varthabharthi


ಈ ಹೊತ್ತಿನ ಹೊತ್ತಿಗೆ

ಇಂಗ್ಲಿಷ್‌ನಲ್ಲಿ ಡಾ.ಅಮೃತ ಸೋಮೇಶ್ವರರ ಭಗವತಿ ಆರಾಧನೆ

ವಾರ್ತಾ ಭಾರತಿ : 24 Nov, 2022
ವಾಸುದೇವ ಉಚ್ಚಿಲ

1998ರಲ್ಲಿ ಡಾ.ಅಮೃತ ಸೋಮೇಶ್ವರ ಅವರು ಬರೆದ ‘ಭಗವತಿ ಆರಾಧನೆ’ ಕೃತಿಯ ಇಂಗ್ಲಿಷ್ ಅನುವಾದ ಈಗ ಕೆಲವು ದಿನಗಳ ಹಿಂದೆಯಷ್ಟೆ ಲೋಕಾರ್ಪಣೆಗೊಂಡಿದೆ. ಕನ್ನಡ, ತುಳುವಿನಲ್ಲಿ ಹಲವಾರು ಸೃಜನಶೀಲ ಕೃತಿಗಳ ಜೊತೆ ತುಳು ಜಾನಪದ-ಸಂಸ್ಕೃತಿ, ಯಕ್ಷಗಾನ ಸಂಶೋಧನೆ ಇತ್ಯಾದಿ ಕ್ಷೇತ್ರಗಳಲ್ಲಿ ನೂರಕ್ಕೂ ಮೀರಿದ ಪುಸ್ತಕಗಳನ್ನು ಅಮೃತರು ಬರೆದಿದ್ದಾರೆ. ಅವರು ಹೊಸದಾಗಿ ಪುಸ್ತಕ ಪ್ರಕಟಿಸಿದ್ದಾರೆಂದರೆ, ಅದನ್ನು ಬಾಚಿ ಓದುವ ದೊಡ್ಡ ಓದುಗ ವರ್ಗವೇ ಇದೆ.

ಮಲಯಾಳ ಭಾಷೆ ಆಡುವ ಭಗವತಿ ದೈವಗಳ ಆರಾಧನೆಯ ಬಗ್ಗೆ ಅವರು ಹಲವಾರು ಬರಹ, ಗ್ರಂಥ ಪ್ರಕಟಿಸಿದ್ದರೂ, ಕರಾವಳಿಯ ವಿದ್ವದ್ವಲಯದಲ್ಲಿ ಅವರು ತುಳು, ಯಕ್ಷಗಾನ ವಿದ್ವಾಂಸರೆಂದೇ ಪ್ರಸಿದ್ಧರಾಗಿದ್ದಾರೆ. ಉತ್ತರ ಮಲಬಾರಿನಿಂದ ಮಂಗಳೂರಿನವರೆಗೆ ವಾಸಿಸುವ ಮಲಯಾಳ ಮನೆಮಾತಿನ ಸಮುದಾಯದ ಆಚರಣೆಗಳು, ಆರಾಧನೆಗಳ ಬಗ್ಗೆ ತುಳು ವಿದ್ವಾಂಸರು ಗಮನ ಹರಿಸಿದ್ದು ಕಡಿಮೆ. ಅಮೃತರು ಭಗವತಿ ಆರಾಧನೆ ಕನ್ನಡದಲ್ಲಿ ಬರೆದು 24 ವರ್ಷಗಳೇ ಆಗಿದ್ದರೂ ಕನ್ನಡ ತುಳು ವಿದ್ವಾಂಸರು ಈ ಮಹಾನ್ ಗ್ರಂಥದ ಬಗ್ಗೆ ಪರಿಶೀಲಿಸಿದ್ದು ಕಂಡು ಬರುವುದಿಲ್ಲ.

ಮಲಯಾಳ ಭಾಷೆಯ ಒಂದು ಉಪಭಾಷೆಯು ಅಮೃತರ ಮನೆ ಭಾಷೆಯಾಗಿದೆ. ಈ ಭಾಷೆಯನ್ನು ಆಡುವ ತೀಯ(ಬೆಲ್ಚಡ), ಮೋಯ(ಬೋವಿ), ವಣಿಯ(ಗಾಣಿಗ), ಶಾಲಿಯ (ನೇಕಾರ) ಇತ್ಯಾದಿ ಜಾತಿಗಳವರು ಭಗವತಿ ದೈವ (ಥೆಯ್ಯಂ) ಆರಾಧಕರಾಗಿದ್ದು, ಈ ಆರಾಧನೆಯು ಹೋಲಿಕೆಯಲ್ಲಿ ತುಳುನಾಡಿನ ಭೂತಾರಾಧನೆಯಂತಿದೆ. ಕೆಲವು ಸ್ಥಳಗಳಲ್ಲಿ ಭಗವತಿ ಆರಾಧನೆಯೊಂದಿಗೆ ಕೆಲವು ತುಳು ಭೂತಗಳ ಆರಾಧನೆಗಳೂ ನಡೆಯುತ್ತವೆ. ಇಂಥ ಆರಾಧನಾ ಸಂಸ್ಕೃತಿಯ ವಿಸ್ತೃತ ಅಧ್ಯಯನವನ್ನು ‘ಭಗವತಿ ಆರಾಧನೆ’ ಗ್ರಂಥದಲ್ಲಿ ಅಮೃತರು ನಡೆಸಿದ್ದಾರೆ.

ಭಗವತಿ ಆರಾಧನೆಯು ಉತ್ತರ ಕೇರಳದಲ್ಲಿ ವ್ಯಾಪಕವಾಗಿದೆ. ಅತ್ಯಂತ ಪ್ರಾಚೀನವಾದ ಕೊಡುಂಗಲ್ಲೂರು ಭಗವತಿ ಕ್ಷೇತ್ರವು ಹೆಚ್ಚು ಜನಪ್ರಿಯವಾಗಿದೆ. ಕಾಸರಗೋಡು ಜಿಲ್ಲೆ, ಮಂಗಳೂರು ತಾಲೂಕುಗಳ ಭಗವತಿ ಕ್ಷೇತ್ರಗಳನ್ನು ಅಮೃತರು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಮೋಯರ್ (ಬೋವಿ) ಸಮುದಾಯಕ್ಕೆ ಸೇರಿದ 11 ಕ್ಷೇತ್ರಗಳ ಆರಾಧನೆಯನ್ನು ವಿಸ್ತಾರವಾಗಿ ವಿವರಣೆ ಮಾಡಲಾಗಿದೆ. ಸೋಮೇಶ್ವರ-ಅಡ್ಕ ಎಂಬಲ್ಲಿನ ಕ್ಷೇತ್ರದ ವಿವಿಧ ಆಚರಣೆ, ಹಬ್ಬ ಹರಿದಿನಗಳ ಬಗ್ಗೆ ವಿವರಗಳಲ್ಲಿ ಕಾಣಿಸಲಾಗಿದೆ. ಅಲ್ಲದೆ ಈ ಎರಡೂ ಜಿಲ್ಲೆಗಳ ತೀಯರು, ವಣಿಯನ್, ಶಾಲಿಯರ ಹಲವು ಭಗವತಿ ಸ್ಥಾನಗಳ ವೈಶಿಷ್ಟ್ಯಗಳನ್ನೂ ಗ್ರಂಥದಲ್ಲಿ ಕಾಣಿಸಲಾಗಿದೆ.

