ಗೋಶಾಲೆಗಳಿಗಾಗಿ ದೇಣಿಗೆ: ಶ್ರೀಸಾಮಾನ್ಯರ ಬದುಕು ನೇಣಿಗೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರೈತರು ಬೇಕಾದಾಗ ಸಾಕಿ, ಬೇಡವಾದಾಗ ಮಾರಾಟ ಮಾಡುತ್ತಾ ಹೈನೋದ್ಯಮವನ್ನು ಲಾಭದಾಯಕವಾಗಿ ತಮಗೆ ತಾವೇ ನಿಭಾಯಿಸುತ್ತಿರುವ ಹೊತ್ತಿನಲ್ಲಿ, ಅವರ ಉದ್ಯಮದೊಳಗೆ ಅನಗತ್ಯ ಹಸ್ತಕ್ಷೇಪ ಮಾಡುವ ಮೂಲಕ ಸರಕಾರ ಇರುವೆ ಬಿಟ್ಟುಕೊಂಡಿದೆ. ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡುವುದರ ವಿರುದ್ಧ ಕಾನೂನನ್ನು ಜಾರಿಗೊಳಿಸಿದ ಬಳಿಕ, ರೈತರು ಅನುಪಯುಕ್ತ ಗೋವುಗಳನ್ನು ಹಟ್ಟಿಯೊಳಗೂ ಇಟ್ಟುಕೊಳ್ಳಲಾಗದೆ, ಬೀದಿಯಲ್ಲೂ ಬಿಡಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಜನಸಾಮಾನ್ಯರ ಮೂಲಭೂತ ಅಗತ್ಯಗಳನ್ನೇ ಈಡೇರಿಸಲಾಗದ ಸರಕಾರ, ರೈತರ ಕೈಯಲ್ಲಿರುವ ಅನುಪಯುಕ್ತ ದನಗಳನ್ನು ಸಾಕುವ ಹೊಣೆಗಾರಿಕೆಯನ್ನು ಮೈಮೇಲೆ ಎಳೆದುಕೊಂಡಿತು. ರಾಜ್ಯಾದ್ಯಂತ ಗೋಶಾಲೆಗಳನ್ನು ಸ್ಥಾಪಿಸಲು ಮುಂದಾಯಿತು. ಕೃಷಿಕರು, ರೈತರ ಬೇಡಿಕೆಯೇ ಆಗಿರದ, ಅನುತ್ಪಾದಕ ‘ಗೋಶಾಲೆ’ಗಳನ್ನು ಸ್ಥಾಪಿಸಲು ಕೋಟ್ಯಂತರ ರೂಪಾಯಿ ಸುರಿಯಿತು. ಗೋಸಾಕಣೆಯ ಜೊತೆಗೆ ಯಾವ ಸಂಬಂಧವೂ ಇಲ್ಲದ ಹಿತಾಸಕ್ತಿಗಳು ‘ಗೋಶಾಲೆ’ಗಳ ಮೂಲಕ ಈ ಅನುಪಯುಕ್ತ ಗೋವುಗಳನ್ನು ಸಾಕಲು ಮುಂದೆ ಬಂದವು. ಇಂದು ರಾಜ್ಯದಲ್ಲಿ ಗೋಶಾಲೆಗಳೆನ್ನುವುದು ಅಕ್ರಮಗಳ ಗೂಡಾಗಿವೆ. ಈ ಅಕ್ರಮಗಳಿಗೆ ಹಣ ಸುರಿದಷ್ಟೂ ಸಾಕಾಗುತ್ತಿಲ್ಲ. ಆದರೆ ಈ ಅನುಪಯುಕ್ತ ಗೋವುಗಳ ರಾಜಕಾರಣದಿಂದ ಹಿಂದೆ ಸರಿಯುವಂತೆಯೂ ಇಲ್ಲ. ಇದೀಗ ಸುಸ್ತಾಗಿರುವ ಸರಕಾರ, ಗೋಶಾಲೆಗಳಿಗೆ ಅನುದಾನ ನೀಡುವುದಕ್ಕಾಗಿ ಶ್ರೀಸಾಮಾನ್ಯನ ಕಿಸೆಗೆ ಕತ್ತರಿ ಹಾಕಲು ಮುಂದಾಗಿದೆ. ಅದರ ಮೊದಲ ಭಾಗವಾಗಿ, ‘ಪುಣ್ಯ ಕೋಟಿ ದತ್ತು ಯೋಜನೆ’ಯ ಹೆಸರಿನಲ್ಲಿ ಸರಕಾರಿ ನೌಕರರ ವೇತನದಿಂದ ದೇಣಿಗೆ ಕಡಿತಗೊಳಿಸಲು ಮುಂದಾಗಿದೆ. ಸರಕಾರದ ನಿರ್ದೇಶನದ ವಿರುದ್ಧ ಈಗಾಗಲೇ ನೌಕರರ ಸಂಘ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಜನ ಸಾಮಾನ್ಯರಿಂದ ‘ಗೋಶಾಲೆಗಳಿಗೆ’ ದೇಣಿಗೆ ಸಂಗ್ರಹಿಸಲು ಮುಂದಾಗಿರುವ ಸರಕಾರ ಮೊತ್ತ ಮೊದಲು ‘ಗೋ ಶಾಲೆಗಳು ಯಾರ ಅಗತ್ಯ?’’ ಎನ್ನುವುದನ್ನು ಜನಸಾಮಾನ್ಯರಿಗೆ ಸ್ಪಷ್ಟಪಡಿಸಬೇಕು.
