ನಾಟಕವಲ್ಲದ ನಾಟಕವೊಂದರ ಕನಸುಗಳು
ರಾಷ್ಟ್ರೀಯತೆಯೆಂದರೆ ಜಾತೀಯತೆಯಲ್ಲ; ಮತಾಂಧತೆಯೂ ಅಲ್ಲ. ಎಸ್.ಎಲ್. ಭೈರಪ್ಪನವರು ಹೇಳಿದರೆನ್ನಲಾದ ಮತ್ತು ಕಾರ್ಯಪ್ಪನವರು ಉಲ್ಲೇಖಿಸಿದ ‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ.’ ಎಂಬ ಮಾತುಗಳು ಈ ಕೃತಿಯ ಮಟ್ಟಿಗಂತೂ ಸತ್ಯ.
‘ಮಹಾಭಾರತ’ ಎಂದಾಕ್ಷಣ ಕೃಷ್ಣದೇವರ ನೆನಪಾಗಬೇಕು. ಹಾಗಿದೆ ಭಾರತೀಯ ಆಸ್ತಿಕ ಪರಂಪರೆ. ಆದರೆ ‘ವಿಕ್ರಮಾರ್ಜುನ ವಿಜಯ’ವೆಂಬ ಕನ್ನಡ ಮಹಾಭಾರತವನ್ನು ಬರೆದ ಕನ್ನಡದ ಆದಿಕವಿ ಪಂಪ ತನ್ನ ಕಾವ್ಯದ ಕೊನೆಗೆ ಸ್ಮರಿಸುವುದಾದರೂ ಯಾರನ್ನು? ‘‘ಚಲದೊಳ್ ದುರ್ಯೋಧನನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ ಬಲದೊಳ್ ಮದ್ರೇಶನತ್ಯು ನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ’’ (ಚಲದಲ್ಲಿ ದುರ್ಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ ಬಲದಲ್ಲಿ ಶಲ್ಯನೂ ಗುಣೌನ್ನತಿಯಲ್ಲಿ ಭೀಷ್ಮನೂ ಚಾಪವಿದ್ಯಾಕೌಶಲದಲ್ಲಿ ದ್ರೋಣಾಚಾರ್ಯನೂ ಸಾಹಸದ ಮಹಿಮೆಯಲ್ಲಿ ಅರ್ಜುನನೂ ಧರ್ಮದಲ್ಲಿ ಪರಿಶುದ್ಧ ಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಭಾರತವು ಲೋಕಪೂಜ್ಯವಾಗಿದೆ. ಗದ್ಯಾನುವಾದ: ಎನ್.ಅನಂತರಂಗಾಚಾರ್). ತನ್ನ ಪೋಷಕನಾದ ಅರಿಕೇಸರಿಯನ್ನು ನಾಯಕನಾಗಿಸಿ ಈ ಕಾವ್ಯವನ್ನು ಬರೆದ ದಳಪತಿ ಪಂಪ ತನ್ನ ದೊರೆ ಅರಿಕೇಸರಿಗೆ ಪರ್ಯಾಯವಾಗಿ ರೂಪಿಸಿದ ಅರ್ಜುನನನ್ನು ಅಥವಾ ಹಲವು ಶತಮಾನಗಳ ಬಳಿಕ ಬಂದ ಕುಮಾರವ್ಯಾಸನಂತೆ ಅರ್ಜುನನಿಗೆ ಸದಾ ನೆರಳಾಗಿ ನಿಂತ, ಬೆಂಬಲದ ಬಲವನ್ನು ನೀಡಿದ ಕೃಷ್ಣನನ್ನು ಹೊಗಳಬಹುದಿತ್ತು. ಆದರೆ ಪಂಪ ಕಾವ್ಯಗುಣಗ್ರಾಹಿ; ಕಲಾತ್ಮಕತೆಯನ್ನು ಬಿಟ್ಟುಕೊಡದ ಅಪ್ಪಟ ಕಲಾವಿದ. ಸಾರ್ವಕಾಲಿಕ ಮಾದರಿ. ಆತ ಯಾವುದೇ ಪಕ್ಷದ ಪರವಾಗಿ ವಕೀಲಿಕೆ ಮಾಡಬಂದವನಲ್ಲ. ವ್ಯಾಸರಂತೆ ತಣ್ಣಗಿನ ಬೆಂಕಿಯ ಬೆಳಕಿನಲ್ಲಿ ಎಲ್ಲವನ್ನೂ ಕಂಡವನು.
ರನ್ನನೂ ಈ ವಿಚಾರದಲ್ಲಿ ಹಿಂದೆ ಬಿದ್ದವನಲ್ಲ. ಸಾಹಸಭೀಮನ ವಿಜಯವೇ ಕೇಂದ್ರವಾದರೂ ಸತ್ಯಕ್ಕೆ, ಸತ್ವಕ್ಕೆ, ಮಸಿಬಳಿದವನಲ್ಲ. ಏಕಾಂಗಿಯಾಗಿ ಯುದ್ಧಭೂಮಿಯಲ್ಲಿ ನಡೆಯುವ ಸುಯೋಧನನು ಅಭಿಮನ್ಯುವಿನ ಶವದ ಮುಂದೆ ಬಾಗಿ ‘‘ಅಸಮಬಲ ಭವದ್ವಿಕ್ರಮ ಮಸಂಭವಂ ಪೆರರ್ಗೆ ನಿನ್ನನಾನಿನಿಂ ಪ್ರಾ ರ್ಥಿಸುವೆನಭಿಮನ್ಯು ನಿಜಸಾ ಹಸೈಕೇಶಾನುಮರಣ ಮೆಮಗಕ್ಕೆ ಗಡಾ ’’ (ಅದ್ವಿತೀಯ ಬಲಶಾಲಿ ಅಭಿಮನ್ಯುಕುಮಾರನೆ, ನಿನ್ನ ಪರಾಕ್ರಮ ಇತರರಿಗೆ ಅಸಾಧ್ಯ. ನಾನು ನಿನ್ನಲ್ಲಿ ಇಷ್ಟನ್ನೇ ಬೇಡಿಕೊಳ್ಳುತ್ತೇನೆ-ನಿನ್ನ ಸಾಹಸದಲ್ಲಿ ಒಂದಂಶವಾದರೂ ನಮ್ಮಲ್ಲಿದ್ದರೆ ಅದಕ್ಕನುಗುಣವಾದ ವೀರಮರಣ ನಮಗೆ ಒದಗಿ ಬರಲಿ) ಭಾರತೀಯ ಪರಂಪರೆಯ ದುರ್ಜನರೂ ಗುಣಗೌರವಿಗಳು.
