ಯು.ಬಿ. ಲೋಕಯ್ಯ: ಬದುಕು - ಹೋರಾಟ ರೋಮಾಂಚಕ ಹೋರಾಟಗಳ ಆಕರ್ಷಕ ಕಥನ
ಕಮ್ಯುನಿಸ್ಟ್ ನಾಯಕರ ಜೀವನದಲ್ಲಿ ಹೋರಾಟಗಳ ಕಥೆ ಇದ್ದೇ ಇರುತ್ತದೆ. ಅವರು ಬದುಕಿರುವವರೆಗೂ, ಅವರ ಬಗೆಗೆ ತಿಳಿದವರು, ಈ ಕಥೆಗಳನ್ನು ಹೇಳುತ್ತಲೂ ಇರುತ್ತಾರೆ. ಆದರೆ ಅವುಗಳನ್ನು ಬರೆದು ದಾಖಲೆ ಮಾಡದೆ ಇದ್ದರೆ, ಆ ಕಥೆಗಳು ಮರೆವಿಗೆ ಸಲ್ಲುತ್ತದೆ.
ಕರ್ನಾಟಕದಲ್ಲೇ ಹಲವಾರು ಹೋರಾಟಗಾರರ ಜೀವನ ಚರಿತ್ರೆಯನ್ನು ಬರೆಯದೆ ಇದ್ದುದರಿಂದ, ಅವರ ಜೀವನ ವೃತ್ತಾಂತಗಳು ಮರೆವಿಗೆ ಸಂದಿವೆ. ಕನ್ನಡದಲ್ಲಿ ಬೆರಳೆಣಿಕೆಯ ಜೀವನ ಚರಿತ್ರೆಗಳಷ್ಟೇ ಪ್ರಕಟವಾಗಿವೆ.
೭೮ ವರ್ಷದ ಯು.ಬಿ.ಲೋಕಯ್ಯನವರು ನಮ್ಮ ಕಣ್ಣೆದುರಿಗೇ ಇದ್ದಾರೆ. ತಮ್ಮ ೧೩ನೆಯ ವರ್ಷದಿಂದಲೂ ಅವರು ಕಮ್ಯುನಿಸ್ಟ್ ಚಳವಳಿಗಾರರ ಜೊತೆಗೇ ಇದ್ದಾರೆ. ನಾಯಕತ್ವವನ್ನೂ ನೀಡಿದ್ದಾರೆ. ಸಿಪಿಐ(ಎಂ) ಕಳೆದ ವರ್ಷವಷ್ಟೇ ಅವರಿಗೆ ಹೊಣೆಗಾರಿ ಯಿಂದ ನಿವೃತ್ತಿ ನೀಡಿದೆ. ಅವರದ್ದೊಂದು ಕ್ರಾಂತಿಕಾರಿ ಜೀವನ ಎಂದು ಅವರ ಸುತ್ತಲಿನವರಿಗೆ ಗೊತ್ತು. ಅವರ ಒಡನಾಡಿಯಾಗಿ ದುಡಿದಿದ್ದ ಬಾಬು ಪಿಲಾರ್‌ರವರು ‘ಯು.ಬಿ.ಲೋಕಯ್ಯ:ಬದುಕು-ಹೋರಾಟ’ ಪುಸ್ತಕವನ್ನು ಇತ್ತೀಚೆಗಷ್ಟೇ ಬರೆದು ಪ್ರಕಟಿಸಿದ್ದಾರೆ. ಯು.ಬಿ. ಲೋಕಯ್ಯನವರ ರೋಮಾಂಚಕ ಹೋರಾಟಗಳನ್ನು ಆಕರ್ಷಕ ಕಥನವಾಗಿ ಬರಹದಲ್ಲಿ ಕಾಣಿಸುವ ಮೂಲಕ, ಬಾಬು ಪಿಲಾರ್ ಅವರು ಸಮರ್ಥ ಲೇಖಕರೂ ಹೌದು ಎಂಬುದನ್ನು ನಿರೂಪಿಸಿದ್ದಾರೆ.
