ಮೊರ್ಬಿಯ ದುರಂತ ಮತ್ತೊಂದು ನಿರ್ಲಕ್ಷಕ್ಕೆ ಬಲಿಯಾದ 140 ಅಮಾಯಕರು
ಒಂದು, ಅಜಂತಾ ಗಡಿಯಾರ ಕಂಪೆನಿಗೆ ಸೇತುವೆಯ ಕುರಿತಾದ ತಾಂತ್ರಿಕ ನೈಪುಣ್ಯ ಇತ್ತೆ? ಎರಡು, ಸೇತುವೆಯ ದುರಸ್ತಿಯ ಗುತ್ತಿಗೆ ನೀಡುವಾಗ ಅಗತ್ಯವಾದ ಕ್ರಮಗಳನ್ನು ಅನುಸರಿಸಲಾಗಿದೆಯೆ? ಮೂರು, ದುರಸ್ತಿಯ ಕೆಲಸ ಮುಗಿದಾಗ ಸಂಬಂಧಪಟ್ಟ ಅಧಿಕಾರಿಗಳು ಅದು ಸಮರ್ಪಕವಾಗಿದೆ ಎಂದು ಖಚಿತಪಡಿಸಿದ್ದಾರೆಯೇ? ಅದರ ಕುರಿತಾದ ಪ್ರಮಾಣ ಪತ್ರ ನೀಡುವ ಮೊದಲೇ ಸೇತುವೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಯಾಕೆ ಮುಕ್ತಗೊಳಿಸಲಾಯಿತು? ಯಾರ ನಿರ್ದೇಶನದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು?
‘ನವಭಾರತ’ದ ಮಾದರಿ ರಾಜ್ಯ ಗುಜರಾತಿನಲ್ಲಿ ಅಕ್ಟೋಬರ್ 30ರಂದು ಮೊರ್ಬಿ ತೂಗು ಸೇತುವೆ ಕುಸಿದು ಬಿದ್ದು ಅಮಾಯಕ ಮಕ್ಕಳು, ಹೆಂಗಸರು, ಯುವಕರು ಸೇರಿದಂತೆ ಸುಮಾರು140 ಮಂದಿ ಪ್ರಾಣ ಕಳಕೊಂಡರು. ಇದರ ಬಗ್ಗೆ ವಿಸ್ತೃತ ವರದಿಗಳು, ಮನಕಲಕುವ ಭಾವಚಿತ್ರಗಳು ಈಗಾಗಲೇ ಬಂದಿವೆ. ದೇಶದ ಸರ್ವೋಚ್ಚ ನ್ಯಾಯಾಲಯವು ಇದೊಂದು ಭೀಕರ ದುರಂತವೆಂದು ಹೇಳಿದೆ. ರಾಜ್ಯ ಸರಕಾರವು ಅವಘಡದ ತನಿಖೆ ನಡೆಸುವ ಭರವಸೆ ನೀಡಿದೆ. ಅಸು ನೀಗಿದವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೊರ್ಬಿ ಮತ್ತು ಅಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ತೀವ್ರವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿಗೆ ಈ ದುರಂತ ಹಿಂದಿನ ಅನೇಕ ದುರಂತಗಳ ಪಟ್ಟಿಗೆ ಸೇರಿ ಇತಿಹಾಸದ ಗರ್ಭದಲ್ಲಿ ಮಾಯವಾಗುತ್ತದೆ.
