ಚಿಕ್ಕಮಗಳೂರು | ಗಾಯತ್ರಿ ಶಾಂತೇಗೌಡ ನಿವಾಸದಲ್ಲಿ 2ನೇ ದಿನವೂ ಐಟಿ ಅಧಿಕಾರಿಗಳಿಂದ ಶೋಧ
ಚಿಕ್ಕಮಗಳೂರು, ನ.18: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ನಿವಾಸದಲ್ಲಿ ಆದಾಯ ತೆರಿಗೆ (IT) ಅಧಿಕಾರಿಗಳು ಸತತ ಎರಡನೇ ದಿನವೂ ಶೋಧ ಮುಂದುವರಿಸಿದ್ದಾರೆ.
ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ಪಕ್ಕದಲ್ಲಿರುವ ಮನೆಗೆ ಐಟಿ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಇಂದು ಕೂಡಾ ಐಟಿ ಕಾರ್ಯಾಚರಣೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕ ಓಡಾಟವನ್ನು ನಿರ್ಬಂಧಿಸಿ, ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಮುಚ್ಚಲಾಗಿದೆ. ಐಟಿ ದಾಳಿ ಖಂಡಿಸಿ ಗುರುವಾರ ಗಾಯತ್ರಿ ಶಾಂತೇಗೌಡ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಐಟಿ ಅಧಿಕಾರಿಗಳು ಗಾಯತ್ರಿ ಶಾಂತೇಗೌಡರ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ.
ಎರಡು ದಿನಗಳಿಂದ ತನ್ನ ನಿವಾಸದಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರೂ ಸದ್ಯ ಬೆಂಗಳೂರಿನಲ್ಲಿರುವ ಗಾಯತ್ರಿ ಶಾಂತೇಗೌಡ ಅವರು ಮನೆಗೆ ಆಗಮಿಸಿಲ್ಲ ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ ಗಾಯತ್ರಿ ಶಾಂತೇಗೌಡರ ಚಿಕ್ಕಮಗಳೂರಿನ ನಿವಾಸ ಮಾತ್ರವಲ್ಲದೆ, ಬೆಂಗಳೂರಿನ ನಾಗರಬಾವಿಯಲ್ಲಿರುವ ನಿವಾಸ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮನೆಗಳ ಮೇಲೆ, ಚಿಕ್ಕಮಗಳೂರು ತಾಲೂಕಿನ ಮರ್ಲೆಯಲ್ಲಿರುವ ಕಲ್ಲಿನ ಕ್ರಷರ್ ಕಚೇರಿ ಹಾಗೂ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಅಳಿಯ ಸಂತೋಷ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