್ತದೆ. ಅವರೆಲ್ಲ ಸೇರಿ ಆ ಕಲಾವಿದನ ಕೈಯಿಂದ ಹೊಸ ಬಗೆಯಲ್ಲಿ ಹೊಳೆಯುತ್ತಿರುವ ಹಳ್ಳಿಯನ್ನು ಉಳಿಸಿಕೊಳ್ಳಲು ಅಭಿಯಾನ ಶುರು ಮಾಡುತ್ತಾರೆ. ಸರಕಾರ ಮಣಿಯುತ್ತದೆ. ಆ ಹಳ್ಳಿಯ ಮೇಲೆ ಬುಲ್ಡೋಜರ್ ಹಾಯುವುದಿಲ್ಲ ಎಂಬ ವಾಗ್ದಾನ ನೀಡುತ್ತದೆ. ಆತ ಖುಷಿಯಿಂದ ಕುಣಿದಾಡುತ್ತಾನೆ.
ಬಣ್ಣಗಳ ಕಾರಣದಿಂದಾಗಿ ಮಳೆಬಿಲ್ಲ ಹಳ್ಳಿ ಎಂದೇ ಗೊತ್ತಾಗಿರುವ ಆ ಹಳ್ಳಿಗೆ ಈಗ ಸಾಂಸ್ಕೃತಿಕ ಕೇಂದ್ರದ ಮಾನ್ಯತೆ. ಅದೀಗ ಪ್ರವಾಸಿ ಆಕರ್ಷಣೆಯ ತಾಣ. ಕಳೆದ ಐದು ವರ್ಷಗಳಿಂದ ಲಕ್ಷಾಂತರ ಪ್ರವಾಸಿಗರು ಅಲ್ಲಿಗೆ ಬಂದುಹೋಗುತ್ತಿದ್ದಾರೆ. ಆ ಬಣ್ಣದ ಕಲಾ ಕೃತಿಗಳ ಎದುರು ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಆ ಚಿತ್ರ ಬರೆದವನ ಕಣ್ಣಲ್ಲಿ ಅದೆಂಥದೋ ಧನ್ಯತೆ.
ಇವತ್ತಿಗೂ ಬೆಳಗಿನ ಜಾವ ಮೂರಕ್ಕೇ ಎದ್ದು ಆತ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಚಿತ್ರಗಳನ್ನು ಬರೆಯುತ್ತಾನೆ. ಬರುವ ಪ್ರವಾಸಿಗರನ್ನು ಸ್ವಾಗತಿಸುವುದು ಬಣ್ಣ ಮೆತ್ತಿದ ಕೈಗಳು, ಶೂ ಮತ್ತು ಉಡುಪಿನಲ್ಲಿ ಕಂಗೊಳಿಸುವ ಆ ಜಾದೂಗಾರ. ಅವರೊಂದಿಗೆ ಮಾತನಾಡುತ್ತ ಕಳೆಯುವ ಅವನೀಗ ಒಬ್ಬಂಟಿಯಲ್ಲ.
ಈ ಮಳೆಬಿಲ್ಲ ಹಳ್ಳಿ ಇರೋದು ಥೈವಾನಿನಲ್ಲಿ. ಅದನ್ನು ಮಳೆಬಿಲ್ಲ ಹಳ್ಳಿಯಾಗಿ ಬದಲಿಸಿದವನು ಹುವಾಂಗ್ ಯೂಂಗ್ ಫು. ಈಗವನಿಗೆ 98 ವರ್ಷ. ಮೂಲತಃ ಯೋಧ. ತನ್ನ ಬಣ್ಣಗಳಿಂದಾಗಿ ಆ ಹಳ್ಳಿಯನ್ನು ಉಳಿಸಿಕೊಂಡ ಅವನು ಮಳೆಬಿಲ್ಲ ಅಜ್ಜ ಎಂದೇ ಎಲ್ಲರಿಗೆ ಪರಿಚಿತ.
ಇವತ್ತಿನ ಆಕ್ರಮಣಕಾರಿ ಮತ್ತು ದಾಹ ಸ್ವಭಾವದ ಕಾಲದಲ್ಲಿ ಈ ಘಟನೆ ಒಂದು ಪುರಾಣದಂತೆ ಕಾಣಿಸುತ್ತದೆ. ಈ ಕಾಲ ಮರೆತಿರುವ, ಕಳೆದುಕೊಳ್ಳುತ್ತಿರುವ ಅವರ್ಣನೀಯವಾದ ಏನೋ ಒಂದನ್ನು ಮತ್ತೆ ತುಂಬಿಕೊಡಬಲ್ಲ ತಾಕತ್ತಿನ ಸೊಲ್ಲು ಅದರಾಳದಲ್ಲಿದೆ.