ಮೊರ್ಬಿ ಸೇತುವೆಯು ಅದೇ ಹೆಸರಿನ ಪಟ್ಟಣದಲ್ಲಿ ಹರಿಯುವ ಮಚ್ಛು ನದಿಗೆ ಅಡ್ಡವಾಗಿ 1880ರಲ್ಲಿ ಸ್ಥಾಪನೆಗೊಂಡಿತ್ತು. ಸುಮಾರು 230 ಮೀಟರು ಉದ್ದದ ಸೇತುವೆಯನ್ನು ಕಾಲಕಾಲಕ್ಕೆ ದುರಸ್ತಿಗೆ ಒಳಪಡಿಸಲಾಗುತ್ತಿತ್ತು. ಆ ಮೂಲಕ ಜನರ ಭದ್ರತೆಯನ್ನು ಕಾಯಲು ಗಮನ ಕೊಡಲಾಗುತ್ತಿತ್ತು. ಅದರ ಮೇಲೆ ಕುಣಿದು ಕುಪ್ಪಳಿಸಿದರೂ ಕುಸಿಯಲು ಸಾಧ್ಯವಿಲ್ಲದ ತಾಂತ್ರಿಕವಾಗಿ ಉತ್ಕೃಷ್ಟವಾದ ರಚನೆ ಮತ್ತು ‘ಇಂಜಿನಿಯರಿಂಗ್ ಮಾರ್ವೆಲ್’ (ತಾಂತ್ರಿಕ ಕೌತುಕ) ಎಂದೆನ್ನಿಸಿಕೊಂಡಿತ್ತು. ಮಾತ್ರವಲ್ಲ ‘ಜುಲ್ತೊ ಪುಲ್’ (ತೂಗಾಡುವ ಸೇತುವೆ) ಎಂದೆನಿಸಿದ ಸೇತುವೆಯು ಮೊರ್ಬಿ ಪಟ್ಟಣದ 10 ಪ್ರಮುಖ ಆಕರ್ಷಣೆಗಳಲ್ಲಿ ಒಂದು ಎಂದು ಪ್ರಖ್ಯಾತವಾಗಿತ್ತು.
ವಸ್ತು ಸ್ಥಿತಿ:
ಇಷ್ಟು ವರ್ಷ ಭದ್ರವಾಗಿದ್ದ ಸೇತುವೆ ಹೇಗೆ ಕುಸಿಯಿತು? ಇಂದಿನ ದಿನಗಳಲ್ಲಿ ಆಳುವ ಪಕ್ಷಕ್ಕೆ ಚಾಮರ ಬೀಸುವ ಕೆಲವು ಮಾಧ್ಯಮಗಳು ಸೇತುವೆ ಕುಸಿಯಲು ಅತಿ ಉತ್ಸಾಹಿ ಯುವಕರು ಅದರಲ್ಲಿ ಕುಣಿದದ್ದೇ ಕಾರಣ ಎಂದು ಘೋಷಿಸಿವೆ. ಒಂದು ಪತ್ರಿಕೆಯು ವಿದೇಶಗಳಲ್ಲಿ ಸಂಭವಿಸಿದ ಹಳೆಯ ಘಟನೆಗಳನ್ನು ಉಲ್ಲೇಖಿಸಿ ಈ ರೀತಿಯ ದುರಂತಗಳು ಆಗುತ್ತವೆ ಎಂದು ಸಮಜಾಯಿಷಿ ನೀಡಿದೆ. ಕೆಲವು ಮಾಧ್ಯಮಗಳು ಇದು ಭಗವಂತನ ಆಟ ಎಂದೂ ಹೇಳಿವೆ. ನಮ್ಮ ಮುಂದಿರುವ ಎಲ್ಲ ಮಾಹಿತಿಯನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರೆ ಇದು ಮಾನವನ ನಿರ್ಲಕ್ಷ್ಯದಿಂದ ಆದ ದುರಂತ ಎನ್ನದೆ ವಿಧಿಯಿಲ್ಲ.
ದುರಂತಕ್ಕೆ ಕಾರಣವಾದ ಶಕ್ತಿಗಳು ಮತ್ತು ಕಾಣದ ಕೈಗಳು ದೇಶದ ಕಾನೂನನ್ನು ಉಲ್ಲಂಘಿಸಿ ಅಮಾಯಕರನ್ನು ಬಲಿಕೊಟ್ಟರು ಎನ್ನಲೇ ಬೇಕಾಗುತ್ತದೆ. ಇದು ಯಾಕೆ ಎಂಬುದು ದುರಂತದ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಮಾತ್ರವಲ್ಲ ಸಕ್ಷಮ ಅಧಿಕಾರಿ ವರ್ಗಗಳು ಹಾಗೂ ಸೇತುವೆಯ ದುರಸ್ತಿಯ ಮೇಲ್ವಿಚಾರಣೆಗೆ ನಿಯುಕ್ತವಾದ ಕಂಪೆನಿಯು ಕಾನೂನನ್ನು ಉಲ್ಲಂಘಿಸಿದೆ ಎಂಬುದು ಸ್ಪಷ್ಟ.