ಈ ಬರಹದಲ್ಲಿ, ಯು.ಬಿ.ಲೋಕಯ್ಯರ ನೂರಾರು ರೈತ ಕಾರ್ಮಿಕರ ಪರವಾದ ಹೋರಾಟಗಳ ಮಾಹಿತಿ ಯನ್ನು ಸಮಗ್ರವಾಗಿ ಕೊಡುವುದಂತೂ ಸಾಧ್ಯವೇ ಇಲ್ಲ. ಯು.ಬಿ.ಲೋಕಯ್ಯ ಅವರು ಯಾರು, ಅವರು ಮಾಡಿದ ಹೋರಾಟ ಯಾವ ಬಗೆಯದು ಎಂಬುದನ್ನು ಸೂಚಿಸುವುದಷ್ಟೇ ಇಲ್ಲಿನ ಕೆಲಸ.
ಗ್ರಂಥದಲ್ಲಿ ಮೂರು ಭಾಗಗಳಿವೆ. ಮೊದಲ ಭಾಗ ಯು.ಬಿ.ಲೋಕಯ್ಯರ ಬಾಲ್ಯದಿಂದ ಪ್ರಾರಂಭವಾಗುತ್ತದೆ. ಬೀಡಿ ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದು, ಮುಂದೆ, ಯುವಕನಾಗಿ ಮಂಗಳೂರಿನ ಹಂಚಿನ ಕಾರ್ಖಾನೆಯಲ್ಲಿ ದುಡಿದದ್ದು, ಹಾಗೆ ಕೆಲಸ ಮಾಡುತ್ತಲೇ ಬೀಡಿ ಕಾರ್ಮಿಕರ, ಹಂಚಿನ ಕಾರ್ಮಿಕರ ಹೋರಾಟದ ಅನುಭವ ಪಡೆದಿದ್ದು ಮತ್ತು ಜೊತೆಗೆ ರೈತ ಚಳವಳಿಯ ಸಂಪರ್ಕ ಪಡೆದುದರ ವಿವರಗಳಿವೆ. ಇದೇ ಭಾಗದಲ್ಲಿ ಆರೆಸ್ಸೆಸ್‌ನಲ್ಲಿ ಭಾಗವಹಿಸುತ್ತಿದ್ದ ತಾನು, ಆರೆಸ್ಸೆಸ್‌ನ ಮಾರ್ಗದರ್ಶಕರು ಬೀಡಿ ಕಾರ್ಮಿಕರ ಹಾಗೂ ರೈತರ ವಿರೋಧಿಯಾಗಿ ಮಾತನಾಡುತ್ತಿದ್ದುದನ್ನು ಗಮನಿಸಿ, ಅದನ್ನು ಪ್ರತಿಭಟಿಸಿ ಆರೆಸ್ಸೆಸ್ ಬಿಟ್ಟುದರ ನಿರೂಪಣೆ ಇದೆ. ಅಂದಿನ ಕಮ್ಯುನಿಸ್ಟ್ ನಾಯಕರಾದ ಎ.ಕೃಷ್ಣ ಶೆಟ್ಟಿ, ಎಂ.ಎಚ್.ಕೃಷ್ಣಪ್ಪನವರ ಸಂಪರ್ಕಕ್ಕೆ ಬಂದು, ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ತಿಳಿಯುತ್ತದೆ. ಆ ಸಂದರ್ಭದಲ್ಲಿ ತಮ್ಮ ಹಿರಿಯ ಸಂಗಾತಿಯಾದ ಜನಾದರ್ನ ನಾಯ್ಕ್ ಅವರೊಂದಿಗೆ ಮೂಡುಬಿದಿರೆ ಸಮೀಪದ ಕೊಡಂಜೆಯಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ೧೩ ದಿನಗಳ ಕ್ಯಾಂಪು ಯು.ಬಿ.ಲೋಕಯ್ಯರನ್ನು ಒಬ್ಬ ತತ್ವನಿಷ್ಠ ಹಾಗೂ ಬದ್ಧತೆಯಿರುವ ಕಮ್ಯುನಿಸ್ಟ್ ಕಾರ್ಯಕರ್ತನಾಗಿ ರೂಪಿಸಿದ ವಿಚಾರ ಬರುತ್ತದೆ.
