ನೀರಿನ ಅಸ್ಪಶ್ಯತೆ
ಮಾನ್ಯರೇ,
ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಟ್ಯಾಂಕರ್‌ನಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಆ ಟ್ಯಾಂಕರ್‌ನಲ್ಲಿದ್ದ ಸಂಪೂರ್ಣ ನೀರನ್ನು ಹೊರಕ್ಕೆ ತೆಗೆದು ಅನಂತರ ಗೋ ಮೂತ್ರದಿಂದ ಶುದ್ಧೀಕರಿಸಿರುವ ಘಟನೆ ಸಮ ಸಮಾಜವನ್ನು ನಾಚಿಸುವಂತೆ ಮಾಡಿದೆ. ಲಿಂಗಾಯತರ ಬೀದಿಯಲ್ಲಿ ನಡೆದ ಈ ಘಟನೆ, ಬಸವಣ್ಣನವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸುವುದು ಆದ್ಯ ಕರ್ತವ್ಯ ಎನ್ನುವ ಈ ಸಮುದಾಯದ ತಾರತಮ್ಯ ಮನೋಭಾವನೆಯ ಬಗ್ಗೆ ವಿಷಾದ ಮೂಡಿಸುತ್ತದೆ?
'ಅರಿವೇ ಗುರು', 'ಕಾಯಕವೇ ಕೈಲಾಸ' ಎಂಬುದು ಲಿಂಗಾಯಿತ ಧರ್ಮದ ಜನ ಬಳಕೆಯಲ್ಲಿನ ಪ್ರಚಲಿತ ಘೋಷವಾಕ್ಯ. ಲಿಂಗಾಯತ ಧರ್ಮದಲ್ಲಿ ನಡೆ ನುಡಿಯೇ ಸಿದ್ಧಾಂತವಾಗುತ್ತದೆ. ಇದು ಸಕಲರಿಗೂ ಒಳಿತನ್ನೇ ಬಯಸುತ್ತಾ ದಯವೇ ಧರ್ಮದ ಮೂಲವಾಗಬೇಕು ಹೊರತು ನವ ಬ್ರಾಹ್ಮಣ್ಯದ ಹೊದಿಕೆ ಧರಿಸಿ ಮೇಲು-ಕೀಳು ಎಂದು ಫೋಷಣೆ ಮಾಡಬಾರದು. ಮನುಷ್ಯ ತನ್ನ ಉದಾತ್ತ ಚಿಂತನೆಗಳು, ಆದರ್ಶನೀಯ ಮೌಲ್ಯಗಳಿಂದ ಇನ್ನಷ್ಟು ಎತ್ತರಕ್ಕೇರುತ್ತಾನೆ ಹೊರತು ತಾರತಮ್ಯದ ಕೀಳು ಗುಣಗಳಿಂದಲ್ಲ. ಅಂಗೈನಲ್ಲಿ ಆಕಾಶ ನೋಡುವ ವಿಜ್ಞಾನ-ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲೂ ಹಸಿವಿನ ಗಂಜಲು ಮನುಷ್ಯ, ಮಾನವೀಯತೆ ಮೌಲ್ಯಗಳಿಗಿಂತ ಹೇಗೆ ಶ್ರೇಷ್ಠವಾದೀತು ಎಂಬುದನ್ನು ಅರಿತುಕೊಳ್ಳಬೇಕಾಗಿದೆ.
ರಾಜ್ಯದಲ್ಲಿ ಆಗಾಗ ನಡೆಯುವ ಇಂತಹ ಕೀಳುಮಟ್ಟದ ಘಟನೆಗಳಿಂದ ಇಲ್ಲಿನ ಅಸ್ಪೃಶ್ಯತೆ ಜಾಹೀರಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಜಾಗತಿಕವಾಗಿ ದೇಶದ ಮಾನವು ಬಿಕರಿಯಾಗುತ್ತದೆ. ಸಮಾಜದ ಸ್ವಾಸ್ಥಕೆಡಿಸಿ ಭಂಗ ತರುತ್ತಿರುವ ಇಂತಹ ಕಿಡಿಗೇಡಿಗಳಿಗೆ ಕಠಿಣ ಕಾನೂನಿನ ಶಿಕ್ಷೆಯ ಜೊತೆಗೆ ಅರಿವು ಮೂಡಿಸುತ್ತಾ ತಿಳಿಹೇಳುವ ನೈತಿಕ ಹೊಣೆ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಸರಕಾರದ ಮೇಲಿದೆ.