varthabharthi


ವಿಶೇಷ-ವರದಿಗಳು

ಆಧಾರ್ ಮಾಹಿತಿ ಕಳವು: ದುರ್ಬಳಕೆ ಕುರಿತ ಆತಂಕಗಳೇನು?

ವಾರ್ತಾ ಭಾರತಿ : 23 Nov, 2022
ಜಾಹ್ನವಿ ರೆಡ್ಡಿ

ಆಧಾರ್ ಸ್ವತಃ ಸೀಮಿತ ವೈಯಕ್ತಿಕ ಮಾಹಿತಿಯನ್ನು ಹೊಂದಿರಬಹುದಾದರೂ, ಬೆಂಗಳೂರು ಪ್ರಕರಣದಲ್ಲಿ, ಜಾತಿ, ಉದ್ಯೋಗ, ಶಿಕ್ಷಣ ಇತ್ಯಾದಿಗಳ ವಿವರಗಳೊಂದಿಗೆ ಅದನ್ನು ಸಂಗ್ರಹಿಸಲಾಗಿದೆ. ಮತದಾರರು ಹಾಲಿ ಜನಪ್ರತಿನಿಧಿಗಳ ಬಗ್ಗೆ ಹೊಂದಿದ್ದ ಅಭಿಪ್ರಾಯವೇನೆಂಬುದನ್ನೂ ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ. ಇಂತಹ ಮತದಾರರಲ್ಲಿ ಹಲವರು ವಿವಿಧ ಸರಕಾರಿ ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುತ್ತಿರುವವರೂ ಆಗಿರಬಹುದು. ಆ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲಾಗಿರುವುದರಿಂದ, ಈಗ ಸಂಗ್ರಹಿಸಲಾಗಿರುವ ಡೇಟಾವು, ರಾಜಕೀಯ ಪಕ್ಷಗಳ ಬಗೆಗಿನ ಮತದಾರರ ಅಭಿಪ್ರಾಯದ ಆಧಾರದಲ್ಲಿ ಪರ ಇಲ್ಲವೇ ಸೇಡಿನ ಕ್ರಮಕ್ಕೂ ಕಾರಣವಾಗಬಹುದು. 

ಖಾಸಗಿ ಸಂಸ್ಥೆಯೊಂದು ಬೆಂಗಳೂರು ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಆರೋಪ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮತದಾರರ ಜಾಗೃತಿ ಅಭಿಯಾನವನ್ನು ಕೈಗೊಳ್ಳಲು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದ ‘ಚಿಲುಮೆ’ ಎಂಬ ಎನ್‌ಜಿಒ, ಆ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಯನ್ನು ಕಲೆಹಾಕಿದೆ. ಬಿಬಿಎಂಪಿ ಅಧಿಕಾರಿಗಳ ಸೋಗಿನಲ್ಲಿ ಮನೆಮನೆಗೆ ಭೇಟಿ ನೀಡಿ ಮತದಾರರಿಂದ ಜಾತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರಗಳು, ಫೋನ್ ಸಂಖ್ಯೆ, ವಿಳಾಸ ಮತ್ತು ಆಧಾರ್ ಸಂಖ್ಯೆಗಳನ್ನು ಒಳಗೊಂಡಂತೆ ವ್ಯಾಪಕವಾದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ. ಮತದಾರರ ಪಟ್ಟಿಯ ಡೇಟಾದೊಂದಿಗೆ ಆಧಾರ್ ಲಿಂಕ್ ಮಾಡಲು ಅವಕಾಶ ಮಾಡಿಕೊಡುವ ಕಾನೂನು ಜಾರಿಗೆ ಬಂದ ವರ್ಷದೊಳಗೇ ಈ ಗಂಭೀರ ಗೌಪ್ಯತೆ ಉಲ್ಲಂಘನೆ ನಡೆದಿರುವುದು ಬೆಳಕಿಗೆ ಬಂದಿದೆ.

ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯ್ದೆ 2021 ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬ ಅಭಿಪ್ರಾಯಗಳು ಈಗಾಗಲೇ ವ್ಯಕ್ತವಾಗಿವೆ. ಹೀಗಿರುವಾಗಲೇ, ಈಗ ಬೆಂಗಳೂರಿನಲ್ಲಿನ ಮತದಾರರ ಮಾಹಿತಿ ಕಳವು ಪ್ರಕರಣವು ಆಧಾರ್-ವೋಟರ್ ಐಡಿ ಲಿಂಕ್ ಮತ್ತು ಚುನಾವಣೆಗಳ ಮೇಲೆ ಭಯಂಕರ ಪರಿಣಾಮ ಬೀರೀತೆಂಬ ಅನುಮಾನ ಮತ್ತು ಭಯವನ್ನು ಹುಟ್ಟುಹಾಕಿದೆ. ಇಂತಹ ಡೇಟಾಗಳ ದುರುಪಯೋಗ ಹೇಗೆಲ್ಲಾ ಆಗಬಹುದು ಎಂಬುದರತ್ತ ಒಂದು ನೋಟ ಇಲ್ಲಿದೆ.  

