varthabharthi


ಕರ್ನಾಟಕ

ಬೆಳಗಾವಿಯಲ್ಲಿ ಬೃಹತ್ ಆಟೋ ಮೊಬೈಲ್ ಉದ್ಯಮ ಸ್ಥಾಪನೆ: ಸಿಎಂ ಬೊಮ್ಮಾಯಿ

ವಾರ್ತಾ ಭಾರತಿ : 24 Nov, 2022

PHOTO: TWITTER @BSBommai

ಬೆಳಗಾವಿ, ನ.24: ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದರು.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳಗಾವಿ ಶಾಸಕ ಅಭಯ್ ಪಾಟೀಲ್ ನೇತೃತ್ವದ ಬೆಳಗಾವಿಯ ವಾಣಿಜ್ಯೋದ್ಯಮಿಗಳ ನಿಯೋಗದೊಂದಿಗೆ ಬೆಳಗಾವಿಯ ಅಭಿವೃದ್ಧಿ ಕುರಿತ ವಿವಿಧ ವಿಷಯಗಳ ಕುರಿತು ಅವರು ಚರ್ಚಿಸಿದರು.

ಬೆಳಗಾವಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಹಾಗೂ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಉದ್ಯಮ ಸ್ಥಾಪನೆಯಿಂದ ಕೈಗಾರಿಕಾ ಅಭಿವೃದ್ಧಿ ಇನ್ನಷ್ಟು ವೇಗವಾಗಿ ಆಗಲಿದೆ. ಬೆಳಗಾವಿಯಲ್ಲಿ ಫೌಂಡ್ರಿ ಮತ್ತು ಹೈಡ್ರಾಲಿಕ್ಸ್ ಉದ್ಯಮಗಳಿಗೆ ಉತ್ತೇಜನ ನೀಡಲು ಫೌಂಡ್ರಿ ಪಾರ್ಕ್ ಸ್ಥಾಪಿಸುವಂತೆ ನಿಯೋಗವು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಭೂಮಿ ಗುರುತಿಸಿ, ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಇದಲ್ಲದೆ ಎಂಎಸ್‍ಎಂಇಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸುವ ಶುಲ್ಕ ರಾಜ್ಯದಲ್ಲಿ ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ 100 ಹಾಸಿಗೆ ಸಾಮಥ್ರ್ಯದ ಇಎಸ್‍ಐಸಿ ಆಸ್ಪತ್ರೆ ಸ್ಥಾಪಿಸುವ ಕುರಿತಂತೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಮುಂಬೈ, ಚೆನ್ನೈ ಕಾರಿಡಾರ್‍ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಟೌನ್ ಷಿಪ್ ರಚಿಸಲಾಗುವುದು. ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕು. ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ಬೆಳಗಾವಿ-ಕಿತ್ತೂರು-ಧಾರವಾಡ ರೈಲುಮಾರ್ಗ ಯೋಜನೆಯನ್ನು ಮೊದಲ 5 ಆದ್ಯತೆಯ ಯೋಜನೆಗಳಲ್ಲಿ ಪರಿಗಣಿಸುವಂತೆ ಕೇಂದ್ರ ರೈಲ್ವೆ ಸಚಿವರನ್ನು ಕೋರಲಾಗಿದೆ. ಸರಕಾರ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಇಂಟೆಗ್ರೇಟೆಡ್ ಟೆಕ್ಸ್‍ಟೈಲ್ ಉದ್ಯಮ ಸ್ಥಾಪಿಸಲು ಮುಂದೆ ಬರುವಂತೆ ಸಲಹೆ ನೀಡಿದ ಮುಖ್ಯಮಂತ್ರಿ, ಬೆಳಗಾವಿಯ ಕೈಗಾರಿಕೋದ್ಯಮಗಳ ಬೆಳವಣಿಗೆ ಕುರಿತಂತೆ ಬೆಳಗಾವಿಗೆ ಭೇಟಿ ನೀಡಿದಾಗ ಉದ್ಯಮಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು