ಸಾಗರ: ಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ
ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರದ ಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದೆ.
ಪತ್ರಿಕೆ ಹಂಚುವ ಸಂದರ್ಭದಲ್ಲಿ ದಿನಾಂಕ 2-7-22ರಂದು ಬೆಳಿಗ್ಗೆ ಸಾರಿಗೆ ಸಂಸ್ಥೆ ಬಸ್ ಢಿಕ್ಕಿ ಹೊಡೆದ ಪರಿಣಾಮವಾಗಿ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಸರ್ಕಾರದ ಗಮನಕ್ಕೆ ತಂದಿದ್ದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ಮತ್ತು ಕೆಯುಡಬ್ಲ್ಯೂಜೆಯ ಶಿವಮೊಗ್ಗದ ಜಿಲ್ಲಾ ಘಟಕವು ಈ ಬಗ್ಗೆ ಮನವಿ ಮಾಡಿಕೊಂಡಿತ್ತು.
ಸುದ್ದಿ ಮನೆಯ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ವಿತರಕರ ಕುಟುಂಬಕ್ಕೆ ಪರಿಹಾರ ಕೊಡುವಂತೆ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರಿಗೆ ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ಅವರ ನೇತೃತ್ವದ ನಿಯೋಗ ಒತ್ತಾಯಿಸಿದ್ದರು.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಕೆಯುಡಬ್ಲ್ಯೂಜೆ ಅಧ್ಯಕ್ಷರು ಮತ್ತು ಪತ್ರಿಕಾ ವಿತರಕರ ಸಂಘದ ಜೊತೆಗೆ ಹಲವು ಬಾರಿ ಸಭೆ ನಡೆಸಿ ಅಂತಿಮವಾಗಿ ಅಸಂಘಟಿತ ವಲಯದಲ್ಲಿ ವಿತರಕರನ್ನು ಪರಿಗಣಿಸಿ ಪರಿಹಾರ ಕೊಡಲು ಮಹತ್ವದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೇ, ಆ ದಿನವೇ ಕೆಯುಡಬ್ಲ್ಯೂಜೆ ಮನವಿ ಪರಿಗಣಿಸಿ, ಗಣೇಶ್ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಕೊಡುವಂತೆ ಆದೇಶಿಸಿದ್ದರು.
ಸರ್ಕಾರ ಮಂಜೂರು ಮಾಡಿದ ಪರಿಹಾರ ಗಣೇಶ್ ಅವರ ಕುಟುಂಬದ ಬ್ಯಾಂಕ್ ಖಾತೆಗೆ ನೇರವಾಗಿ ಶುಕ್ರವಾರ ಜಮೆ ಆಗಿದೆ ಎಂದು ಸಾಗರದ ವಿತರಕರು ಖಚಿತಪಡಿಸಿದ್ದಾರೆ.
ವಿತರಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಪರಿಹಾರ ಬಿಡುಗಡೆ ಮಾಡಿದ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮತ್ತು ಈ ನಿಟ್ಟಿನಲ್ಲಿ ಸತತವಾಗಿ ನಮ್ಮೊಂದಿಗೆ ಸಾಥ್ ನೀಡಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ಕೆ.ಶಂಭುಲಿಂಗ ಅವರು ಸಮಸ್ತ ವಿತರಕರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.