ದಲಿತ ಮಹಿಳೆಯರ ಬದುಕಿನ ಸುತ್ತ...
ಭಾರತೀಯ ಸಂಪ್ರದಾಯದ ಚೌಕಟ್ಟಿನೊಳಗೆ ದಲಿತ ಸಮುದಾಯದ ಮಹಿಳೆಯರು ಬಂದಿಯಾಗಿದ್ದು ಇವರ ಬದುಕು ಮತ್ತು ಬವಣೆಗಳು ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ವ್ಯಕ್ತಗೊಂಡು ವಿಷಾದ ಮೂಡಿಸುವುದು ಸುಳ್ಳೇನಲ್ಲ. ದಲಿತ ಮಹಿಳೆಯರನ್ನು ಅಕ್ಷರಸ್ಥ ಮಹಿಳೆಯರು, ಅನಕ್ಷರಸ್ಥ ಮಹಿಳೆಯರು ಎಂದು ವಿಭಾಗಿಸಿ ನೋಡಿದಾಗಲೂ ಅನೇಕ ಸಂಗತಿಗಳು ಸಮಾಜದ ಕಣ್ಣು ತೆರೆಸುತ್ತವೆ. ದಲಿತ ಮಹಿಳೆಯರ ವಾಸ್ತವ ಬದುಕನ್ನು ತುಂಬಾ ಸಮೀಪ ಮತ್ತು ಸಹಾನುಭೂತಿಯಿಂದಲೂ ನೋಡಬೇಕಾದ್ದು ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲೊಂದು ಎಂದು ಪರಿಭಾವಿಸಬಹುದು.
ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳಿವಿರುವ ಅನೇಕ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದರೆ ಮತ್ತೆ ಕೆಲವು ಕುಟುಂಬಗಳು ಅದೇ ಸಾಮಾಜಿಕ ವ್ಯವಸ್ಥೆಯ ಲೋಪದೋಷಗಳನ್ನು ಗ್ರಹಿಸಿ ಸಾಂಸಾರಿಕ ಹೊಣೆಗಾರಿಕೆಗೆ ಸೀಮಿತಗೊಳಿಸಿ ಅವರ ಬದುಕನ್ನು ಕಟ್ಟುಪಾಡಿನ ಬೇಲಿಯೊಳಗೆ ಬಂಧಿಸುವಲ್ಲಿ ಕಾಳಜಿ ವಹಿಸಿರುವುದಷ್ಟನ್ನೇ ಕಾಣಬಹುದು. ಅನೇಕ ಬಾರಿ ಮನನ ಮಾಡಿಕೊಂಡಂತೆ ಬಡತನ, ಅನಕ್ಷರತೆ ಮತ್ತು ಜಾತೀಯತೆಯ ಕಪಿಮುಷ್ಟಿಯೊಳಗೆ ಸಿಲುಕಿರುವ ದಲಿತ ಕುಟುಂಬಗಳಲ್ಲಿ ಹೆಣ್ಣು ಸಂತಾನ ಎಂದರೆ ಮೂಗು ಮುರಿಯುವ ಹಾಗೂ ಕೆಲವೇ ಕುಟುಂಬಗಳು ಸಂಭ್ರಮಿಸುವ ಘಟನೆ ಗಳನ್ನು ನಾವೆಲ್ಲ ಕಾಣಬಹುದು. ಕಾರಣ, ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಆತಂಕಗಳೇ ಕಾರಣವೆಂದರೆ ತಪ್ಪೇನಲ್ಲ.
ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆತರೆ ಕುಟುಂಬವೊಂದು ಸದೃಢಗೊಂಡಂತೆ ಎಂಬ ಕಲ್ಪನೆ ಒಂದೆಡೆಯಾದರೆ, ಹೆಣ್ಣುಮಕ್ಕಳು ಓದಿದರೆಷ್ಟು ಬಿಟ್ಟರೆಷ್ಟು ಮುಸುರೆ ತಿಕ್ಕುವ ಚಾಕರಿಯಿಂದ ಬಿಡುಗಡೆ ಇಲ್ಲ ಎಂಬ ಅನಾದಿ ಕಾಲದ ಸಂಪ್ರದಾಯವನ್ನೇ ಬದುಕಿಗೆ ಹತ್ತಿರವಾಗಿರಿಸಿಕೊಂಡ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿನ ವಿದ್ಯಾಭ್ಯಾಸಕ್ಕೆ ತೃಪ್ತಿ ಹೊಂದಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿದ ಘಟನೆಗಳೂ ಅನೇಕ. ಇದು ಸುಶಿಕ್ಷಿತಳಾಗಬೇಕೆಂಬ ಆಕೆಯ ಕನಸಿನ ರೆಕ್ಕೆಯನ್ನು ಮುರಿದು ಮೂಲೆಯಲ್ಲಿ ಕೂರಿಸುವ ಸಂಪ್ರದಾಯಸ್ಥ ಕುಟುಂಬಗಳ ಹೊಣೆಗೇಡಿತನ ಎನ್ನಲೇಬೇಕು. ಆದರೆ, ನಾಗರಿಕ ಸಮಾಜದ ಪರಿವರ್ತನೆಯ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಕಲಿತಂತೆಲ್ಲ ಸ್ವೇಚ್ಛೆಯ ಬದುಕಿಗೆ ಈಡಾಗುತ್ತಾರೆಂಬ ಪೂರ್ವಾಗ್ರಹಗಳು ಇದಕ್ಕೆ ಕಾರಣವೆಂದು ಗುರುತಿಸಬಹುದೇನೋ? ಅಲ್ಲದೆ, ಹೆಣ್ಣು ಮಕ್ಕಳು ಹೆಚ್ಚು ಸುಶಿಕ್ಷಿತರಾದರೆ ಅವರಿಗೆ ಸೂಕ್ತ ವರನನ್ನು ಹುಡುಕುವುದು ಕಷ್ಟಸಾಧ್ಯ ಎಂಬ ಅಪನಂಬಿಕೆಯೂ ಕಾರಣವಾಗಿದೆ.
ಇನ್ನು ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾಗುತ್ತಿದ್ದಂತೆ ಶಿಕ್ಷಣವನ್ನು ಮೊಟಕುಗೊಳಿಸಿ ವಿವಾಹ ಸಂಬಂಧಗಳನ್ನೇರ್ಪಡಿಸಿ ತಮ್ಮ ಹೊಣೆಗಾರಿಕೆಯಿಂದ ಪೋಷಕರು ನುಣುಚಿಕೊಂಡರೆ, ಬಳಿಕ ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಸಾಗಬೇಕಾದ ಅನಿವಾರ್ಯತೆ, ಜೊತೆ ಜೊತೆಗೆ ಸಾಗಿ ಬರುವ ಸಂತಾನ ಭಾಗ್ಯ, ಅದರ ನಂತರದ ಸಾಲು ಸಾಲು ಹೊಣೆಗಾರಿಕೆಗಳೊಂದಿಗೆ ತಳಕು ಹಾಕಿಕೊಂಡಿರುವ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿ ಒಂದಷ್ಟು ನೆಮ್ಮದಿಯ ದಿನಗಳನ್ನು ಕಾಣುವುದೆಂದರೆ ಅದೊಂದು ಭಾಗ್ಯವೇ ಸರಿ. ಹೀಗೆ ಸಾಗುವ ಬಹಳಷ್ಟು ದಲಿತ ಹೆಣ್ಣು ಮಕ್ಕಳ ಬದುಕು ಸೀಮಿತ ಚೌಕಟ್ಟಿನೊಳಗೆ ಸಿಲುಕುವುದರಿಂದ ಸಾಮಾಜಿಕವಾಗಿ ಗುರುತಿಸಬಹುದಾದಂತಹ ಸಾಧನೆಗಳನ್ನು ಮಾಡುವುದಾಗಲಿ, ತಮ್ಮ ಮನದಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳಲಾಗಲೀ ಸಾಧ್ಯವಾಗದೆ ತೀವ್ರ ಒತ್ತಡ, ಅನಿವಾರ್ಯತೆ ಮತ್ತು ವಾಸ್ತವತೆಗೆ ಹೊಂದಿಕೊಂಡು ಜೀವಿಸುವುದರಲ್ಲಿ ದಲಿತ ಹೆಣ್ಣು ಮಕ್ಕಳು ತೃಪ್ತಿ ಕಾಣುತ್ತಿರುವುದನ್ನು ನೋಡಬಹುದು.
