varthabharthi


ನಿಮ್ಮ ಅಂಕಣ

ಅರುಂಧತಿ ರಾಯ್: ಬರೀ ಬರೆದವರಲ್ಲ, ದಮನಿತರೆಲ್ಲರ ಜೊತೆಯಾದವರು

ವಾರ್ತಾ ಭಾರತಿ : 24 Nov, 2022
ವೀಣಾ ಎನ್.

ಅಂತರ್‌ರಾಷ್ಟ್ರೀಯ ಖ್ಯಾತಿಯ ಲೇಖಕಿ, ಚಿಂತಕಿ ಮತ್ತು ಹೋರಾಟಗಾರ್ತಿ ಅರುಂಧತಿ ರಾಯ್ ಈ ನೆಲದ ಸಣ್ಣ ಸಮುದಾಯಗಳ ಪರವಾಗಿ ನಿಂತವರು ಮತ್ತು ಅಂಥ ಸಮುದಾಯಗಳ ಮೇಲಿನ ಆಕ್ರಮಣಗಳನ್ನು ಪ್ರತೀ ಹಂತದಲ್ಲಿಯೂ ಖಂಡಿಸಿ ಹೋರಾಟಕ್ಕೆ ನಿಲ್ಲುವವರು. ಭಾರತದ ಉದ್ದಗಲವನ್ನೂ ಓಡಾಡಿ ಕಂಡ ಅವರು ಬರೀ ಬರೆಯದೆ, ಯಾವುದು ಜನಸಮೂಹದ ದನಿಯಾಗುವುದೋ ಅದಕ್ಕಾಗಿ ಮಿಡಿಯುವವರು. ಹಾಗಾಗಿಯೇ ಇವತ್ತಿನ ರಾಜಕಾರಣದ ಕೆಂಗಣ್ಣಿಗೂ ಗುರಿಯಾಗಿರುವವರು. ಇಂದು (ನವೆಂಬರ್ 24) ಅವರ ಜನ್ಮದಿನ.

ಒಂದು ಮಾತು: ‘‘ಇರಾನಿನಲ್ಲಿ ಮಹಿಳೆಯರು ಕಟ್ಟುನಿಟ್ಟಾಗಿ ಹಿಜಾಬ್ ಧರಿಸಬೇಕೆನ್ನುವುದಾಗಲೀ ಭಾರತ ಮತ್ತಿತರ ದೇಶಗಳಲ್ಲಿ ಅದರ ಮೇಲಿನ ನಿಷೇಧವಾಗಲೀ ಪರಸ್ಪರ ವಿರುದ್ಧ ಎನ್ನಿಸಬಹುದು. ಆದರೆ ಅಲ್ಲ. ಅವೆರಡೂ ಒಂದೇ. ಮಹಿಳೆ ಹಿಜಾಬ್ ಧರಿಸಲೇಬೇಕೆನ್ನುವುದು, ಧರಿಸಕೂಡದೆನ್ನುವುದು ಹಿಜಾಬ್ ಕುರಿತದ್ದಲ್ಲ. ಬದಲಾಗಿ ಬಲವಂತವಾಗಿ ಹೇರುವುದಕ್ಕೆ ಸಂಬಂಧಿಸಿದ್ದು. ಹೆಣ್ಣಿನ ಉಡುಗೆಯನ್ನು ನಿರ್ಧರಿಸುವ ಮೂಲಕ ಅವಳನ್ನು ನಿಯಂತ್ರಣದಲ್ಲಿಡುವ ಅವಳ ಮೇಲೆ ಪೊಲೀಸ್‌ಗಿರಿ ಮಾಡುವ ಅತಿ ಹಳೆಯ ಜಾಯಮಾನ ಇದು.’’

