varthabharthi


ಮನೋ ಚರಿತ್ರ

ಎಲ್ಲೆಗೇಡಿತನ

ವಾರ್ತಾ ಭಾರತಿ : 20 Nov, 2022
ಯೋಗೇಶ್ ಮಾಸ್ಟರ್

ಅವರನ್ನು ಕಂಡರೆ ನನಗೆ ಪ್ರಾಣ ಎನ್ನುವುದನ್ನೂ ಅಥವಾ ಅವರನ್ನು ಕಂಡರೇನೇ ನನಗಾಗದು ಎನ್ನುವುದನ್ನೂ ಎಲ್ಲಾ ಕಡೆ ಬಹಳ ಸುಲಭವಾಗಿ ಕಾಣಸಿಗುತ್ತದೆ. ಹೌದು, ಕೆಲವರಿಗೆ ಕೆಲವರನ್ನು ಕಂಡರೆ ವಿಪರೀತ ವ್ಯಾಮೋಹ. ಅವರೇನೇ ಮಾಡಿದರೂ ಸಮರ್ಥಿಸಿಕೊಳ್ಳುತ್ತಾರೆ. ಅವರೆಂತಹದ್ದೇ ತಪ್ಪುಗಳನ್ನು ಮಾಡಿದ್ದರೂ ಅದನ್ನು ಒಪ್ಪಾಗಿ ತೋರಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹಾಗೆಯೇ, ತಮಗೆ ಆಗದವರು ಅದೇನೇ ಮಾಡಿದರೂ ಅದನ್ನು ಒಪ್ಪುವುದಿಲ್ಲ ಮತ್ತು ಅನುಮಾನಿಸುತ್ತಾರೆ. ಇದು ಒಳ್ಳೆಯ ಕೆಲಸದಂತೆ ತೋರಿದರೂ ಅದರ ಹಿಂದೆ ಯಾವುದೋ ಸಂಚಿರುತ್ತದೆ. ಏಕೆಂದರೆ ಅವನು ಮೂಲತಃ ಕೆಟ್ಟ ವ್ಯಕ್ತಿ ಎಂಬಂತಹ ತೀರ್ಮಾನಕ್ಕೆ ಬಂದಿರುತ್ತಾರೆ.

ಯಾಕೆ ಹೀಗೆ ಅಂದರೆ ವಿಪರೀತ ಅಭಿಮಾನ ಅಥವಾ ವಿಪರೀತ ದ್ವೇಷ ಎನ್ನುತ್ತಾರೆ. ಹೌದು, ಯಾವುದೇ ವಿಪರೀತಗಳಾದರೂ ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಅದನ್ನು ಸಮಸ್ಯೆ ಎಂದೇ ಹೇಳಲಾಗುತ್ತದೆ.

ಮನೆಯಲ್ಲಿ ಕೂಡಾ ಹೀಗಾಗುತ್ತಿರುತ್ತದೆ. ತಾಯಿ ಅಥವಾ ತಂದೆ ಯಾವುದೋ ಒಂದು ಮಗುವಿನ ತಾವು ಒಪ್ಪದೇ ಇರುವ ಗುಣವನ್ನು ಮನಸ್ಸಿನಲ್ಲಿಟ್ಟುಕೊಂಡು ಮಗುವು ಸದಾ ಹಾಗೆಯೇ ಇರುತ್ತದೆ ಎಂಬಂತಹ ತೀರ್ಮಾನಕ್ಕೆ ಬಂದಿರುತ್ತಾರೆ. ಸಾಲದಕ್ಕೆ ಅದನ್ನು ಆ ಮಗುವಿನ ಮುಂದೆಯೂ ಹೇಳುತ್ತಾ, ಇತರರಿಗೂ ತಮ್ಮ ಅಭಿಪ್ರಾಯವನ್ನು ರವಾನಿಸುತ್ತಿರುತ್ತಾರೆ. ಇದರಿಂದ ಆ ಮಗುವು ಯಾವುದೋ ಒಂದು ಸಂದರ್ಭದಲ್ಲಿ ಆ ಗುಣವನ್ನು ತೋರಿಸಿದ್ದು, ಅಥವಾ ತತ್ಕಾಲದ್ದಾಗಿದ್ದರೂ ಅದರ ಪಾಲಕರು ಅದನ್ನು ಪದೇ ಪದೇ ಹೇಳುತ್ತಾ ಹೇಳುತ್ತಾ, ಅದನ್ನು ಬ್ರ್ಯಾಂಡ್ ಮಾಡಿರುತ್ತಾರೆ. ತನ್ನ ಹಣೆಪಟ್ಟಿಯನ್ನು ಪದೇ ಪದೇ ನೋಡಿಕೊಳ್ಳುತ್ತಾ ಬೆಳೆಯುವ ಮಗುವು ಕೂಡಾ ಅದನ್ನು ನಂಬತೊಡಗುತ್ತದೆ, ಕೊನೆಗೆ ಅದೇ ತಾನಾಗುತ್ತದೆ. ಇದು ಒಂದು ವ್ಯಕ್ತಿ ಅಥವಾ ಒಂದು ಸಮೂಹದ ಕುರಿತು ವಿಪರೀತವಾಗಿ ವಿಮರ್ಶಿಸುವ ಅಥವಾ ಟೀಕಿಸುವ ಫಲವಾಗಿರುತ್ತದೆ.

