ಮಹಿಳೆಯರು ಎದುರಿಸುತ್ತಿರುವ ಅಪೌಷ್ಟಿಕತೆಯ ಸವಾಲು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಹೆಣ್ಣೊಬ್ಬಳು ಅಕ್ಷರ ಕಲಿತರೆ, ಶಾಲೆಯೊಂದು ತೆರೆದಂತೆ’ ಎನ್ನುವ ಮಾತಿದೆ. ಅವಳ ಮುಖಾಂತರ ಇಡೀ ಮನೆಯೇ ಸಾಕ್ಷರವಾಗುತ್ತದೆ ಎನ್ನುವುದನ್ನು ಹೇಳುವುದಕ್ಕೆ ಈ ಮಾತನ್ನು ಬಳಸಲಾಗಿದೆ. ಹುಟ್ಟಿದ ಮಕ್ಕಳು ಅಂಬೆಗಾಲಿಟ್ಟು ನಡೆಯಲು ಕಲಿಯುವುದು ತಾಯಿಯ ಮುಖಾಂತರ. ಜೊತೆ ಜೊತೆಗೇ ತಾಯಿಯ ಮೂಲಕವೇ ಮಗು ಮಾತನಾಡುವುದನ್ನೂ ಕಲಿಯುತ್ತದೆ. ಬರೆಯುವುದು, ಓದುವುದು ಕೂಡ ತಾಯಿಯ ಮೂಲಕವೇ. ‘ಮನೆಯೇ ಮೊದಲ ಪಾಠ ಶಾಲೆ’ ಎನ್ನುವ ಮಾತು ಹುಟ್ಟಿದ್ದು ಇದೇ ಕಾರಣಕ್ಕಾಗಿ. ಈ ಮನೆಯೆಂಬ ಶಾಲೆಯಲ್ಲಿ ತಾಯಿಯೇ ಮುಖ್ಯ ಅಧ್ಯಾಪಕಿ. ಇದು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಲ್ಲ. ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಹುಟ್ಟುವ ಮಗುವಿನ ಆರೋಗ್ಯ ತಾಯಿಯ ಆರೋಗ್ಯವನ್ನು ಅವಲಂಬಿಸಿಕೊಂಡಿರುತ್ತದೆ. ಗರ್ಭಿಣಿ ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಅದರ ಪರಿಣಾಮ ಹುಟ್ಟುವ ಮಗುವಿನ ಮೇಲೂ ಬೀರುತ್ತದೆ. ಕುಟುಂಬದ ಮಹತ್ತರ ಹೊಣೆಗಾರಿಕೆಯನ್ನು ಹೊತ್ತುಕೊಂಡ ಮಹಿಳೆಯೇ ಅನಾರೋಗ್ಯ ಪೀಡಿತಳಾದರೆ, ಇಡೀ ಕುಟುಂಬವೇ ರೋಗ ಪೀಡಿತವಾಗಬೇಕಾಗುತ್ತದೆ. ಇಂದು ಮಹಿಳೆಯ ಮುಂದಿರುವುದು ಕೇವಲ ಗೃಹಕೃತ್ಯದ ಜವಾಬ್ದಾರಿ ಮಾತ್ರವಲ್ಲ. ಗ್ರಾಮೀಣ ಪ್ರದೇಶದಲ್ಲಿ ಆಕೆ ಕೃಷಿ ಕಾರ್ಯದಲ್ಲಿ ಗಂಡನಿಗೆ ಜೊತೆಯಾಗಬೇಕಾಗುತ್ತದೆ.
