ಚಿಕ್ಕಮಗಳೂರು: ಕಸದ ರಾಶಿಯಲ್ಲಿ ನೂರಾರು ಪಡಿತರ ಚೀಟಿ ಪತ್ತೆ!
ಇಲಾಖಾಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ
ಚಿಕ್ಕಮಗಳೂರು (Chikkamagaluru), ನ.22: ಪಡಿತರ ಚೀಟಿ ಪಡೆದುಕೊಳ್ಳಲು ಸಾರ್ವಜನಿಕರು ಇನ್ನಿಲ್ಲದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಡಿತರ ಚೀಟಿಗಳಿಗಾಗಿ ಜನರು ಇಂದಿಗೂ ಕಚೇರಿಗಳಿಗೆ ವರ್ಷಪೂರ್ತಿ ಅಲೆದಾಡಬೇಕಾದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಕಸದ ರಾಶಿಯಲ್ಲಿ ಸರಕಾರದಿಂದ ಫಲಾನುಭವಿಗಳಿಗೆ ನೀಡಿದ್ದ ನೂರಾರು ಪಡಿತರ ಚೀಟಿಗಳನ್ನು ಎಸೆಯುವ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ತಾ ಇಲಾಖೆ ಕಚೇರಿ ಪಕ್ಕದಲ್ಲಿ ಕಡೂರು ತಾಲೂಕಿನ ವಿವಿಧ ಗ್ರಾಮಗಳ ಫಲಾನುಭವಿಗಳ ಹೆಸರಿರುವ ಎಪಿಎಲ್, ಬಿಪಿಎಲ್ ಕಾರ್ಡುಗಳನ್ನು ಕಸದ ರಾಶಿಯಲ್ಲಿ ಎಸೆಯಲಾಗಿದೆ. ಕಸದ ರಾಶಿಯಲ್ಲಿ ಪತ್ತೆಯಾಗಿರುವ ಪಡಿತರ ಚೀಟಿಗಳಲ್ಲಿ ಕಡೂರು ತಾಲೂಕಿನ ಫಲಾನುಭವಿಗಳು ಮತ್ತು ಕುಟುಂಬಸ್ಥರ ಹೆಸರು, ನ್ಯಾಯ ಬೆಲೆ ಅಂಗಡಿಗಳ ಹೆಸರು, ವಿವಿಧ ಗ್ರಾಮಗಳ ಹೆಸರಿದ್ದು, ನೂರಕ್ಕೂ ಹೆಚ್ಚು ಪಡಿತರ ಚೀಟಿಗಳು ಪತ್ತೆಯಾಗಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು, ಸಿಬ್ಬಂದಿ ನಕಲಿ ಪಡಿತರ ಚೀಟಿಗಳನ್ನು ಸೃಷ್ಟಿಸುವ ದಂಧೆಯಲ್ಲಿ ತೊಡಗಿರುವ ಬಗ್ಗೆಯೂ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದು, ಕಸದ ರಾಶಿಯಲ್ಲಿ ಪಡಿತರ ಚೀಟಿಗಳನ್ನು ಎಸೆದಿರುವುದು ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಬ್ದಾರಿಗೆ ಸಾಕ್ಷಿ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿದವರಿಗೆ ಹಂಚಿಕೆ ಮಾಡಲು ಸರಕಾರದ ವತಿಯಿಂದ ನೀಡಿರುವ ಪಡಿತರ ಚೀಟಿಗಳಲ್ಲಿ ದೋಷ ಕಂಡು ಬಂದಿದ್ದರಿಂದ ಅವುಗಳನ್ನು ಎಸೆಯಲಾಗಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇದು ನಕಲಿ ಪಡಿತರ ಚೀಟಿಗಳಾಗಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಗತ್ಯವಿಲ್ಲದ ಸರಕಾರಿ ದಾಖಲೆಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಅಗತ್ಯವಿಲ್ಲದ ದಾಖಲಾತಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಆದರೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಮಹತ್ವದ ದಾಖಲಾತಿಯನ್ನು ಹೀಗೆ ಕಸದ ರಾಶಿಯಲ್ಲಿ ಎಸೆಯುವ ಮೂಲಕ ಲೋಪ ಎಸಗಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಕಸದ ರಾಶಿಯಲ್ಲಿ ಎಸೆಯಲಾಗಿರುವ ಪಡಿತರ ಚೀಟಿಗಳು ಅಸಲಿಯೋ, ನಕಲಿಯೋ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ದಾಖಲೆಗಳನ್ನು ಕಸದ ರಾಶಿಗೆ ಎಸೆದವರ ಮೇಲೆ ಶಿಸ್ತುಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿರುವ ಸಾರ್ವಜನಿಕರು, ಪಡಿತರ ಚೀಟಿಗಳು ನೈಜ ಫಲಾನುಭವಿಗಳಿಗೆ ಸೇರಿದ್ದಾಗಿದ್ದರೇ ಅವುಗಳನ್ನು ಸಂಬಂಧಿಸಿದವರಿಗೆ ಹಂಚಿಕೆ ಮಾಡಲು ಕ್ರಮವಹಿಸಬೇಕು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕಲಿ ಪಡಿತರ ಚೀಟಿ ಸೃಷ್ಟಿಸುತ್ತಿರುವ ಬಗ್ಗೆ ಶಂಕೆ ಇದ್ದು, ಇದಕ್ಕೆ ಜಿಲ್ಲಾಡಳಿತವೇ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.