ವಿದ್ಯಾಭ್ಯಾಸದ ಹಂತದಲ್ಲಿ ವಯೋ ಸಹಜ ಆಕರ್ಷಣೆಗೆ ಈಡಾಗುವ ಕೆಲವು ದಲಿತ ಹೆಣ್ಣು ಮಕ್ಕಳು ಸಹ ಇನ್ನಿತರ ಹೆಣ್ಣು ಮಕ್ಕಳಂತೆ ವಾಸ್ತವತೆಯ ಅರಿವಿಲ್ಲದೆ ಮುಗ್ಗರಿಸುವುದು ಸರ್ವೇ ಸಾಮಾನ್ಯ. ಇಂತಹ ಹೆಣ್ಣುಮಕ್ಕಳು ಆತ್ಮಹತ್ಯೆಯಂತಹ ಜೀವವಿರೋಧಿ ಕೃತ್ಯಕ್ಕೆ ಈಡಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮದುವೆಯ ಘಟ್ಟಕ್ಕೆ ಬಂದು ನಂತರ ಪೋಷಕರ ವಿರೋಧದಿಂದಲೋ, ಜಾತಿ ಶ್ರೇಷ್ಠತೆಯ ಕಾರಣದಿಂದಲೋ ವಿವಾಹಾದಿ ಸಂಬಂಧಗಳು ಏರ್ಪಡದೆ ಬದುಕಿನುದ್ದಕ್ಕೂ ಕಹಿ ನುಂಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ದಲಿತ ಸಮಾಜದ ಹೆಣ್ಣು ಮಕ್ಕಳು ಜಾತಿವಾದಿಗಳ ವಂಚನೆಯ ಜಾಲಕ್ಕೆ ಬೀಳದಂತೆ ಮಾತ್ರವಲ್ಲ, ಪ್ರೀತಿಸಿ, ಒಡನಾಟವಿರಿಸಿಕೊಂಡಾಗ್ಯೂ ವರದಕ್ಷಿಣೆ, ಅದ್ದೂರಿ ವೆಚ್ಚಗಳ ನೆಪದಿಂದ ವಂಚಿಸುವ ಸ್ವಜಾತಿ ಅಥವಾ ವಿಜಾತಿ ಯುವಕರ ಮೋಸದ ಜಾಲಕ್ಕೆ ತುತ್ತಾಗದೆ ಎಚ್ಚರ ವಹಿಸಿ ಭವಿಷ್ಯತ್ತಿನ ಬದುಕನ್ನು ವಿವೇಚನೆಯಿಂದ ರೂಪಿಸಿಕೊಳ್ಳಲು ಮುಂದಾಗಬೇಕಾದ್ದು ಅಗತ್ಯ ಎಂಬುದನ್ನು ಮನಗಾಣಬೇಕಿದೆ.
ಆಧುನಿಕ ಕಾಲಘಟ್ಟದ ಸಂದರ್ಭದಲ್ಲಿ ಅಷ್ಟಿಷ್ಟು ವಿದ್ಯಾವಂತರಾದ ದಲಿತ ಹೆಣ್ಣು ಮಕ್ಕಳು ತಾವು ಕಾರ್ಯನಿರ್ವಹಿಸುವ ಉದ್ಯೋಗದ ಸ್ಥಳಗಳಲ್ಲಿ ಸಹೋದ್ಯೋಗಿಯಾಗಿರುವ ತನ್ನ ಬಾಳಸಂಗಾತಿಯಾಗಲು ಯೋಗ್ಯನೆಂಬ ನಂಬಿಕೆಯಿಂದ ಜಾತಿ ಪ್ರಜ್ಞೆ ಇಲ್ಲದೆ ಯುವಕನನ್ನು ಇಷ್ಟಪಟ್ಟು ಭವಿಷ್ಯತ್ತಿನ ಬದುಕನ್ನು ಹಸನುಗೊಳಿಸಿಕೊಳ್ಳಲು ಮುಂದಾದ ಸಂದರ್ಭದಲ್ಲೂ ಜಾತಿಯ ಪ್ರಶ್ನೆ ಎದುರಾಗಿ ಆಕೆಯ ಕನಸು ಮತ್ತು ಆಕಾಂಕ್ಷೆ ಮಣ್ಣುಪಾಲಾಗುತ್ತಿರುವುದು ಹೊಸದೇನಲ್ಲ. ಮತ್ತೂ ಕೆಲವು ಸಂದರ್ಭಗಳಲ್ಲಿ ಜಾತಿ ನಿರ್ಮೂಲನೆಯ ಆಶಯವುಳ್ಳವರು ತಮ್ಮ ತಮ್ಮ ಜಾತಿಪ್ರಜ್ಞೆಯನ್ನು ಧಿಕ್ಕರಿಸಿ ದಾಂಪತ್ಯ ಜೀವನಕ್ಕೆ ಕಾದಿರಿಸಿರುವ ಪ್ರಸಂಗವೂ ಇಲ್ಲದಿಲ್ಲ. ಆದರೆ, ಎರಡೂ ವಿಭಿನ್ನ ಜಾತಿಗಳ ಕುಟುಂಬಗಳ ನಡುವೆ ಪರಸ್ಪರ ಅಸಹನೆ, ಅಸಮಾಧಾನದ ಹೊಗೆ ಎದ್ದು ಈ ದಂಪತಿಗಳ ನೆಮ್ಮದಿಯ ಬದುಕಿಗೆ ಅಡ್ಡಿಯಾಗಿರುವುದಂತೂ ಸತ್ಯ. ಮತ್ತೆ ಕೆಲವು ಸಂದರ್ಭಗಳಲ್ಲಿ ಯಾವುದೇ ವಿವಾದಕ್ಕೆಡೆ ಮಾಡದೆ ದೂರದ ಸ್ಥಳದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವುದು ನಿಜವಾದರೂ ಅದು ಉದ್ಯೋಗಸ್ಥ ಅಥವಾ ಅನುಕೂಲಸ್ಥ ದಂಪತಿಗಳಲ್ಲಿ ಕಾಣಬಹುದೇನೋ? ಈ ವರ್ಗದಲ್ಲಿ ಜಾತ್ಯತೀತ ಮನಸ್ಸಿನ ಮತ್ತು ಸಮನ್ವಯತೆಯ ಒಲವುಳ್ಳ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಹಾಡುಗಾರರು ಮುಂತಾದ ಸಾಂಸ್ಕೃತಿಕ ಲೋಕದ ಪ್ರಜ್ಞಾವಂತರಿರುತ್ತಾರೆಂಬುದು ಗಮನಾರ್ಹ.
ಶಾಸ್ತ್ರ ಸಂಬಂಧಗಳು, ವರದಕ್ಷಿಣೆ, ಒಡವೆ ವಸ್ತ್ರ ಇತ್ಯಾದಿ ಕೊರತೆಗಳ ನೆಪದಲ್ಲಿ ಒಂದು ಒಳ್ಳೆಯ ಸಂಬಂಧ ದಲಿತ ಹೆಣ್ಣಿನ ಪಾಲಿಗೆ ಮರೀಚಿಕೆಯಾದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಸ್ವಜಾತಿ ಯುವಕನನ್ನು ಪ್ರೀತಿಸಿ ವಿವಾಹವಾಗಲು ತಂದೆ ತಾಯಂದಿರು ಅಡ್ಡಿಪಡಿಸಿದ ಕಾರಣ ಅವು ಊರ್ಜಿತವಾಗದೆ ಪರಿತಪಿಸಿದ ಘಟನೆಗಳೂ ಇಲ್ಲದಿಲ್ಲ.