ಇನ್ನೊಂದು: ‘‘ವಸಾಹತುಶಾಹಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ, ಆದರೆ ನಮ್ಮ ಸಮಾಜದಲ್ಲಿನ ತಪ್ಪುಗಳ ಬಗ್ಗೆ ಮಾತನಾಡದಿರುವ ಭಾರತೀಯ ಬುದ್ಧಿಜೀವಿಗಳಲ್ಲಿ ಒಬ್ಬಳೆಂದು ನನ್ನನ್ನು ನಾನು ಅಂದುಕೊಳ್ಳಲಾರೆ.’’

ಈ ಎರಡೂ ಹೇಳಿಕೆಗಳು ಚಿಂತಕಿ, ಲೇಖಕಿ ಅರುಂಧತಿ ರಾಯ್ ಅವರವು. ಸೆಪ್ಟಂಬರ್‌ನಲ್ಲಿ ಲಂಡನ್‌ನಲ್ಲಿ ನೀಡಿದ ಸ್ಟುವರ್ಟ್ ಹಾಲ್ ಸ್ಮಾರಕ ಉಪನ್ಯಾಸದಲ್ಲಿ ಅರುಂಧತಿ ರಾಯ್ ಆಡಿದ ಮಾತುಗಳಿವು. ಯಾವ ಆಷಾಢಭೂತಿತನವೂ ಇರದಂತೆ ಆಲೋಚಿಸಬಲ್ಲ ಅಪರೂಪದ ಬರಹಗಾರ್ತಿ ಅವರು.

1996ರಲ್ಲಿ ಪ್ರಕಟವಾದ ಅವರ ಮೊದಲ ಕಾದಂಬರಿ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಅವರಿಗೆ ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಕೃತಿ. 1997ರಲ್ಲಿ ಅದಕ್ಕಾಗಿ ಅವರಿಗೆ ಮ್ಯಾನ್ ಬೂಕರ್ ಪ್ರಶಸ್ತಿ (ಈಗ ಸಂಕ್ಷಿಪ್ತವಾಗಿ ಬೂಕರ್ ಪ್ರಶಸ್ತಿ ಎನ್ನಲಾಗುತ್ತದೆ) ಬಂತು.

ಕೌಟುಂಬಿಕ ಕಥಾನಕದ ಪರಿವೇಷವುಳ್ಳ ಈ ಕಾದಂಬರಿ ಯು ಅವಳಿಗಳ ಕಥೆಯನ್ನು ಹೇಳುತ್ತ, ವಿವಿಧ ಭಾರತೀಯ ಸಮುದಾಯಗಳು, ಧರ್ಮಗಳು, ಪ್ರದೇಶಗಳು ಮತ್ತು ಜಾತಿಗಳಲ್ಲಿನ ಸಾಂಸ್ಕೃತಿಕ ನೀತಿಗಳ ಸಂಕೀರ್ಣತೆಗಳ ಮೂಲಕ ಪ್ರಯಾಣಿಸುತ್ತದೆ. ಕೇರಳ ಮತ್ತು ಕೋಲ್ಕತಾದಲ್ಲಿ ನಡೆಯುವ ಈ ಕಥೆಯು ಅರೆ ಆತ್ಮಚರಿತ್ರೆಯಂತಿದೆ. ಏಕೆಂದರೆ ಇದು ರಾಯ್ ಅವರ ಜೀವನದ ಹಲವು ಅಂಶಗಳನ್ನು ಪ್ರತಿಬಿಂಬಿಸುತ್ತದೆ.