ಕೇಂದ್ರ ಸರಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಮುಖ ಉದ್ದೇಶ ನಕಲಿ ಮತದಾರರು ಮತ್ತು ನಕಲಿ ನೊಂದಣಿಗಳನ್ನು ತೆಗೆದುಹಾಕುವ ಮೂಲಕ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು. ವಿಪರ್ಯಾಸವೆಂದರೆ  ಆಧಾರ್ ಅಂಕಿಅಂಶಗಳೇ ಅಷ್ಟು ಶುದ್ಧವಿಲ್ಲ. ಹಲವು ಅಭಿಯಾನಗಳು ಗಮನಿಸಿರುವಂತೆ, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಂತಹ ದಾಖಲೆಗಳನ್ನು ಆಧಾರ್ ಜೊತೆ ಜೋಡಿಸುವ ಯತ್ನದಲ್ಲಿ ಹೆಚ್ಚಿನ ಸಂಖ್ಯೆಯ ನೈಜ ಫಲಾನುಭವಿಗಳ ಹೆಸರುಗಳನ್ನೇ ಅಳಿಸಲಾಗಿದೆ.ಹಲವೆಡೆ ಸರಕಾರಗಳು ಪಡಿತರ ಕಾರ್ಡ್ ಗಳಿಗೆ ಆಧಾರ್ ಲಿಂಕ್ ಮಾಡಿದಾಗ, ನಿಜವಾಗಿಯೂ ಒಳಗೊಳ್ಳಬೇಕಿದ್ದ ಶೇ.90ರಷ್ಟು ಕುಟುಂಬಗಳ ಕಾರ್ಡ್ ಗಳು ಡಿಲೀಟ್ ಆದವು. ಮತದಾರರ ಪಟ್ಟಿಯಿಂದಲೂ ಮತದಾರರ ಹೆಸರುಗಳನ್ನು ಮನಬಂದಂತೆ ಅಳಿಸುವ ಅಪಾಯಕಾರಿ ಸಾಧ್ಯತೆ ಇದೆಯೆನ್ನಲಾಗುತ್ತದೆ. 

ಭಾರತದಲ್ಲಿ ಆಧಾರ್-ವೋಟರ್ ಐಡಿ ಲಿಂಕ್ ಮಾಡುವ ಯೋಜನೆಯನ್ನು ಮೊದಲು ಪ್ರಯತ್ನಿಸಿದಾಗಲೂ  ಹೀಗಾಗಿದೆ ಎಂಬ ವರದಿಗಳಿವೆ. 2015ರಲ್ಲಿ ತೆಲಂಗಾಣದಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮದಲ್ಲಿ ಎಷ್ಟೋ ಹೆಸರುಗಳು ಅಮಾನ್ಯಗೊಂಡವು. 2018ರ,ಡಿಸೆಂಬರ್‌ನಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಲಕ್ಷಾಂತರ ಮತದಾರರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಮತದಾರರ ಪಟ್ಟಿಯಿಂದ ಅವರ ಹೆಸರುಗಳು ಕಾಣೆಯಾಗಿದ್ದವು. ತೆಲಂಗಾಣ ರಾಜ್ಯ ಚುನಾವಣಾ ಆಯೋಗವು ಸುಮಾರು 55 ಲಕ್ಷ ಮತದಾರರನ್ನು ಪರಿಶೀಲನೆಯೇ ಇಲ್ಲದೆ ಅಳಿಸಲು ಆಧಾರ್ ಬಳಸಿರುವ ವಿಚಾರ ಆ ಬಳಿಕ ಗೊತ್ತಾಯಿತು. 

ಸರಕಾರಿ ಸೇವೆಗಳಿಗೆ ಆಧಾರ್ ದೃಢೀಕರಣ ಹಂತದಲ್ಲಿಯೂ ಶೇ.12ರಷ್ಟು ವೈಫಲ್ಯ ಕಂಡಿದೆ ಎಂಬ ವಿಚಾರವನ್ನು 2018ರಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರವೇ (UIDAI) ಸ್ವತಃ ಒಪ್ಪಿಕೊಂಡಿದೆ. ಹೀಗೆ ತಾಂತ್ರಿಕ ಕಾರಣಗಳಿಗಾಗಿ ಹೆಚ್ಚಿನ ಪ್ರಮಾಣದ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವಂತಾಗುವುದು ಚುನಾವಣೆಯ ಫಲಿತಾಂಶವನ್ನೇ ಬದಲಿಸಬಹುದು ಎಂಬುದು ಮೊದಲನೆಯ ಆತಂಕ. 

ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯ್ದೆ, 2021 ಅಂಗೀಕಾರವಾದಾಗ ಆಂಧ್ರಪ್ರದೇಶದಲ್ಲಿ ಆಧಾರ್ ದಾಖಲಾತಿಗಳ ಉಸ್ತುವಾರಿ ವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ಪಿ.ವಿ. ರಮೇಶ್, ಆಧಾರ್-ವೋಟರ್ ಐಡಿ ಲಿಂಕ್  ಪ್ರಕ್ರಿಯೆಯು ಮತದಾರರ ಪಟ್ಟಿಯಿಂದ ಅಂಚಿನಲ್ಲಿರುವ ಸಮುದಾಯಗಳ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಹೊರಗಿಡುವಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು. ಇದು ತಪ್ಪಾಗಿಯೂ ಅಥವಾ ಉದ್ದೇಶಪೂರ್ವಕವಾಗಿಯೂ ಸಂಭವಿಸಬಹುದು ಎಂದು ಅವರು ಹೇಳಿದ್ದರು. ಏಕೆಂದರೆ ಇಂತಹ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನಡೆಸದಿದ್ದರೆ ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳು ಇಂತಹ ಹೊರಗಿಡುವಿಕೆಗೆ ಹೆಚ್ಚು ಗುರಿಯಾಗುತ್ತಾರೆ.  

ಉದ್ದೇಶಿತ ಅಮಾನ್ಯೀಕರಣದ ಸಾಧ್ಯತೆಯೂ ಇದೆ. ಜಾತಿ, ಧರ್ಮ, ಭಾಷೆ, ರಾಜಕೀಯ ಒಲವು ಇತ್ಯಾದಿಗಳ ಆಧಾರದ ಮೇಲೆ ಮತದಾರರ ಪಟ್ಟಿಯನ್ನು ನಾಜೂಕಾಗಿ ನಿರ್ವಹಿಸಬಹುದು. 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಎಲ್ಲಾ ಅರ್ಹ ಮತದಾರರಲ್ಲಿ, ಮುಸ್ಲಿಮರು ಮತದಾರರ ಪಟ್ಟಿಯಿಂದ ಕಾಣೆಯಾಗುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದು ಹೇಳಿತ್ತು. 

2018ರ ಸೋಲಿನ ನಂತರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರಕಾರವು ಪಕ್ಷವನ್ನು ಟೀಕಿಸುವ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ ಎಂದು ತೆಲಂಗಾಣದ ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಆರೋಪಿಸಿದ್ದಾರೆ. ತೆಲಂಗಾಣ ಸರಕಾರವು ರಾಜ್ಯ ನಿವಾಸಿ ಡೇಟಾ ಹಬ್ (SRDH) ಅಡಿಯಲ್ಲಿ ಆಧಾರ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ವಿಳಾಸ, ಫೋನ್ ಸಂಖ್ಯೆ, ಪ್ಯಾನ್ ವಿವರಗಳು ಮತ್ತು ಕುಟುಂಬ ಸಂಬಂಧಗಳನ್ನು ಒಳಗೊಂಡಂತೆ ವ್ಯಾಪಕವಾದ ಮಾಹಿತಿಯನ್ನು ಹೊಂದಿತ್ತು. ಇದರ ದುರ್ಬಳಕೆಗೆಯಾಗಬಹುದು ಮತ್ತು ಮತದಾರರನ್ನು ಅವರ ಗುರುತಿನೊಂದಿಗೆ ಪ್ರತ್ಯೇಕಗೊಳಿಸುವ ಅಪಾಯಕಾರಿ ಪ್ರಕ್ರಿಯೆ ನಡೆದೀತೆಂಬ ಆತಂಕವನ್ನು ಅಲ್ಲಿನ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. 