ವಿವಾಹದ ನಂತರವೂ ಶಿಕ್ಷಣವನ್ನು ಮುಂದುವರಿಸುವ ಆಸಕ್ತಿಯುಳ್ಳ ದಲಿತ ಹೆಣ್ಣು ಮಕ್ಕಳಿಗೆ ಉತ್ತೇಜನ ನೀಡಿ ಉನ್ನತ ವ್ಯಾಸಂಗ, ಉನ್ನತ ಹುದ್ದೆಗಳು ದೊರಕಲು ನೆರವಾಗುವ ಸಹೃದಯ ಪತಿ ಇರುವಂತೆಯೇ ಇವರಲ್ಲಿ ಸ್ವಾಭಾವಿಕವಾಗಿ ಹಾಸುಹೊಕ್ಕಾಗಿರುವ ಕಲೆ, ಸಾಹಿತ್ಯ, ಸಂಗೀತ, ಗಾಯನ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ, ಅಭಿರುಚಿಗೆ ಪೂರಕವಾಗಿ ಸ್ಪಂದಿಸಿ ಉತ್ತೇಜಿಸುವ ಉದಾರಿ ಪತಿ ಸ್ವಜಾತಿ ಅಥವಾ ಅಂತರ್‌ಜಾತಿಯ ಪತಿಯಲ್ಲಿ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅದೇ ಕಾಲಕ್ಕೆ ಇದ್ಯಾವುದನ್ನೂ ಲೆಕ್ಕಿಸದೆ ಅಥವಾ ಮಾತ್ಸರ್ಯದಿಂದ ಆ ಪ್ರತಿಭೆಗಳಿಗೆ ನೀರೆರೆದು ಪೋಷಿಸದೆ ಚಿವುಟಿ ಹಾಕಿಬಿಡುವ ಕೆಲ ದುರುಳರಿರುವುದು ಈ ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಈ ಸಮುದಾಯದ ಹೆಣ್ಣು ಮಕ್ಕಳು ಟಿ.ವಿ. ಧಾರಾವಾಹಿ, ಸಿನೆಮಾಗಳ ಆಕರ್ಷಣೆಗೆ ಬಲಿಬಿದ್ದು ಎಚ್ಚರತಪ್ಪಿ ತಮ್ಮ ಭವಿಷ್ಯವನ್ನು ತಾವೇ ಮಂಕಾಗಿಸಿಕೊಳ್ಳುತ್ತಿದ್ದಾರೆ.
ಬಡತನವನ್ನೇ ಹಾಸು ಹೊದ್ದಿರುವ ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ಸ್ವಾಭಾವಿಕವಾಗಿ ಕಷ್ಟ ಕೋಟಲೆಗಳ ಅರಿವಿರುವುದು ವಾಸ್ತವ. ಹೀಗಾಗಿ ತನ್ನ ತವರು ಮನೆಗೆ ಸಂಕಷ್ಟ ಬಾರದ ರೀತಿಯಲ್ಲಿ ಆಲೋಚಿಸುವ ಬಹಳಷ್ಟು ಹೆಣ್ಣು ಮಕ್ಕಳು ದುಡಿಮೆಯತ್ತ ಒಲವು ತೋರಿ ಕುಟುಂಬದ ಸಂಕಷ್ಟಕ್ಕೆ ಮಿಡಿವ ಸಂದರ್ಭಗಳು ಅನೇಕ. ಪೋಷಕರ ತೀರ್ಮಾನಗಳಿಗೆ ಎದುರಾಡದೆ ತೋರಿಸಿದ ಸಂಬಂಧಕ್ಕೆ ಮನಸ್ಸಿನ ಒಪ್ಪಿಗೆ ಇರಲಿ/ ಇಲ್ಲದಿರಲಿ ಕೊರಳೊಡ್ಡುವ ಮೂಲಕ ತಂದೆ ತಾಯಿಯರ ಮಾತ್ರವಲ್ಲ ಉಳಿದ ಅಣ್ಣ, ತಂಗಿ, ತಮ್ಮಂದಿರ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸುವ ಉದಾರತೆ ಕಂಡು ಬರುವ ಸಂದರ್ಭ ಒಂದಾದರೆ, ತಾನು ವರಿಸಿದ ಪತಿಯಲ್ಲಿ ಸೋಮಾರಿತನವಿರಲಿ, ಚಟಗಳ ಸಹವಾಸವಿರಲಿ, ಸಣ್ಣತನವಿರಲಿ ಅವುಗಳೆಲ್ಲವನ್ನೂ ಸಂಭಾಳಿಸಿಕೊಂಡು ಸಾಂಸಾರಿಕ ಬದುಕನ್ನು ಹಸನುಗೊಳಿಸಿಕೊಳ್ಳಲು ಹೆಣಗುವ ಈ ವರ್ಗದ ಹೆಣ್ಣು ಮಕ್ಕಳಲ್ಲೂ ಸಹನೆ, ತ್ಯಾಗ ಮತ್ತು ಮುಂದಾಲೋಚನೆ ಅಂತರ್ಗತವಾಗಿರುವುದನ್ನು ಮರೆಯುವುದುಂಟೆ? ಅದರ ಫಲವಾಗೇ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಪಡಿಸಲು ಹೆಣಗುವ ಪರಿಯೇ ಸಾಕ್ಷಿಯೊದಗಿಸುತ್ತದೆ.
