ಚತ್ತೀಸ್ಗಢ: ಎನ್ಕೌಂಟರ್ನಲ್ಲಿ ನಾಲ್ವರು ಮಾವೋವಾದಿಗಳು ಸಾವು
ಬಿಜಾಪುರ್, ನ. 26: ಚತ್ತೀಸ್ಗಢದ ಬಿಜಾಪುರ್ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳು ಸೇರಿದಂತೆ ನಾಲ್ವರು ಮಾವೋವಾದಿಗಳು ಮೃತಪಟ್ಟಿದ್ದಾರೆ.
ಮಿರ್ತರ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಮ್ರಾ ಗ್ರಾಮದ ಸಮೀಪದ ಅರಣ್ಯದಲ್ಲಿ ಬೆಳಗ್ಗೆೆ ಸುಮಾರು 7.30ರ ಹೊತ್ತಿಗೆ ಭದ್ರತಾ ಪಡೆಗಳ ಜಂಟಿ ತಂಡ ಮಾವೋವಾದಿ ನಿಗ್ರಹ ಕಾರ್ಯಾಚರಣೆ ನಡೆಸಿದ ಸಂದರ್ಭ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ ರಾಜ್ ಹೇಳಿದ್ದಾರೆ.
ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯರಾದ ಮೋಹನ್ ಕಡ್ತಿ ಹಾಗೂ ಸುಮಿತ್ರಾರೊಂದಿಗೆ ಅವರ 30ರಿಂದ 40 ಸಹವರ್ತಿಗಳು ರಾಯಪುರದಿಂದ 400 ಕಿ.ಮೀ. ದೂರಲ್ಲಿರುವ ಪೊಮ್ರಾ-ಹಲ್ಲರ್ ಅರಣ್ಯದಲ್ಲಿ ಇರುವ ಬಗ್ಗೆ ದೊರಕಿದ ಮಾಹಿತಿ ಆಧಾರದಲ್ಲಿ ಆರಂಭಿಸಲಾದ ಶೋಧ ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪಹರೆ (ಡಿಆರ್ಜಿ), ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಪಾಲ್ಗೊಂಡರು.
ಡಿಆರ್ಜಿಯ ಗಸ್ತು ತಂಡ ಪೊಮ್ರಾ ಅರಣ್ಯದಲ್ಲಿ ಶೋಧ ನಡೆಸುತ್ತಿರುವ ಸಂದರ್ಭ ಈ ಗುಂಡಿನ ಕಾಳಗ ನಡೆದಿದೆ.
‘‘ಗುಂಡಿನ ಕಾಳಗ ನಡೆದ ಬಳಿಕ ಸ್ಥಳದಲ್ಲಿ .303 ರೈಫಲ್ ಹಾಗೂ 315 ಬೋರ್ ರೈಫಲ್ ಸೇರಿದಂತೆ ಮೂರು ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರು ಮಹಿಳೆಯರದ್ದು ಸೇರಿದಂತೆ ನಾಲ್ವರು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ’’ ಎಂದು ಐಜಿ ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಮೃತಪಟ್ಟ ಮಾವೋವಾದಿಗಳ ಗುರುತನ್ನು ಇದುವರೆಗೆ ಪತ್ತೆ ಹಚ್ಚಿಲ್ಲ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.