ಒಟ್ಟಾರೆ ವಿಪರೀತವಾಗಿ ಅದು ಸಕಾರಾತ್ಮಕವಾಗಿರಲಿ, ನಕಾರಾತ್ಮಕವಾಗಿರಲಿ, ವಸ್ತುಸ್ಥಿತಿಯನ್ನು ಅರಿಯದೇ ಅಭಿಪ್ರಾಯವನ್ನು ತಳೆದುಕೊಂಡು ಭಾವಿಸುವುದು ಒಂದು ಮಾನಸಿಕ ಸಮಸ್ಯೆ ಎಂದು ತಿಳಿಯೋಣ. ಆದರೆ ಅದೇ ರೀತಿಯಲ್ಲಿ ಈ ವಿಪರೀತ ಭಾವಗಳನ್ನು ಒಮ್ಮಿಂದೊಮ್ಮೆಲೇ ಬದಲಾಯಿಸುವ ಸಮಸ್ಯೆಯೂ ಇದೆ. ಅಂದರೆ ಅತಿಯಾದ ಅಭಿಮಾನದಿಂದ ನೋಡುತ್ತಾ, ಇದ್ದಕ್ಕಿದ್ದಂತೆ ಅತಿಯಾಗಿ ಅವರ ಬಗ್ಗೆ ವಿಷಕಾರುವುದು. ಯಾವ ವ್ಯಕ್ತಿಯ ಬಗ್ಗೆ ಯಾವ ಬಗೆಯ ಭಾವವನ್ನು ಹೊಂದಿರುತ್ತಾರೆಂದೇ ಹೇಳಲಾಗದು. ಅದರಿಂದಾಗಿ ಅವರು ಇತರರೊಂದಿಗೆ ಹೊಂದುವ ಸಂಬಂಧಗಳ ಬಗ್ಗೆಯೂ ಕೂಡಾ ದೃಢತೆ ಇರದು. ಸಂಬಂಧಗಳು ಗಟ್ಟಿಯಾಗಿರದೇ ಜಾಳು ಜಾಳಾಗಿರುವುದು ಮಾತ್ರವಲ್ಲದೆ ಯಾವಾಗಬೇಕಾದರೂ ತುಂಡಾಗುವಂತಹ ಸಾಧ್ಯತೆಗಳಿರುತ್ತವೆ.

