ಸಿಎಂ ಬೊಮ್ಮಾಯಿ ಸಾಮಾಜಿಕ ನ್ಯಾಯದ ವಿಚಾರದಲ್ಲಿ ನುಡಿದಂತೆ ನಡೆದಿದ್ದಾರೆ: ಸಚಿವ ಬಿ.ಶ್ರೀರಾಮುಲು
''ಎಸ್‍ಟಿ ಮೋರ್ಚಾ ಸಮಾವೇಶಕ್ಕೆ 10 ಸಾವಿರ ಬಸ್, 25ಸಾವಿರ ಕ್ರೂಸರ್ ವ್ಯವಸ್ಥೆ ಮಾಡಿದ್ದೇವೆ''
ಬಳ್ಳಾರಿ, ನ. 18: ‘ಕಾಂಗ್ರೆಸ್ ಮುಖಂಡರು ದಶಕಗಳ ಕಾಲದ ಆಳ್ವಿಕೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿದ್ದರು. ಈ ಸಮುದಾಯಗಳ ಕುರಿತು ಶಕುನಿ ವಾತ್ಸಲ್ಯವನ್ನಷ್ಟೇ ಪ್ರದರ್ಶನ ಮಾಡಿದರು’ ಎಂದು ಸಾರಿಗೆ ಶ್ರೀರಾಮುಲು ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ನ.20ರಂದು ನಡೆಯಲಿರುವ ಎಸ್‍ಟಿ ಮೋರ್ಚಾ ಸಮಾವೇಶ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಸಾಮಾಜಿಕ ನ್ಯಾಯದ ವಿಚಾರದಲ್ಲಿ ನುಡಿದಂತೆ ನಡೆದಿದ್ದಾರೆ. ಆ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶವನ್ನು ನಡೆಸಲಾಗುವುದು ಎಂದರು.
‘ಕಾಂಗ್ರೆಸ್ಸಿಗರು ಕಪಟ ರಾಜಕಾರಣ ಮಾಡಿದರು. ನಮ್ಮ ಎಸ್‍ಸಿ-ಎಸ್‍ಟಿ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ. ಕಾಂಗ್ರೆಸ್ ಸಾಧನೆ ಶೂನ್ಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಬಿಜೆಪಿಯ ಶಕ್ತಿಯಾಗಿದ್ದವು. ಈಗಲೂ ಶಕ್ತಿಯಾಗಿಯೇ ಮುಂದುವರಿದಿದ್ದು, ಮುಂದೆಯೂ ಬಿಜೆಪಿಗೆ ಬೆಂಬಲ ಕೊಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ.20ರಂದು ನಡೆಯಲಿರುವ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
10ಸಾವಿರ ಬಸ್, 25ಸಾವಿರ ಕ್ರೂಸರ್ ವ್ಯವಸ್ಥೆ: ಸಮಾವೇಶದ ಯಶಸ್ವಿಗೆ 41 ಸಮಿತಿ ರಚಿಸಿದ್ದು, 5 ಸಾವಿರ ಕಾರ್ಯಕರ್ತರನ್ನು ಕಾರ್ಯನಿರ್ವಹಿಸಲಿದ್ದಾರೆ. 28 ಕಡೆ ಪಾಕಿರ್ಂಗ್ ವ್ಯವಸ್ಥೆ ಮಾಡಿದ್ದೇವೆ. 8ರಿಂದ 10 ಸಾವಿರ ಬಸ್ಸುಗಳು, 25 ಸಾವಿರ ಕ್ರೂಸರ್ ವಾಹನಗಳು, 10 ಸಾವಿರ ಕಾರುಗಳು, 25 ಸಾವಿರ ಬೈಕ್‍ಗಳು ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆಂದು ಅವರು ತಿಳಿಸಿದರು.