ಓ ಮೆಣಸೇ ....
ಕೇಸರಿ ಬಣ್ಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದು ಬಿಜೆಪಿಯವರ ಗುತ್ತಿಗೆ ಅಲ್ಲ - ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಅವರಿಗೆ ನಿಮ್ಮ ಪಕ್ಷದ ತ್ರಿವರ್ಣ ಮಾತ್ರವಲ್ಲ, ದೇಶದ ತ್ರಿವರ್ಣ ಕಂಡರೂ ಆಗುವುದಿಲ್ಲ.
ಕೆಲವರಿಗೆ ಗೋಪುರದಂತೆ ಇರುವುದೆಲ್ಲವೂ ಮುಸ್ಲಿಮರದ್ದು ಎನ್ನುವಂತೆ ತೋರುತ್ತದೆ - ತನ್ವೀರ್ ಶೇಟ್, ಶಾಸಕ
ಮಲಮೂತ್ರಗಳಲ್ಲಿ ಔಷಧಿ ಕಾಣುವವರಿಗೆ ಎಲ್ಲಿ ಏನು ಕಂಡರೂ ಅಚ್ಚರಿ ಇಲ್ಲ.
ಕೇಸರಿ ಎಂದರೆ ಕೆಲವರ ಕಣ್ಣು ಯಾಕೆ ಕೆಂಪಗಾಗುತ್ತದೆ ಅರ್ಥವಾಗುತ್ತಿಲ್ಲ - ಬಸವರಾಜ ಬೊಮ್ಮಾಯಿ, ಸಿಎಂ
ಅಷ್ಟೊಂದು ಮುದ್ದಾದ ಬಣ್ಣ ಅಷ್ಟು ವ್ಯಾಪಕವಾಗಿ ದುರುಪಯೋಗವಾಗುವುದನ್ನು ಕಂಡರೆ ಸ್ವಸ್ಥರಾಗಿರುವ ಎಲ್ಲರ ಕಣ್ಣು ಕೆಂಪಾಗುವುದು ಸಹಜ.
ಮುಂದಿನ ಮಾರ್ಚ್‌ನೊಳಗೆ ಎಲ್ಲ ಅರ್ಹರಿಗೂ ಆರೋಗ್ಯ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ - ಡಾ.ಸುಧಾಕರ್, ಸಚಿವ
ಎಲ್ಲ ಸತ್ಕಾರ್ಯಗಳನ್ನು ಚುನಾವಣೆಯ ಹತ್ತಿರದ ಸಮಯಕ್ಕೆ ಮುಂದೂಡುತ್ತಲಿದ್ದರೆ, ಆ ತನಕ ಏನು ಮಾಡುತ್ತಿರುತ್ತೀರಿ?
ವಿವೇಕ ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಬಳಿಯ ಬೇಕೆಂಬುದು ಈವರೆಗೂ ನಿರ್ಣಯವಾಗಿಲ್ಲ - ಬಿ.ಸಿ.ನಾಗೇಶ್, ಸಚಿವ
ಬಣ್ಣ ಬಳಿಯುವ ವಿವಾದ ತಪ್ಪಿಸಲು ಎಲ್ಲರಿಗೆ ಕೇಸರಿ ಕನ್ನಡಕ ಕೊಟ್ಟುಬಿಡಿ - ನಿಮ್ಮ ಕನಸಿನಂತೆ ಎಲ್ಲವೂ ಕೇಸರಿಮಯವಾಗಿ ಬಿಡುತ್ತದೆ.
ರಾಜ್ಯದ ಯಾವ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುವವನೇ ನಿಜವಾದ ಲೀಡರ್ - ಸಿದ್ದರಾಮಯ್ಯ, ಮಾಜಿ ಸಿಎಂ
ಸೋಲೆದುರಿಸಲು ಸಿದ್ಧರಾಗಿರುವವರಿಗೆ ಯಾವ ಕ್ಷೇತ್ರವಾದರೇನಂತೆ?
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಒಪ್ಪಂದ ಅಥವಾ ಮೈತ್ರಿ ಮಾಡಿಕೊಳ್ಳುವುದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಎಲ್ಲ ಹೊಲಸು ಮೈತ್ರಿ, ಒಪ್ಪಂದಗಳನ್ನು ಚುನಾವಣೆಯ ನಂತರವೇ ಮಾಡುತ್ತೀರಿ ಎಂಬುದು ಜನರಿಗಿರುವ ಆತಂಕ.
ತಂತ್ರಜ್ಞಾನ ಕ್ಷೇತ್ರ ಹುಲಿ ಮೇಲಿನ ಸವಾರಿ - ಡಾ.ಅಶ್ವತ್ಥನಾರಾಯಣ, ಸಚಿವ
ದೇಶದ ಮೇಲೆ ಕೋತಿ ಸವಾರಿ ನಡೆಯುತ್ತಿರುವಾಗ ತಂತ್ರಜ್ಞಾನದ ಮೇಲೆ ಯಾರು ಸವಾರಿ ನಡೆಸುತ್ತಿದ್ದರೂ ನಮಗೇನಂತೆ!