ಹಿಂದೊಮ್ಮೆ, ಮಹಿಳೆ ಹೊಸಿಲಾಚೆ ತೆರಳಲು ಇದ್ದ ಅಡ್ಡಿ ಆತಂಕಗಳನ್ನೆಲ್ಲ ಧಿಕ್ಕರಿಸಿ ಇದೀಗ ಮುಂಚೂಣಿಯಲ್ಲಿ ನಿಲ್ಲುತ್ತಾ ಬಂದಿರುವ ದಲಿತ ಸಮಾಜದ ಹೆಣ್ಣು ಮಕ್ಕಳು ಸಹ ತಮ್ಮ ಕುಟುಂಬದ ಆರ್ಥಿಕತೆಯನ್ನು ಉತ್ತಮ ಪಡಿಸಿಕೊಳ್ಳಲು ಸ್ತ್ರೀ ಶಕ್ತಿ ಸಂಘಗಳಲ್ಲಿ, ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದು ಸಣ್ಣ ಪುಟ್ಟ ವ್ಯಾಪಾರ ವ್ಯವಹಾರಗಳನ್ನು ಕೈಗೊಳ್ಳುವ ಮೂಲಕ ಸ್ವಯಂ ಉದ್ಯೋಗಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವುದು, ಚೀಟಿ ವ್ಯವಹಾರಗಳಂತಹ ಲೇವಾದೇವಿ ವ್ಯವಹಾರಗಳಲ್ಲಿ ನಿರತರಾಗಿರುವುದು, ಸಣ್ಣ ಪುಟ್ಟ ಹೋಟೆಲುಗಳು, ಗಾರ್ಮೆಂಟ್‌ಗಳು, ಖಾಸಗಿ ಕೈಗಾರಿಕಾ ಸಂಸ್ಥೆಗಳಲ್ಲಿ ಶ್ರಮ ವಹಿಸಿ ದುಡಿಯುತ್ತಾ ಆರ್ಥಿಕತೆಯನ್ನು ಸಾಧಿಸಲು ಪ್ರಯತ್ನಶೀಲರಾಗಿರುವುದನ್ನು ನೋಡಿದಾಗ ಒಂದಷ್ಟು ಸಮಾಧಾನ ಮೂಡದಿರದು. ಅಷ್ಟರಮಟ್ಟಿಗೆ ದಲಿತ ಮಹಿಳೆಯರಲ್ಲೂ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜ್ಞೆಗಳು ಜಾಗೃತಗೊಂಡಿದ್ದು, ಸಾಹಿತ್ಯ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈಯುತ್ತಾ ಎಲ್ಲ ರಂಗಗಳಲ್ಲೂ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುತ್ತಾ ಮಹಿಳೆಯರೆಂದರೆ ಅದರಲ್ಲೂ ದಲಿತ ಮಹಿಳೆಯರೆಂದರೆ ಸ್ವಾಭಿಮಾನಿ, ಸಬಲೆ ಮತ್ತು ಸಾಹಸಿ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುತ್ತಿರುವ ಸಂಗತಿಗಳನ್ನು ಅಭಿಮಾನದಿಂದಲೇ ಸ್ಮರಿಸಬೇಕಾಗಿದೆ. ಜಾತೀಯತೆಯ ಪೂರ್ವಾಗ್ರಹವುಳ್ಳ ಈ ಸಮಾಜದಲ್ಲಿ ದಲಿತ ಹೆಣ್ಣು ಮಕ್ಕಳು ಎಚ್ಚರ ತಪ್ಪದಂತೆ, ಜಾಗರೂಕತೆಯಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿರುವುದರಿಂದ ಹಾಗೂ ದಲಿತ ಸಮಾಜದ ಮುಂದಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಹ ಉನ್ನತ ಶೈಕ್ಷಣಿಕ ಅರ್ಹತೆ ಪಡೆದು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬದುಕಿಗೆ ಮುನ್ನುಡಿ ಬರೆಯಬೇಕಾಗಿದೆ.