ಭಗವತಿಯ ಸ್ಥಳ ಪುರಾಣಗಳಲ್ಲಿ ಸಾಮಾನ್ಯವಾದ ಅಂಶವೆಂದರೆ, ಭಗವತಿಗಳು ತಮ್ಮ ಜೊತೆಗಾರರಾದ ಚಾಮುಂಡಿಗಳು, ಪುರುಷ ದೈವಗಳು ಮತ್ತು ಸಹಾಯಕ ದೈವಗಳ ಒಡಗೂಡಿ ದಾರುಕನೆಂಬ ದೈತ್ಯನನ್ನು ನಾಶಮಾಡಿ, ಬಳಿಕ ನಾವೆಗಳಲ್ಲಿ ಕಡಲಿನಲ್ಲಿ ಸಂಚಾರ ಮಾಡುತ್ತಾ, ಬೇರೆ ಬೇರೆ ಊರುಗಳಲ್ಲಿ ನೆಲೆ ನಿಲ್ಲುವ ಕಥೆ ಇದೆ. ದಕ್ಷಿಣದ ತ್ರಿಕರಿಪುರದ ಸಮೀಪದ ಕ್ವಯಂಗರ ಎಂಬಲ್ಲಿಂದ ತೊಡಗಿ ಉತ್ತರದ ಸೋಮೇಶ್ವರದವರೆಗಿನ 11 ಸ್ಥಳಗಳಲ್ಲಿ ಮೋಯ ಸಮುದಾಯದವರು ಆರಾಧಿಸುವ ಭಗವತಿಗಳನ್ನು ವಿವಿಧ ಹೆಸರುಗಳಲ್ಲಿ ಸ್ಥಾಪಿಸಲಾಗಿದೆ. ಮೇಲೆ ಹೇಳಿದ ಸಹಾಯಕ ದೈವಗಳಲ್ಲಿ ಗುಳಿಗ, ಬೊಬ್ಬರ್ಯ, ಪಂಜುರ್ಲಿ ಇತ್ಯಾದಿ ತುಳುವರು ಆರಾಧಿಸುವ ದೈವಗಳೂ ಇರುವ ಸಂಕರವನ್ನು ಕಾಣುತ್ತೇವೆ. ಭಗವತಿಯ ಜೊತೆ ಚಾಮುಂಡಿಯರೂ, ವೀರರನ್ನು ಪ್ರತಿನಿಧಿಸುವ ಪುರುಷ ದೈವಗಳೂ ಮಲಯಾಳ ಮೂಲದ್ದಾಗಿದೆ. ಉಗ್ರ ಸ್ವರೂಪದ ವಿಷ್ಣುಮೂರ್ತಿ ದೈವವು ಮಂಗಳೂರಿನ ಕುಡುಪ್ಪಾಡಿ ಎಂಬಲ್ಲಿ ಉದ್ಭವವಾಗಿ ದಕ್ಷಿಣದ ವಿವಿಧ ಸ್ಥಾನಗಳಲ್ಲಿ ನೆಲೆ ಊರಿದಂತೆ ಕಂಡು ಬರುತ್ತದೆ. ಭಗವತಿ ಮತ್ತು ಪರಿವಾರ ದೈವಗಳು ದಕ್ಷಿಣದಿಂದ ಉತ್ತರಕ್ಕೆ ಸಂಚರಿಸಿದ ಯಾತ್ರೆಗಳಿಗೂ ತುಳುನಾಡ ಭೂತಗಳ ಸಂಚಾರ ಯಾತ್ರೆಗಳಿಗೂ ಒಂದು ಸಾದೃಶ್ಯವನ್ನು ನಾವು ಕಾಣಬಹುದಾಗಿದೆ. ಭಗವತಿಗಳ ಮತ್ತು ಭೂತಗಳ ಸಂಚಾರಯಾತ್ರೆ ಎಂದರೆ, ಅವುಗಳನ್ನು ಆರಾಧಿಸುವ ಸಮುದಾಯಗಳು ವಲಸೆ ಹೋದ ದಾರಿಗಳೇ ಆಗಿವೆ ಎಂದು ಕಂಡು ಬರುತ್ತದೆ.

ಮಲಯಾಳ ಸಮುದಾಯದ ಒಡನಾಟವಿದ್ದವರು ಭಗವತಿ ಆರಾಧನೆ ಗ್ರಂಥವನ್ನು ಓದಿ ತೌಲನಿಕವಾಗಿ ವಿವೇಚಿಸಲು ಸಾಧ್ಯವಿದ್ದೀತು. ಮಲಬಾರು ಮತ್ತು ಕೇರಳದಲ್ಲಿ ಮಲಯಾಳ ಭಾಷೆಯಲ್ಲಿ ಭಗವತಿ ಆರಾಧನೆ ಬಗ್ಗೆ ಅಧ್ಯಯನಗಳು ನಡೆದಿದ್ದರೂ, ಕನ್ನಡ ಭಾಷೆಯ ಓದುಗರಾದ ನಮಗೆ ಅದು ತಲುಪಿರಲಾರದು. ಅದೇ ರೀತಿ ಅಮೃತ ಸೋಮೇಶ್ವರರು ಕನ್ನಡದಲ್ಲಿ ಬರೆದ ಭಗವತಿ ಆರಾಧನೆ ಗ್ರಂಥವೂ ಕೇರಳದ ಮಲಯಾಳಂ ಜಾನಪದ ತಜ್ಞರಿಗೆ ತಲುಪಿರಲಾರದು. ಇಂಥ ಹಿನ್ನೆಲೆಯಲ್ಲಿ ‘ಭಗವತಿ ಆರಾಧನೆ’ ಎಂಬ ಇಂಗ್ಲಿಷ್ ಗ್ರಂಥ ಬಂದಿರುವುದು ಕೇರಳ ಕರ್ನಾಟಕದ ಎಲ್ಲ ಸಂಸ್ಕೃತಿ ಸಂಶೋಧಕರಿಗೆ ಒಂದು ಉಪಯುಕ್ತ ಅಧ್ಯಯನ ಗ್ರಂಥ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. 

