varthabharthi


ಬೆಂಗಳೂರು

ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡುತ್ತಿದ್ದಂತೆ ಉಗ್ರರು ಹುಟ್ಟಿಕೊಳ್ಳುತ್ತಾರೆ: KPCC ವಕ್ತಾರ ಎಂ.ಲಕ್ಷ್ಮಣ್ ಆರೋಪ

ವಾರ್ತಾ ಭಾರತಿ : 24 Nov, 2022

ಬೆಂಗಳೂರು, ನ. 24: ‘ರಾಜ್ಯದಲ್ಲಿ ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡುತ್ತಿದ್ದಂತೆ ಎಲ್ಲಿಲ್ಲದ ಉಗ್ರರು ಹುಟ್ಟಿಕೊಳ್ಳುತ್ತಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ. ತಮಿಳುನಾಡಿನ ಅಫಿಡವಿಟ್ ಬಗ್ಗೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಏಕೆ? ನಿಮಗೆ ಮೆಕೆದಾಟು ಯೋಜನೆ ನಿರ್ಮಾಣ ಮಾಡುವ ಆಸಕ್ತಿ ಇಲ್ಲದಿರುವುದು ಸ್ಪಷ್ಟ. ನಿಮಗೆ ರಾಜ್ಯದ ಜನರ ಹಿತಕ್ಕಿಂತ ತಮಿಳುನಾಡಿನ ಹಿತವೇ ಹೆಚ್ಚಾಗಿದೆ’ ಎಂದು ದೂರಿದರು.

‘ಕೇಂದ್ರ-ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರವಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರ ಅವರ ಕೈಯಲ್ಲಿ ಇದೆ. ಆದರೂ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ. 2020ರಲ್ಲಿ ಮೋದಿ ತಮಿಳುನಾಡಿಗೆ ಹೋಗಿ 8,500 ಕೋಟಿ ರೂ.ಮೊತ್ತದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುತ್ತಾರೆ. ಕಾವೇರಿ ನೀರನ್ನು ತಿರುಗಿಸಿ ತೂತುಕುಡಿ ವರೆಗೂ 4 ಜಿಲ್ಲೆಗೆ ನೀಡಲು ಕೇಂದ್ರವೇ ಹಣ ನೀಡಿ ಯೋಜನೆ ಕೊಟ್ಟಿದೆ. ಪ್ರತಿವರ್ಷ ನಾವು 177 ಟಿಎಂಸಿ ನೀರು ಮಾತ್ರ ಬಿಡಬೇಕು. 1ವರ್ಷದಿಂದ ರಾಜ್ಯದಿಂದ ತಮಿಳುನಾಡಿಗೆ ಹರಿದು ಹೋಗಿರುವ ನೀರು 450 ಟಿಎಂಸಿ. ಅದರಲ್ಲಿ 60 ಟಿಎಂಸಿ ನೀರು ಹಿಡಿದಿಡಲು ಅವಕಾಶ ನೀಡುತ್ತಿಲ್ಲ ಎಂದರೆ ಸರಕಾರದ ವರ್ತನೆ ಹೇಗಿದೆ ನೋಡಿ’ ಎಂದು ಲಕ್ಷ್ಮಣ್ ಪ್ರಶ್ನಿಸಿದರು. 

‘ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ಆಗ್ರಹಿಸಿ ಕಾಂಗ್ರೆಸ್ ದೊಡ್ಡ ಮಟ್ಟದ ಹೋರಾಟ ಮಾಡಿದೆ. ಈ ಹೋರಾಟದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‍ನಲ್ಲಿ ಈ ಯೋಜನೆಗೆ 1ಸಾವಿರ ರೂ.ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಇದು ಕೇವಲ ಘೋಷಣೆಯಾಗಿಯೇ ಉಳಿದಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಸರಕಾರ ಮೂರು ತಿಂಗಳಿಂದ ನಿದ್ದೆ ಮಾಡುತ್ತಿದೆ. ಈಗ ತಮಿಳುನಾಡಿನ ಅಫಿಡವಿಟ್ ಅನ್ನು ಮಾನ್ಯ ಮಾಡಿ ತಮಿಳುನಾಡಿನ ಅನುಮತಿ ಪಡೆದು ಆಣೆಕಟ್ಟು ಕಟ್ಟಿ ಎಂದು ಹೇಳುತ್ತಾರೆ. ಇದಕ್ಕೆಲ್ಲ ಕಾರಣ ಯಡಿಯೂರಪ್ಪ. ಅವರು ಅನವಶ್ಯಕವಾಗಿ ತಮಿಳುನಾಡು ಸಿಎಂಗೆ ಪತ್ರ ಬರೆದು ಯೋಜನೆ ಜಾರಿಗೆ ಅನುಮತಿ ಕೋರಿದ್ದರು. ಇದು ತಮಿಳುನಾಡಿನವರಿಗೆ ಲಾಭವಾಗಲಿದೆ’ ಎಂದು ಲಕ್ಷ್ಮಣ್ ಹೇಳಿದರು.

ಇದೇ ವೇಳೆ ಮಾತನಾಡಿದ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ‘ಯಡಿಯೂರಪ್ಪನವರು ತಮಿಳುನಾಡು ಸರಕಾರಕ್ಕೆ ಪತ್ರ ಬರೆದಿದ್ದು ಏಕೆ ಎಂಬುದು ಸೂಕ್ಷ್ಮ ವಿಚಾರ. ಆಗ ಅಲ್ಲಿ ಅಣ್ಣಾ ಡಿಎಂಕೆ ಪಕ್ಷ ಅಧಿಕಾರದಲ್ಲಿತ್ತು. ಅದಕ್ಕೂ ಬಿಜೆಪಿಗೂ ಹೊಂದಾಣಿಕೆ ಇತ್ತು. ಆಗ ಮೈತ್ರಿ ಮೇಲೆ ತಮಿಳುನಾಡು ಚುನಾವಣೆ ಮಾಡಲು ತೀರ್ಮಾನಿಸಲಾಗುತ್ತಿತ್ತು. ಅಲ್ಲಿ ಈ ಮೈತ್ರಿಗೆ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಬಿಎಸ್‍ವೈ ಪತ್ರ ಬರೆದರು. ಈ ವಿಚಾರವಾಗಿ ಕಾನೂನಾತ್ಮಕ ಹೋರಾಟ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದರು.

‘ನಕಲಿ ಬಿಎಲ್‍ಒ ಗುರುತಿನ ಚೀಟಿ ವಿತರಣೆ ಹೊಣೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊರಬೇಕು. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ತುಷಾರ್ ಅವರನ್ನು ಚುನಾವಣಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಅವರು ಹಿರಿಯ ಐಎಎಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಬಾಕಿಗೆ ಒಳಪಟ್ಟು ಅವರನ್ನ ಅಮಾನತ್ತು ಮಾಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು’

-ರಮೇಶ್ ಬಾಬು ಕಾಂಗ್ರೆಸ್ ಮುಖಂಡ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)