ಬೀಡಿ ಕಟ್ಟಿ, ಮೀನು ಮಾರಿ ಬದುಕು ಕಟ್ಟಿಕೊಂಡ ಮಹಿಳೆಯರೂ ನಮ್ಮ ನಡುವೆ ಇದ್ದಾರೆ. ನಗರ ಪ್ರದೇಶದಲ್ಲಿ ಮಹಿಳೆಯರು ಉದ್ಯೋಗವನ್ನು ಹೊಂದುವುದು ಅನಿವಾರ್ಯ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ. ಮನೆಯಲ್ಲಿದ್ದರೂ ಗುಡಿ ಕೈಗಾರಿಕೆಗಳ ಮೂಲಕ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಪ್ರಯತ್ನವನ್ನು ಮಹಿಳೆ ಮಾಡುತ್ತಾಳೆ. ಆದರೆ ಕಳೆದ ಕೊರೋನ ಸಾಂಕ್ರಾಮಿಕ ಅಲೆಯ ಬಳಿಕ ಮಹಿಳೆಯರ ಬದುಕು ದುಸ್ತರವಾಗಿದೆ ಎನ್ನುವುದನ್ನು ಸಮೀಕ್ಷೆ ಹೇಳುತ್ತಿದೆ. ಇದರಿಂದಾಗಿ ಇಡೀ ಕುಟುಂಬವೇ ಹಸಿವು, ಅನಾರೋಗ್ಯ, ಅನಕ್ಷರತೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ ಗಣನೀಯ ಪ್ರಮಾಣದಲ್ಲಿ ಆರ್ಥಿಕ ನಷ್ಟವನ್ನುಂಟು ಮಾಡಿದ್ದು, ಸಾವಿರಾರು ಜನರು ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಆಹಾರವಸ್ತುಗಳ ದರಗಳಲ್ಲಿ ಭಾರೀ ಏರಿಕೆಯಾದವು. ಇದರಿಂದಾಗಿ ಮೂಲಭೂತ ಆಹಾರದ ಅವಶ್ಯಕತೆಗಳ ಲಭ್ಯತೆಯು ಕೂಡಾ ಕೆಲವರಿಗೆ ಕೈಗೆಟುಕದೆ ಹೋದವು. ಮಹಿಳೆ ಈ ಎಲ್ಲ ಅನಾಹುತಗಳ ಮೊದಲ ಸಂತ್ರಸ್ತಳಾದಳು. ಕೋವಿಡ್ ಹಾವಳಿಯ ಬಳಿಕ ಕೌಟುಂಬಿಕ ಆಹಾರ ವೆಚ್ಚದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆಹಾರವಸ್ತುಗಳಿಗೆ ಮಾಡುವ ವೆಚ್ಚದಲ್ಲಿ ಗಣನೀಯ ಕುಸಿತವುಂಟಾಗಿದೆಯೆಂದು 2021ರಲ್ಲಿ ‘ಟಾಟಾ ಕೊರ್ನೆಲ್ ಕೃಷಿ ಹಾಗೂ ಪೌಷ್ಟಿಕತೆ ಸಂಸ್ಥೆ’ಯು ವರದಿ ಮಾಡಿದೆ.ಕಳೆದ ವರ್ಷದ ನವೆಂಬರ್‌ನಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯು, 2015-16ನೇ ಸಾಲಿನ ಸಮೀಕ್ಷೆಯಿಂದೀಚೆಗೆ ಭಾರತೀಯ ಮಹಿಳೆಯರು ಹಾಗೂ ಮಕ್ಕಳ ಒಟ್ಟಾರೆ ಪೌಷ್ಟಿಕತೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 2019 ಹಾಗೂ 2021ರ ನಡುವೆ ಐದನೇ ಸುತ್ತಿನ ಸಮೀಕ್ಷೆಯನ್ನು ನಡೆಸಲಾಗಿದೆ.
ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು ಶೇ.53.1ರಿಂದ ಶೇ.57ಕ್ಕೇರಿದೆ. ರಕ್ತಹೀನತೆಯಿಂದ ಬಳಲುತ್ತಿರುವ ಹದಿಹರೆಯದ ಬಾಲಕಿಯರ (15-19 ವರ್ಷ ವಯಸ್ಸಿನವರು) ಪ್ರಮಾಣವು ಶೇ.54.1ರಿಂದ ಶೇ.59.1ಕ್ಕೇರಿದೆ. ಭಾರತೀಯ ಮಹಿಳೆಯರು ಹಾಗೂ ಮಕ್ಕಳ ಪೌಷ್ಟಿಕತೆಯ ಕುರಿತ ಒಟ್ಟಾರೆ ಚಿತ್ರಣದಲ್ಲಿ ಆಗಿರುವ ಬದಲಾವಣೆಯು ಮಹಿಳೆಯರ ಆರೋಗ್ಯವು ಅವರ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳಿಂದಾಗಿ ನೇರವಾಗಿ ಬಾಧಿತವಾಗಿರುವುದನ್ನು ಇದು ಸೂಚಿಸುತ್ತದೆ. ಐದು