varthabharthi


ಕರ್ನಾಟಕ

ವಿವಾದ ಸ್ಥಳವಾಗಿ ಪರಿವರ್ತನೆ ಮಾಡುವ ಪ್ರಯತ್ನದ ಹಿನ್ನೆಲೆಯಲ್ಲಿ ತೆರವು: ಶಾಸಕ ರಾಮದಾಸ್ ಸ್ಪಷ್ಟನೆ

ಮೈಸೂರು: ವಿವಾದಕ್ಕೆ ಕಾರಣವಾಗಿದ್ದ ಬಸ್ ತಂಗುದಾಣದ ಗೋಪುರಗಳು ರಾತ್ರೋರಾತ್ರಿ ತೆರವು

ವಾರ್ತಾ ಭಾರತಿ : 27 Nov, 2022

ಮೈಸೂರು, ನ.27: ಕಳೆದ ಒಂದು ತಿಂಗಳಿನಿಂದ ಇಬ್ಬರು ರಾಜಕಾರಣಿಗಳ ವೈಯಕ್ತಿಕ ತಿಕ್ಕಾಟದಿಂದ  ವಿವಾದ ಉಂಟಾಗಿ  ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದ ಮೈಸೂರು-ನಂಜನಗೂಡು ರಸ್ತೆಯ ಬಸ್ ತಂಗುದಾಣದ ಎರಡು ಸಣ್ಣ ಸಣ್ಣ ಗೋಪುರಗಳನ್ನು ರಾತ್ರೋ ರಾತ್ರಿ ತೆರವುಗೊಳಿಸಲಾಗಿದೆ.ಈ ಶಾಸಕ ಎಸ್.ಎ.ರಾಮದಾಸ್ ಗುಂಬಝ್ ಮಾದರಿ ಎಂಬ ಆರೋಪಕ್ಕೆ ತಾತ್ಕಾಲಿಕ ಅಂತ್ಯವಾಡಿದ್ದಾರೆ.

ಶಾಸಕ ಎಸ್.ಎ.ರಾಮದಾಸ್ ತಮ್ಮ ಶಾಸಕರ ಅನುದಾನದಲ್ಲಿ  ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಈ ಬಸ್ ತಂಗುದಾಣ ನಿರ್ಮಿಸಿದ್ದರು. ಬಸ್ ತಂಗುದಾಣ ಮೇಲೆ ಮೂರು ಗೋಪುರಗಳು ನಿರ್ಮಿಸಿದ್ದು, ನೋಡಲು ಆಕರ್ಷಕವಾಗಿತ್ತು. ಆದರೆ ಸಂಸದ ಪ್ರತಾಪ್ ಸಿಂಹ ಇವು ಗುಂಬಝ್ ಮಾದರಿ ಇವೆ. ಕೂಡಲೇ ಇವುಗಳನ್ನು ತೆರವು ಮಾಡಬೇಕು ಇಲ್ಲದಿದ್ದರೇ ನಾನೇ ಜೆಸಿಬಿ ತಂದು ಕೆಡವುತ್ತೇನೆ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು  ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ನಡುವಿನ ಶೀತಲ ಸಮರಕ್ಕೆ ಕಾರಣವಾಗಿತ್ತು.

ಪ್ರತಾಪ್ ಸಿಂಹ ಬಸ್ ನಿಲ್ದಾಣ ಕೆಡುವುತ್ತೇನೆ ಎಂದಾಕ್ಷಣ ಬಸ್ ತಂಗುದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಶ್ರೀಗಳ ಭಾವಚಿತ್ರಗಳನ್ನು ಅಳವಡಿಸಿ,  ಚಿನ್ನದ ಬಣ್ಣದಲ್ಲಿದ್ದ ಗೋಪುರಗಳಿಗೆ ಕೆಂಪು ಬಣ್ಣ ಬಳಿಯಿಸಿ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹ ಬಾಯಿ ಮುಚ್ಚಿಸಲು ಪ್ರಯತ್ನಪಟ್ಟಿದ್ದರು.