ಕಾರ್ಗಿಲ್ ಕದನದಲ್ಲಿ ಹೋರಾಡಿದ ಒಬ್ಬ ನಿವೃತ್ತ ಸೈನ್ಯಾಧಿಕಾರಿ ತಮ್ಮ ಅನುಭವವನ್ನು ವಿವರಿಸುತ್ತ ಹೇಳಿದ ಮಾತುಗಳು: ‘‘ಒಬ್ಬ ಪಾಕಿಸ್ತಾನಿ ಯೋಧನನ್ನು ಕೊಂದು ಬಳಿಕ ಭಾರತೀಯ ಯೋಧರಲ್ಲೊಬ್ಬ ಆ ಶವವನ್ನು ಹಿಂಸಿಸಲು ಉದ್ಯುಕ್ತನಾದನಂತೆ. ಆಗ ಈ ಹಿರಿಯ ಅಧಿಕಾರಿ ನಾವು ನಮ್ಮ ದೇಶರಕ್ಷಣೆಗೋಸ್ಕರ ವೈರಿ ರಾಷ್ಟ್ರದ ಈ ಯೋಧನನ್ನು ಕೊಂದಿದ್ದೇವೆ. ಅವನ ಕುರಿತು ನಮಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ; ಆತ ಈಗ ದೋಷಿಯೂ ಅಲ್ಲ, ಆತನನ್ನು ಗೌರವಿಸೋಣ’’ ಎಂದರು. ಇದು ಉದಾತ್ತವಾದ ಮತ್ತು ಧೀರರಿಗೆ ಮಾತ್ರ ಪ್ರಾಪ್ತವಾಗುವ ಇನ್ನೊಂದು ಗುಣ. ಆಧುನಿಕ ಕರ್ನಾಟಕ, ಅಷ್ಟೇಕೆ ಭಾರತದ ಚರಿತ್ರೆಯಲ್ಲಿ ಹೈದರಲಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಆತನ ಮಗ ಟಿಪ್ಪುಸದಾ ಹೊಳೆಯುವ ತಾರೆಗಳು. ಟಿಪ್ಪು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದವನು. ಅವರನ್ನು ಈ ದೇಶದಿಂದ ಓಡಿಸುವ ಕನಸನ್ನು ಕಂಡವನು. ವಸಾಹತುಶಾಹಿ ಆಡಳಿತಕ್ಕೆ ಮರಾಠರು ಮತ್ತು ಹಲವು ಮುಸ್ಲಿಮ್ ಅರಸರೇ ಶರಣಾಗಿದ್ದಾಗ ಮುಳ್ಳಾಗಿ ನಿಂತವನು ಟಿಪ್ಪು. ಅತನ ಅಂತ್ಯವನ್ನು ಎಲ್ಲರಿಗಿಂತಲೂ ಮಿಗಿಲಾಗಿ ಅಪೇಕ್ಷಿಸಿದವರು ಬ್ರಿಟಿಷರು. ಇಂತಹ ಟಿಪ್ಪು ರಾಜಸತ್ತೆಗನುಗುಣವಾದ ದೋಷಗಳನ್ನು ಹೊಂದಿರಲಿಲ್ಲ ಎನ್ನುವಂತಿಲ್ಲ. ರಾಜಸತ್ತೆ ಅಳಿಯುವ ವರೆಗೂ ಬಹುತೇಕ ಎಲ್ಲರೂ ತಮ್ಮ ಒಳಿತಿಗಾಗಿಯೂ ಉಳಿವಿಗಾಗಿಯೋ ಇತರರಿಗೆ ಹಿಂಸೆ ಕೊಟ್ಟವರೇ. ಅಶೋಕಚಕ್ರ ಖ್ಯಾತಿಯ ಅಶೋಕ ದೊರೆಯೂ ಮೂರು ಲಕ್ಷ ಕಳಿಂಗರನ್ನು ಹತ್ಯೆ ಮಾಡಿದವನೇ.
