varthabharthi


ಬೆಂಗಳೂರು

ಜ.8ರಂದು ಬೆಂಗಳೂರು ನಗರದಲ್ಲಿ ‘ಚಿತ್ರ ಸಂತೆ; 4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ: ಬಿ.ಎಲ್.ಶಂಕರ್

ವಾರ್ತಾ ಭಾರತಿ : 24 Nov, 2022

ಬೆಂಗಳೂರು, ನ.24: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ನಗರದ ಕುಮಾರ ಕೃಪಾ ರಸ್ತೆ ಹಾಗೂ ಪರಿಷತ್ತಿನ ಆವರಣದಲ್ಲಿ 2023ರ ಜ.8ರಂದು ‘ಚಿತ್ರ ಸಂತೆ’ ಆಯೋಜಿಸಿದ್ದು, ಚಿತ್ರಸಂತೆಯಲ್ಲಿ ಸುಮಾರು ನಾಲ್ಕು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದ್ದಾರೆ.

ಗುರುವಾರ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಸಂತೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಲಾ ಪ್ರದರ್ಶನಗಳನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಝ್ವಾನ್ ಅರ್ಶದ್ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಓರ್ವ ಕಲಾ ಇತಿಹಾಸಕಾರರನ್ನು ಆಹ್ವಾನಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ಹೆಸರನ್ನು ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

ದೇಶದ ವಿವಿಧ ಭಾಗಗಳಿಂದ ಬರುವ ಸುಮಾರು 1,500 ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಸಿಕ್ಕಿಂ ಮೊದಲಾದ ರಾಜ್ಯಗಳ ಕಲಾವಿದರು 20ನೆ ವರ್ಷದ ಈ ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ. ಎಂದಿನಂತೆ ಬೇರೆ ಊರುಗಳಿಂದ ಬರುವ ಕಲಾವಿದರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. 

ವಿಶೇಷವಾಗಿ ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು ಹಾಗೂ ತೊಗಲು ಬೊಂಬೆ ಕಲಾಕೃತಿಗಳು ಸೇರಿ ಪ್ರಶಸ್ತಿಗೆ ಭಾಜಿನರಾಗುವ ಕಲಾವಿದರ ಕಲಾಕೃತಿಗಳನ್ನು ಪರಿಷತ್ತಿನ ಕಲಾ ಗ್ಯಾಲರಿಗಳಲ್ಲಿ ಪ್ರದರ್ಶನ ಮಾಡಲಾಗುವುದು. ಇದಲ್ಲದೆ ರಾಜಸ್ಥಾನಿ ಶೈಲಿ, ಮುಧುಬನಿಯ ಶೈಲಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳು, ಆಕ್ರಲಿಕ್, ಕೊಲಾಜ್, ಲಿಥೋಗ್ರಾಪ್ ಮೊದಲಾದ ಪ್ರಕಾರದ ಕಲಾಕೃತಿಗಳು ಚಿತ್ರಸಂತೆಯಲ್ಲಿ ದೊರೆಯಲಿವೆ ಅವರು ಎಂದರು. 

ಕುಂಚ ಅಥವಾ ಪೆನ್ಸಿಲ್‍ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲೇ ರಚಿಸಿ ಕೊಡುವ ಕಲಾವಿದರು ಚಿತ್ರಸಂತೆಯಲ್ಲಿ ಇರುತ್ತಾರೆ. ವ್ಯಂಗಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಿದ್ದೇವೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಕಲಾವಿದರು ತಮ್ಮ ಕಲಾಕೃತಿಗಳನ್ನು ನೇರವಾಗಿ ಮಾರಾಟ ಮಾಡುತ್ತಾರೆ. ‘ಮನೆಗೊಂದು ಕಲಾಕೃತಿ’ ಘೋಷಣೆಗೆ ಅನುಗುಣವಾಗಿ ಕಲೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯವ ಕೆಲಸವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ ಎಂದು ಅವರು ಹೇಳಿದರು. 

ಉದಯೋನ್ಮುಖ ಕಲಾವಿದರಿಗೆ ಚಿತ್ರಸಂತೆಯು ‘ತೆರದ ಕಲಾಶಾಲೆ’ ಎಂದೇ ಪ್ರಸಿದ್ಧಿಯಾಗಿದ್ದು, ಕಲಾಪ್ರೇಮಿಗಳಿಗೆ 100 ರೂ.ಗಳಿಂದ ಹಿಡಿದು ಹಲವು ಲಕ್ಷ ರೂ.ವರೆಗಿನ ಮೌಲ್ಯದ ಕಲಾಕೃತಿಗಳನ್ನು ಮಾರಾಟ ಮಾಡಲಾಗುತ್ತದೆ. ಈ ವರ್ಷ ಆನ್‍ಲೈನ್ ಮತ್ತು ಭೌತಿಕ ರೂಪದಲ್ಲಿ ಚಿತ್ರಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 

‘ಚಿತ್ರಕಲಾ ಸಮ್ಮಾನ್ ಮತ್ತು ಪ್ರೊ.ಎಂ.ಎಸ್. ನಂಜುಂಡರಾವ್ ಪ್ರಶಸ್ತಿ ಸೇರಿ ಪ್ರೊ.ಎಂ.ಎಸ್. ನಂಜುಂಡರಾವ್ ಪ್ರಶಸ್ತಿ, ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ ಮತ್ತು ವೈ.ಸುಬ್ರಮಣ್ಯರಾಜು ಪ್ರಶಸ್ತಿಯನ್ನು ಚಿತ್ರಸಂತೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು, ಈಗಾಗಲೇ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ’

-ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)