varthabharthi


ಈ ಹೊತ್ತಿನ ಹೊತ್ತಿಗೆ

ಹೊರನಾಡ ಸಂಶೋಧಕರೊಬ್ಬರ ಅಧ್ಯಯನಯೋಗ್ಯ ಕೃತಿ ಅನಿಕೇತನ ಪ್ರಜ್ಞೆ ಮತ್ತು ಕನ್ನಡ

ವಾರ್ತಾ ಭಾರತಿ : 20 Nov, 2022
ಜಿ. ಎಂ. ಶಿರಹಟ್ಟಿ

ಕರ್ನಾಟಕದ ಗಡಿ ರೇಖೆಯನ್ನು ಮೊದಲು ಗುರುತಿಸಿದವನು ನೃಪತುಂಗ (ಶ್ರೀವಿಜಯ ಕಾವ್ಯ ನಾಮ) ತನ್ನ ಕವಿರಾಜ ಮಾರ್ಗ ದಲ್ಲಿ ‘ಕಾವೇರಿಯಿಂದ ಮಾ ಗೋದಾವರಿ ವರಮಿರ್ದನಾಡದಾ ಕನ್ನಡ’ ಎಂದು ಹೇಳಿ ಕನ್ನಡ ನಾಡಿನ ವಿಸ್ತಾರವನ್ನು ಬಣ್ಣಿಸಿದ್ದಾನೆ. ಕವಿರಾಜ ಮಾರ್ಗ ಕನ್ನಡದ ಮೊದಲ ವ್ಯಾಕರಣ ಗ್ರಂಥ. ಗುಲ್ಬರ್ಗಾದ (ಈಗಿನ ಕಲಬುರಗಿ) ಮಳಖೇಡ (ಮಾನ್ಯಖೇಟ) ಕವಿ ಅರಸ ನೃಪತುಂಗನ ರಾಜಧಾನಿ. ಕವಿರಾಜ ಮಾರ್ಗ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಚಿರಪರಿಚಿತ. ಈ ಕವಿ ಗುರುತಿಸಿದ ಕರ್ನಾಟಕದ ಗಡಿ ಕುರಿತು ಅಧ್ಯಯನ ಮಾಡಿ ಕನ್ನಡದ ಹೆಗ್ಗಳಿಕೆಯ ಹೆಗ್ಗುರುತುಗಳನ್ನು ದೃಢ ಪಡಿಸಿದವರು ಡಾ.ಜಿ.ಎನ್. ಉಪಾಧ್ಯ. ಅವರ ಇತ್ತೀಚಿನ ಕೃತಿ ‘ಅನಿಕೇತನ ಪ್ರಜ್ಞೆ ಮತ್ತು ಕನ್ನಡ’

ಕರ್ನಾಟಕದ ಕರುನಾಡ ಸಂಸ್ಕೃತಿ ಕರ್ನಾಟಕ ಮಹಾರಾಷ್ಟ್ರಗಳ ನಡುವಿನ ಅನುಸಂಧಾನ ಕುರಿತಾದ ಅನೇಕ ಸಂಶೋಧನಾತ್ಮಕ ಲೇಖನಗಳು ಈ ಕೃತಿಯ ವೈಶಿಷ್ಟ್ಯತೆಗೆ ಮೆರುಗು ತಂದಿವೆ. ಡಾ. ಉಪಾಧ್ಯ ಅವರ ಅಧ್ಯಯನಶೀಲ ಹಾಗೂ ಸಂಶೋಧನಾ ಪ್ರವೃತಿಯ ಫಲವಾಗಿ ಈ ಕೃತಿಯಲ್ಲಿ ಮೂಡಿ ಬಂದಿರುವ ೪೬ ಲೇಖನಗಳಲ್ಲಿ ಡಾ. ಉಪಾಧ್ಯ ಅವರು ಬಹಳಷ್ಟು ಕನ್ನಡ-ಮರಾಠಿ, ಕರ್ನಾಟಕ-ಮಹಾರಾಷ್ಟ್ರ ಇವೆರಡರ ಬಾಂಧವ್ಯಗಳ ವಿವಿಧ ವಿಷಯಗಳನ್ನು ಕುರಿತಾಗಿ ಮನದಟ್ಟಾಗಿ ವಿವರಿಸಿದ್ದಾರೆ. ಅವರ ಆಳವಾದ ಆಸಕ್ತಿ ಹಾಗೂ ಹೊಣೆಗಾರಿಕೆಯ ಹೇಳಿಕೆಗಳು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಗಮನಾರ್ಹವಾಗಿವೆ.