ಮೊದಲ ಕಾದಂಬರಿ ಬರೆದ 20 ವರ್ಷಗಳ ಬಳಿಕ 2017ರಲ್ಲಿ ‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಎಂಬ ಕಾದಂಬರಿಯನ್ನು ಅವರು ಪ್ರಕಟಿಸಿದರು. ಇದು ಕೂಡ ಕಲ್ಪನೆ ಮತ್ತು ವರ್ತಮಾನದ ರಾಜಕೀಯವನ್ನು ಸಂಯೋಜಿಸಿ ನಿರೂಪಿಸಿದ ಕಥಾನಕವೇ ಆಗಿದೆ. ರಾಜಕೀಯ ಮತ್ತು ಕಾಲ್ಪನಿಕ ಕಥೆಗಳು ಜೊತೆಜೊತೆಗೇ ನಿರೂಪಿತವಾಗುವಂಥವು ಎಂಬುದು ಅವರ ನಿಲುವು. ಬರವಣಿಗೆ ರಾಜಕೀಯೇತರವಾಗಿರಲಾರದು ಎಂಬ ಸ್ಪಷ್ಟತೆ.
ರಾಯ್ ಈಶಾನ್ಯ ಭಾರತದ ಶಿಲ್ಲಾಂಗ್‌ನಲ್ಲಿ ಕೇರಳದ ಕ್ರಿಶ್ಚಿಯನ್ ತಾಯಿ ಮತ್ತು ಚಹಾ ತೋಟದ ಮಾಲಕ ಬಂಗಾಳಿ ತಂದೆಗೆ ಜನಿಸಿದವರು. ರಾಯ್ ತನ್ನ ಹೆತ್ತವರು ಬೇರ್ಪಟ್ಟ ನಂತರ ಕೇರಳಕ್ಕೆ ತೆರಳಿದರು. ನಂತರ ವಾಸ್ತುಶಾಸ್ತ್ರವನ್ನು ಅಧ್ಯಯನ ಮಾಡಲು ದಿಲ್ಲಿಗೆ ಮರಳಿದರು.

ಆದರೆ ಬರವಣಿಗೆ ಅವರೊಳಗಿನ ತುಡಿತವಾಗಿತ್ತು. ಬರಹಗಾರ್ತಿಯಾಗಿ ಆರಂಭಿಕ ವರ್ಷಗಳಲ್ಲಿ, ಅವರು ಬರೆದ ‘ಇನ್ ವಿಚ್ ಅನ್ನಿ ಗಿವ್ಸ್ ಇಟ್ ದೋಸ್ ಒನ್ಸ್’ (1989) ಎಂಬ ಕಥೆ ಕಲಾತ್ಮಕ ಚಲನಚಿತ್ರವಾಯಿತು. ಬಳಿಕ ‘ಇಲೆಕ್ಟ್ರಿಕ್ ಮೂನ್’ (1992) ಎಂಬ ಚಲನಚಿತ್ರಕ್ಕೂ ಅವರದೇ ಚಿತ್ರಕಥೆಯಿತ್ತು. ಕೆಲವು ಚಿತ್ರಗಳಲ್ಲಿ ನಟನೆಯನ್ನೂ ಮಾಡಿದ್ದಾರೆ. ಆದರೆ ಚಿತ್ರರಂಗದಿಂದ ಬಹುಬೇಗ ದೂರ ಸರಿದು, ತಮ್ಮ ನಿಜ ನೆಲೆಯನ್ನು ಕಂಡುಕೊಂಡರು.

ಅರುಂಧತಿ ರಾಯ್ ಹೆಚ್ಚು ನಿಖರವಾಗಿ ಮತ್ತು ಪ್ರಖರವಾಗಿ ವ್ಯಕ್ತವಾಗುವುದು ತಮ್ಮ ರಾಜಕೀಯ ಬರವಣಿಗೆಗಳ ಮೂಲಕ. ಬೂಕರ್ ಪ್ರಶಸ್ತಿ ಬಂದ ನಂತರದ ವರ್ಷಗಳಲ್ಲಿ, ರಾಯ್ ಅವರು ಸಾಮಾಜಿಕ ಕಾರಣಗಳಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಭಾರತ ಮಾತ್ರವಲ್ಲದೆ ಪ್ರಪಂಚದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತ ಬಂದರು.

