ಮೀಸಲಾತಿಯು ಬಡತನ ನಿರ್ಮೂಲನೆಯ ಒಂದು ಯೋಜನೆಯೇ?
ಮಾನ್ಯರೇ,
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವು ಆರ್ಥಿಕವಾಗಿ ದುರ್ಬಲ ವರ್ಗದ ಮೀಸಲಾತಿಯನ್ನು ಎತ್ತಿಹಿಡಿದಿದೆ. ಅಡಿಎಂಕೆ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ಈ ನಿರ್ಧಾರವನ್ನು ಒಪ್ಪುತ್ತವೆ. ಭಾರತದ ಸಂವಿಧಾನದ ಪ್ರಕಾರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲಾಗಿದೆ, ಆದರೆ ಮೀಸಲಾತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗವನ್ನು ಸೇರಿಸಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಮೀಸಲಾತಿಯು ಬಡತನ ನಿರ್ಮೂಲನೆಗೆ ಒಂದು ಯೋಜನೆಯೇ? ಅಥವಾ ಐತಿಹಾಸಿಕ ಅನ್ಯಾಯದ ಕಾರಣದಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ಅವಕಾಶಗಳನ್ನು ಒದಗಿಸುವುದೇ? ಮತ್ತು ಈಗಿರುವ ಬಡತನ ನಿರ್ಮೂಲನೆ ಯೋಜನೆಗಳು ಯಾಕೆ ಸಂಪೂರ್ಣ ವಿಫಲವಾಗಿವೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವವರು ಯಾರು?
ಇನ್ನು ಶೇ. 10ರಷ್ಟು ಮೀಸಲಾತಿ ವಿಚಾರಕ್ಕೆ ಬಂದರೆ ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆಯಾಗಿ ಸಾಮಾನ್ಯ ವರ್ಗಕ್ಕೆ ಬರುವಂತಹ ಸಮುದಾಯದ ಒಟ್ಟು ಸಂಖ್ಯೆ ಕೇವಲ ಶೇಕಡ ನಾಲ್ಕರಷ್ಟು. ಅದರಲ್ಲಿ ಇರುವ ಬಡವರಿಗೆ ಶೇ. 10ರಷ್ಟು ಮೀಸಲಾತಿ ಬೇಕು ಎನ್ನುವುದಾದರೆ ಶೇ. 17ರಷ್ಟು ಇರುವ ದಲಿತರಿಗೆ ಈಗಿರುವ ಮೀಸಲಾತಿ ಸಾಕಾಗುವುದೇ? ಆರ್ಥಿಕತೆಯ ಆಧಾರದ ಮೇಲೆ ಮೀಸಲಾತಿ ಕೊಡುವುದಾದರೆ ಸಿರಿವಂತ ವ್ಯಕ್ತಿಯೊಬ್ಬ ಜೂಜಾಡಿ ತನ್ನಲ್ಲಿರುವ ಎಲ್ಲ ಸಂಪತ್ತನ್ನು ಕಳೆದುಕೊಂಡು 8 ಲಕ್ಷ ರೂ. ಆದಾಯ ಮಿತಿ ಒಳಗೆ ಬಂದರೆ ಅವನು ಬಡವನೆಂದು ಮೀಸಲಾತಿ ಕೊಡಬೇಕೇ? ‘‘ಇನ್ನೂ ಎಷ್ಟು ವರ್ಷ ಮೀಸಲಾತಿ ಬೇಕು? ಸಂವಿಧಾನದಲ್ಲಿಯೇ ಮೀಸಲಾತಿಯನ್ನು