ವರದಿಗಳಲ್ಲಿ ಹೊರಬಂದ ಕೆಲವು ವಿಷಯಗಳು ಗಮನಾರ್ಹ: ರಿಪೇರಿಯ ಗುತ್ತಿಗೆ ವಹಿಸಿಕೊಂಡ ಖ್ಯಾತಿವೆತ್ತ ಅಜಂತ ಗೋಡೆ ಗಡಿಯಾರವನ್ನು ಉತ್ಪಾದಿಸುವ ಒರೆವಾ ಕಂಪೆನಿಗೆ ಈ ತೆರನಾದ ಸೇತುವೆಯ ರಚನೆಯ ಕುರಿತಂತೆ ತಾಂತ್ರಿಕ ಪರಿಣತಿ ಇರಲಿಲ್ಲ. ಗುತ್ತಿಗೆಯನ್ನು ನೀಡಲು ಅಗತ್ಯವಾದ ಮುಕ್ತ ಟೆಂಡರ್ ಪ್ರಕ್ರಿಯೆಯನ್ನು ಸ್ಥಳೀಯ ಅಧಿಕಾರಿಗಳು ಮಾಡದೆ ಒರೆವಾ ಕಂಪೆನಿಗೆ ಕೆಲಸವನ್ನು ಒಪ್ಪಿಸಿದ್ದರು. ದುರಂತ ಸಂಭವಿಸಿದ ಕೆಲವೇ ದಿನಗಳ ಮೊದಲು ಸೇತುವೆಯನ್ನು ‘ರಿಪೇರಿ’ ಮಾಡಿದ್ದೇವೆಂದು ಹೇಳಿದ ಕಂಪೆನಿಯು ಅದನ್ನು ಜನರ ಉಪಯೋಗಕ್ಕೆ ತೆರವು ಗೊಳಿಸಿತ್ತು. ಸೇತುವೆಯನ್ನು ಪ್ರವೇಶಿಸಲು 15 ರೂ. ಶುಲ್ಕವನ್ನು ವಿಧಿಸಲಾಗಿತ್ತು.
ಸಮರ್ಪಕವಾಗಿ ರಿಪೇರಿಯಾಗಿದ್ದರೆ ಸೇತುವೆ ಹೇಗೆ ಕುಸಿಯಿತು? ಇದಕ್ಕೆ ಉತ್ತರವನ್ನು ಹುಡುಕುವುದು ಕಷ್ಟವೇನಲ್ಲ. ಒಂದನೆಯದಾಗಿ, ಯಾವುದೇ ಸೇತುವೆಯನ್ನು, ಅದು ಹೊಸತಾಗಲೀ ರಿಪೇರಿಯಾದ ಹಳೆಯ ಸೇತುವೆಯಾಗಲೀ, ಉಪಯೋಗಿಸುವ ಮುಂಚಿತವಾಗಿ ಸಂಬಂಧಪಟ್ಟ ಸಾರ್ವಜನಿಕ ಕಾಮಗಾರಿ ಇಲಾಖೆಯ ಇಂಜಿನಿಯರುಗಳು ಅದರ ಸುರಕ್ಷತೆಯ ಬಗ್ಗೆ ಪ್ರಮಾಣ ಪತ್ರ ನೀಡಬೇಕು.