ದೇಶದ ಉದ್ದಗಲಕ್ಕೂ ಓಡಾಡಿರುವ ಅವರು, ಯಾವುದೇ ಮೂಲೆಯಲ್ಲಿ ಜನರ ಹಕ್ಕುಗಳು ಕಸಿಯಲ್ಪಡುವ ಸನ್ನಿವೇಶಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಕೇರಳದ ಮಾತುಂಗಾ ಅರಣ್ಯವಾಸಿಗಳನ್ನು ಸರಕಾರ ಗೋಲಿಬಾರ್ ಮಾಡಿ ಕೊಂದುದನ್ನು ಖಂಡಿಸಿದ ದಿಟ್ಟೆ ಅವರು. ಅವರ ಹೋರಾಟದ ಹಾದಿ ನಿಕ್ಕಿಯಾದದ್ದು ಕೂಡ 2002ರ ಆ ಘಟನೆಯಿಂದಾಗಿಯೇ.

1999ರಲ್ಲಿ, ಅವರು ಸರ್ದಾರ್ ಸರೋವರ ಅಣೆಕಟ್ಟಿನ ವಿರುದ್ಧವಾಗಿ ರೂಪುಗೊಂಡ ಪ್ರತಿರೋಧ ಚಳವಳಿಯ ಬಗ್ಗೆ ದಿ ಗ್ರೇಟರ್ ಕಾಮನ್ ಗುಡ್ ಎಂಬ ಮಹತ್ವದ ಪ್ರಬಂಧವನ್ನು ಪ್ರಕಟಿಸಿದರು. ಅಣೆಕಟ್ಟನ್ನು ನಿರ್ಮಿಸಿದ ನಂತರ ಹಳ್ಳಿಗಳು ಮುಳುಗುವ, ಬುಡಕಟ್ಟು ಸಮುದಾಯಗಳ ದುಃಸ್ಥಿತಿಯ ಚಿತ್ರಣ ಈ ಪ್ರಬಂಧದಲ್ಲಿದೆ. ಪ್ರಬಂಧವು ಜಾಗತಿಕವಾಗಿ ಗಮನ ಸೆಳೆಯಿತು. ಆದಿವಾಸಿಗಳ ಸ್ಥಳಾಂತರದ ವಿರುದ್ಧ ಹೋರಾಡುತ್ತಿದ್ದ ಮೇಧಾ ಪಾಟ್ಕರ್ ಮತ್ತು ಬುಡಕಟ್ಟು ಸಮುದಾಯಗಳ ಜೊತೆ ನರ್ಮದಾ ಬಚಾವೋ ಆಂದೋಲನದಲ್ಲಿ ಪಾಲ್ಗೊಂಡ ರಾಯ್, ಆ ಚಳವಳಿ ಕುರಿತಂತೆ ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ.

2001ರಲ್ಲಿ, ರಾಯ್ ಅಕ್ಟೋಬರ್ 11ರ ದಾಳಿಯ ಬಗ್ಗೆ ಬರೆದರು. ‘ದಿ ಆಲ್ಜೀಬ್ರಾ ಆಫ್ ಇನ್ಫೈನೈಟ್ ಜಸ್ಟಿಸ್’ ಎಂಬ ಶೀರ್ಷಿಕೆಯ ಅವರ ಪ್ರಬಂಧವು ನಂತರ ಬೇರೆ ಬೇರೆ ರಾಜಕೀಯ ಪ್ರಬಂಧಗಳ ಸಂಕಲನದಲ್ಲಿ ಪ್ರಕಟವಾಯಿತು.

ಭಯೋತ್ಪಾದನೆಯ ಮೇಲಿನ ಅಮೆರಿಕ ಯುದ್ಧ ಪ್ರಾರಂಭವಾಗುವ ಮೊದಲು ಬರೆದ ಪ್ರಬಂಧದಲ್ಲಿ ಅವರು, ‘‘ಅಮೆರಿಕವು ಒಮ್ಮೆ ಯುದ್ಧಕ್ಕೆ ಹೋದರೆ, ಯುದ್ಧ ಮಾಡದೆಯೇ ಹಿಂದಿರುಗಲು ಸಾಧ್ಯವಿಲ್ಲ’’ ಎಂದು ಹೇಳುತ್ತ, ಅಂಥ ಯುದ್ಧದ ಕರಾಳತೆಯನ್ನೂ ವಿವರಿಸಿದ್ದರು. ‘‘ಭಯೋತ್ಪಾದನೆಯ ಮೇಲಿನ ಯುದ್ಧ ಕೆಲವು ಸಮುದಾಯಗಳ ಕಿರುಕುಳಕ್ಕೆ ಕಾರಣವಾಗುತ್ತದೆ, ಕಠಿಣ ನಿಯಮಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತವೆ’’ ಎಂದು ಹೇಳಿದ್ದರು.

2010ರಲ್ಲಿ ಭಾರತದಿಂದ ಕಾಶ್ಮೀರದ ಸ್ವಾತಂತ್ರ್ಯವನ್ನು ಬೆಂಬಲಿಸುವ ಟೀಕೆಗಳನ್ನು ಮಾಡಿದ್ದಕ್ಕಾಗಿ ಪ್ರಬಲ ವಿರೋಧವನ್ನೂ ಎದುರಿಸಬೇಕಾಯಿತು. ಅವರ ವಿರುದ್ಧ ಪ್ರಕರಣ ದಾಖಲಾಗಲೂಬಹುದು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಕೇಂದ್ರ ಗೃಹಸಚಿವಾಲಯ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ.

ಒಂದು ವರ್ಷದ ನಂತರ, ಅವರು ‘ವಾಕಿಂಗ್ ವಿಥ್ ದಿ ಕಾಮ್ರೇಡ್ಸ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು, ಇದು ಮಧ್ಯ ಭಾರತದ ರಾಜ್ಯವಾದ ಛತ್ತೀಸ್‌ಗಡದಲ್ಲಿ ಕಮ್ಯುನಿಸ್ಟ್ ಗೆರಿಲ್ಲಾಗಳೊಂದಿಗೆ ಕಳೆದ ಸಮಯವನ್ನು ವಿವರಿಸುತ್ತದೆ. ಚೀನಾದ ಕಮ್ಯುನಿಸ್ಟ್ ನಾಯಕ ಮಾವೋ ಝೆಡಾಂಗ್ ಅವರ ಕ್ರಾಂತಿಕಾರಿ ವಿಚಾರಗಳಿಗೆ ಬದ್ಧರಾಗಿರುವುದಕ್ಕಾಗಿ ಮಾವೋವಾದಿಗಳು ಎಂದು ಕರೆಯಲ್ಪಡುವ ಬಂಡುಕೋರರು ದಶಕಗಳಿಂದ ಹೋರಾಡುತ್ತಿದ್ದಾರೆ
2020ರಲ್ಲಿ ಅವರ ರಾಜಕೀಯ ಪ್ರಬಂಧಗಳ ಸಂಕಲನ ‘ಆಝಾದಿ’ ಪ್ರಕಟವಾಯಿತು.

ಇದು ಭಾರತದ ಬಲಪಂಥೀಯ, ಫ್ಯಾಶಿಸ್ಟ್, ಸರಕಾರ ಮತ್ತು ಕೋವಿಡ್ ಕಾಲದ ಹಲವಾರು ಸಮಸ್ಯೆಗಳನ್ನು ಚರ್ಚಿಸುತ್ತದೆ. ‘ದಿ ಫೈನಾನ್ಷಿಯಲ್ ಟೈಮ್ಸ್’ ಪ್ರಕಟಿಸಿದ ‘ದಿ ಪ್ಯಾಂಡೆಮಿಕ್ ಈಸ್ ಎ ಪೋರ್ಟಲ್’ ಎಂಬ ಸಂಪುಟದಲ್ಲಿನ ಪ್ರಬಂಧದಲ್ಲಿ, ಕೊರೋನ ವೈರಸ್ ಹರಡುವಿಕೆಯು ವಿಶ್ವಾದ್ಯಂತ ಸಾಮಾಜಿಕ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳಲ್ಲಿನ ದೌರ್ಬಲ್ಯಗಳನ್ನು ಹೇಗೆ ಬಹಿರಂಗಪಡಿಸಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ. ‘‘ಭಾರತದಲ್ಲಿ, ಆರೋಗ್ಯ ಸೌಲಭ್ಯಗಳ ಕೊರತೆಯು ಶ್ರೀಮಂತರು ಮತ್ತು ಬಡವರು, ಮೇಲ್ವರ್ಗದವರು ಮತ್ತು ಕೆಳ ಜಾತಿಗಳು ಹೀಗೆ ವರ್ಗಗಳ ನಡುವಿನ ಅಂತರವನ್ನು ಹೆಚ್ಚಿಸಿದೆ. ಬಡವರಿಗೆ ಬದುಕು ಕಷ್ಟ’’ ಎಂದು ಅವರು ಬರೆಯುತ್ತಾರೆ.

ಸಾಂಕ್ರಾಮಿಕ ರೋಗವು ಜಗತ್ತನ್ನು ಬದಲಾಯಿಸಿದೆ ಮತ್ತು ನಾವು ನಮಗಾಗಿ ನಿರ್ಮಿಸಿದ ಪ್ರಪಂಚದ ಬಗ್ಗೆ ಆತ್ಮಾವಲೋಕನ ಮಾಡಲು ನಮಗೆ ಅವಕಾಶವನ್ನು ನೀಡಿದೆ ಎಂದು ಅವರು ವಾದಿಸುತ್ತಾರೆ: ‘‘ನಾವು ಅದರ ಮೂಲಕ ನಡೆಯಲು ಆಯ್ಕೆ ಮಾಡಬಹುದು, ನಮ್ಮ ಪೂರ್ವಾಗ್ರಹ ಅಥವಾ ದ್ವೇಷದ ಶವಗಳನ್ನು ಎಳೆದುಕೊಂಡು ಹೋಗಬಹುದು ಅಥವಾ ನಾವು ಸ್ವಲ್ಪ ಸಾಮಾನುಗಳೊಂದಿಗೆ ಲಘುವಾಗಿ ಅದರ ಮೂಲಕ ನಡೆಯುತ್ತ, ಇನ್ನೊಂದು ಜಗತ್ತನ್ನು ಕಲ್ಪಿಸಿಕೊಳ್ಳಲು ಸಿದ್ಧವಾಗಬಹುದು’’.

ರಾಯ್ ಅವರ ರಾಜಕೀಯ ಬರಹಗಳನ್ನು ಸಾಮಾನ್ಯವಾಗಿ ತುಂಬಾ ಪಕ್ಷಪಾತಿ ಮತ್ತು ಕಟುವಾದವು ಎಂದು ಕರೆಯಲಾಗುತ್ತದೆ, ಆದರೆ ವಾಸ್ತವವಾಗಿ, ಲೇಖಕಿಯಾಗಿ, ಅವರು ವಾಸಿಸುವ ಸಮಾಜಕ್ಕೆ ಕನ್ನಡಿ ಹಿಡಿದಿದ್ದಾರೆ. ಅವರ ವಿಷಯದಲ್ಲಿ, ಇದು ಭಾರತ ಮತ್ತು ಪ್ರಪಂಚವನ್ನು ಒಳಗೊಂಡ ನೋಟ. ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಎದುರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವನ್ನು ಅವರು ಒತ್ತಾಯಿಸುತ್ತಾರೆ. ಯಾಕೆಂದರೆ, ಅವರ ದೃಷ್ಟಿಯಲ್ಲಿ ಬರವಣಿಗೆಯು ಹೋರಾಟವೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)