ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ: ಬಸವರಾಜ ಬೊಮ್ಮಾಯಿ
ಕಡೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶ
ಕಡೂರು: ಇದು ಬಿಜೆಪಿ ಭದ್ರಕೊಟೆ, ಯಾರೂ ಏನು ಮಾಡಲು ಆಗಲ್ಲ. ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ನಿಮ್ಮೆಲ್ಲರ ಆಶೀರ್ವಾದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನಸ್ಪಂದನೆ ಸರ್ಕಾರ ಬರೋದಕ್ಕೆ ನಿಮ್ಮ ಸಹಕಾರ ಬೇಕು. ನಿಮ್ಮ ಸಂಕಲ್ಪವೇ ನಮ್ಮ ಸಂಕಲ್ಪ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮದವರಿಗೆ ವಿನಂಸುತ್ತಿದ್ದೇನೆ. ನಮ್ಮನ್ನು ಬಿಟ್ಟು ಜನರನ್ನು ತೋರಿಸಿ, ಸಿದ್ದಣ್ಣನಿಗೆ ಹಳದಿ ಕಣ್ಣು, ಜನರನ್ನು ಅವರು ಕೂಡಾ ನೋಡಲಿ. ಕ್ಯಾಮರಾದ ದೃಷ್ಟಿ ಇರುವಷ್ಟು ದೂರು ತೋರಿಸಿ. ಶಕ್ತಿ ತುಂಬಿದರೆ ಇದು ನಿಜವಾದ ಜನಸಂಕಲ್ಪ. ಪ್ರಜಾಪ್ರಬುತ್ವದಲ್ಲಿ ಜನ ಸಂಕಲ್ಪ ಮಾಡಿದರೆ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದರು.
ತಾನು ಸಿಎಂ ಆಗಬೇಕು ಅಂದರೆ ಕಾಂಗ್ರೆಸ್ ಗೆ ಓಟ್ ಹಾಕಿ ಅಂತಾ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಹೇಳೀದ್ದಾರೆ. ಜನ ಬೆಂಬಲ ಆಮೇಲೆಯ ವಿಷಯ, ಮೊದಲು ಡಿಕೆಶಿ ಬೆಂಬಲ ತೆಗೆದುಕೊಳ್ಳಿ ಎಂದು ವ್ಯಂಗ್ಯವಾಡಿದರು.
ನಿಮ್ಮ ಕಾಲದಲ್ಲಿ ಅನ್ನಕ್ಕೆ ಕನ್ನ ಹಾಕಿದ್ದ ಜನ ಮರೆತಿಲ್ಲ, ಸಣ್ಣ ನೀರಾವರಿಯಲ್ಲಿ 100 ಪರ್ಸೆಂಟ್ ಹೊಡೆದಿರೋದು ಮರೆತಿಲ್ಲ. ಹಾಸಿಗೆ-ದಿಂಬು ದುಡ್ಡು ಹೊಡೆದಿದ್ದು ಅದನ್ನೂ ಮರೆತಿಲ್ಲ. ನೀವು ಧರ್ಮ ಹೊಡೆಯೋ ಪ್ರಯತ್ನ ಮಾಡಿದ್ರಿ ಅದನ್ನು ಜನರು ಮರೆತಿಲ್ಲ ಎಂದು ಅವರು ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದ ಎಲ್ಲಾ ಕಡೆ ಜನಸಾಗರವೇ ಸೇರುತ್ತಿದೆ. ಮುಂದೆ 140-150 ಸ್ಥಾನ ಗೆದ್ದು ಸರ್ಕಾರ ರಚಿಸೋದು ಖಚಿತ. ಮಹಿಳೆಯರು, ಯುವಕರು ಹೆಚ್ಚು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಚುನಾವಣೆಗೆ 4-5 ತಿಂಗಳು ಇದೆ, ಕೈಜೋಡಿಸಿ ಪ್ರಾರ್ಥಿಸುತ್ತೇನೆ. ಚಿಕ್ಕಮಗಳೂರಲ್ಲಿ ಐದು ಜನ ಗೆಲ್ಲುವಂತೆ ಆಶೀರ್ವಾದಿಸಿ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು.