ಹಾಸನ | ಕೌಟುಂಬಿಕ ಕಲಹ-ಮನೆಗೆ ಬೆಂಕಿಯಿಟ್ಟ ಪತಿ: ಇಬ್ಬರು ಮಕ್ಕಳು ಸಹಿತ ನಾಲ್ವರಿಗೆ ಗಾಯ
ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಮನೆಗೆ ಬೆಂಕಿಯಿಟ್ಟ ಪರಿಣಾಮ ಇಬ್ಬರು ಮಕ್ಕಳು ಸಹಿತ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ತಾಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಮನೆಯೊಳಗಿದ್ದ ಗೀತಾ (26) , ಮಲ್ಲಿಗೆಮ್ಮ (50) ಮಕ್ಕಳಾದ ಚಿರಂತ್ (8), ನಂದನ (6) ಗಾಯಗೊಂಡಿದ್ದಾರೆ. ಗೊರೂರು ಸಮೀಪದ ಅಂಕನಹಳ್ಳಿ ಗ್ರಾಮದ ನಿವಾಸಿ, ಪತಿ ರಂಗಸ್ವಾಮಿ ಆರೋಪಿ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ದೊಡ್ಡಬೀಕನಹಳ್ಳಿಯ ಮಾವನ ಮನೆಗೆ ತೆರಳಿ ಮುಂಜಾನೆ 3 ಗಂಟೆಗೆ ಪೆಟ್ರೋಲ್ ತಂದು ಸುರಿದು ಮನೆಗೇ ಬೆಂಕಿ ಹಚ್ಚಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಗ್ರಾಮಸ್ಥರು ಬೆಂಕಿ ನಂದಿಸಿ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
Next Story