ಕಾಂಗ್ರೆಸ್ ಸರಕಾರವಿದ್ದಾಗ ಬೆಂಗಳೂರಿನ ಟೌನ್‌ಹಾಲ್ ಎದುರು ಗೋಮಾಂಸ ಹುರಿದು ತಿಂದು ಪ್ರತಿಭಟನೆ ನಡೆಸಿದವರು ಈಗ ತಾಕತ್ತಿದ್ದರೆ ಸಾರ್ವಜನಿಕವಾಗಿ ಗೋಮಾಂಸ ತಿನ್ನಲಿ ನೋಡೋಣ - ಶ್ರೀನಿವಾಸ ಪೂಜಾರಿ, ಸಚಿವ
ಬೀಫ್ ಮಾರುವವರೇನು ನಿಮ್ಮನ್ನು ಸೇಲ್ಸ್ ಪ್ರೊಮೋಷನ್‌ಗಾಗಿ ನೇಮಿಸಿದ್ದಾರೆಯೇ?
ಪ್ರಸಕ್ತ ಪ್ರಚಾರದ ಯುಗದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರೇ ಶ್ರೇಷ್ಠ ವ್ಯಕ್ತಿಗಳು -ಎಚ್.ವಿಶ್ವನಾಥ್, ಮಾಜಿ ಸಚಿವ
ಅವರು ಯಾವ ಗ್ರಹದಲ್ಲಿ ಅವಿತಿದ್ದಾರೆ ಸಾರ್?
ಟಿಪ್ಪು ಸುಲ್ತಾನನನ್ನು ಕೊಂದವರು ನಿಜವಾದ ಹುಲಿಗಳು - ಸಿ.ಟಿ.ರವಿ, ಶಾಸಕ
ನರ ಹತ್ಯೆಯ ಸಾಹಸವನ್ನು ಕೆಲವೊಮ್ಮೆ ಹುಚ್ಚು ನಾಯಿಗಳೂ ಮಾಡುತ್ತವೆ.
ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಹಕ್ಕುಗಳನ್ನು ನಾವೀಗ ಅನುಭವಿಸುವ ಕಾಲಘಟ್ಟದಲ್ಲಿದ್ದೇವೆ -ಎಸ್.ಅಂಗಾರ, ಸಚಿವ
ಹೌದು ಸಚಿವರಾದವರಿಗೆ ಹಾಗೆ ಅನಿಸಿದೆ. ಜನತೆಯ ಸರದಿ ಯಾವಾಗ ಬಂದೀತು?
ಅಮೆರಿಕದೊಂದಿಗೆ ಪಾಕಿಸ್ತಾನ ಯಜಮಾನ -ಗುಲಾಮ ರೀತಿಯ ಸಂಬಂಧ ಹೊಂದಿದೆ - ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಗುಲಾಮಗಿರಿ ಒಪ್ಪಿಕೊಂಡವರಿಗೆ ಯಜಮಾನ ಯಾರಾದರೇನಂತೆ?
ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ, ರಟ್ಟಿನ ಗುರಾಣಿ ಕೊಟ್ಟು ಯುದ್ಧಕ್ಕೆ ನಿಲ್ಲಿಸಲಾಗಿದೆ - ಶ್ರೀನಿವಾಸ ಪ್ರಸಾದ್, ಸಂಸದ
ನಿಮಗೆ ನೀಡಿರುವುದೆಲ್ಲಾ ರಟ್ಟಿನದ್ದಲ್ಲವೇ?
ಇಂದು ಬುದ್ಧಿಜೀವಿಗಳಲ್ಲಿ ಅಪ್ರಾಮಾಣಿಕತೆ ಹೆಚ್ಚಾಗುತ್ತಿದೆ - ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
ಬುದ್ಧಿಜೀವಿಗಳು ಜೀವ ಬಿಟ್ಟು ಬುದ್ಧಿವಂತರಾಗುತ್ತಿರುವುದರ ಲಕ್ಷಣ.
ಅಡಿಕೆ ಬೆಳೆ ರೋಗ ಅಧ್ಯಯನಕ್ಕಾಗಿ ಕೇಂದ್ರ ನಿಯೋಜಿತ ಸಮಿತಿ ರಾಜ್ಯಕ್ಕೆ ಆಗಮಿಸಲಿದೆ - ಆರಗ ಜ್ಞಾನೇಂದ್ರ, ಸಚಿವ
ಕೇಂದ್ರಕ್ಕೆ ಅಂಟಿರುವ ಹಲವಾರು ಜನ ವಿರೋಧಿ ರೋಗಗಳ ಅಧ್ಯಯನಕ್ಕೆ ಇಲ್ಲಿಂದ ಕೆಲವರನ್ನು ಕಳಿಸಿ. ಆ ಹೆಸರಲ್ಲಿ ಕೆಲವುಕೋಟಿ ನುಂಗಬಹುದು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದದ್ದು ತಪ್ಪು - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಲಾರ್ಡ್ ಕಾರ್ನವಾಲಿಸ್ ಜಯಂತಿಯನ್ನು ಆಚರಣೆಗೆ ತರಬೇಕಿತ್ತೇ?