ಕಾರ್ನಾಡರ ‘ಟಿಪ್ಪುಸುಲ್ತಾನ ಕಂಡ ಕನಸು’ ನಾಟಕದ ಕೃತಿ ವಿಮರ್ಶೆಯಲ್ಲಿ (ಪ್ರಜಾವಾಣಿ, 17.06.2001) ಡಾ.ಸಿ.ಎನ್ ರಾಮಚಂದ್ರನ್ ಹೇಳುವ ಈ ಮಾತುಗಳು ಮಹತ್ವದವು: ‘‘ಅಂದಿನ ಕಾಲದಲ್ಲಿ ಎಲ್ಲಾ ರಾಜ-ನವಾಬರೂ ‘ತಮ್ಮ’ ‘ರಾಜ್ಯ’ ದಲ್ಲಿ ನ್ಯಾಯಪರರಾಗಿ ಮತ್ತು ಪ್ರಜಾ ಹಿತೈಷಿಗಳಾಗಿ ಇರಬೇಕೆಂದು ನಂಬುತ್ತಿದ್ದರು. ಆದರೆ ‘ಶತ್ರು’ವಿನ ಬಗ್ಗೆ ಮತ್ತು ‘ಶತ್ರುರಾಜ್ಯ’ದ ಬಗ್ಗೆ ಈ ನೀತಿ ಅನ್ವಯಿಸುತ್ತಿರಲಿಲ್ಲ. ಶತ್ರುಗಳಿಗೆ ಮತ್ತು ಶತ್ರುರಾಜ್ಯದಲ್ಲಿ ಏನು ಮಾಡಿದರೂ ಅದು ಸಮರ್ಥನೀಯವಾಗುತ್ತಿತ್ತು. ಈ ಕಾರಣದಿಂದಲೇ ಅತ್ಯಂತ ಧರ್ಮನಿಷ್ಠನಾದ ಶಿವಾಜಿಯೂ ಸೂರತ್ ಅನ್ನು ಕೊಳ್ಳೆ ಹೊಡೆಯಲು ಹಿಂದೆಮುಂದೆ ನೋಡಲಿಲ್ಲ. ಮರಾಠಾ ಸರದಾರರು ತುಳಜಾ ಭವಾನಿಯ ಮಹಾಭಕ್ತರಾಗಿದ್ದೂ ‘ಶತ್ರುರಾಜ್ಯ’ದಲ್ಲಿದ್ದ ಶೃಂಗೇರಿ ಮಠವನ್ನು ಸುಲಿಗೆ ಮಾಡಿದರು ಮತ್ತು ಕಟ್ಟಾ ಇಸ್ಲಾಮ್ ಅನುಯಾಯಿಯಾದ ಔರಂಗಜೇಬ್ ಬಿಜಾಪುರ ಸುಲ್ತಾನ ಇತ್ಯಾದಿ ಇಸ್ಲಾಮ್ ಧರ್ಮದ ಸುಲ್ತಾನರ ವಿರುದ್ಧವೇ ಯುದ್ಧ ಮಾಡುವುದು ತಪ್ಪುಎಂದೆಣಿಸಲಿಲ್ಲ. ಇದೇ ನೆಲೆಯಲ್ಲಿ ಟಿಪ್ಪು ತನ್ನ ‘ಶತ್ರು’ಗಳಾದ ಬ್ರಿಟಿಷರ ಬಗ್ಗೆ ಮತ್ತು ದಂಗೆಯೆದ್ದ ನಾಯರ್ ಜನಾಂಗದ ಬಗ್ಗೆ ತುಂಬಾ ಕ್ರೂರವಾಗಿ ವರ್ತಿಸಿದನು ಮತ್ತು ಮತಾಂತರವೂ ಒಂದು ಬಗೆಯ ‘ಶಿಕ್ಷೆ’ಯೇ ಆಗಿತ್ತು. ಮುಹಿಬ್ಬುಲ್ ಹಸನ್ ‘ಟಿಪ್ಪು ವಿಧಿಸಿದ ಮತಾಂತರದ ಸ್ವರೂಪ ‘ರಾಜಕೀಯ’ವಾಗಿದ್ದಿತೇ ಹೊರತು ಮತೀಯವಾಗಿರಲಿಲ್ಲ’ ಎಂದು ಹೇಳುವುದು ಈ ನೆಲೆಯಲ್ಲಿಯೇ.’’ ಟಿಪ್ಪುವಿನ ಮರಣಾನಂತರ ಆತನನ್ನು ಬ್ರಿಟಿಷರು ಅವಮಾನಿಸಲಿಲ್ಲ.
ಸಕಲ ರಾಜಗೌರವದೊಂದಿಗೆ ಆತನನ್ನು ಸನ್ಮಾನಿಸಲಾಯಿತು. ಬ್ರಿಟಿಷರು ಆತನ ಅನೇಕ ಸ್ವತ್ತುಗಳನ್ನು ತಮ್ಮ ದೇಶಕ್ಕೆ ಸಾಗಿಸಿದರು. ಈ ಪೈಕಿ ಆತನ ಮೆಚ್ಚಿನ ಆಟಿಗೆ (ಬ್ರಿಟಿಷ್ ಸೈನಿಕನೊಬ್ಬನನ್ನು ಹಿಂಸಿಸುತ್ತಿರುವ ಹುಲಿ)ಯನ್ನು ಇಂದಿಗೂ ಬ್ರಿಟನ್‌ನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿದ್ದಾರೆ. ಟಿಪ್ಪು ಸತ್ತ (1799 ಮೇ 4) ಸುದ್ದಿ ವಿಶ್ವದೆಲ್ಲೆಡೆ ಪ್ರಸಾರವಾದದ್ದೇ ಆತನ ವರ್ಣರಂಜಿತ ವ್ಯಕ್ತಿತ್ವಕ್ಕೆ ಸಾಕ್ಷಿ. ಆತನ ಕುರಿತು ಬಂದ, ಬರುತ್ತಿರುವ ಬಹುತೇಕ ಟೀಕೆಗಳು ಸ್ವದೇಶದ್ದು; ಇತ್ತೀಚೆಗಿನದ್ದು; ಮತೀಯವಾದದ್ದು; ಮೂಲಭೂತವಾದಿ ಮತಾಂಧರದ್ದು. ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟವಾಗದಂತೆ ಭಗ್ನಗೊಳಿಸುವ ಮನಸ್ಥಿತಿಯ ಕಳೆಗಳದ್ದು. ಟಿಪ್ಪುವಿನ ಕುರಿತು ಬಹಳಷ್ಟು ಕೃತಿಗಳು ಬಂದಿವೆ. ಅವ್ಯಾವುದೂ ಆತನನ್ನು ಖಳನಾಯಕನಂತೆ ಚಿತ್ರಿಸಲಿಲ್ಲ. ಬಹುಪಾಲು ಧೀರೋದ್ಧಾತ ನಾಯಕನಂತೆಯೇ ಆತ ಚರಿತ್ರೆಯಲ್ಲಿ ದಾಖಲಾಗಿದ್ದಾನೆ. ಹೈದರಲಿ ಮತ್ತು ಟಿಪ್ಪುವಿನ ಕುರಿತಂತೆ ಬಂದಿರುವ ಆದರೆ ವಿದ್ವತ್ ವಲಯದಲ್ಲಿ ದಾಖಲಾಗದ ಒಂದು ಹಳೆಯ ಗ್ರಂಥವೆಂದರೆ ಶ್ರೀರಂಗಪಟ್ಟಣದ ಖಾಝಿಯಾಗಿದ್ದ ಮಿಸಾಕೀನ್ ನಾಸಿರುದ್ದೀನ್ ಎಂಬವರು ಗುಲಾಂ ಮುಹಮ್ಮದ್ ಜುನೈದಿ ಎಂಬವರಿಂದ ಮಾಹಿತಿ ಪಡೆದು 11.11.1891ರಲ್ಲಿ ಬರೆದ ‘ಜಂಗ್ ನಾಮಾ’. ಇದರ ಮೂಲ ಹಿಂದೂಸ್ಥಾನಿ ಭಾಷೆಯ ಮುನ್ಷಿ ಮುಹಮ್ಮದ್ ಖಾಸಿಂ ಎಂಬವರು ಬರೆದ ‘ತವಾರಿಬ ಹೈದರ’. ಇದನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಂಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್‌ನ್ನು ಮೆಚ್ಚಿ ಕೊಂಡಾಡಿದ ಮಾಸ್ತಿ ಟಿಪ್ಪುವಿನ ವ್ಯಕ್ತಿತ್ವಕ್ಕೆ ಅಪಚಾರವನ್ನೊಡ್ಡಲಿಲ್ಲ. ಟಿಪ್ಪು ಜಾನಪದ ನಾಯಕನೂ ಹೌದು. ‘ಭೇಷಕ್ ತಮಾಷಾ, ಟೈಗರ್‌ನಿಶಾನಾ ಟಿಪ್ಪುಸುಲ್ತಾನನ ಬಿರುದಾಯ್ತು ಮಸಲತ್ ಮಾಡಿದ ಮೀರ್‌ಸಾದಕನಿಗೆ ದೇಶದ್ರೋಹಿಯೆಂಬೆಸರಾಯ್ತು!’ 2010ರಲ್ಲಿ ಯಡಿಯೂರಪ್ಪನವರ ನಾಯಕತ್ವದ ಆಗಿನ ಬಿಜೆಪಿ ಸರಕಾರ ತನ್ನ ಪುರಾತತ್ವ ಇಲಾಖೆಯ ಮೂಲಕ ‘ಟಿಪ್ಪು ಸುಲ್ತಾನ್- ದಿ ಟೈಗರ್ ಆಫ್ ಮೈಸೂರ್’ ಎಂಬ, ನಾಡಿನ ಮತ್ತು ಹೊರನಾಡುಗಳ ವಿದ್ವಾಂಸರಿಂದ ಬರೆಯಲ್ಪಟ್ಟ, ಸಂಶೋಧನಾ ಮಹತ್ಕೃತಿಯನ್ನು ಹೊರತಂದಿತು. ಇದರ ಮುನ್ನುಡಿಯಲ್ಲಿ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಗಿನ ಕಾರ್ಯದರ್ಶಿಯಾಗಿದ್ದ ಬಿ.ಎಂ.ಜಯರಾಮರಾಜೇ ಅರಸು ಅವರು ‘‘ಟಿಪ್ಪುವಿನ ಹೊರತು ಯಾವ ರಾಜರೂ ತಮ್ಮ ರಾಜ್ಯಗಳನ್ನು ವಸಾಹತುಶಾಹಿಯಿಂದ ಆಧುನಿಕತೆಗೆ ಒಯ್ಯಲು ಪ್ರಯತ್ನಿಸಲಿಲ್ಲ ಮತ್ತು ಈ ಕೃತಿಯು ಟಿಪ್ಪು ಸುಲ್ತಾನನ ಕುರಿತ ಸಂಶಯವನ್ನು ಬಗೆಹರಿಸಿ ಆತನ ಹಿರಿಯ ವ್ಯಕ್ತಿತ್ವವನ್ನು ಗುರುತಿಸಲು ಸಹಕಾರಿಯಾಗಿದೆ’’ ಎಂಬ ಉತ್ತಮ ವಿವರಗಳನ್ನು ಗುರುತಿಸಿದ್ದಾರೆ. ಟಿಪ್ಪುವಿನ ಕುರಿತ ಒಳ್ಳೆಯ ಓದು ಇದು.
ಟಿಪ್ಪು ಕುರಿತು ಅನೇಕ ಇತರ ಸಾಹಿತ್ಯ ಕೃತಿಗಳು ಬಂದಿವೆ. (ಕಾದಂಬರಿಗಳು ಬಂದದ್ದು ಗೊತ್ತಾಗುವುದಿಲ್ಲ.) ಕಾರ್ನಾಡರು 1997ರಲ್ಲಿ ಭಾರತದ ಸ್ವಾತಂತ್ರ್ಯದ ಸುವರ್ಣಮಹೋತ್ಸವದ ಸಂದರ್ಭ ಬಿಬಿಸಿಗಾಗಿ ಬರೆದು ಜತಿಂದರ್ ವರ್ಮ ನಿರ್ದೇಶಿಸಿದ ಇಂಗ್ಲಿಷ್ ನಾಟಕದ ಕನ್ನಡ ರೂಪ ‘ಟಿಪ್ಪು ಸುಲ್ತಾನ ಕಂಡ ಕನಸು’. ಇದಕ್ಕೆ ಮೊದಲೇ 1989ರಲ್ಲಿ ಎಚ್.ಎಸ್. ಶಿವಪ್ರಕಾಶ್ ‘ಸುಲ್ತಾನ ಟಿಪ್ಪು’ ಎಂಬ ನಾಟಕಕೃತಿಯನ್ನು ಪ್ರಕಟಿಸಿದ್ದರು. ಇವೆರಡೂ ರಂಗಪ್ರಯೋಗದಲ್ಲೂ ಸಾಹಿತ್ಯಕೃತಿಯಾಗಿಯೂ ಯಶಸ್ವಿಯಾದ ನಾಟಕಗಳು. ಇವುಗಳ ಕಲಾತ್ಮಕತೆಯಿಂದಾಗಿ ನಾಟಕಗಳು ಎಲ್ಲೂ ಟಿಪ್ಪು ಪರ ಅಥವಾ ವಿರೋಧವಾಗಿ ನೀಡಿದ ಸೈದ್ಧಾಂತಿಕ ತುಣುಕಾಗಿ ಬರಲಿಲ್ಲ; ಸರಕಾರಿ ಇಲಾಖೆಗಳು ತಮ್ಮ ಯೋಜನೆಗಳ ಪ್ರಚಾರಕ್ಕಾಗಿ ಸಿದ್ಧಪಡಿಸಿ ಆಕಾಶವಾಣಿ ಮುಂತಾದ ಮಾಧ್ಯಮಗಳಲ್ಲಿನ ನಾಟಕಗಳಂತಿರಲಿಲ್ಲ. ಈ ಮುಕ್ತ ದೃಷ್ಟಿಕೋನವು ಸಂಗೀತ ನಾಟಕಗಳ ಕಾಲದಿಂದ ಪ್ರಯೋಗಿಸಲ್ಪಟ್ಟ ಟಿಪ್ಪುಸುಲ್ತಾನನ ಚರಿತ್ರೆಯಿಂದಲೂ ಸಾಗಿಬಂದಿದೆ. ಈಗ ಕೆಲವು ವರ್ಷಗಳಿಂದ ಎಲ್ಲವನ್ನೂ ರಾಜಕೀಯಗೊಳಿಸುವ ಹೊಸ ಪರಿಭಾಷೆ ಚಾಲ್ತಿಯಲ್ಲಿದೆ.
ಮೈಸೂರಿನ ರಂಗಾಯಣವೇ ಮುಂತಾದ ನಾಟಕಕೇಂದ್ರಗಳು ಸರಕಾರದ ಗುಲಾಮರಂತೆ ಬಲಪಂಥೀಯ ಮೂಲಭೂತವಾದದ ಸರಕನ್ನು ಒಯ್ಯುವ ಕತ್ತೆಗಳಾಗಿವೆ. ಸರಕಾರ ಮತ್ತು ಅದರ ಚೇಲಗಳು ಇಂತಹ ಪ್ರಯೋಗವನ್ನು ಹೇರುವುದು ಅಚ್ಚರಿಯ ವಿಚಾರವಲ್ಲ. ಉರುಟು ಉಬ್ಬುಗಳನ್ನು ಕಂಡಾಕ್ಷಣ ಇವು ಗುಂಬಜಗಳು ಎಂದು ಕನಸುಕಾರುವ ಜನಪ್ರತಿನಿಧಿಗಳ ತಂಡವೇ ಇದೆ. ಇವನ್ನೆಲ್ಲ ನಾಶಮಾಡಹೊರಟರೆ ಕೊಡಗಿನ ಮಡಿಕೇರಿಯಲ್ಲಿ ಎರಡು ಶತಮಾನಗಳಿಗೂ ಮಿಕ್ಕಿ ಅಸ್ತಿತ್ವದಲ್ಲಿರುವ ಓಂಕಾರೇಶ್ವರ ದೇವಾಲಯವನ್ನು ಅದರಲ್ಲಿರುವ ಮಿನಾರುಗಳಿಗಾಗಿ, ಗುಂಬಜಗಳಿಗಾಗಿ ಒಡೆಯಬೇಕಾಗಿ ಬಂದೀತು. ಈ ಹಾದಿಯಲ್ಲಿ ಅಡ್ಡಂಡ ಕಾರ್ಯಪ್ಪನವರ ಹೊಸ ನಾಟಕ ‘ಟಿಪ್ಪು ನಿಜಕನಸುಗಳು’ ಪ್ರಕಟವಾಗಿದೆ ಮತ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕವೆಂಬಂತೆ ಪೊಲೀಸ್ ರಕ್ಷಣೆಯಲ್ಲಿ ರಂಗ ಪ್ರಯೋಗವನ್ನೂ ಕಂಡಿದೆ. ಕಾರ್ಯಪ್ಪನವರು ಒಳ್ಳೆಯ ನಟ. ಪ್ರತಿಭಾವಂತ. ನೀನಾಸಂ ಸಂಸ್ಥೆಯಿಂದ ತರಬೇತಿ ಹೊಂದಿದವರು. ಆದರೆ ಯಾವುದೇ ಶಿಕ್ಷಣವು ವ್ಯಕ್ತಿಗೆ ವಿವೇಕವನ್ನು ಕರುಣಿಸಬೇಕಾದ್ದಿಲ್ಲ ಎಂಬುದಕ್ಕೆ ಕಾರ್ಯಪ್ಪಒಳ್ಳೆಯ ಉದಾಹರಣೆ. ಅವರು ಹಲವಾರು ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಅವೆಲ್ಲ ಈ ರೀತಿಯ ರಾಜಸೇವಾ ಮನೋಭಾವವನ್ನು ಹೊಂದಿರಲಿಲ್ಲ. (ಅವರದೊಂದು ಕೃತಿಗೆ ನನ್ನ ಮುನ್ನುಡಿಯಿದೆ.) ಆಗ ಅವರು ಒಬ್ಬ ಕಲಾವಿದ ಮತ್ತು ಅರೆಕಾಲಿಕ ಪತ್ರಕರ್ತರಾಗಿದ್ದರು. ಆದರೆ ಮುಂದೆ ರಾಜಕೀಯಕ್ಕೆ ಧುಮುಕಿ ಹಲವಾರು ಪಕ್ಷಗಳಲ್ಲಿ ತೇಲಿ-ಮುಳುಗಿ ಕೊನೆಗೆ ಭಾಜಪದ ಪ್ರಬಲ ಸರದಾರರಾದರು. ಕಲೆಯ ಹಿನ್ನೆಲೆಯಲ್ಲಿ ಅವರು ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾಗಿರಲಿಕ್ಕಿಲ್ಲ.
ಅವರ ಪುನರ್ವಸತಿಗೆ ಅವರ ನಾಟಕ, ನಟನಾ ಚರಿತ್ರೆ ನೆಪವಾಯಿತು. ರಂಗಾಯಣ ನಿಯುಕ್ತಿಯ ಬಳಿಕದ ಅವರ ಚಟುವಟಿಕೆಗಳು ರಾಜ್ಯಾದ್ಯಂತ ಪ್ರಸಾರ-ಪ್ರಚಾರವಾಗಿವೆ; ಜಗಜ್ಜಾಹೀರಾಗಿವೆ. ಕಾರ್ಯಪ್ಪನವರ ಹೊಸ ಕೃತಿಯ ಬಗ್ಗೆ ಹೇಳುವುದಾದರೆ- ಮುಖಪುಟ ವಿಕಾರವಾಗಿದೆ. ಕಲಾವಿದರ ಮುಖಕ್ಕೆ ಮಸಿಬಳಿದಂತಿದೆ. ಕೆ.ವಿ.ಅಯ್ಯರ್ ಬರೆದ ‘ರೂಪದರ್ಶಿ’ ಕಾದಂಬರಿಯ ಯೇಸುವಿಗೆ ರೂಪದರ್ಶಿಯಾದವನು ಜುಡಾಸಗೆ ರೂಪದರ್ಶಿಯಾದಂತಿದೆ. ಎಸ್.ಎಲ್.ಭೈರಪ್ಪನವರ ಮುನ್ನುಡಿಯ ಆವರಣವಿದೆ. ಇದು ರಾಷ್ಟ್ರೀಯತೆಯೆಂಬ ಹೆಸರಿನಲ್ಲಿ ಹಿಂದುತ್ವದ ಪ್ರಚಾರಕ್ಕೆ ಮತ್ತು ಹಿಂದುತ್ವದ ರಾಜಕಾರಣಿಗಳ ಧರ್ಮದ್ವೇಷವನ್ನು ಎತ್ತಿಹಿಡಿಯುವುದಕ್ಕೆ ಬಂದದ್ದೇ ಆಗಿರುವ ಇನ್ನೊಂದು ದುರಂತ. ಭೈರಪ್ಪನವರು ತಮ್ಮ ಹಿರಿತನಕ್ಕೆ, ವಯಸ್ಸಿಗೆ ತಕ್ಕುದಲ್ಲದ ರೀತಿಯಲ್ಲಿ ತಲವಾರು ಬೀಸಿದಂತೆ ತಮ್ಮ ಸಿಟ್ಟನ್ನೆಲ್ಲ ಕಾರಿಕೊಂಡಿದ್ದಾರೆ.