ಇರುವುದೇ ಮನುಷ್ಯರ ಮಧ್ಯೆ. ಅಂತಹುದರಲ್ಲಿ ಆ ಮನುಷ್ಯರ ಜೊತೆಗೆ ಇರುವ ಸಂಬಂಧದಲ್ಲಿ ಕ್ಷಮತೆ ಇಲ್ಲದಿರುವಾಗ, ಆಪ್ತತೆ ಇಲ್ಲದಿರುವಾಗ ಸಣ್ಣಪುಟ್ಟದಕ್ಕೂ ಕಿರಿಕಿರಿ, ಕೋಪ, ಅಸಹನೆ. ಅದನ್ನು ನೇರವಾಗಿ ತೋರಿಸಲಿ, ತೋರಿಸದೇ ಇರಲಿ, ಆ ನಕಾರಾತ್ಮಕ ಭಾವನೆಗಳು ಸೋರಿಕೆಯಾಗುತ್ತಲೇ ಇರುತ್ತವೆ. ಅವುಗಳು ಎದುರಿಗಿನ ವ್ಯಕ್ತಿಯನ್ನು ಸೋಕದೇನೂ ಇರುವುದಿಲ್ಲ. ಹಾಗಾಗಿ ಅವರೂ  ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರುವುದರಿಂದ ಸಂಘರ್ಷಗಳು ಉಂಟಾಗುತ್ತಿರುತ್ತವೆ. ಬಹಿರಂಗದಲ್ಲಾಗುವ ಸಂಘರ್ಷಗಳು ಅತ್ಯಲ್ಪ ಕಾಲವಾದರೆ, ಅಂತರಂಗದ ಮೇಲಿನ ಅದರ ಪ್ರಭಾವ ಬಹುಕಾಲದ್ದು ಎನ್ನುವುದನ್ನು ಮರೆಯದಿರೋಣ. ಹೀಗಾಗಿ ಅಂತರಂಗ ಕ್ಷೋಭೆಗೆ ಒಳಗಾಗುವ ಕಾರಣದಿಂದ ಲವಲವಿಕೆಯಿಂದ ಇರಲು ಸಾಧ್ಯವಾಗದೆ, ಬೇಸರದ ಛಾಯೆಯಲ್ಲಿ ಮನಸ್ಸು, ಮುಖ, ತಲೆ, ಹೃದಯ, ಕೆಲಸ, ಮನೆ; ಒಟ್ಟಾರೆ ಮನಸ್ಥಿತಿ ಮತ್ತು ಪರಿಸ್ಥಿತಿಗಳು ಮಂಕಾಗಿರುತ್ತವೆ.

ಅಲ್ಲಿ ಸಮಸ್ಯೆ ಆಗುವುದೇ ತಮ್ಮತನದ ಗುರುತಿಸಿಕೊಳ್ಳುವಿಕೆಯ ಬಗ್ಗೆ. ತಾವೇನೆಂದೇ ಅವರಿಗೆ ಅರ್ಥವಾಗುವುದಿಲ್ಲ. ತಾವ್ಯಾಕೆ ಹೀಗೆ? ತಮ್ಮ ಜೊತೆಯಲ್ಲಿರುವವರ್ಯಾಕೆ ಹಾಗೆ? ನಾನೇ ಸರಿಯಿಲ್ಲವಾ? ಅವರೇ ಸರಿಯಿಲ್ಲವಾ? ಸಾಮಾನ್ಯ ಮನಸ್ಥಿತಿಯಲ್ಲಿರುವವರಿಗೆ ಇಂತಹ ಗೊಂದಲಗಳು ಉಂಟಾಗಿ ತಾನೂಂದರೆ ಇದು, ತಾನೂಂದರೆ ಅದು ಎಂದು ಯಾವುದ್ಯಾವುದನ್ನೋ ಭ್ರಮಿಸತೊಡಗುತ್ತಾರೆ. ಇಂತಹ ಭ್ರಮೆಗಳ, ಹುಸಿಗುರುತುಗಳ, ತಮ್ಮ ಬಯಕೆಯ ತನ್ನತನದ ಚಿತ್ರಣಗಳ ತಾಕಲಾಟದಿಂದ ಗೊಂದಲಕ್ಕೀಡಾಗುತ್ತಾರೆ. ಈ ಗೊಂದಲದಿಂದಾಗಿ ಹೇಗೇಗೋ ವರ್ತಿಸುತ್ತಿರುತ್ತಾರೆ. ಯಾವುದನ್ನೋ ಮೌಲ್ಯ ಎನ್ನುತ್ತಾರೆ, ಯಾವುದನ್ನೋ ದ್ರೋಹ ಎನ್ನುತ್ತಾರೆ. ತಪ್ಪು ಸರಿಗಳನ್ನು ವಸ್ತುನಿಷ್ಠವಾಗಿಯೇ ಗ್ರಹಿಸಲು ವಿಫಲರಾಗುತ್ತಿರುತ್ತಾರೆ.