ಆಧಾರ್ ಸ್ವತಃ ಸೀಮಿತ ವೈಯಕ್ತಿಕ ಮಾಹಿತಿಯನ್ನು ಹೊಂದಿರಬಹುದಾದರೂ, ಬೆಂಗಳೂರು ಪ್ರಕರಣದಲ್ಲಿ, ಜಾತಿ, ಉದ್ಯೋಗ, ಶಿಕ್ಷಣ ಇತ್ಯಾದಿಗಳ ವಿವರಗಳೊಂದಿಗೆ ಅದನ್ನು ಸಂಗ್ರಹಿಸಲಾಗಿದೆ. ಮತದಾರರು ಹಾಲಿ ಜನಪ್ರತಿನಿಧಿಗಳ ಬಗ್ಗೆ ಹೊಂದಿದ್ದ ಅಭಿಪ್ರಾಯವೇನೆಂಬುದನ್ನೂ ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ. ಇಂತಹ ಮತದಾರರಲ್ಲಿ ಹಲವರು ವಿವಿಧ ಸರಕಾರಿ ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುತ್ತಿರುವವರೂ ಆಗಿರಬಹುದು. ಆ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲಾಗಿರುವುದರಿಂದ, ಈಗ ಸಂಗ್ರಹಿಸಲಾಗಿರುವ ಡೇಟಾವು, ರಾಜಕೀಯ ಪಕ್ಷಗಳ ಬಗೆಗಿನ ಮತದಾರರ ಅಭಿಪ್ರಾಯದ ಆಧಾರದಲ್ಲಿ ಪರ ಇಲ್ಲವೇ ಸೇಡಿನ ಕ್ರಮಕ್ಕೂ ಕಾರಣವಾಗಬಹುದು. 

ಆಂಧ್ರಪ್ರದೇಶದಲ್ಲಿ 2019ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಮುನ್ನ, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದಕ್ಕೂ ಮುಂಚೆಯೇ, ಇದೇ ರೀತಿ ಡೇಟಾ ಕಳ್ಳತನದ ಹಗರಣ ಬೆಳಕಿಗೆ ಬಂದಿತ್ತು. ತೆಲುಗು ದೇಶಂ ಪಕ್ಷದ ಅಧಿಕೃತ ಆ್ಯಪ್ ಸೇವಾ ಮಿತ್ರವನ್ನು ಅಭಿವೃದ್ಧಿಪಡಿಸಿದ ‘ಐಟಿ ಗ್ರಿಡ್ಸ್’ ಎಂಬ ಖಾಸಗಿ ಸಂಸ್ಥೆಯು ಮತದಾರರ ಡೇಟಾ ಕಳವು ಮಾಡಿದ ಆರೋಪ ಎದುರಿಸಿತ್ತು. ಆ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಟಿಡಿಪಿಗೆ ಚುನಾವಣೆಯಲ್ಲಿ ಪರವಾದ ಫಲಿತಾಂಶ ಬರುವಂತೆ ಮಾಡಲು ಐಟಿ ಗ್ರಿಡ್ಸ್ ಸೇವಾ ಮಿತ್ರ ಅಪ್ಲಿಕೇಶನ್‌ಗಾಗಿ ಸರಕಾರಿ ಡೇಟಾಬೇಸ್‌ನಿಂದ ಆಧಾರ್, ವೋಟರ್ ಲಿಸ್ಟ್ ಮತ್ತು ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದ ಡೇಟಾವನ್ನು ಕದ್ದಿದೆ ಎಂದು ಆರೋಪಿಸಲಾಗಿತ್ತು. ಟಿಡಿಪಿ ಕಾರ್ಯಕರ್ತರು ಆ್ಯಪ್ ಬಳಸಿ ಮನೆ ಮನೆಗೆ ತೆರಳಿ ಜಾತಿ, ರಾಜಕೀಯ ಪಕ್ಷಗಳ ಪ್ರಾಶಸ್ತ್ಯ, ರಾಜಕೀಯ ಪಕ್ಷಗಳ ರೇಟಿಂಗ್ ಸೇರಿದಂತೆ ಬೂತ್ ಮಟ್ಟದ ಮತದಾರರ ಡೇಟಾ ಸಂಗ್ರಹಿಸಿ ಆ್ಯಪ್‌ಗೆ ಅಪ್ಲೋಡ್ ಮಾಡುತ್ತಿದ್ದರೆಂಬುದು ಮತ್ತು ಆ್ಯಪ್ ಮತದಾರರ ಸಮಗ್ರ ಪ್ರೊಫೈಲ್‌ಗಳನ್ನು ಅವರ ಪಕ್ಷವಾರು ಸಂಬಂಧಗಳನ್ನು ಗುರುತಿಸುವ ಆಯ್ಕೆಯನ್ನು ಹೊಂದಿದೆ ಎಂಬುದು ಬಯಲಾಗಿತ್ತು. ಈಗ ಬೆಂಗಳೂರಿನಲ್ಲಿ ‘ಚಿಲುಮೆ’ ಎನ್‌ಜಿಒ ನಡೆಸಿರುವ ಅಕ್ರಮ ಅದೇ ರೀತಿಯಲ್ಲಿದೆ ಎನ್ನಲಾಗುತ್ತಿದೆ. 