ವರ್ಷಕ್ಕಿಂತ ಕೆಳ ವಯಸ್ಸಿನ ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು ಕಳೆದ ಸಮೀಕ್ಷೆಯಲ್ಲಿ ಇದ್ದ ಶೇ.58.6ಕ್ಕಿಂತ ಶೇ.67.1ಕ್ಕೇರಿದೆ. ಅಂದರೆ ಐದು ವರ್ಷಕ್ಕಿಂತ ಕೆಳ ವಯಸ್ಸಿನ ಪ್ರತೀ ಮೂರು ಮಕ್ಕಳ ಪೈಕಿ ಇಬ್ಬರು ರಕ್ತಹೀನತೆಯಿಂದ ಬಳಲುತ್ತಿದ್ದಾರೆಂದಾಯಿತು. ಪೌಷ್ಟಿಕ ಆಹಾರದ ಕೊರತೆಯೇ ಇದಕ್ಕೆ ಕಾರಣ ಎನ್ನುವುದನ್ನು ವರದಿ ಸ್ಪಷ್ಟ ಪಡಿಸಿದೆ. ಮಹಿಳೆಯರ ಪೌಷ್ಟಿಕ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡೇ ಪೌಷ್ಟಿಕತೆಯ ಭದ್ರತೆಯನ್ನು ಖಾತರಿಪಡಿಸುವಂತಹ ನೀತಿಗಳಿಗೆ ಒತ್ತು ನೀಡಬೇಕಾದ ಅಗತ್ಯವನ್ನು ತಜ್ಞರು ಈಗಾಗಲೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪೌಷ್ಟಿಕಾಂಶ ಸಮೃದ್ಧವಾದ ಪೂರಕ ಆಹಾರಗಳನ್ನು ಒದಗಿಸಬಹುದಾಗಿದೆ. ಅಂಗನವಾಡಿ ಕೇಂದ್ರಗಳು ಸೂಕ್ಷ್ಮ ಪೌಷ್ಟಿಕಾಂಶದಿಂದ ಸಮೃದ್ಧವಾದ ಪರ್ಯಾಯ ಆಹಾರಗಳನ್ನು ಪೂರೈಕೆ ಮಾಡಬಹುದಾಗಿದೆ ಹಾಗೂ ಶಾಲೆಗಳು ಅಧಿಕ ಪೌಷ್ಟಿಕಾಂಶವುಳ್ಳ ಮಧ್ಯಾಹ್ನದ ಊಟವನ್ನು ಒದಗಿಸಬಹುದಾಗಿದೆ. ಲಾಕ್‌ಡೌನ್ ಸಮಯದಲ್ಲಿ ಸರಕಾರಿ ಗೋದಾಮುಗಳು ಗೋಧಿ ಹಾಗೂ ಇತರ ಧಾನ್ಯಗಳ ದಾಸ್ತಾನುಗಳಿಂದ ತುಂಬಿ ತುಳುಕುತ್ತಿದ್ದರೂ, ಅವುಗಳ ವಿತರಣೆಯು ದೊಡ್ಡ ಸಮಸ್ಯೆಯಾಗಿತ್ತು ಎನ್ನುವುದು ತಜ್ಞರ ಅಭಿಪ್ರಾಯ.
ದೇಶದ ಮಾಂಸಾಹಾರ ರಾಜಕೀಯವೂ ಪೌಷ್ಟಿಕತೆಯ ಮೇಲೆ ತನ್ನದೇ ಆದ ದುಷ್ಪರಿಣಾಮವನ್ನು ಉಂಟು ಮಾಡಿದೆ. ಇದರಿಂದಾಗಿ, ಇರುವ ಮಾಂಸಾಹಾರ ದುಬಾರಿಯಾಗಿದೆ. ಗೋಮಾಂಸಾಹಾರಕ್ಕೆ ಎದುರಾದ ಅಡೆತಡೆಗಳು ಪೌಷ್ಟಿಕ ಆಹಾರ ಕೊರತೆಗೆ ತನ್ನದೇ ಕೊಡುಗೆಯನ್ನು ನೀಡಿದೆ. ಮಾಂಸಾಹಾರಗಳು ಪೌಷ್ಟಿಕತೆಗೆ ನೀಡಿದ ಕೊಡುಗೆಯನ್ನು ಅಷ್ಟೇ ಪ್ರಮಾಣದಲ್ಲಿ ಸಸ್ಯಾಹಾರಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ತರಕಾರಿಗಳು ಮಾರುಕಟ್ಟೆಯಲ್ಲಿ ದುಬಾರಿಯಾದವು. ಅಪೌಷ್ಟಿಕತೆಯ ಕಾರಣದಿಂದ ಮಹಿಳೆ ಮತ್ತು ಮಕ್ಕಳಲ್ಲಿ ಟಿಬಿ ರೋಗಿಗಳು ಹೆಚ್ಚುತ್ತಿದ್ದಾರೆ ಎಂದು ಅಧ್ಯಯನ ಹೇಳುತ್ತಿದೆ. ಮನೆಯವರೆಲ್ಲ ಉಂಡ ಬಳಿಕ ಇದ್ದುದನ್ನು ಉಂಡು, ನೀರು ಕುಡಿದು ಮಲಗುವುದು ಭಾರತದ ಮಹಿಳೆಯರು ಮಾಡಿಕೊಂಡು ಬಂದ ಪರಿಪಾಠ. ಸಮಾಜ ಮಹಿಳೆಯರ ಆರೋಗ್ಯವನ್ನು ತೀರಾ ನಿಕೃಷ್ಟವಾಗಿ ಕಾಣುತ್ತಾ ಬಂದಿದೆ. ಮಹಿಳೆಯರ ಆರೋಗ್ಯದ ತಳಹದಿಯ ಮೇಲೆ ಇಡೀ ಕುಟುಂಬದ ಆರೋಗ್ಯ ನಿಂತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ದಿನ ಆರೋಗ್ಯವಂತ ಭಾರತದ ಕನಸು ಕಾಣುವುದಕ್ಕೆ ಸಮಾಜ ಯೋಗ್ಯವಾಗುತ್ತದೆ.