ಮುಂದಿನ ಚುನಾವಣೆಗೆ ನಿಲ್ಲಬಾರದೆಂಬ ದುರುದ್ದೇಶದಿಂದ ಹಲ್ಲೆ ಮಾಡಿದ್ದಾರೆ: ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪ
''ನಮ್ಮದೇ ಸರಕಾರ ಇದ್ದರೂ...'' ► ಕಾಡಾನೆ ದಾಳಿಗೆ ಮಹಿಳೆ ಬಲಿ ಪ್ರಕರಣ
ಚಿಕ್ಕಮಗಳೂರು, ನ.21: ''ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಬಾರದು ಎಂಬ ದುರುದ್ದೇಶದಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿರುವ ತನ್ನ ವಿರೋಧಿಗಳು ರವಿವಾರ ಸಂಜೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ'' ಎಂದು ಮೂಡಿಗೆರೆ ವಿಧಾನಭೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ತಾಲೂಕಿನ ಕುಂದೂರು ಹುಲ್ಲೇಮನೆ ಗ್ರಾಮದಲ್ಲಿ ರವಿವಾರ ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮನೆಗೆ ರವಿವಾರ ಸಂಜೆ ತೆರಳಿದ್ದ ವೇಳೆ ಕೆಲವರು ಗುಂಪು ಹಲ್ಲೆ ಮಾಡಿದ್ದಾರೆನ್ನಲಾಗುತ್ತಿರುವ ಘಟನೆ ಸಂಬಂಧ ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಡಾನೆ ದಾಳಿಯಿಂದ ಮೃತಪಟ್ಟ ಶೋಭಾ ಅವರ ಮೃತದೇಹ ವೀಕ್ಷಣೆಗೆ ನಾನು ರವಿವಾರ ಸಂಜೆ ತೆರಳಿದ್ದೆ. ಈ ವೇಳೆ ಗ್ರಾಮದ ಕೆಲ ಮುಖಂಡರ ಕುಮ್ಮಕ್ಕಿನಿಂದ ಉದ್ರಿಕ್ತರಾದ ಜನರು ಸ್ಥಳದಲ್ಲಿದ್ದ ಪೊಲೀಸರೂ ಸೇರಿದಂತೆ ತನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮೈಮೇಲಿದ್ದ ಬಟ್ಟೆಯನ್ನೂ ಹರಿದು ಹಾಕಿದ್ದಾರೆ'' ಎಂದು ಆರೋಪಿಸಿದರು.
''ಉದ್ರಿಕ್ತ ಜನರ ಕೈಯಲ್ಲಿ ಕಲ್ಲು, ದೊಣ್ಣೆಗಳಿದ್ದವು, ಅವುಗಳನ್ನು ಹಿಡಿದುಕೊಂಡೇ ನನ್ನನ್ನು ಅಟ್ಟಾಡಿಸಿಕೊಂಡು ಬಂದಿದ್ದಾರೆ. ನಾನೇ ಓಡಿ ಹೋಗಿ ಜೀಪಿನಲ್ಲಿ ಕೂತೇ, ಜೀಪಿನ ಮೇಲೂ ಕಲ್ಲು ಹೊಡೆದರು. ಇದು ಆನೆ ಪ್ರಕರಣ ಅಲ್ಲ, ರಾಜಕೀಯ ಪ್ರೇರಿತ ದಾಳಿ ಎಂದ ಅವರು, ನಾನು ಚೆನ್ನಾಗಿದ್ದರೇ ಮತ್ತೆ ಚುನಾವಣೆಗೆ ನಿಲ್ಲುತ್ತೇನೆಂದು ಮಾಡಿರುವ ಪಿತೂರಿ ಇದಾಗಿದೆ. ಬಟ್ಟೆ ಹರಿದಿರುವ ಬಗ್ಗೆ ನಾನು ಸುಳ್ಳು ಹೇಳುತ್ತಿದ್ದೇನೆಂದು ಕೆಲವರು ಆರೋಪಿಸಿದ್ದು, ನಾನು ಬನಿಯನ್ ತೊಟ್ಟಿದ್ದರಿಂದ ಬಟ್ಟೆ ಹರಿದಿದ್ದು ಕಾಣಿಸುತ್ತಿರಲಿಲ್ಲ. ಬಟ್ಟೆ ನೂರು ತರುತ್ತೇನೆ, ಆದರೆ ಕಣ್ಣು, ಕೈ ಕಾಲು ಹೋಗಿದ್ದರೆ ಏನು ಮಾಡಬೇಕಿತ್ತು. ಸ್ಥಳದಲ್ಲಿ ನಾನು ಒಂದೇ ಒಂದು ಮಾತನಾಡಿಲ್ಲ, ಸಂಚು ಮಾಡಿ ಹಲ್ಲೆ ಮಾಡಿದ್ದಾರೆ'' ಎಂದರು.
''ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಲು ಮುಂದಾಗಿದ್ದೆ. ಅಷ್ಟರಲ್ಲಿ ಅಲ್ಲಿದ್ದ ಕೆಲವರು ಅರಣ್ಯ ರಕ್ಷಕರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಡವಾಗಿ ಸ್ಥಳಕ್ಕೆ ತೆರಳಿದ್ದೆ. ಆಗ ಕೆಲವರು ಧಿಕ್ಕಾರ ಕೂಗಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಎಲ್ಲರ ಕೈಗಳಲ್ಲಿ ಕಲ್ಲು, ದೊಣ್ಣೆ ಇತ್ತು. ಪೊಲೀಸ್ ಸಿಬ್ಬಂದಿ ರಕ್ಷಿಸಿ ಜೀಪಿನಲ್ಲಿ ಕೂರಿಸಿದರು ಎಂದು ಘಟನೆಯನ್ನು ವಿವರಿಸಿದ ಅವರು, ರಾಜ್ಯದಲ್ಲಿ ನಮ್ಮದೇ ಸರಕಾರ ಇದ್ದಾಗ್ಯೂ ಪೊಲೀಸರಿಂದ ನನಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಸರಕಾರ ಎಲ್ಲ ಶಾಸಕರಿಗೂ ಭದ್ರತೆ ನೀಡಬೇಕು. ನಾನು ಕಾಡು ಕಾಯೋಲ್ಲ, ಆನೆ ಸಾಕಿಲ್ಲ, ಆನೆ ಸ್ಥಳಾಂತರಕ್ಕೆ ಸರಕಾರಕ್ಕೆ ದೂರು ಸಲ್ಲಿಸಬಹುದಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪಕ್ಷದ ಮುಖಂಡರನ್ನು ಭೇಟಿಮಾಡಿ ದೂರು ಸಲ್ಲಿಸುತ್ತೇನೆ. ವಿಪಕ್ಷದವರಿಗೂ ನನ್ನ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ಸಂಚು ರೂಪಿಸಿದವರು ಯಾರೆಂದು ಪೊಲೀಸ್ ಇಲಾಖೆಯ ತನಿಖೆಯಿಂದ ತಿಳಿದು ಬರಬೇಕಿದೆ'' ಎಂದರು.