varthabharthi


ಈ ಹೊತ್ತಿನ ಹೊತ್ತಿಗೆ

ಈ ಹೊತ್ತಿನ ಹೊತ್ತಿಗೆ

ನಿಂತು ನೋಡಿದ ಕ್ಷಣಗಳು...

ವಾರ್ತಾ ಭಾರತಿ : 26 Nov, 2022
ಮಾಕೋನಹಳ್ಳಿ ವಿನಯ್ ಮಾಧವ್

ಎಷ್ಟೋ ಸಲ ಅನ್ನಿಸಿದೆ ಜೀವನದ ಕೊನೆಯಲ್ಲಿ ಉಳಿಯುವುದು, ನಾವು ನಿಂತು ನೋಡಿದ ಸಮಯ ಮಾತ್ರ. ಉಳಿದಂತೆ, ಈ ವೇಗದ ಪ್ರಪಂಚದಲ್ಲಿ, ನಮ್ಮ ಗುರಿಗಳ ಹಿಂದೆ ಓಡುತ್ತಾ, ಹಿಂದಿರುಗಿ ನೋಡಲೂ ಸಮಯವಿಲ್ಲದೆ, ಏನಾಯಿತು ಎಂದು ಯೋಚಿಸುವುದರೊಳಗೆ ಜೀವನ ಮುಗಿದಿರುತ್ತದೆ. ನಮ್ಮ ಜೀವನದಲ್ಲಿ ಅತೀ ಹೆಚ್ಚು ನಿಂತು ನೋಡಿರುವುದು ಬಾಲ್ಯದಲ್ಲಿ ಮಾತ್ರ ಎಂದು ನನಗನ್ನಿಸುತ್ತದೆ. ಕೈಯಲ್ಲಿ ಇಲೆಕ್ಟ್ರಾನಿಕ್ ಗ್ಯಾಡ್ಜೆಟ್‌ಗಳನ್ನು ಹಿಡಿದುಕೊಂಡೇ ಹುಟ್ಟುವ ಮಕ್ಕಳಿಗೆ ಆ ಭಾಗ್ಯ ಇದೆಯೋ, ಇಲ್ಲವೋ ಹೇಳಲಾಗುವುದಿಲ್ಲ. ಆದರೆ, ಆ ಭಾಗ್ಯ ಇಲ್ಲದ ಮಕ್ಕಳಿಗೆ, ಈಗಲೂ ಜೀವನವನ್ನು ನಿಂತು ನೋಡುವ ಭಾಗ್ಯ ಇದ್ದೇ ಇರುತ್ತದೆ ಎನ್ನುವುದು ನನ್ನ ಅನಿಸಿಕೆ.

ಆದರೆ ಪ್ರಶ್ನೆ ಇರುವುದು ನಾವು ನಿಂತು ನೋಡಿದ ಸಮಯವನ್ನು ನಮ್ಮದಾಗಿಸಿಕೊಳ್ಳಲು ಮತ್ತೆ ಸಮಯ ಸಿಗುವುದೇ ಎನ್ನುವುದು. ಸಮಯ ಎಂದಿಗೂ, ಯಾರಿಗೂ ಸಿಗುವುದಿಲ್ಲ. ನಮ್ಮ ಜೀವನದಲ್ಲಿ, ನಮಗೆ ನಾವೇ ಸಮಯ ಮಾಡಿಕೊಳ್ಳಬೇಕಷ್ಟೆ. ಆಗ ಮಾತ್ರ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ವಿಷಯ ಮನಸ್ಸಿಗೆ ಬಂದಾಗಲೆಲ್ಲ ಡಿವಿಜಿ ಅವರ ಈ ಕಗ್ಗ ನೆನಪಾಗುತ್ತದೆ:

ನಭದ ಬೆಲೆಯೊಳನಂತ: ಮನದ ಗುಹೆಯೊಳನಂತ!

ವುಭಯದಾನಡುವೆ ಸಾದ್ಯಂತ ಜೀವಕಥೆ!!

ವಿಭುವೊಬ್ಬ ನೀ ಗಾಳಿಬುಡ್ಡೆಯನೂದುವವನು!

ಹಬೆಗುಳ್ಳೆಯೇ ಸೃಷ್ಟಿ ಮಂಕುತಿಮ್ಮ.

ಇದೆಲ್ಲ ನೆನಪಾಗಿದ್ದು, ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧ ಕೃತಿ ‘ಕಡಲು ನೋಡಲು ಹೋದವಳು’ ಓದುತ್ತಾ ಹೋದಂತೆ.

ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಮಲೆನಾಡು-ಕರಾವಳಿಯ ಜೀವನದ ಬಗ್ಗೆ ಯಾವುದೇ ಅಭಿಪ್ರಾಯ ಬೆಳೆಸಿಕೊಂಡಿರುವವರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಅಲ್ಲಿ, ರಾಜಕೀಯ, ಕೋಮು, ವರ್ಗ ಸಂಘರ್ಷಗಳನ್ನು ಮೀರಿದ ಮಾನವೀಯ ಸಂಬಂಧಗಳು ಬಲವಾಗಿಯೇ ಇದೆ.