ಗ್ರಂಥದ ಎರಡನೇ ಭಾಗದಲ್ಲಿ ರೈತ ಹೋರಾಟದ ವಿವಿಧ ಘಟನೆಗಳನ್ನು ನಿರೂಪಿಸಲಾಗಿದೆ.
ಗ್ರಂಥದ ಮೂರನೇ ಭಾಗದಲ್ಲಿ ಬೀಡಿ ಕಾರ್ಮಿಕ ಸಂಘಟನೆಯಲ್ಲಿ ಮತ್ತು ಸಿಪಿಐ(ಎಂ) ಪಕ್ಷದಲ್ಲಿ ಜಿಲ್ಲಾ ಮಟ್ಟದ ಮುಖಂಡರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ವಿವರಗಳನ್ನು ಕಾಣಿಸಲಾಗಿದೆ. ಬೀಡಿ ಉದ್ಯಮ ಮೊದಲು ಬೀಡಿ ಕಾರ್ಖಾನೆಗಳಲ್ಲಿ ಪುರುಷರು ಮಾಡುವ ವೃತ್ತಿಯಾಗಿತ್ತು. ೧೯೩೦ರ ದಶಕದಿಂದಲೇ ವಿವಿಧ ಉದ್ಯಮಗಳಲ್ಲಿ ಕಾರ್ಮಿಕರು ಸಂಘಟಿತರಾಗಿ ಹಕ್ಕುಗಳಿಗಾಗಿ ಬೇಡಿಕೆ ಇಡಲಾರಂಭಿಸಿದ್ದರು. ಬೀಡಿ ಉದ್ದಿಮೆಯಲ್ಲಿ ಕೂಡಾ. ಇದನ್ನು ತಪ್ಪಿಸಲು ಬೀಡಿ ಮಾಲಕರು ಮನೆ ಮನೆಗೆ ಬೀಡಿ ಕಟ್ಟುವುದನ್ನು ವರ್ಗಾಯಿಸಿ, ಕಾಂಟ್ರಾಕ್ಟು ಪದ್ಧತಿ ಹಾಗೂ ಮಹಿಳೆಯರ ಮೂಲಕ ಬೀಡಿ ಉದ್ದಿಮೆ ಮುಂದುವರಿಸಿದರು.
ಇದರಿಂದ ಬೀಡಿ ಕಾರ್ಮಿಕರ ಶೋಷಣೆ ಇನ್ನಷ್ಟು ತೀವ್ರವಾಯಿತು. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬೀಡಿ ಕಾರ್ಮಿಕ ಚಳವಳಿ ಹೆಚ್ಚೆಚ್ಚು ಬಲಿಷ್ಠವಾಗುತ್ತಾ ಹೋಯಿತು. ಇಂಥ ಸಂದರ್ಭದಲ್ಲೇ ಯು.ಬಿ.ಲೋಕಯ್ಯರು ಬೀಡಿ ಚಳವಳಿಗೆ ನೇತೃತ್ವ ನೀಡಿದ್ದು. ರೈತ ಚಳವಳಿ, ಹಂಚಿನ ಕಾರ್ಮಿಕರ ಚಳವಳಿಯಲ್ಲಿ ಅವರು ತೋರಿದ ಸಮರಶೀಲ ಗುಣ, ಬೀಡಿ ಕಾರ್ಮಿಕರ ಚಳವಳಿಯಲ್ಲೂ ಕಾಣಿಸಿಕೊಂಡಿತು. ಕನಿಷ್ಠ ಕೂಲಿಗಾಗಿ ಹೋರಾಟ, ಹೆರಿಗೆ ಭತ್ತೆಗಾಗಿ ಹೋರಾಟ, ಪ್ರಾವಿಡೆಂಟ್ ಫಂಡ್‌ಗಾಗಿ ನಡೆಸಿದ ಐತಿಹಾಸಿಕ ಹೋರಾಟ ಮತ್ತು ತುಟ್ಟಿಭತ್ತೆಗಾಗಿ ಪದೇ ಪದೇ ಮಾಡಬೇಕಾಗುತ್ತಿದ್ದ ಅಸಂಖ್ಯಾತ ಹೋರಾಟಗಳು-ಇವು ಎಲ್ಲದರಲ್ಲೂ ಯು.ಬಿ. ಲೋಕಯ್ಯನವರು ಮುನ್ನುಗ್ಗಿ ಸಾಗುವುದನ್ನು, ಭಯವೇ ಇಲ್ಲದ ಅವರ ನಡೆಯನ್ನು ಎಲ್ಲರೂ ಗುರುತಿಸಬಹುದಾಗಿತ್ತು. ಈ ಎಲ್ಲದರ ಬಗ್ಗೆಯೂ ಮೂರನೇ ಭಾಗದಲ್ಲಿ ವಿವರಗಳಿವೆ.