ಅದಿಲ್ಲದೆ ಸೇತುವೆಯನ್ನು ಜನರು ದಾಟುವಂತಿಲ್ಲ. ಮೊರ್ಬಿಯ ಸೇತುವೆಯನ್ನು ಅಕ್ಟೋಬರ್‌ನಲ್ಲಿ ಉಪಯೋಗಿಸಲು ಪ್ರಾರಂಭಿಸಿದಾಗ ಈ ಶರತ್ತನ್ನು ನಿರ್ಲಕ್ಷಿಸಲಾಗಿದೆ. ಪ್ರಮಾಣ ಪತ್ರ ಇಲ್ಲದೆಯೇ ಸೇತುವೆಯನ್ನು ಜನಸಂಚಾರಕ್ಕೆ ತೆರೆಯಲಾಯಿತು. ಎರಡನೆಯದಾಗಿ, ಸೇತುವೆಗೆ ಸುಮಾರು 125 ಮಂದಿಯ ಭಾರವನ್ನು ಹೊರುವ ಸಾಮರ್ಥ್ಯವಿತ್ತು. ಇದಕ್ಕೆ ವಿರುದ್ಧವಾಗಿ ಆ ದಿನ 3,000 ಪ್ರವೇಶ ಚೀಟಿಗಳನ್ನು ಕೊಡಲಾಗಿತ್ತು; ಅಪಘಾತ ಸಂಭವಿಸುವ ಸಂದರ್ಭದಲ್ಲಿ 250ರಿಂದ 300 ಮಂದಿ ಸೇತುವೆಯ ಮೇಲಿದ್ದರು ಎಂದು ಪೊಲೀಸರ ವರದಿ ಉಲ್ಲೇಖಿಸಿದೆ. ಇಷ್ಟು ಮಂದಿಯನ್ನು ಸೇತುವೆಯ ಮೇಲೆ ಹೇಗೆ ಬಿಟ್ಟರು? ಸೇತುವೆಯ ದ್ವಾರಪಾಲಕರಿಗೆ ಕಂಪೆನಿಯು ಕಟ್ಟುನಿಟ್ಟಾದ ಸೂಚನೆಯನ್ನು ಕೊಡಲಿಲ್ಲವೆ?
ಮೂರನೆಯದಾಗಿ, ಒರೆವಾ ಕಂಪೆನಿಯು ಏನು ರಿಪೇರಿ ಮಾಡಿತ್ತು? ವಿಧಿವಿಜ್ಞಾನ ಪ್ರಯೋಗಶಾಲೆ (ಫಾರೆನ್ಸಿಕ್ ಸಯನ್ಸ್ ಲ್ಯಾಬೊರೇಟರಿ)ಯ ಪ್ರಕಾರ ರಿಪೇರಿಯಾದ ಸೇತುವೆಯ ಕೇಬಲ್‌ಗಳಿಗೆ ತುಕ್ಕು ಹಿಡಿದಿತ್ತು, ಸೇತುವೆಯನ್ನು ಭೂಮಿಗೆ ಭದ್ರವಾಗಿ ಜೋಡಿಸಲು ಉಪಯೋಗಿಸುವ ‘ಲಂಗರು ಪಿನ್’ಗಳು ಮುರಿದಿದ್ದುವು, ಪ್ರಮುಖವಾದ ಬೋಲ್ಟುಗಳು ಸಡಿಲವಾಗಿದ್ದವು. ಇವುಗಳೆಲ್ಲವನ್ನು ಸರಿಪಡಿಸುವ ಜವಾಬ್ದಾರಿ ಕಂಪೆನಿಗಿತ್ತು. ಅದೇ ವರದಿಯ ಪ್ರಕಾರ ಸೇತುವೆಯ ಮೇಲೆ ಹೊಸತಾಗಿ ಹಾಕಿದ ಲೋಹದ ತಗಡುಗಳು ಸೇತುವೆಯ ಭಾರವನ್ನು ಹೆಚ್ಚಿಸಿದ್ದವು. ಇವುಗಳೆಲ್ಲದರ ಜೋಡಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆ ತಾಂತ್ರಿಕವಾಗಿ ಸಮರ್ಪಕವಾಗಿತ್ತೇ ಎಂದು ಪರಿಶೀಲಿಸುವ ಗುರುತರ ಜವಾಬ್ದಾರಿ ಮೊರ್ಬಿ ಪಟ್ಟಣದ ಅಧಿಕಾರಿ ವರ್ಗದ ಮೇಲಿತ್ತು.