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ನಾನು ಸಂಚು ರೂಪಿಸಿಲ್ಲ - ಕೆ.ಎಚ್.ಮುನಿಯಪ್ಪ, ಮಾಜಿ ಕೇಂದ್ರ ಸಚಿವ
ಸಂಚು ನಿರ್ಮಿಸುವ ಕೆಲಸವನ್ನೂ ಔಟ್ ಸೋರ್ಸ್ ಮಾಡಿಬಿಟ್ಟಿದ್ದೀರಾ?
ಬಳ್ಳಾರಿ ಜಿಲ್ಲೆ ಬರೀ ಗಣಿಗಾರಿಕೆಗೆ ಮಾತ್ರವಲ್ಲ, ತೋಟಗಾರಿಕೆಗೂ ಹೆಸರುವಾಸಿಯಾಗಬೇಕು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ತೋಟದಲ್ಲಿ ಲೂಟಿಗೇನು ಸಿಗುತ್ತೆ ಮೇಡಂ?
ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಹೊಣೆಯಾಗಿದೆ - ಸುನೀಲ್ ಕುಮಾರ್, ಸಚಿವ
ಅದಕ್ಕಾಗಿ, ಮೊದಲು ಮದ್ಯಮುಕ್ತ ಸಮಾಜ ನಿರ್ಮಿಸುವ ಸರಕಾರ ಬರಲಿ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ - ಎಲ್.ಆರ್.ಶಿವರಾಮೇಗೌಡ, ಮಾಜಿ ಸಂಸದ
ಅದರಿಂದ ಕ್ಷೇತ್ರಕ್ಕೆ ಏನಾದರೂ ಲಾಭವಾಗಲಿದೆ ಎಂಬುದಕ್ಕೆ ಗ್ಯಾರಂಟಿ ಏನಿದೆ?
ಬಿಜೆಪಿ ಭಾಷೆಯಲ್ಲಿಯೇ ಮಾತನಾಡುತ್ತಿರುವ ಸುಕೇಶ್ ಚಂದ್ರಶೇಖರರನ್ನು ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷನನ್ನಾಗಿ ಮಾಡಬೇಕು -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಅವರೇನು ನೋಟಿನಲ್ಲಿ ಪಂಜುರ್ಲಿ ಭೂತದ ಚಿತ್ರ ಬೇಕು ಅಂದಿದ್ದಾರೆಯೇ?
ಒಂದು ಧರ್ಮದ ವಿರುದ್ಧ ಅನಗತ್ಯವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ ಸಿಂಹರನ್ನು ಸಿಎಂ ಬೊಮ್ಮಾಯಿ ಕರೆಸಿ ಬುದ್ಧಿಹೇಳಬೇಕು - ರಾಮದಾಸ್, ಶಾಸಕ
ಬೊಮ್ಮಾಯಿಯವರನ್ನು ಕರೆಸಿ ಬುದ್ಧಿ ಹೇಳಬಲ್ಲವರು ಯಾರಿದ್ದಾರೆ?
ತಾಂತ್ರಿಕ ಸಮಸ್ಯೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂರು ತಿಂಗಳ ಗೌರವಧನ ಪಾವತಿಯಾಗಿಲ್ಲ - ಹಾಲಪ್ಪ ಆಚಾರ್, ಸಚಿವ
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕಾದ ತಂತ್ರಜ್ಞರಿಗೆ ಎಷ್ಟು ವರ್ಷಗಳಿಂದ ಸಂಬಳ ಬಾಕಿ ಇದೆ?
ನಾನು ಪ್ರಧಾನಿ ನರೇಂದ್ರ ಮೋದಿಯ ಭಕ್ತ - ಡಾ.ಅನಂತ್‌ನಾಗ್, ನಟ
ಆ ಮನುಷ್ಯ ಇಂತಹ ಹೊಲಸು ಬೊಗಳೆಯನ್ನೂ ನಂಬುವಷ್ಟು ಮೂರ್ಖ ಎಂದುಕೊಂಡಿದ್ದೀರಾ?
ಕಾಂಗ್ರೆಸ್ ಈಗ ಬಡವರ ಪಕ್ಷ ಆಗಿ ಉಳಿದಿಲ್ಲ - ಕೆ.ಎಸ್.ಈಶ್ವರಪ್ಪ, ಶಾಸಕ
ಶ್ರೀಮಂತರ ಪಕ್ಷವಾಗುವುದು ಕೇವಲ ಬಿಜೆಪಿಯ ಹಕ್ಕೇ?