ಶಾಲಾ ಶಿಕ್ಷಣದಿಂದ ವಂಚಿತರಾದರೂ, ಚಳವಳಿಯಲ್ಲಿ ಬೆಳೆಯುತ್ತಿದ್ದಂತೆ ಓದು ಬರಹ ಕಲಿತದ್ದು, ಸರಳವಾದ ಅವರ ಬದುಕು ಹಾಗೂ ಬಡಕುಟುಂಬದ ಹೆಣ್ಣೊಬ್ಬಳನ್ನು ಮದುವೆಯಾದುದು, ಹೆಣ್ಣು ಮಕ್ಕಳಿಬ್ಬರನ್ನು ಕಾಲೇಜು ಓದಿಸಿದ್ದು - ಇಂಥ ವೈಯಕ್ತಿಕ ವಿವರಗಳೂ ಗ್ರಂಥದ ಬೇರೆ ಬೇರೆ ಕಡೆ ಮೂಡಿಬಂದಿದೆ.
ಯು.ಬಿ.ಲೋಕಯ್ಯ ಅವರ ಸಾಹಸಮಯ ಜೀವನಗಾಥೆ ಮೂಲಕ ಅವರ ವ್ಯಕ್ತಿತ್ವದ ಪರಿಚಯವನ್ನು ಈ ಪುಸ್ತಕ ಮಾಡಿಕೊಡುತ್ತದೆ. ಈ ಪುಸ್ತಕದ ಇನ್ನೊಂದು ಮುಖ-ಪುಸ್ತಕದ ಬರವಣಿಗೆಯ ಆಕರ್ಷಕ ಶೈಲಿ. ಕಥೆ ಕಾದಂಬರಿಗಳ ನಿರೂಪಣಾ ಶೈಲಿಯಲ್ಲಿ ಯು.ಬಿ.ಲೋಕಯ್ಯರ ಹೋರಾಟದ ಕಥೆಗಳನ್ನು ಬಾಬು ಪಿಲಾರ್ ನಿರೂಪಿಸಿದ್ದಾರೆ. ಲೋಕಯ್ಯರ ಜೊತೆಗೆ ನಡೆಸಿದ ಸಂದರ್ಶನಗಳನ್ನು ಅಲ್ಲಲ್ಲಿ ಬಳಕೆ ಮಾಡಿಕೊಂಡಿದ್ದರೂ, ಘಟನಾ ಸಂದರ್ಭಗಳಲ್ಲಿ ನಡೆದ ಸಂಭಾಷಣೆಗಳನ್ನು ಯಥಾವತ್ತಾಗಿ ಕಾಣುವಂತೆ ಬಾಬು ಪಿಲಾರ್ ಬರೆದಿರುವುದರಿಂದ, ಒಂದು ಜೀವನ ಚರಿತ್ರೆಯೂ ಕಥೆ ಕಾದಂಬರಿಯಂತೆ ಓದಿಸಿಕೊಳ್ಳುವ ಗುಣ ಪಡೆದಿದೆ.