ಈ ನಾಡಿನ ಗೋಸಾಕಣೆಕಾರರು ಎಂದಿಗೂ ‘ಅನುಪಯುಕ್ತ ಗೋವುಗಳನ್ನು ಸಾಕಲು ಗೋಶಾಲೆಗಳು ಬೇಕು’ ಎಂದು ಸರಕಾರದ ಮುಂದೆ ಬೇಡಿಕೆಯಿಟ್ಟಿಲ್ಲ. ‘ಗೋಶಾಲೆಗಳು’ ಗೋಸಾಕಣೆ ಮಾಡುವ ಈ ನಾಡಿನ ರೈತರ ಅಗತ್ಯ ಅಲ್ಲವೇ ಅಲ್ಲ. ಹಾಲು ಕೊಡದ ಅನುಪಯುಕ್ತ ಗೋವುಗಳನ್ನು ರೈತರು ಮಾರಿ, ತಮ್ಮ ಹಟ್ಟಿಯಲ್ಲಿರುವ ಇತರ ಗೋವುಗಳಿಗೆ ಆಹಾರ ಒದಗಿಸುತ್ತಿದ್ದರು. ಅಥವಾ ತಮ್ಮ ಮೂಲಭೂತ ಅಗತ್ಯಗಳನ್ನು ಆ ಹಣದಿಂದ ಈಡೇರಿಸಿಕೊಳ್ಳುತ್ತಿದ್ದರು. ಅನುಪಯುಕ್ತ ಗೋವುಗಳು ರೈತರ ಪಾಲಿನ ‘ಕರೆನ್ಸಿ’ಯಾಗಿದ್ದವು. ಆದರೆ ಇಂದು ಸರಕಾರ ಮಾಡಿರುವ ಕಾನೂನಿನಿಂದಾಗಿ ರೈತರು ತಮ್ಮದೇ ಗೋವುಗಳನ್ನು ಮಾರಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಸಂಕಟ ಅನುಭವಿಸುವಂತಾಗಿದೆ. ಒಂದೆಡೆ ನಕಲಿ ಗೋರಕ್ಷಕರ ಕಾಟ, ಮಗದೊಂದೆಡೆ ಸರಕಾರದ ಕಾನೂನಿನ ಕಾಟ. ಇವುಗಳಿಂದಾಗಿ ರೈತರ ಪಾಲಿಗೆ ಗೋಸಾಕಣೆ ದುಬಾರಿಯಾಗಿದೆ. ದೇಶದಲ್ಲಿ ಗೋಮಾಂಸಾಹಾರಿಗಳು ಬಹುಸಂಖ್ಯಾತರಿದ್ದು, ಅವರು ಹೈನೋದ್ಯಮದ ಪ್ರಮುಖ ಭಾಗವಾಗಿದ್ದರು. ಸರಕಾರದ ಕಾನೂನಿಂದಾಗಿ, ಈ ವರ್ಗ ಹೈನೋದ್ಯಮದ ಕೊಂಡಿಯಿಂದ ಕಳಚಿಕೊಂಡಿದೆ. ಗೋಸಾಕಣೆಗೆ ಯಾವ ಕೊಡುಗೆಯನ್ನು ನೀಡದ ಶೇ. 4ರಷ್ಟಿರುವ ಜನರ ಭಾವನೆಗಳಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರ ಈ ಗೋಶಾಲೆಗಳನ್ನು ಸ್ಥಾಪಿಸಿದೆ. ಈ ಗೋಶಾಲೆಗಳ ನೇತೃತ್ವ ವಹಿಸಿದವರಿಗೆ ಹೈನೋದ್ಯಮದ ಜೊತೆಗೆ ಯಾವ ಸಂಬಂಧವೂ ಇಲ್ಲ. ಗೋಶಾಲೆಗಳಿಗೆ ನೀಡುವ್ದ ಹಣವನ್ನು ಸಹಾಯ ರೂಪದಲ್ಲಿ ಗೋವುಗಳನ್ನು ಸಾಕುತ್ತಿದ್ದ ನಿಜವಾದ ರೈತರಿಗೆ ತಲುಪಿಸಿದ್ದರೆ, ನಾಡಿನಾದ್ಯಂತ ಗೋಸಾಕಣೆ ಮಾಡುವವರ ಸಂಖ್ಯೆಯಾದರೂ ಹೆಚ್ಚುತ್ತಿತ್ತು. ‘ಯಾರದೋ ಹಣ, ಎಲ್ಲಮ್ಮ ಜಾತ್ರೆ’ ಗಾದೆಯಂತೆ ಇದೀಗ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ವಸೂಲಿ ಮಾಡಿ, ಗೋಶಾಲೆಗಳೆಂಬ ಭ್ರಷ್ಟಾಚಾರದ ತಾಣವನ್ನು ಪೋಷಿಸಲು ಮುಂದಾಗಿದೆ. ಈ ಗೋಶಾಲೆಗಳಿಗಾಗಿ ಜನರಿಂದ ತೆರಿಗೆ ರೂಪದಲ್ಲಿ ಹಣ ವಸೂಲಿ ಮಾಡುವ ದಿನಗಳು ಮುಂದೆ ಬರಬಹುದು.
ಅನುಪಯುಕ್ತ ಗೋವುಗಳನ್ನು ರೈತರು ಮಾರಾಟ ಮಾಡಬಾರದು, ಅದನ್ನು ಹೈನೋದ್ಯಮದ ಭಾಗವಾಗಿ ಇತರ ರೂಪದಲ್ಲಿ ಬಳಸಬಾರದು ಎನ್ನುವುದು ಯಾರ ಬೇಡಿಕೆಯೋ ಅವರಿಂದಲೇ ಸರಕಾರ ಹಣವನ್ನು ವಸೂಲಿ ಮಾಡಿ ಅದನ್ನು ಗೋಶಾಲೆಗಳಿಗೆ ಬಳಸುವುದು ಅತ್ಯಂತ ನ್ಯಾಯಯುತವಾಗಿದೆ. ಗೋಮಾಂಸಾಹಾರ ಸೇವನೆಯಿಂದ ಯಾರ ಭಾವನೆಗಳಿಗೆ ನೋವಾಗುತ್ತದೆಯೋ, ಅವರೇ ಈ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿ ದೇಣಿಗೆಯನ್ನು ನೀಡಬೇಕು. ಇಂತಹ ಜನರನ್ನುದ್ದೇಶಿಸಿ ಒಂದು ಕಾಲದಲ್ಲಿ ಸ್ವಾಮಿ ವಿವೇಕಾನಂದರು ಅತ್ಯಂತ ಕಟುವಾಗಿ ಮಾತನಾಡಿದ್ದರು. ಬರಗಾಲದ ಸಂದರ್ಭದಲ್ಲಿ ಗೋವುಗಳಿಗಾಗಿ ಗೋಶಾಲೆಗಳನ್ನು ಸ್ಥಾಪಿಸಲು ದೇಣಿಗೆ ಸಂಗ್ರಹಿಸಲು ಮುಂದಾದ ಜನರನ್ನುದ್ದೇಶಿಸಿ ಮಾತನಾಡಿದ ಸ್ವಾಮಿ ವಿವೇಕಾನಂದರು ‘‘ಹಸಿದವರಿಗೆ ಅನ್ನ ನೀಡದೆ, ಗೋವುಗಳಿಗೆ ಧಾನ್ಯದ ರಾಶಿಯನ್ನೇ ಸುರಿಯುತ್ತೀರಿ. ನನಗೆ ಅಂಥವರ ಬಗ್ಗೆ ಕಿಂಚಿತ್ತೂ ಅನುಕಂಪವಿಲ್ಲ. ಗೋವುಗಳು ಸಹ ಅವುಗಳ ಕರ್ಮದಿಂದಲೇ ಕಸಾಯಿಖಾನೆ ಸೇರಿ ಸಾಯುತ್ತವೆ ಎನ್ನಬಹುದಲ್ಲ?