varthabharthi


ಕರ್ನಾಟಕ

ದಲಿತ ನಾಯಕ, ಮಾಜಿ ಶಾಸಕ ಡಾ.ಬಿ.ಎಂ ತಿಪ್ಪೇಸ್ವಾಮಿ ಸಮಾಧಿ ಧ್ವಂಸಗೈದವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ವಾರ್ತಾ ಭಾರತಿ : 24 Nov, 2022

ದಾವಣಗೆರೆ: 'ಮಾಜಿ ಶಾಸಕ ಹಾಗೂ ದಲಿತ ಸಮುದಾಯದ ನಾಯಕರಾದ ಡಾ.ಬಿ.ಎಂ. ತಿಪ್ಪೇಸ್ವಾಮಿ ಮತ್ತವರ ಕುಟುಂಬದ ಮೂವರು ಸದಸ್ಯರ ಸಮಾಧಿಗಳನ್ನು ಧ್ವಂಸಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ವಿದ್ಯುತ್ ನಗರದ ಸಮಾಧಿ ಸ್ಥಳದಿಂದ ಪಾದ ಯಾತ್ರೆ ಮೂಲಕ ಅಂಬೇಡ್ಕರ್ ವೃತ್ತಕ್ಕೆ ತೆರಳಿ, ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಉಪ ವಿಭಾಗಾಧಿಕಾರಿ ಮತ್ತು ಡಿಸಿ ಕಚೇರಿಗೆ ತಲುಪಿ ಮನವಿ ಸಲ್ಲಿಸಿದರು.

ಈ ವೇಳೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಮಾತನಾಡಿ, ''ಭೂಗಳ್ಳರು ಅತಿಕ್ರಮಣ ಮಾಡಿ ಸಮಾಧಿ ನೆಲಸಮ ಮಾಡಿದ್ದಾರೆ. ಇದು ದೇವಸ್ಥಾನವನ್ನು ಒಡೆದಷ್ಟೇ ಘೋರ ಅಪರಾಧವಾಗಿದೆ. ಡಾ.ತಿಪ್ಪೇಸ್ವಾಮಿ ಅವರು ದಾವಣಗೆರೆಗೆ ಅಥವಾ ಅವರ ಕುಟುಂಬಕ್ಕೆ ಸೇರಿದವರಲ್ಲ. ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ'' ಎಂದು ಹೇಳಿದರು.

''ಡಾ.ಬಿ.ಎಂ. ತಿಪ್ಪೇಸ್ವಾಮಿ ಅವರು ಕಣ್ಣಿನ ತಜ್ಞನಾಗಿ, ಶಾಸಕರಾಗಿ, ಕೆಪಿಎಸ್‍ಸಿ ಸದಸ್ಯರಾಗಿ ಕೆಲಸ ಮಾಡಿದ್ದವರು. ಅಂಥವರ ಸಮಾಧಿಯನ್ನು ಒಡೆದು ಹಾಕಿದ್ದಾರೆ. ಭೂಗಳ್ಳರಿಗೆ ಸರಕಾರದ ಭಯ ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ. ಸಮಾಧಿ ನೆಲಸಮ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು. ಸಮಾಧಿಗಳನ್ನು ಮರು ನಿರ್ಮಿಸಿಕೊಡಬೇಕು. ಬೇಡಿಕೆ ಈಡೇರದಿದ್ದರೆ ಈ ಹೋರಾಟ ಬೇರೆಯೇ ತಿರುವು ಪಡೆಯಲಿದೆ'' ಎಂದು ಎಚ್ಚರಿಸಿದರು.

ತಿಪ್ಪೇಸ್ವಾಮಿಯವರ ಪುತ್ರಿ, ಸಾಹಿತಿ ಬಿ.ಟಿ. ಜಾಹ್ನವಿ  ಮಾತನಾಡಿ, ''ನಮ್ಮ ತಂದೆ ತಿಪ್ಪೇಸ್ವಾಮಿ, ತಾಯಿ ಯಲ್ಲಮ್ಮ, ಸಹೋದರರಾದ ಬಿ.ಟಿ. ಮೋಹನ್, ಬಿ.ಟಿ. ಮಲ್ಲಿಕಾರ್ಜುನ ಅವರ ಸಮಾಧಿಯನ್ನು ಒಡೆಯುತ್ತಿದ್ದಾರೆ ಎಂಬ ಮಾಹಿತಿ ಬಂದಾಗ ನಾನು ಮತ್ತು ಮಗ ಬಂದೆವು. ಇಲ್ಲಿದ್ದ ಗಣೇಶ್ ಹುಲ್ಮನಿ ಮತ್ತು ಇತರರು ನಮ್ಮ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಪ್ರಶ್ನಿಸಿದಾಗ 1955ರಿಂದ ಭೂಮಿ ನಮ್ಮ ಸ್ವಾಧೀನದಲ್ಲಿದೆ ಎಂದಿದ್ದಾರೆ. ಈ ಭೂಮಿ ಅವರಲ್ಲಿದ್ದರೆ, 1990ರಿಂದ ಇಲ್ಲಿವರೆಗೆ ನಾಲ್ಕು ಸಮಾಧಿ ಮಾಡಲು ಯಾಕೆ ಅವಕಾಶ ಮಾಡಿಕೊಟ್ಟರು?" ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಗುರುಮೂರ್ತಿ, ಮಾನವ ಬಂಧುತ್ವ ವೇದಿಕೆಯ ಡಾ.ಎ.ಬಿ. ರಾಮಚಂದ್ರಪ್ಪ,  ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ,  ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ್, ಹನುಮಂತಪ್ಪ ಅಣಜಿ, ಎಂ.ಲಿಂಗರಾಜು, ಪ್ರದೀಪ್, ಮಹಾಂತೇಶ್ ಹಾಲುವರ್ತಿ, ಬನ್ನಿಹಟ್ಟಿ ನಿಂಗಪ್ಪ, ಖಾಲಿದ್ ಅಲಿ, ಮಹಾಂತೇಶ್ ಬೇತೂರು, ಅನಿಸ್ ಪಾಷ, ಜಬೀನಾಖಾನಂ, ಶಿರಿನ್‍ಬಾನು, ಹಾಲೇಶ್, ಡಿ.ಹನುಮಂತಪ್ಪ, ಸಿ. ಬಸವರಾಜ್, ಎಚ್. ಮಲ್ಲೇಶ್ ನೂರಾರು ಜನರು ಭಾಗವಹಿಸಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)