ವಿಠ್ಠಲ ರಾಮಜಿ ಶಿಂಧೆ ಕಂಡ ಕನ್ನಡ-ಮರಾಠಿ ಸಂಬಂಧ, ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕತಿಕ ಮಹತ್ವ, ಮರಾಠಿ ಸಂತ ಕವಿಗಳ ಕನ್ನಡ ಪ್ರೇಮ, ಕನ್ನಡ-ಮರಾಠಿ ಭಾಷೆ ಬಾಂಧವ್ಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಂಬೈಯ ಕನ್ನಡ ಮುದ್ರಣಾಲಯಗಳು, ಕನ್ನಡ-ಮರಾಠಿ ರಂಗಭೂಮಿಗೆ ಜನ್ಮವಿತ್ತ ಶಾಕುಂತಲ, ಮಹಾರಾಷ್ಟ್ರದಲ್ಲಿ ವೀರ ಶೈವ ಧರ್ಮ, ಮುಂಬೈಯಲ್ಲಿ ಬೆಳಕು ಕಂಡ ಕನ್ನಡದ ಮೊದಲ ಸಾಮಾಜಿಕ ನಾಟಕ, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಾಧನೆ ಮುಂತಾದ ಲೇಖನಗಳು ಗಮನಾರ್ಹವಾಗಿವೆ. ರಾಜಕೀಯ ಕಾರಣಗಳಿಂದಾಗಿ ಆಗಾಗ ಕರ್ನಾಟಕ-ಮಹಾರಾಷ್ಟ್ರ ಗಡಿಸಮಸ್ಯೆ, ಭಾಷಾ ಸಮಸ್ಯೆಗಳ ತಿಕ್ಕಾಟ ಉಂಟುಮಾಡುವವರು ಈ ಗ್ರಂಥದ ತುಂಬೆಲ್ಲ ಹರಡಿರುವ ಕರ್ನಾಟಕ-ಮಹಾರಾಷ್ಟ್ರದ ಅನ್ಯೋನ್ಯತೆಯನ್ನು ಓದಲೇಬೇಕು.

ಉಲ್ಲೇಖನೀಯವಾದ ಲೇಖನಗಳಲ್ಲಿ ಒಂದಾದ ವಿಠ್ಠಲ ರಾಮಜಿ ಶಿಂಧೆ ಅವರ ಕನ್ನಡ ಮರಾಠಿ ಸಂಬಂಧ ಕುರಿತಾದ ವಿಚಾರಗಳ ಲೇಖನ; ಕನ್ನಡ-ಮರಾಠಿ ಭಾಷೆಗಳ ಮಧುರ ಬಾಂಧವ್ಯದ ಬಗ್ಗೆ ಅವರ ಚಿಂತನ ಮಂಥನ, ಮರಾಠಿಯಲ್ಲಿ ಕನ್ನಡ ಶಬ್ದಗಳ ಬಳಕೆ, ಮುಂತಾದ ವಿಷಯಗಳನ್ನು ಶಿಂಧೆ ಅವರು ಕನ್ನಡ-ಮರಾಠಿ ಬಾಂಧವ್ಯವನ್ನು ತಿಳಿ ಹೇಳಿದ್ದು ಈ ಲೇಖನದ ವೈಶಿಷ್ಟ್ಯ.

ಮಹಾರಾಷ್ಟ್ರದ ಕನ್ನಡ ಶಾಸನಗಳತ್ತ ಒಂದು ಸಂಶೋಧನಾತ್ಮಕ ಪರಿಶೀಲನೆಯಲ್ಲಿ ಡಾ.ಉಪಾಧ್ಯ ಅವರು ಕನ್ನಡ ನಾಡಿನ ಉತ್ತರದ ಗಡಿಯನ್ನು ಕುರಿತು ಈ ಶಾಸನಗಳಲ್ಲಿಯ ವಿಷಯಗಳನ್ನು ಬಿಡಿಬಿಡಿಯಾಗಿ ಹೇಳಿದ್ದಾರೆ. ಈ ಹೆಗ್ಗುರುತುಗಳನ್ನು ಅವರು ಪ್ರಾಚೀನ ಕನ್ನಡನಾಡಿನ ಭೌಗೋಳಿಕ ವ್ಯಾಪ್ತಿಯನ್ನು ಗುರುತಿಸಲು ಗೋದಾವರಿಯವರೆಗೆ ಸಿಗುವ ನೂರಾರು ಕನ್ನಡ ಶಾಸನಗಳನ್ನು ಉಲ್ಲೇಖಿಸುತ್ತಾರೆ. ಸವಿಸ್ತಾರವಾದ ವಿಷಯಗಳನ್ನು ಒಳಗೊಂಡ ಈ ಲೇಖನದಲ್ಲಿ ಡಾ. ಉಪಾಧ್ಯ ಅವರು ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಸಿಗುವ ಶಾಸನಗಳಲ್ಲಿ ಉತ್ತರಕರ್ನಾಟಕದ ಜನಜೀವನ ಸಾಂಸ್ಕೃತಿಕ ಪರಿಸರವನ್ನು ಕಂಡು ವಿವರವಾದ ಪ್ರಸ್ತಾವನೆ ಮಾಡಿದ್ದಾರೆ. ಈ ಲೇಖನವಂತೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ.