ನಾಲ್ಕನೆಯದಾಗಿ, ಗುಜರಾತಿನ ಹೊಸ ವರ್ಷದ ದಿನವಾದ ಅಕ್ಟೋಬರ್ 26ಕ್ಕೆ ಸೇತುವೆಯನ್ನು ಜನಸಂಚಾರಕ್ಕೆ ತೆರವುಗೊಳಿಸಿದ ಒರೆವಾ ಕಂಪೆನಿಯ ಮುಖ್ಯಸ್ಥ ಜಯಸುಖ ಪಟೇಲರು ಸೇತುವೆಯು ಸುರಕ್ಷಿತ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಆದರೆ ಜನಸಂಚಾರಕ್ಕೆ ಅಗತ್ಯವಾದ ತಾಂತ್ರಿಕವಾಗಿ ಅದು ಭದ್ರವೆಂಬ ಪ್ರಮಾಣಪತ್ರವನ್ನು ಸರಕಾರದ ಸಕ್ಷಮ ಅಧಿಕಾರಿಗಳು ಬಿಡುಗಡೆಮಾಡಿರಲಿಲ್ಲ. ಅದರ ಮೊದಲೇ ಕಂಪೆನಿಯು ಸೇತುವೆಯನ್ನು ಜನಸಂಚಾರಕ್ಕೆ ಮುಕ್ತಗೊಳಿಸಿತು, ಮಾತ್ರವಲ್ಲ ಸೇತುವೆ ಸುಭದ್ರವೆಂದು ಪ್ರಚಾರವನ್ನೂ ಮಾಡಿತು.
ಸರಕಾರಿ ಅಧಿಕಾರಿಗಳು ತಮ್ಮ ಮುಖವನ್ನು ಮತ್ತೊಂದೆಡೆ ತಿರುಗಿಸಿದರು, ಅಷ್ಟೆ. ದುರಂತ ಸಂಭವಿಸಿದ ಬಳಿಕ, ಪೊಲೀಸರು ಸೆರೆಹಿಡಿದದ್ದು ದಿನಕೂಲಿಯಲ್ಲಿ ನೇಮಕಗೊಂಡ ದ್ವಾರಪಾಲಕರನ್ನು, ಪ್ರವೇಶ ಚೀಟಿ ನೀಡುವವರನ್ನು, ರಿಪೇರಿಯ ಹೊಣೆ ಹೊತ್ತ ಉಪ ಗುತ್ತಿಗೆಯ ಸಂಸ್ಥೆಯ ನಾಲ್ಕು ಉದ್ಯೋಗಿಗಳನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು. ಕಂಪೆನಿಯ ಉನ್ನತ ಅಧಿಕಾರಿಗಳಾಗಲೀ, ಮೊರ್ಬಿ ಪಟ್ಟಣದ ಹಿರಿಯ ಅಧಿಕಾರಿಗಳಾಗಲೀ ಇನ್ನೂ ಪೊಲೀಸರ ರೆಡಾರ್‌ಗೆ ಸಿಕ್ಕಿಲ್ಲ. ಕಂಪೆನಿಯ ಮುಖ್ಯಸ್ಥ ಜಯಸುಖ ಪಟೇಲರು ದೇಶ ಬಿಟ್ಟು ಹೋಗಿದ್ದಾರೆಂದು ವರದಿಗಳು ಬಂದಿವೆ. (1984ರಲ್ಲಿ ಭೋಪಾಲದ ಅನಿಲ ಸೋರಿಕೆಯ ದುರಂತದ ತಕ್ಷ್ಷಣವೇ ಯೂನಿಯನ್ ಕಾರ್ಬೈಡ್ ಕಂಪೆನಿಯ ಮುಖ್ಯಸ್ಥ ವಾರೆನ್ ಅಂಡರ್ಸನ್ ಅಮೆರಿಕಕ್ಕೆ ವಾಪಸಾದಂತೆ).
ಕಾನೂನು ಏನು ಹೇಳುತ್ತದೆ?
2005ರಲ್ಲಿ ಮನಮೋಹನ ಸಿಂಗರ ಕಾಲದಲ್ಲಿ ಜಾರಿಗೆ ಬಂದ ವಿಪತ್ತು ನಿರ್ವಹಣಾ ಕಾನೂನಿನಲ್ಲಿ (ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆ್ಯಕ್ಟ್-ಡಿಎಂಎ) ನೈಸರ್ಗಿಕ ಮತ್ತು ಮಾನವ ಪ್ರೇರಿತ ವಿಪತ್ತುಗಳಿಂದಾಗುವ ಸಂಪತ್ತು ಮತ್ತು ಜೀವ ನಾಶಗಳನ್ನು ಕಡಿಮೆ ಮಾಡಲು ಅಗತ್ಯವಾದ ಶಾಸನಾತ್ಮಕ ನಿಯಮಗಳಿವೆ. ದುರಂತಗಳನ್ನು ತಡೆಯಲು ಸಹಾಯವಾಗುವ ಮುಂಜಾಗರೂಕತಾ ಕ್ರಮಗಳನ್ನು ಕಾನೂನು ಪಟ್ಟಿಮಾಡಿದೆ. ಮನುಷ್ಯರ ನಿರ್ಲಕ್ಷದಿಂದ ಸಂಭವಿಸಿದ ದುರಂತಗಳೂ ಈ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತವೆ.