ಈ ಪುಸ್ತಕವನ್ನು ತಿರುಗಿಸಿ ನೋಡಿದ ತಕ್ಷಣ ಬೊಳುವಾರು ಮಹಮದ್ ಕುಂಞಿಯವರ ಹಿನ್ನುಡಿ ನೋಡಿದೆ. ‘ಜಗಿದಷ್ಟೋ ಸಿಹಿ ಎನ್ನಿಸುವ ಕಬ್ಬಿನ ಜಲ್ಲೆ.’ ಪುಸ್ತಕ ಓದುವಾಗ ಅದು ಸತ್ಯ ಎನ್ನಿಸಿತು.

ರಲಿಯಾ ಜೀವನವನ್ನು ಬಹಳಷ್ಟು ಸಂಯಮದಿಂದ ನಿಂತು ನೋಡಿದ್ದಾರೆ. ನಿಂತು ನೋಡಿದ್ದನ್ನು ಆಸ್ವಾದಿಸಲು ಸಮಯವನ್ನೂ ಮಾಡಿಕೊಂಡಿದ್ದಾರೆ. ಹಾಗಂತ, ತನ್ನ ಸುತ್ತ ನಡೆಯುತ್ತಿದ್ದ ಬದಲಾವಣೆಗಳನ್ನು ಗಮನಿಸದಿರುವಂತಹ ಅಥವಾ ಅದಕ್ಕೆ ಜಾಣ ಕುರುಡು ತೋರಿಸಿ, ತೇಪೆ ಹಚ್ಚುವ ಕೆಲಸವನ್ನೂ ಮಾಡಿಲ್ಲ. ನೊಂದುಕೊಂಡಿದ್ದಾರೆ, ಆದರೆ ತಮ್ಮ ನಿಲುವಿನ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಆವರ ಮೊದಲ ಪ್ರಬಂಧವೇ ‘ಉನ್ಮತ್ತ ಕುರುಕ್ಷೇತ್ರವೂ, ಬೃಂದಾವನದ ಕೊಳಲೂ’.

ಹದಿನೇಳು ಲಲಿತ ಪ್ರಬಂಧಗಳಲ್ಲಿ, ರಲಿಯಾ ತಮ್ಮ ವ್ಯಕ್ತಿತ್ವ ರೂಪಿಸಿದ ಎಷ್ಟೋ ಭಾವನಾತ್ಮಕ ಸಂಬಂಧಗಳು, ವ್ಯಕ್ತಿಗಳು ಮತ್ತು ಕರಾವಳಿ ಪ್ರಾಂತದ ಹಳ್ಳಿ ಬದುಕನ್ನು, ನವಿರಾದ ಹಾಸ್ಯ ಮತ್ತು ಹರಟೆಯ ಮೂಲಕ ಚಿರಾಯುವಾಗಿಸಿದ್ದಾರೆ. ಓದಲು ಸರಳವಾಗಿದೆ ಎನಿಸಿದರೂ, ಕೆಲವೊಮ್ಮೆ ಮುಗ್ಧ ಮಗುವಿನಂತೆ ಮುದಗೊಳಿಸಿದರೆ, ಮತ್ತೊಮ್ಮೆ ದಾರ್ಶನಿಕಳಂತೆ ಚಿಂತನೆಗೆ ಈಡು ಮಾಡುತ್ತಾರೆ.

ಈ ಪುಸ್ತಕದಲ್ಲಿ ಬರುವ ಕೆಲವು ಪಾತ್ರಗಳಾದ ಫಕೀರಮ್ಮ, ಜೀನ್ಸ್ ಪ್ಯಾಂಟ್ ಅಕ್ಕ, ಕಡಲ ತೀರದಲ್ಲಿ ಸಿಕ್ಕಿದ ಅಜ್ಜಿ, ಅವ್ವಯ್ಯಜ್ಜಿ, ಸುಂದರಿ, ಗೀತಕ್ಕ, ಅಫೀಫಾ ಮತ್ತು ಚಾಂದಜ್ಜಿ ಬಹಳ ಕಾಲ ನೆನಪಿನಲ್ಲುಳಿಯುತ್ತಾರೆ. ಪುಸ್ತಕ ಓದಿದ ಮೇಲೆ ಅನ್ನಿಸಿತು ಬೊಳುವಾರು ಅವರು ಹೇಳಿದಂತೆ, ಇವರು ಮುಂದೊಂದು ದಿನ ಪ್ರಮುಖ ಲೇಖಕರಲ್ಲಿ ಒಬ್ಬಳಾಗುವ ಎಲ್ಲಾ ಲಕ್ಷಣಗಳಿವೆ ಎಂದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)