ಇದ್ದಕ್ಕಿದ್ದಂತೆ ಕೋಪಗೊಳ್ಳುತ್ತಾರೆ. ಇದ್ದಕ್ಕಿದ್ದಂತೆ ದಾಳಿ ಮಾಡುತ್ತಾರೆ. ಇದ್ದಕ್ಕಿದ್ದಂತೆ ತಮ್ಮನ್ನು ತಾವು ಸರಿಯೆನಿಸಲು ಜಗತ್ತಿಗೇ ತಿಳಿಯುವಂತಹ ಪೊಳ್ಳು ಸಮರ್ಥನೆಗಳಿಂದ ನಗೆಪಾಟಲಿಗೀಡಾಗುತ್ತಾರೆ. ತಲೆನೋವು ಇಲ್ಲದಿದ್ದರೂ ತಲೆ ನೋವಿದೆ ಎಂದು ಮಾತ್ರೆ ತೆಗೆದುಕೊಳ್ಳುವಂತಾಗುತ್ತದೆ. ಕೆಮ್ಮು ಇಲ್ಲದಿದ್ದರೂ ಕಾಫ್ ಸಿರಪ್ಪಿನಲ್ಲಿ ಅಮಲೇರಿಸುವಂತಹ ಅಂಶ ಅಥವಾ ನಿದ್ರೆಗೊಯ್ಯುವಂತಹ ಅಂಶವಿದೆಯೆಂದು ಅದನ್ನು ಕುಡಿಯುತ್ತಾರೆ. ಸಮಸ್ಯೆ ಇಲ್ಲದಿದ್ದರೂ ಔಷಧಿಯನ್ನು ತೆಗೆದುಕೊಳ್ಳುವ ಗುಣವೂ ಕಾಣುವುದು.

ಇಷ್ಟೇ ಅಲ್ಲ, ತಮಗೆ ತಾವು ಹಾನಿ ಮಾಡಿಕೊಳ್ಳಲೂ, ಇತರರಿಗೆ ಹಾನಿಮಾಡಲೂ ಹಿಂಜರಿಯುವುದಿಲ್ಲ. ಒಂದು ಬಗೆ ಮೊಂಡುತನದಲ್ಲಿ ಭಂಡ ಧೈರ್ಯ ತೋರುತ್ತಾ ಗೋಡೆಗೆ ತಲೆ ಘಟ್ಟಿಸಿಕೊಳ್ಳುತ್ತಾರೆ. ಇದು ಹತ್ಯೆ ಅಥವಾ ಆತ್ಮಹತ್ಯೆಗೂ ಮುಂದಾಗುವಷ್ಟು ಅತಿರೇಕಕ್ಕೆ ಹೋಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇದಕ್ಕೆ ಎಲ್ಲೆಗೇಡಿತನ ಎಂದೂ ಅಥವಾ ಇದು ಇರುವ ವ್ಯಕ್ತಿಗೆ ಎಲ್ಲೆಗೇಡಿ ಎಂದೂ ಹೇಳುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಬಿಪಿಡಿ ಅಂದರೆ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್.  

ಈ ಸಮಸ್ಯೆಯು ನ್ಯೂರಾಸಿಸ್ ಸಮಸ್ಯೆ ಮತ್ತು ಸೈಕಾಸಿಸ್ ಸಮಸ್ಯೆಗಳ ನಡುವಿನಲ್ಲಿ ನಿಂತು, ಆಂಶಿಕವಾಗಿ ಎರಡನ್ನೂ ಹೊಂದುವುದರಿಂದ ಇದನ್ನು ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಎಂದು ಕರೆಯುತ್ತೇವೆ. ಮೆದುಳಿನಲ್ಲಿಯೇ ಕೆಲವು ನ್ಯೂನತೆಗಳು ಇರುವುದರಿಂದಲೂ ಮತ್ತು ಸ್ಕಿಸೋಫ್ರೇನಿಯಾದಂತಹ ಭ್ರಮಾಧೀನ ಸ್ಥಿತಿಯ ಮಾನಸಿಕ ಸಮಸ್ಯೆಗಳ ರೀತಿಯಿಂದಲೂ ಈ ಸಮಸ್ಯೆಯನ್ನು ಕಾಣಲು ಸಾಧ್ಯ. ಇದು ಬರೀ ವ್ಯಕ್ತಿಗತವಾಗಿ ಮಾತ್ರ ಕಾಣದೆ ಸಾಮಾಜಿಕವಾಗಿಯೂ ಮತ್ತು ಸಾಮುದಾಯಿಕವಾಗಿಯೂ ಕೂಡಾ ತೋರಲು ಸಾಧ್ಯವಿದೆ.