ಉದಾಹರಣೆಗಾಗಿ, ಡಿಎಂಎ ಸೆ.2(ಡಿ)ಯ ಪ್ರಕಾರ ವಿಪತ್ತು ನಿರ್ವಹಣೆಯ ಪ್ರಕ್ರಿಯೆಯು ವಿಪತ್ತನ್ನು ತಡೆಯ ಬಲ್ಲ ಮುಂಜಾಗರೂಕತಾ ಕ್ರಮಗಳನ್ನು ಒಳಗೊಂಡಿದೆ. ಸೆ.22 (2) ರಾಜ್ಯ ಸರಕಾರದ ಜವಾಬ್ದಾರಿಯನ್ನು ಮತ್ತು ಸಂಭಾವ್ಯ ವಿಪತ್ತನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದರ ಪ್ರಕಾರ ರಾಜ್ಯದ ಯಾವುದೇ ಪ್ರದೇಶದಲ್ಲಿ ಕಟ್ಟಿರುವ ನಿರ್ಮಾಣವು ವಿಪತ್ತು ತಡೆಯಲು ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿದ್ದಲ್ಲಿ, ಆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ನಿರ್ದೇಶನವನ್ನು ನೀಡುವ ಬಾಧ್ಯತೆಯನ್ನು ರಾಜ್ಯ ಸರಕಾರವು ಹೊಂದಿದೆ. ಸೆ.58ರ ಪ್ರಕಾರ ಈ ವಿಧಿಯಲ್ಲಿ ಉಲ್ಲೇಖಿಸಿದ ನಿಯಮಗಳ ಉಲ್ಲಂಘನೆ ಮಾಡಿದ ಕಂಪೆನಿಯು ಕ್ರಿಮಿನಲ್ ಕಾನೂನಿನಂತೆ ಶಿಕ್ಷಾರ್ಹವಾಗುತ್ತದೆ.
ಉತ್ತರದಾಯಿತ್ವವಿಲ್ಲದ ಸರಕಾರ:
ನಡೆದ ಘಟನೆಗಳು ಮತ್ತು ಗಮನಕ್ಕೆ ಬಂದ ಅಧಿಕಾರಿಗಳ ನಿರ್ಲಕ್ಷದ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಒಂದು, ಅಜಂತಾ ಗಡಿಯಾರ ಕಂಪೆನಿಗೆ ಸೇತುವೆಯ ಕುರಿತಾದ ತಾಂತ್ರಿಕ ನೈಪುಣ್ಯ ಇತ್ತೆ? ಎರಡು, ಸೇತುವೆಯ ದುರಸ್ತಿಯ ಗುತ್ತಿಗೆ ನೀಡುವಾಗ ಅಗತ್ಯವಾದ ಕ್ರಮಗಳನ್ನು ಅನುಸರಿಸಲಾಗಿದೆಯೆ? ಮೂರು, ದುರಸ್ತಿಯ ಕೆಲಸ ಮುಗಿದಾಗ ಸಂಬಂಧಪಟ್ಟ ಅಧಿಕಾರಿಗಳು ಅದು ಸಮರ್ಪಕವಾಗಿದೆ ಎಂದು ಖಚಿತಪಡಿಸಿದ್ದಾರೆಯೇ? ಅದರ ಕುರಿತಾದ ಪ್ರಮಾಣ ಪತ್ರ ನೀಡುವ ಮೊದಲೇ ಸೇತುವೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಯಾಕೆ ಮುಕ್ತಗೊಳಿಸಲಾಯಿತು? ಯಾರ ನಿರ್ದೇಶನದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿದಾಗ ಮೊರ್ಬಿ ಪಟ್ಟಣದ ಅಧಿಕಾರಿಗಳು, ರಾಜ್ಯ ಸರಕಾರದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ರಿಪೇರಿಯ ಗುತ್ತಿಗೆ ವಹಿಸಿಕೊಂಡ ಅಜಂತಾ ಗಡಿಯಾರ ಕಂಪೆನಿಯು ಡಿಎಂಎ ಪ್ರಕಾರ ಶಿಕ್ಷಾರ್ಹವಾದ ಅಪರಾಧವನ್ನು ಎಸಗಿದೆ ಎಂಬುದು ನಿಸ್ಸಂಶಯ.