ಇನ್ನೊಂದು ಗಮನಾರ್ಹವಾದ ವಿದ್ವತ್‌ಪೂರ್ಣಲೇಖನ ವೆಂದರೆ ಮರಾಠಿ ಸಂತ ಕವಿ ರಾಮದಾಸರು ಕರ್ನಾಟಕವನ್ನು ಕುರಿತು ‘‘ಚಿತ್ರಕಲಾ ನಾನಾ ನಾಟಕ ಮೌನಿ ನಾಮ ಕರ್ನಾಟಕ’’ ಎಂದು ಉದ್ಗಾರವೆತ್ತಿದ್ದು, ಸಂತ ಏಕನಾಥರ ‘ನಮೋಕಾನಡಿ ಭಾಷಾ..’.

ಕನ್ನಡ-ಮರಾಠಿ ಭಾಷಾ ಬಾಂಧ್ಯವ್ಯ ಕನ್ನಡ ವ್ಮಾಯದಲ್ಲಿ ವಚನ ಸಾಹಿತ್ಯದಲ್ಲಿ, ದಾಸ ಸಾಹಿತ್ಯದಲ್ಲಿ ನಂತರ ಮರಾಠಿ ಸಾಹಿತ್ಯದಲ್ಲಿಯ ಕನ್ನಡ ನುಡಿಗಳ ಪ್ರಯೋಗ ಮುಂತಾದ ಅನೇಕಾನೇಕ ಉದಾಹರಣೆಗಳು ಈ ಲೇಖನದಲ್ಲಿ ಸಿಗುತ್ತವೆ. ಮರಾಠಿಯಲ್ಲಿ ಈಗಲೂ ಚಲಾವಣೆಯಲ್ಲಿರುವ ಕನ್ನಡ ಪದಗಳದ್ದೊಂದು ಪಟ್ಟಿಯನ್ನೇ ಡಾ.ಉಪಾಧ್ಯ ಅವರು ಕೊಟ್ಟಿದ್ದಾರೆ.

ಇಂತಹ ಅನೇಕ ಲೇಖನಗಳು ಕರ್ನಾಟಕ-ಮಹಾರಾಷ್ಟ್ರ ಸಂಬಂಧಗಳ ಅರಿವು ಮೂಡಿಸುತ್ತವೆ.

ಹೀಗೆ ಇವೆರಡೂ ಸಂಸ್ಕೃತಿಗಳ ಇತಿಹಾಸದ ಹಿರಿಮೆ ಗರಿಮೆಗಳನ್ನು ನೆನಪಿಸಿ ಕನ್ನಡಿಗರ ಅನಿಕೇತನ ಪ್ರಜ್ಞೆಗೆ ಕನ್ನಡಿ ಹಿಡಿದಂತಿದೆ ಈ ಗ್ರಂಥ. ಡಾ.ಜಿ.ಎನ್. ಉಪಾಧ್ಯ ಅವರ ಅಧ್ಯಯನ ಶೀಲತೆ, ಸಂಶೋಧನಾತ್ಮಕ ಒಲವು, ಅನೇಕ ತಾತ್ವಿಕ, ಐತಿಹಾಸಿಕ ವಿಷಯಗಳ ಮರು ಆಲೋಚನೆಯಲ್ಲಿ ಕೂತೂಹಲ ಹುಟ್ಟಿಸುವ ಲೇಖನಗಳು ಪ್ರಸಕ್ತ ಅವಶ್ಯವಾಗಿವೆ. ಹೊರನಾಡಿನಲ್ಲಿರುವ ಒಬ್ಬ ವಿದ್ವಾಂಸ ನಮ್ಮ ನೆಲದ ಸಾಹಿತ್ಯ, ಸಂಸ್ಕೃತಿ, ಭಾಷಾ ಬಾಂಧವ್ಯ ಕನ್ನಡನಾಡಿನ ಓದುಗರಿಗೆ ಹೊಸ ಬೆಳಕನ್ನು ನೀಡಿದ್ದಾರೆ. ಡಾ.ಉಪಾಧ್ಯ ಅವರ ‘ಅನಿಕೇತನ ಪ್ರಜ್ಞೆ ಮತ್ತು ಕನ್ನಡ’ ಒಂದು ಸಂಗ್ರಹ ಯೋಗ್ಯ ಹಾಗೂ ಅಧ್ಯಯನ ಯೋಗ್ಯ ಗ್ರಂಥವಾಗಿದ್ದು ಇಂದಿನ ಗಡಿರೇಖೆಗಳ ತಿಕ್ಕಾಟಗಳಿಗೆ ಮದ್ದಾಗಬಲ್ಲದ್ದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)