ಕ್ರೀಡೆ
ಎಂಬಾಪೆ ಅವಳಿ ಗೋಲು, ಡೆನ್ಮಾರ್ಕ್ ವಿರುದ್ಧ ಜಯ
ವಿಶ್ವಕಪ್: ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಫ್ರಾನ್ಸ್

Photo: Twitter/@FIFAWorldCup
ದೋಹಾ: ಸ್ಟ್ರೈಕರ್ ಕೈಲಿಯನ್ ಎಂಬಾಪೆ ಸಿಡಿಸಿದ ಅವಳಿ ಗೋಲು ನೆರವಿನಿಂದ ಫಿಫಾ ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಡೆನ್ಮಾರ್ಕ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ನಾಕೌಟ್ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ತಂಡ ಎನಿಸಿಕೊಂಡಿದೆ.
ಫ್ರಾನ್ಸ್ ‘ಡಿ’ ಗುಂಪಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ 6 ಅಂಕ ಕಲೆ ಹಾಕಿತು. ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಪ್ರಿ-ಕ್ವಾರ್ಟರ್ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು.
ಶನಿವಾರ ಸ್ಟೇಡಿಯಮ್ 974ನಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ದ್ವಿತೀಯಾರ್ಧದ 61ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಎಂಬಾಪೆ ಫ್ರಾನ್ಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು.
ಫ್ರಾನ್ಸ್‌ಗೆ ತಕ್ಷಣವೇ ತಿರುಗೇಟು ನೀಡಿದ ಡೆನ್ಮಾರ್ಕ್ 68ನೇ ನಿಮಿಷದಲ್ಲಿ ಗೋಲು ಗಳಿಸಿತು. ಆ್ಯಂಡ್ರಿಯಾಸ್ ಕ್ರಿಸೆನ್ಸ್ಸೆನ್ ಶಕ್ತಿಶಾಲಿ ಹೆಡ್ಡರ್ ಮೂಲಕ ಚೆಂಡನ್ನು ಫ್ರಾನ್ಸ್ ಗೋಲು ಪೆಟ್ಟಿಗೆಗೆ ಸೇರಿಸಿ ಡೆನ್ಮಾರ್ಕ್ ಸಮಬಲ ಸಾಧಿಸಲು ನೆರವಾದರು.
ಎಂಬಾಪೆ 86ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಫ್ರಾನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