ಹಾಗಿದ್ದರೆ, ಕಂಪೆನಿಯ ಮುಖ್ಯಸ್ಥ ಹಾಗೂ ಅದರ ಉನ್ನತ ಅಧಿಕಾರಿಗಳಿಗೆ ತಮ್ಮ ನಿರ್ಲಕ್ಷದಿಂದಾಗಿ ಉಂಟಾದ ಜೀವಹಾನಿಗೆ ಬಾಧ್ಯತೆ ಇಲ್ಲವೇ? ಮೊರ್ಬಿ ಪಟ್ಟಣದ ಮತ್ತು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳಿಗೆ ಬಾಧ್ಯತೆ ಇಲ್ಲವೆ? ಇವುಗಳು ಯಾರ ಸುಪರ್ದಿಗೆ ಬರುತ್ತವೋ ಆ ಸಚಿವರಿಗೆ ಅಲಕ್ಷದಿಂದ ಸಂಭವಿಸಿದ ಘೋರ ದುರಂತದ ಕುರಿತು ಉತ್ತರದಾಯಿತ್ವ ಇಲ್ಲವೇ?
ಇತ್ತೀಚೆಗಿನ ವರ್ಷಗಳಲ್ಲಿ ಈ ತರದ ದುರಂತಗಳು ಸಂಭವಿಸುತ್ತಲೇ ಇವೆ. ಅಪಘಾತವಾದ ಹೊಸತರಲ್ಲಿ ಆಳುವ ಸರಕಾರಗಳು, ಜನಪ್ರತಿನಿಧಿಗಳು ಮತ್ತು ಉದ್ಯೋಗಪತಿಗಳು ತಪ್ಪುಮಾಡಿದವರನ್ನು ಶಿಕ್ಷಿಸುತ್ತೇವೆಂದು ಹೇಳಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಾರೆ. ಕಾನೂನುಗಳು ಇದ್ದರೂ, ಸಂವಿಧಾನಬದ್ಧವಾಗಿ ಜನಸಾಮಾನ್ಯರ ಜೀವರಕ್ಷಣೆ ಮಾಡಬೇಕಾದವರು ಮತ್ತೊಂದು ದುರಂತಕ್ಕೆ ಕಾದು ಮತ್ತೊಮ್ಮೆ ಸಂತಾಪವನ್ನು ಹೇಳಿ ಅದೇ ಮೊಸಳೆ ಕಣ್ಣೀರನ್ನು ಯಥೇಷ್ಟವಾಗಿ ಸುರಿಸುತ್ತಾರೆ; ಮೃತರ ಕುಟುಂಬಕ್ಕೆ ಒಂದಷ್ಟು ಪರಿಹಾರ ನೀಡಿ ಕೈತೊಳೆಯುತ್ತಾರೆ. ಮುಂಜಾಗರೂಕತಾ ಕ್ರಮಗಳನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಿಸಿ ತಪ್ಪಿತಸ್ಥರಿಗೆ ಕಾನೂನು ರೀತ್ಯಾ ಶಿಕ್ಷೆ ವಿಧಿಸುವ ಕ್ರಮಗಳನ್ನು ಕೈಗೊಳ್ಳುವ ತನಕ ಭೋಪಾಲ, ವಿಶಾಖಪಟ್ಟಣಂ(2020), ಮೊರ್ಬಿಗಳು ಪುನರಾವರ್ತನೆಯಾಗುತ್ತಲೇ ಹೋಗುತ್ತವೆ.