ಹೀಗೆ ಮತದಾರರನ್ನು ಅವರ ಗುರುತಿನೊಂದಿಗೆ ದಾಖಲಿಸಿಕೊಳ್ಳುವ ರೀತಿಯು, ಮತದಾರರಿಗೆ ಉದ್ದೇಶಿತ ಸಂವಹನವನ್ನು ಕಳುಹಿಸಲು ಸಹ ಬಳಕೆಯಾಗುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ, ಪುದುಚೇರಿಯಲ್ಲಿ ಬಿಜೆಪಿ ಮತದಾರರ ಆಧಾರ್ ಡೇಟಾದಿಂದ ಫೋನ್ ಸಂಖ್ಯೆಗಳನ್ನು ಕದ್ದು, ಪ್ರಚಾರಕ್ಕೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸಲು ವಾಟ್ಸ್‌ಆ್ಯಪ್ ಗುಂಪುಗಳಿಗೆ ಸೇರಿಸಿದ್ದು ಸುದ್ದಿಯಾಗಿತ್ತು. ಮದ್ರಾಸ್ ಹೈಕೋರ್ಟ್ ಈ ಆರೋಪದಲ್ಲಿನ ಸತ್ಯಾಂಶವನ್ನು ಗುರುತಿಸಿತ್ತಲ್ಲದೆ, ಆಧಾರ್ ವಿವರಗಳು ಅಸುರಕ್ಷಿತವಾಗಿರುವುದಕ್ಕೆ UIDAIಯನ್ನು ತರಾಟೆಗೆ ತೆಗೆದುಕೊಂಡಿತ್ತು. 

ಆಧಾರ್ ಕಾಯ್ದೆಯೇ ಹೇಳುವಂತೆ ಆಧಾರ್ ಪೌರತ್ವದ ಪುರಾವೆ ಅಲ್ಲ. ಇದನ್ನು ಇಲ್ಲಿನ ನಿವಾಸಿಗಳಿಗೆ ನೀಡಲಾಗುತ್ತದೆಯೇ ಹೊರತು ಇದು ನಾಗರಿಕತ್ವದ ಗುರುತಲ್ಲ. ಮತದಾನದ ಹಕ್ಕಿಗೂ ಆಧಾರ್‌ಗೂ ಯಾವ ಸಂಬಂಧವೂ ಇಲ್ಲ. ಅರ್ಜಿ ಸಲ್ಲಿಸುವ ಮೊದಲು 12 ತಿಂಗಳುಗಳಲ್ಲಿ ಕನಿಷ್ಠ 182 ದಿನಗಳ ಕಾಲ ಭಾರತದಲ್ಲಿ ವಾಸಿಸುವ ವ್ಯಕ್ತಿ ಎಂದು ನಿವಾಸಿಯನ್ನು ವ್ಯಾಖ್ಯಾನಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಭಾರತೀಯ ನಾಗರಿಕರು ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಕಾನೂನು ತಜ್ಞರು ಮತ್ತು ಕಾರ್ಯಕರ್ತರು ಗಮನಿಸುವಂತೆ, ನಾಗರಿಕತ್ವದ ಆಧಾರದ ಮೇಲಿನ ಮತ್ತು ನಿವಾಸಿಯೆಂಬುದರ ಆಧಾರದ ಮೇಲಿನ ಎರಡು ವಿಭಿನ್ನ ಡೇಟಾಬೇಸ್‌ಗಳನ್ನು ಲಿಂಕ್ ಮಾಡುವ ಮತ್ತು ಇನ್ನೊಂದರ ಆಧಾರದ ಮೇಲೆ ಪಟ್ಟಿಯನ್ನು ಶುದ್ಧಗೊಳಿಸುವ ಕ್ರಮವೇ ತಳಬುಡವಿಲ್ಲದ್ದಾಗಿದೆ.
 ಕೃಪೆ: thenewsminute

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)