ಈ.ಡಿ. ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಮನವಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ನ್ಯಾಯಮೂರ್ತಿ ಕೌಲ್
ಹೊಸದಿಲ್ಲಿ, ನ. 18: ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು 2021 ನವೆಂಬರ್ನಲ್ಲಿ 1 ವರ್ಷ ವಿಸ್ತರಿಸಿದ ಕೇಂದ್ರ ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮನವಿಗಳ ಗುಚ್ಛದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಸ್.ಕೆ. ಕೌಲ್ ಹಿಂದೆ ಸರಿದಿದ್ದಾರೆ.
ಈಗ ಈ ಪ್ರಕರಣದ ವಿಚಾರಣೆಯನ್ನು ಇನ್ನೊಂದು ಪೀಠದ ಮುಂದೆ ಪಟ್ಟಿ ಮಾಡಲಾಗಿದೆ.
ಮಿಶ್ರಾ ಅವರನ್ನು ಮೊದಲು 2018 ನವೆಂಬರ್ನಲ್ಲಿ ಎರಡು ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನಿಯೋಜಿಸಲಾಗಿತ್ತು. 2020ರಲ್ಲಿ ಕೇಂದ್ರ ಸರಕಾರ ಅವರ ಅಧಿಕಾರಾವಧಿಯನ್ನು 2ರಿಂದ 3 ವರ್ಷಗಳಿಗೆ ವಿಸ್ತರಿಸಿ 2018ರ ಆದೇಶವನ್ನು ಮಾರ್ಪಾಟು ಮಾಡಿತ್ತು.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರವಧಿಯನ್ನು 5 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ನೀಡುವ ಎರಡು ಆಧ್ಯಾದೇಶವನ್ನು ಕಳೆದ ವರ್ಷ ನವೆಂಬರ್ನಲ್ಲಿ ಪರಿಚಯಿಸಿದ ಬಳಿಕ ಕೇವಲ ಮೂರು ದಿನಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಮಿಶ್ರಾ ಅವರ ಅಧಿಕಾರಾವಧಿಯನ್ನು ಗುರುವಾರ ಮತ್ತೆ 1 ವರ್ಷ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಯಾ ಠಾಕೂರ್, ರಣದೀಪ್ ಸಿಂಗ್ ಸುರ್ಜೇವಾಲ, ಮಹುವಾ ಮೊಯಿತ್ರಾ ಹಾಗೂ ಸಾಕೇತ್ ಗೋಖಲೆ ಸೇರಿದಂತೆ ಪ್ರತಿಪಕ್ಷದ ನಾಯಕರು 2021ರಲ್ಲಿ ಮಿಶ್ರಾ ಅವರ ಅಧಿಕಾರವಧಿಯನ್ನು ವಿಸ್ತರಿಸಿರುವ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಕನಿಷ್ಠ 8 ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕೌಲ್ ಅವರು ಗುರುವಾರ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಚಾರಣೆ ವೇಳೆ ಒಬ್ಬರು ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಗೋಪಾಲ ಶಂಕರನಾರಾಯಣ ಮನವಿಯನ್ನು ಆದಷ್ಟು ಬೇಗ ವಿಚಾರಣೆಗೆ ಪಟ್ಟಿ ಮಾಡುವಂತೆ ವಿನಂತಿಸಿದರು. ಆದರೆ, ನ್ಯಾಯಮೂರ್ತಿ ಕೌಲ್ ಪ್ರಕರಣದ ಶೀಘ್ರ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
‘‘ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಗೋಪಾಲ ಶಂಕರ ನಾರಾಯಣ ಅವರು ಮನವಿ ಮಾಡಿರುವುದರಿಂದ ಪ್ರಕರಣವನ್ನು ಅಗತ್ಯದ ಆದೇಶಗಳಿಗಾಗಿ ಮುಖ್ಯ ನ್ಯಾಯಮೂರ್ತಿಗೆ ಹಸ್ತಾಂತರಿಸಲಾಗಿದೆ’’ ಎಂದು ನ್ಯಾಯಮೂರ್ತಿ ಎ.ಎಸ್. ಓಕಾ ಅವರನ್ನು ಕೂಡಾ ಒಳಗೊಂಡ ಪೀಠ ತನ್ನ ಆದೇಶದಲ್ಲಿ ಹೇಳಿದೆ.