‘‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ’’ ಎಂಬ ಅವರ ಮಾತನ್ನು ಉಲ್ಲೇಖಿಸುವ ಮೂಲಕ ಕೃತಿಕಾರರು ಭೈರಪ್ಪನವರ ಮುನ್ನುಡಿಯನ್ನು ಮತ್ತು ತಮ್ಮ ಕೃತಿಯನ್ನು ಅಣಕಿಸಿದ್ದಾರೆ. ಕೃತಿಯ ಕುರಿತು ಬಹಳಷ್ಟು ಏನೂ ಹೇಳುವಂತಿಲ್ಲ. ಐತಿಹಾಸಿಕ ವಸ್ತುವನ್ನು ಆಯ್ಕೆ ಮಾಡುವವರು ಅದನ್ನು ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಖ್ಯಾನಿಸುವುದು ಬೇರೆ; ತಿರುಚುವುದು ಬೇರೆ. ಮುಖಪುಟದಿಂದ ಮೊದಲ್ಗೊಂಡು ಕೊನೆಯವರೆಗೆ ಇಲ್ಲಿ ಟಿಪ್ಪು ಎಂಬ ವ್ಯಕ್ತಿಯ ಮೂರ್ತ ಮತ್ತು ಅಮೂರ್ತ ಸ್ವರೂಪವನ್ನು ತಿರುಚಲಾಗಿದೆ. ‘ರಾಜನಿಗೊಂದು ಧರ್ಮವಿದೆ. ಅದು ಹಿಂದೂ, ಮುಸ್ಲಿಮ್, ಕ್ರೈಸ್ತ ಅಲ್ಲ... ರಾಜ ಧರ್ಮ! ಸರ್ವರನ್ನು ಸಮಾನವಾಗಿ ಕಾಣುವ ರಾಜಧರ್ಮ’ (ಪುಟ 67) ಸುಮಾರಾಗಿ 2002ರ ಗುಜರಾತ್ ಹತ್ಯಾಕಾಂಡದ ಬಳಿಕ ಆಗಿನ ಪ್ರಧಾನಿ ವಾಜಪೇಯಿ ಈಗಿನ ಪ್ರಧಾನಿಯೂ ಆಗಿನ ಗುಜರಾತಿನ ಮುಖ್ಯಮಂತ್ರಿಯೂ ಆಗಿದ್ದ ನರೇಂದ್ರ ಮೋದಿಯವರಿಗೆ ಹೇಳಿದ ಮಾತುಗಳೇ! ಟಿಪ್ಪುವಿನ ಕುಕೃತ್ಯಗಳೆಂಬಂತೆ ಹೇಳುವ ‘ಆಡಳಿತದಲ್ಲಿ ಹಿಂದೂಗಳಿಗೆ ಕಿರುಕುಳ, ಊರ ಹೆಸರುಗಳನ್ನು ಬದಲಿಸಿದ್ದಾನೆ’ ಮುಂತಾದ ಮಾತುಗಳು ಭಾರತಕ್ಕೂ ಮುಖ್ಯವಾಗಿ ಯೋಗಿಯ ಉತ್ತರ ಪ್ರದೇಶಕ್ಕೂ ಅನ್ವಯಿಸುವಂತಿದೆ. ‘ಹಿಂದೂ ಧರ್ಮವೆಂದಿಗೂ ಇತರ ಧರ್ಮಗಳನ್ನು ದ್ವೇಷ ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿರುವುದು ಸಹಿಷ್ಣುತೆ ಅಲ್ಲ, ಗೌರವಿಸುವ ಪರಂಪರೆ.’ (ಪುಟ 52) ಎನ್ನುವವರು ಈ ಕೃತಿಯನ್ನು ಓದಬೇಕು. ‘ಆತನ ಮತಾಂಧತೆಯನ್ನು ತೊಡೆದು ಹಾಕಿ.’ (ಪುಟ 59) ಈ ಕೃತಿಗೆ ಸಂಬಂಧಿಸಿದ ಎಲ್ಲರಿಗೂ ಮುಖ್ಯವಾಗಿ ಲೇಖಕರಿಗೆ, ಮುನ್ನುಡಿ/ಹಿನ್ನುಡಿಖೋರರಿಗೆ ಮತ್ತು ಪ್ರಕಾಶಕರಿಗೆ ಅನ್ವಯಿಸುವಂತಿದೆ. ‘ಗಂಟೆ, ಜಾಗಟೆ, ಶಂಖ ಎಲ್ಲ ಅಲ್ಲೇ ಇದೆ.’ (ಪುಟ 106) ಕೊರೋನ ಪರಿಹಾರಕ್ಕೆ ಪ್ರಧಾನಿ ಮೋದಿ ಸೂಚಿಸಿದ ಸೂತ್ರವಿದು!
ನಾಟಕದ ವಿನ್ಯಾಸದ ಬಗ್ಗೆ ಹೇಳಬೇಕೆಂದರೆ ಇಲ್ಲಿ ನೇರವಾಗಿ ಟಿಪ್ಪುವಿನ ಮೇಲೆ ಕೊಡವರು, ನಾಯರುಗಳು, ಅಯ್ಯಂಗಾರುಗಳು ಹೊರಿಸಿದ ದೂರುಗಳ ಕುರಿತು ಪ್ರಹಸನಗಳಿವೆ. ಕೊಡಗಿನ ದೇವಟ್ಟಪರಂಬುವಿನ ದುರಂತದ ಕುರಿತು ಹೇಳುವಾಗ ಹುಚ್ಚನ ಕೈಗೆ ಸಿಕ್ಕಿದ ಕತ್ತಿಯ ಹಾಗೆ ಅದು ಎಲ್ಲೆಡೆ ಘಾಸಿಗೊಳಿಸುತ್ತದೆ. ಕೊಡಗಿನ ಆಗಿನ ದೊರೆ ಲಿಂಗರಾಜನ ಬಾಯಲ್ಲಿ ‘ನೀಚ ಕೊಡವರು,’ ‘ಕೊಡವರು ಕುಣಿತದ ಅಮಲಿನಲ್ಲಿದ್ದಾರೆ’ (ಇದು ಕುಣಿತವೋ ಕುಡಿತವೋ?) ಮುಂತಾದ ಮಾತನ್ನು ಹೇಳಿಸಿದ್ದಾರೆ. ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಧಾಟಿಗೆ ವ್ಯತಿರಿಕ್ತವಾದ ಟೀಕೆಗಳನ್ನು, ಉಲ್ಲೇಖಗಳನ್ನು ಲಿಂಗಾಯತ ಮತ್ತು ಕೊಡವ ಕೋಮು/ಜನಾಂಗಗಳ ನಡುವೆ ಪ್ರಕಾಶಿಸುವುದು, ಸಾಮರಸ್ಯವನ್ನು ಕದಡುವುದು ಎಷ್ಟು ಉಚಿತವೆಂದು ಕಾರ್ಯಪ್ಪನವರೇ ಹೇಳಬೇಕು! 14ನೇ ದೃಶ್ಯದಲ್ಲಿ ಹಠಾತ್ತನೆ ಉರಿಗೌಡ, ನಂಜೇಗೌಡ ಎಂಬ ಪಾತ್ರಗಳನ್ನು ಸೃಷ್ಟಿಸಿ ಅವರ ಮೂಲಕ ಟಿಪ್ಪುವನ್ನು ಕೊಲ್ಲಿಸಿದ್ದಾರೆ.
