ವಿಕಲಚೇತನರಿಗೆ ಸೌಲಭ್ಯ ನೀಡಿ
ಮಾನ್ಯರೇ,
ಕೇಂದ್ರ ಹಾಗೂ ರಾಜ್ಯ ಸರಕಾರದ ಯುಡಿಐ ಹಾಗೂ ವಿಕಲಚೇತನ ಗುರುತು ಚೀಟಿಯಿದ್ದರೂ ಮಧ್ಯಮ ವರ್ಗದ ವಿಕಲಚೇತನರಿಗೆ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ದೊರೆಯುತ್ತಿಲ್ಲ. ಹಾಗಾಗಿ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ಇಲ್ಲದ ವಿಕಲಚೇತನರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೆಲವೊಂದು ಸ್ಕಾನಿಂಗ್, ಚಿಕಿತ್ಸೆಗೆ, ಹೊರ ರೋಗಿಗಳ ಚೀಟಿ ಎಲ್ಲದಕ್ಕೂ ಹಣ ಕಟ್ಟಬೇಕಾಗಿದೆ.
ಗುತ್ತಿಗೆ ಕಾರ್ಮಿಕರಾಗಿ, ದಿನಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಯುಡಿಐ ಹಾಗೂ ವಿಕಲಚೇತನ ಗುರುತು ಚೀಟಿ ಹೊಂದಿರುವ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಮಧ್ಯಮ ವರ್ಗದಲ್ಲಿನ ದಿವ್ಯಾಂಗರಿಗೆ ಹಿರಿಯರು, ಪೋಷಕರು ಮತ್ತು ಇತರರು ದಾನವಾಗಿ ನೀಡಿರುವ ವಾಸಿಸುವ ಮನೆಯನ್ನು ನೋಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೆಲವೊಂದು ಪಂಚಾಯತ್ ಸರಕಾರಿ ಸಿಬ್ಬಂದಿ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಯನ್ನು ಮಂಜೂರು ಮಾಡಲು ಹಿಂಜರಿಯುತ್ತಿದ್ದಾರೆ.
ಅಲ್ಲದೆ ಗುತ್ತಿಗೆ ಕಾರ್ಮಿಕರಾಗಿ, ದಿನಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ವಿಕಲಚೇತನರಿಗೆ ಕೇಂದ್ರ ಸರಕಾರಿ ವಿಕಲಚೇತನ ನಿಯಮ ಹಾಗೂ ಗೌರವಾನ್ವಿತ ನ್ಯಾಯ ಪೀಠದ ನಿರ್ದೇಶನದಂತೆ ವೃತ್ತಿಯಲ್ಲಿ ನ್ಯಾಯ ದೊರೆಯುತ್ತಿಲ್ಲ.
ಸರಕಾರಿ ಸಾರಿಗೆ ಇಲಾಖೆಯ ನಿಯಮದಂತೆ ಖಾಸಗಿ ಸಿಟಿ ಹಾಗೂ ಸರ್ವಿಸ್ ಬಸ್ಗಳಲ್ಲಿ ಮೊದಲ ಸೀಟು ವಿಕಲಚೇತನರಿಗೆ ಎಂದಿದೆಯಾದರೂ ಯಾರೂ ಇದನ್ನು ಪಾಲಿಸುತ್ತಿಲ್ಲ. ವಿಕಲಚೇತನರ ಸೀಟುಗಳಲ್ಲಿ ಇನ್ನಿತರರು ಕುಳಿತು ಕೊಳ್ಳುತ್ತಿದ್ದಾರೆ. ಅಲ್ಲದೆ ವಿಕಲಚೇತನರು ಹಾಗೂ ಅವರ ಕುಟುಂಬ ಸದಸ್ಯರು ಜೀವನ ನಿರ್ವಹಣೆಗಾಗಿ ಗೃಹ ಕೈಗಾರಿಕಾ ಉತ್ಪನ್ನ ಮಾರಾಟ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳ ಅನುದಾನದಲ್ಲಿ ನಡೆಸುವ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಡೆಸುವ ವಿವಿಧ ಇಲಾಖೆಗಳು, ಕೆಲವು ಜಿಲ್ಲಾಡಳಿತ ಉತ್ಸವ ಸಮಿತಿ ನಡೆಸುವ ಮಾರಾಟ ಮೇಳ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಉಚಿತ ಮಳಿಗೆ ಅಥವಾ ರಿಯಾಯಿತಿ ಮಳಿಗೆಗಳು ದೊರೆಯುತ್ತಿಲ್ಲ.
ಇವಷ್ಟೇ ಅಲ್ಲದೆ ಇಂತಹ ಹಲವು ಸಮಸ್ಯೆಗಳನ್ನು ವಿಕಲಚೇತನರು ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಸರಕಾರ ಮತ್ತು ಸಂಬಂಧಿತ ಇಲಾಖೆಗಳು ಇನ್ನಾದರೂ ವಿಕಲಚೇತನರು ಸಮಸ್ಯೆಯಿಲ್ಲದೆ ಬದುಕು ಸಾಗಿಸಲು ಅವಕಾಶ ಮಾಡಿಕೊಡಬೇಕಾಗಿದೆ.