ಚಾರಿತ್ರಿಕ ವ್ಯಕ್ತಿಯೊಬ್ಬನನ್ನು ಐತಿಹಾಸಿಕ ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಈಗಲೂ ತನ್ನೊಂದಿಗೆ ದಿನ ಬೆಳಗಾದರೆ ಕಚ್ಚಾಡುತ್ತಿರುವವನ ದ್ವೇಷಿಸುವಂತೆ ವಿಪರೀತವಾಗಿ ದ್ವೇಷಿಸುತ್ತಾ, ಯಾರ ಟೀಕೆ, ವಿಮರ್ಶೆಗಳಿಗೂ ಕಿವಿಗೊಡದೆ ತನ್ನದನ್ನೇ ಸಮರ್ಥಿಸುತ್ತಾ ಬರೆಯುವವರನ್ನು ಕಾಣುತ್ತೇವೆ.

ವ್ಯಕ್ತಿಗತವಾದ ಸಮಸ್ಯೆಯು ಸಾಮಾಜಿಕವಾಗಿ ಅಭಿವ್ಯಕ್ತಿಗೊಂಡಾಗ ಇವರನ್ನು ಸಮರ್ಥಿಸುವವರೂ ಇರುತ್ತಾರೆ. ಅವರಿಗೂ ಕೂಡಾ ಅದೇ ಬಗೆಯ ಎಲ್ಲೆಗೇಡಿತನ ಇರಬಹುದು, ಇಲ್ಲದಿರಬಹುದು. ಆದರೆ ಸಮಸ್ಯೆ ಅಂತೂ ಇರುತ್ತದೆ. ಅವುಗಳಲ್ಲಿ ಕಲ್ಚರ್ ಕಾಂಪ್ಲೆಕ್ಸ್; ಅಂದರೆ ತನ್ನ ಜನಾಂಗ /ಧರ್ಮ/ ಜಾತಿ/ ಭಾಷೆ /ಸಿದ್ಧಾಂತವೇ ಎಲ್ಲದ್ದಕ್ಕಿಂತ ಶ್ರೇಷ್ಠ ಎನ್ನುವಂತಹ ಅರಿಮೆ. ಕಲೆಕ್ಟಿವ್ ನಾರ್ಸಿಸಿಸಂ ಅಂದರೆ ಭಾವನಾತ್ಮಕವಾಗಿ ತಮ್ಮ ಸಮೂಹವೇ ಶ್ರೇಷ್ಠ ಮತ್ತು ಮಹತ್ತಿನದು ಎಂಬ ಅಚಲವಾದ ನಂಬಿಕೆಯನ್ನು ಹೊಂದಿರುವುದು.

ಯಾವುದೋ ಒಂದು ಸಮೂಹದಿಂದ ಅಥವಾ ಧರ್ಮದಿಂದ ಅಥವಾ ಸಿದ್ಧಾಂತದಿಂದ ತಮಗೆ ಹಾನಿಯಾಗಿ ತಾವು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತೇವೆ ಎಂಬಂತಹ ಸೋಶಿಯಲ್ ಮೆನೇಸ್ ಅಥವಾ ಸಾಮಾಜಿಕ ಆತಂಕವನ್ನು ಹೊಂದಿದ್ದು ಅಥವಾ ಹರಡುತ್ತಾ ಯಾವುದೇ ಒಂದು ಪ್ರಸಂಗವನ್ನು ವಿಶ್ಲೇಷಿಸುವ, ಪರೀಕ್ಷಿಸುವ ಮತ್ತು ಅವಲೋಕಿಸುವ ಬದಲು ತಮ್ಮ ಆತಂಕಕ್ಕೆ ಪೂರಕವಾಗಿಯೇ ವಿವರಿಸುವಂತಹ ರೋಗ; ಹೀಗೆ ನಾನಾ ಬಗೆಯ ರೋಗಗಳನ್ನು ಹೊಂದಿರುವವರೂ ಈ ವಿದ್ಯಮಾನದಲ್ಲಿ ಪ್ರಧಾನವಾದ ಪಾತ್ರವನ್ನು ವಹಿಸಿರುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)