ಕೇವಲ 10 ವರ್ಷಕ್ಕಾಗಿ ಸೀಮಿತಗೊಳಿಸಲಾಗಿತ್ತು’’ ಎನ್ನುವ ವಾದಕ್ಕೆ ಹೇಳುವುದಾದರೆ ಆರ್ಟಿಕಲ್ 332ರ ಪ್ರಕಾರ ಹತ್ತು ವರ್ಷಗಳ ಮಿತಿ ಕೇವಲ ರಾಜಕೀಯಕ್ಕೆ ಮಾತ್ರ, ಆದರೆ ಆನಂತರ ಸರಕಾರಗಳು ಕಾಲಕಾಲಕ್ಕೆ ಮುಂದುವರಿಸಿವೆ. ಏಕೆಂದರೆ ರಾಜಕೀಯ ಮೀಸಲಾತಿ ಅನಿವಾರ್ಯವಾಗಿದೆ. ಉದಾಹರಣೆಗೆ ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕರೇ ಮೀಸಲಾತಿ ಬದಲಾದಾಗ ಕ್ಷೇತ್ರ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನೊಂದು ಉದಾಹರಣೆ ಕೊಡುವುದಾದರೆ ವಿಧಾನಪರಿಷತ್‌ನಲ್ಲಿ ದಲಿತರ ಸಂಖ್ಯೆ ತೀರಾ ಕಡಿಮೆ. ಏಕೆಂದರೆ ಅಲ್ಲಿ ರಾಜಕೀಯ ಮೀಸಲಾತಿ ಇಲ್ಲ. ದಲಿತರ ಮೀಸಲಾತಿಯಲ್ಲಿ ಕೆನೆಪದರ ಜಾರಿಯಾಗಬೇಕು ಎಂದು ತುಂಬಾ ಜನ ಒತ್ತಾಯಿಸುತ್ತಾರೆ. ಆದರೆ, ಒಬ್ಬ ದಲಿತನ ಆರ್ಥಿಕ ಪರಿಸ್ಥಿತಿ ಬದಲಾದ ತಕ್ಷಣ ಅವನ ಸಾಮಾಜಿಕ ಪರಿಸ್ಥಿತಿ ಬದಲಾಗುವುದಿಲ್ಲ. ಕೆಲವರು ಮೀಸಲಾತಿಯನ್ನು ಕೊಟ್ಟೇ ದಲಿತರನ್ನು ಸದೃಢರನ್ನಾಗಿ ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ ಅವರು ಉದ್ಯಮಗಳನ್ನು ಶುರುಮಾಡಿ ಸದೃಢರಾಗಬಹುದು ಎನ್ನುತ್ತಾರೆ. ಆದರೆ ದಲಿತರ ತಟ್ಟೆ ಇಡ್ಲಿಯನ್ನು, ದಲಿತರ ಮಿಲ್ಟ್ರಿ ಹೊಟೇಲ್‌ಗಳಲ್ಲಿ ತಿಂದು ಈ ದೇಶದ ಜನ ಈಗಿನ ಸಂದರ್ಭದಲ್ಲಿ ಬದುಕುವರೇ? ಬಹುಶಃ ದಲಿತರಿಗೆ ಉಳಿಯಬಹುದಾದಂತಹ ಉದ್ಯಮಗಳು ಕೇವಲ ಚಪ್ಪಲಿ ಅಂಗಡಿಗಳನ್ನು ಶುರುಮಾಡುವುದು, ಶೌಚಾಲಯಗಳನ್ನು ಗುತ್ತಿಗೆ ತೆಗೆದುಕೊಳ್ಳುವುದು ಮತ್ತು ತಮಟೆ ಕಟ್ಟುವುದು. ಇಂತಹವುಗಳಲ್ಲಿ ಮಾತ್ರ ಜೀವನ ಕಲ್ಪಿಸಿಕೊಳ್ಳುವ ಅವಕಾಶ ಸಿಗಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಆರ್ಥಿಕತೆಯ ಆಧಾರದ ಮೇಲೆ ಮೀಸಲಾತಿಯನ್ನು ಕಲ್ಪಿಸಲು ಚಿಂತಿಸುವುದು ಇಷ್ಟುದಿನ ನಡೆಯುತ್ತಿದ್ದ ಸಾಮಾಜಿಕ ಕ್ರಾಂತಿಗೆ ದೊಡ್ಡ ಕೊಡಲಿ ಪೆಟ್ಟಾಗಬಹುದು.