ಈ ಅನುವಾದವನ್ನು ಮಾಡಿದ ದಯಾನಂದ ಉಚ್ಚಿಲ್ ಅವರ ಶ್ರಮ ಅತ್ಯಂತ ಶ್ಲಾಘನೀಯವಾದುದು. ಮಲಯಾಳ ಸಂಸ್ಕೃತಿಯ ಆಚರಣೆ, ನಡೆವಳಿ, ಪದಕೋಶಗಳನ್ನು ಕನ್ನಡ ಲಿಪಿಯಲ್ಲಿ ಓದಿ, ಅದರ ಅರ್ಥವನ್ನು ಸೂಕ್ಷ್ಮದಲ್ಲಿ ಗ್ರಹಿಸಿ, ಅದಕ್ಕೆ ಸೂಕ್ತವಾದ ಇಂಗ್ಲಿಷ್ ಪದಗಳ ಆಯ್ಕೆ ನಿಜವಾಗಿಯೂ ಅನುವಾದಕರ ಭಾಷಾಜ್ಞಾನಕ್ಕೆ ಸವಾಲು ಹಾಕುವಂತಹದ್ದು. ಅದನ್ನು ದಯಾನಂದ ಉಚ್ಚಿಲ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.

87 ವರ್ಷಗಳನ್ನು ಪೂರೈಸಿರುವ ಅಮೃತ ಸೋಮೇಶ್ವರರು ಈಗಲೂ ಬರವಣಿಗೆ ಮುಂದುವರಿಸಿದ್ದಾರೆ. 1890ರ ದಶಕದಲ್ಲಿ ರೆವರೆಂಡ್ ಮ್ಯಾನ್ನರ್ ಅವರ ಬರವಣಿಗೆಗಳಿಂದ ಮತ್ತು ಎ.ಸಿ.ಬರ್ನಲ್ ಅವರು ಸಂಗ್ರಹಿಸಿದ ತುಳು ಪಾಡ್ದನಗಳ ಪ್ರಕಟಣೆಯಿಂದ ತುಳುವ ಸಂಸ್ಕೃತಿಯ ಅಧ್ಯಯನ ಮೊದಲಾಯಿತಾದರೂ, ತುಳು ಪಾಡ್ದನ ಹಾಗೂ ಜನಪದಗಳ ವಿಸ್ತಾರವಾದ ಅಧ್ಯಯನ ಮೊದಲಾದದ್ದು ಅಮೃತ ಸೋಮೇಶ್ವರರಿಂದಲೇ-ಅದು 1960ರ ದಶಕದಲ್ಲಿ. ಬಳಿಕ ತುಳುವ ಸಂಸ್ಕೃತಿ ಅಧ್ಯಯನದ ಬಗ್ಗೆ ಎಂಟತ್ತು ಕೃತಿಗಳನ್ನು ಅವರು ರಚಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ತುಳು ಪಾಡ್ದನ ಸಂಪುಟ’ ಎಂಬ ಅವರ ಬೃಹತ್ ಸಂಗ್ರಹದಲ್ಲಿ ಪಾಡ್ದನಗಳ ಕನ್ನಡ ಅನುವಾದಗಳನ್ನೂ ಒದಗಿಸಿದ್ದಾರೆ. ಇದೇ ರೀತಿಯ ಸಂಶೋಧನೆಗಳನ್ನು ಅವರು ಯಕ್ಷಗಾನ ಕ್ಷೇತ್ರದಲ್ಲೂ ಮಾಡಿದ್ದಾರೆ.

ಅಮೃತ ಸೋಮೇಶ್ವರರ ಸಂಶೋಧನಾ ಬರಹಗಳಲ್ಲಿ, ಅವರು ನಿರ್ದಿಷ್ಟ ತೀರ್ಮಾನಗಳನ್ನು ಕೊಡುವಲ್ಲಿ, ಸಾಕ್ಷ್ಯಾಧಾರವನ್ನು ಅವಲಂಬಿಸಿರುತ್ತಾರೆ. ಸಾಕ್ಷ್ಯಾಧಾರ ಇಲ್ಲದಲ್ಲಿ ಹೇರಳ ಮಾಹಿತಿಗಳನ್ನು ಒದಗಿಸುತ್ತಾರೆ. ಇದರಿಂದ ಪೂರ್ವಗ್ರಹಗಳಿಲ್ಲದ ವೈಜ್ಞಾನಿಕ ವಿಧಾನ ಅವರ ಸಂಶೋಧನಾ ವಿಧಾನವೆಂದು ಪ್ರಶಂಸೆಗೆ ಪಾತ್ರವಾಗಿದೆ. ಸಮಕಾಲೀನ ಹಿರಿಯ ವಿದ್ವಾಂಸರಲ್ಲಿ ಪ್ರಗತಿಪರ ಮನೋಧರ್ಮ ಉಳ್ಳವರು ಅವರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)