ಇದು ನಭೂತೋ! ಈಗ ಅವರ ಪ್ರತಿಮೆಗೆ ಶಿಫಾರಸನ್ನು ರಾಜ್ಯ ಸರಕಾರಕ್ಕೆ ಸಂಬಂಧಿತ ಜಾತಿ ಸಮಾಜಗಳು ನೀಡಬಹುದೇನೋ? ನಾಟಕಕಾರರ ಸುಪ್ತ ಕಾರ್ಯಸೂಚಿಗೆ ‘ಬ್ರಿಟಿಷರು ಗೆಳೆಯರು. ಹೈದರಾಬಾದಿನ ನಿಜಾಮನೂ! ನಮ್ಮ ನಿಜಾಮರು ಮುಸ್ಲಿಮರೇ, ಮತಾಂತರ ಮಾಡಿದ್ದೇವೇನು? ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ.’ (ಪುಟ 92) ಎಂದು ಒಬ್ಬ ಹಿಂದೂ (ಬಲರಾಮ್)ವಿನ ಬಾಯಲ್ಲಿ ಹೇಳಿಸುವ ಮೂಲಕ ಶತ್ರುವಿನ ಶತ್ರು ಮಿತ್ರ ಎಂಬ ಸಿದ್ಧಾಂತವನ್ನು ಎತ್ತಿಹಿಡಿದಿದ್ದಾರೆ. ಪುಸ್ತಕದ ಓದಿನ ಕೊನೆಯಲ್ಲಿ ಬ್ರಿಟಿಷರು ಭಾರತದಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದರೂ ಅವರೇ ನಮಗೆ ಶ್ರೇಷ್ಠರಾಗಿ ಏಕೆ ಕಾಣಿಸುತ್ತಾರೆ ಮತ್ತು ನಮ್ಮ ಜನರು ಏಕೆ ಇಂದಿಗೂ ಅವರ ಬೂಟು ನೆಕ್ಕುತ್ತಾರೆ ಎಂಬುದಕ್ಕೆ ಕಾರಣ ಸಿಕ್ಕುತ್ತದೆ. ನಮ್ಮ ಇಂತಹ ದೇಶಭಕ್ತರು ಜಯಚಂದನ ಅಪರಾವತಾರಗಳಂತೆ ಬದುಕುವುದರಿಂದ, ವರ್ತಿಸುವುದರಿಂದ ಇನ್ನೆಷ್ಟು ಪೃಥ್ವೀರಾಜರು ಬಲಿಯಾಗುವುದಕ್ಕಿದೆಯೋ? ಕನಸುಗಳು ಅಂದರೆ ಗೊತ್ತು; ಆದರೆ ‘ನಿಜ ಕನಸುಗಳು’ ಅಂದರೇನೆಂದು ಕೊನೆಗೂ ಗೊತ್ತಾಗುವುದಿಲ್ಲ. ಈ ದೃಷ್ಟಿಯಿಂದ ಇದೊಂದು ಅಸಂಗತ ನಾಟಕ. ನಾಟಕಕೃತಿಯೆಂದಾಗಲೀ, ಸಾಹಿತ್ಯಕೃತಿಯೆಂದಾಗಲೀ ವಿಮರ್ಶಿಸುವಂತೆ ಈ ನಾಟಕವಿಲ್ಲ. ಹೇಳಿಕೇಳಿ ಈ ಕೃತಿ ಹಿಂದೂ ಮತಾಂಧತೆಯ, ಮೂಲಭೂತವಾದದ, ಪ್ರಚಾರತಂತ್ರ. ಇದರ ಮಾಧ್ಯಮ ನಾಟಕವಾದ್ದರಿಂದ ಇದೊಂದು ನಾಟಕ. ಹಿಂದುತ್ವದ ಸಭೆ ಸಮಾರಂಭಗಳಲ್ಲಿ ಮತ್ತು ಸರಕಾರಿ ಕೃಪಾಪೋಷಿತ ರಣಾಂಗಣಗಳಲ್ಲಿ ಇವನ್ನು ಪ್ರದರ್ಶಿಸಿ ಆಳುವ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು/ನೌಕರರು ಮತ್ತು ಹುಂಬ ಜನರು ಕಡ್ಡಾಯವಾಗಿ ನೋಡತಕ್ಕದ್ದು ಎಂದು ಸರಕಾರ (ಗಳು) ಆದೇಶಿಸಿದರೆ ಸೂಕ್ತ. ರಾಷ್ಟ್ರೀಯತೆಯೆಂದರೆ ಜಾತೀಯತೆಯಲ್ಲ; ಮತಾಂಧತೆಯೂ ಅಲ್ಲ. ಎಸ್.ಎಲ್. ಭೈರಪ್ಪನವರು ಹೇಳಿದರೆನ್ನಲಾದ ಮತ್ತು ಕಾರ್ಯಪ್ಪನವರು ಉಲ್ಲೇಖಿಸಿದ ‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ.’ ಎಂಬ ಮಾತುಗಳು ಈ ಕೃತಿಯ ಮಟ್ಟಿಗಂತೂ ಸತ್ಯ.