(ರಾಮಕೃಷ್ಣ ಮಠ ಪ್ರಕಟಿಸಿದ ಸ್ವಾಮಿ ವಿವೇಕಾನಂದ ಗ್ರಂಥಾವಳಿ -10ನೇ ಸಂಪುಟ)’’ ಎಂದಿದ್ದರು. ನೋಟು ನಿಷೇಧ ಮತ್ತು ಲಾಕ್‌ಡೌನ್‌ನಿಂದಾಗಿ ಎಲ್ಲ ಉದ್ದಿಮೆಗಳೂ ಸರ್ವನಾಶವಾಗಿವೆ. ಜನರಲ್ಲಿ ಬಡತನ, ಹಸಿವು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ರೈತರು ತಾವು ಸಾಕಿದ ಗೋವುಗಳನ್ನು ಮಾರದಂತೆ ಕಾನೂನು ರೂಪಿಸಿದ್ದೇ ಅಲ್ಲದೆ, ಈ ಅನುಪಯುಕ್ತ ಗೋವುಗಳನ್ನು ಸಾಕಲು ಸರಕಾರವೇ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತಿದೆ. ಅಂದಿನ ವಿವೇಕಾನಂದರ ಮಾತುಗಳು ನಮ್ಮ ಈಗಿನ ಸರಕಾರಕ್ಕೂ ಅನ್ವಯವಾಗುವುದಿಲ್ಲವೆ? ಇಂದು ಸರಕಾರದ ಬಳಿ ಸರಕಾರಿ ಶಾಲೆಗಳನ್ನು ನಡೆಸುವುದಕ್ಕೆ ಹಣವಿಲ್ಲ. ಟಿಬಿ ರೋಗಿಗಳಿಗೆ ಮಾಸಿಕ ಸಹಾಯ ಧನ ನೀಡುವುದಕ್ಕೆ ನಿಧಿಯಿಲ್ಲ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ಹಣವನ್ನು ಗೋಶಾಲೆಗಳಂತಹ ಅನುಪಯುಕ್ತ ಯೋಜನೆಗೆ ವೆಚ್ಚ ಮಾಡಲು ಮುಂದಾಗಿರುವುದು ಅಪರಾಧವಲ್ಲವೆ?
ಸರಕಾರಿ ಉದ್ಯೋಗಿಗಳಿಂದ ಸರಕಾರ ಗೋಶಾಲೆಗಳಿಗಾಗಿ ದೇಣಿಗೆ ಸಂಗ್ರಹಿಸುವುದನ್ನು ನಿಲ್ಲಿಸಿ, ಯಾರೆಲ್ಲ ಗೋವಿನ ಕುರಿತಂತೆ ಭಾವನಾತ್ಮಕ ನಂಬಿಕೆಯನ್ನು ಹೊಂದಿದ್ದಾರೆಯೋ ಅವರಿಂದಲೇ ಹಣವನ್ನು ವಸೂಲಿ ಮಾಡಲಿ. ಅವರೆಲ್ಲರೂ ಗೋವುಗಳನ್ನು ದತ್ತು ತೆಗೆದುಕೊಳ್ಳಲಿ ಅಥವಾ ರೈತರು ತಮ್ಮ ಹಟ್ಟಿಯ ಅನುಪಯುಕ್ತ ಗೋವುಗಳನ್ನು, ಅವರ ಮನೆಗೆ ಕೊಂಡೊಯ್ದು ಬಿಟ್ಟು ಬಿಡಲಿ. ಇದು ಸಾಧ್ಯವಾಗುವುದಿಲ್ಲ ಎಂದಾದರೆ, ತಮ್ಮ ತಮ್ಮ ಜಾನುವಾರುಗಳನ್ನು ಸಾಕುವ, ಅದನ್ನು ಯಾರಿಗೆ, ಯಾವಾಗ ಮಾರಬೇಕು ಎನ್ನುವ ಅಧಿಕಾರವನ್ನು ಗೋಸಾಕಣೆದಾರರಾಗಿರುವ ರೈತರಿಗೇ ಬಿಟ್ಟುಬಿಡಲಿ. ಹಾಗೆಯೇ ಈಗಾಗಲೇ ಗೋಶಾಲೆಗಳ ಹೆಸರಿನಲ್ಲಿ ಸರಕಾರದ ಹಣವನ್ನು ಲೂಟಿ ಹೊಡೆದಿರುವ ನಕಲಿ ಗೋರಕ್ಷಕರ ಅಕ್ರಮಗಳನ್ನು ತನಿಖೆ ನಡೆಸಿ, ಗೋಶಾಲೆಗಳಲ್ಲಿ ಆಹಾರವಿಲ್ಲದೆ ನರಳುತ್ತಿರುವ ಗೋವುಗಳಿಗೆ ಸರಕಾರ ಬಿಡುಗಡೆ ನೀಡಲಿ.