3 ಕ್ಷೇತ್ರ ಶಾರ್ಟ್ ಲಿಸ್ಟ್ ನಲ್ಲಿದೆ, 1 ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೆನೆ: ಸಿದ್ದರಾಮಯ್ಯ
ಮೈಸೂರು,ನ.18: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ''ಕೋಲಾರ, ಬಾದಾಮಿ, ವರುಣಾಕ್ಷೇತ್ರ ಶಾರ್ಟ್ ಲಿಸ್ಟ್ ನಲ್ಲಿ ಇದೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕೆಂದು ವರಿಷ್ಠರು ನಿರ್ಧರಿಸುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಬಳಿಕ ಸ್ಪರ್ಧಿಸುವ ಕ್ಷೇತ್ರ ಹೇಳುತ್ತೇನೆ'' ಎಂದು ತಿಳಿಸಿದರು.
''ಹಾಗೆಯೇ ಸೋಲಿನ ಭಯದಲ್ಲಿ ಸರ್ವೇ ಮಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಸರ್ವೇ ಮಾಡಿಸಿದರೆ ತಪ್ಪೇನು ? ಪ್ರಧಾನಿ ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ವಾ? ಮೋದಿ ಸರ್ವೆ ಮಾಡಿಸಿರಲಿಲ್ವಾ ? ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ಆದರೆ ನಾನು ಸರ್ವೇ ಮಾಡಿಸಿಲ್ಲ, ಪಕ್ಷವೂ ಸರ್ವೇ ಮಾಡಿಸಿಲ್ಲ'' ಎಂದು ಸಿದ್ಧರಾಮಯ್ಯ ತಿಳಿಸಿದರು.
''ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕಾಂಗ್ರೆಸ್ ಮತದಾರರನ್ನು ಡಿಲೀಟ್ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಯಾವುದೋ ಒಂದು ಸಂಸ್ಥೆ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗುತ್ತದೆ ಎಂದರೆ ಯಾವುದೇ ಲಾಭ ಇಲ್ಲದೇ ಮಾಡಲು ಸಾಧ್ಯವೇ?'' ಎಂದು ಪ್ರಶ್ನಿಸಿದರು.
'ಇದೊಂದು ರೀತಿಯಲ್ಲಿ ಚುನಾವಣೆ ಗೆಲ್ಲಲು ಮಾಡುತ್ತಿರುವ ಅನಾಚಾರದ ಕೆಲಸ 40% ನ ಒಂದು ಭಾಗ' ಎಂದು ಲೇವಡಿ ಮಾಡಿದರು.