ಆದರೆ ಪ್ರತಾಪ್ ಸಿಂಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಒತ್ತಡ ಹೇರಿ ಬಸ್ ತಂಗುದಾಣ ಕೋಮು ಸಂಘರ್ಷಕ್ಕೆ ಕಾರಣವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮತ್ತು ಕೆ.ಆರ್.ಐ.ಡಿ.ಎಲ್.ಗೆ ನೊಟೀಸ್ ಜಾರಿ ಮಾಡಿ ಉತ್ತರಿಸಲು ವಾರದ ಗಡುವು ನೀಡಿತ್ತು. ಇದೇ ಸಮಯದಲ್ಲಿ ಸಂಸದ ಪ್ರತಾಪ್ ಸಿಂಹ ಬಸ್ ತಂಗುದಾಣದ ಮೂಲ ನಕ್ಷೆಯನ್ನು ಪ್ರದರ್ಶಿಸಿ ತಮ್ಮ ಗಡುವು ಸಹ ವಾರಕ್ಕೆ ಮುಂದೂಡಿದರು.

ನಂತರ ಶಾಸಕ ಎಸ್.ಎ.ರಾಮದಾಸ್ ಮುಖ್ಯಮಂತ್ರಿಗೆ ದೂರು ನೀಡಿ ತಾಂತ್ರಿಕ ಅಧಿಕಾರಿಗಳಿಂದ ಪರಿಶೀಲಿಸಿ  ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಸಮಸ್ಯೆ ಬಗೆಹರಿಸುವ ಮುನ್ನವೇ ಶಾಸಕ ಎಸ್.ಎ.ರಾಮದಾಸ್ ಶನಿವಾರ ತಡ ರಾತ್ರಿ ಬಸ್ ತಂಗುದಾಣದ ಎರಡು ಗೋಪುರಗಳನ್ನು ತೆರವುಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಈ ವಿವಾದವನ್ನು ಸಂಸದ ಪ್ರತಾಪ್ ಸಿಂಹ ಸಮರ್ಥವಾಗಿ ರಾಜಕಾರಣಕ್ಕೆ ಬಳಸಿಕೊಂಡಿದ್ದರು. ಈಗ ಅಂತಿಮವಾಗಿ ಪಕ್ಷದ ಹಿರಿಯರ ಮಾತಿಗೆ ಮಣಿದು ಬಸ್ ತಂಗುದಾಣದ ಸೌಂದರ್ಯಕ್ಕೆ ಕಾರಣವಾಗಿದ್ದ ಎರಡು ಸಣ್ಣ ಗೋಪುರಗಳನ್ನು ಕೆಡವಿ ಮಧ್ಯದ ಗೋಪುರ ಉಳಿಸಿಕೊಳ್ಳಲಾಗಿದೆ. 


ಈ ಕುರಿತಂತೆ ರವಿವಾರ ಬೆಳಗ್ಗೆ ಶಾಸಕ ಎಸ್.ಎ.ರಾಮದಾಸ್  ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರ ಸಾರಾಂಶ ಈ ರೀತಿ ಇದೆ.
``ಮೈಸೂರು ನಗರದ ನನ್ನ ಬಂಧುಗಳಲ್ಲಿ ನಿಮ್ಮ ಪ್ರೀತಿಯ ಎಸ್.ಎ.ರಾಮದಾಸ್‍ನ ನಮಸ್ಕಾರಗಳು.
`ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪಥಕ್ಕೆ “ಸಬ್ ಕ ಸಾತ್ ಸಬ್ ಕ ವಿಕಾಸ್" ಮಂತ್ರ ಬಹಳ ಅವಶ್ಯಕವಾದದ್ದು. ಅಭಿವೃದ್ಧಿಯ ಕಾರ್ಯದಲ್ಲಿ ಸರ್ವ ಧರ್ಮ, ಜಾತಿ, ಪಂತ, ಪಕ್ಷ ಬೇಧವಿಲ್ಲದೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಪ್ರಮುಖವಾದದ್ದು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ವಿವಾದ ಇಂದಿನವರೆಗೂ ನಡೆದಿರುವುದಿಲ್ಲ. ನಾಗರಿಕರ ಸೌಲಭ್ಯಕ್ಕಾಗಿ 12 ಬಸ್ ತಂಗುದಾಣವನ್ನು ನಿರ್ಮಿಸಲು ಶಾಸಕರ ನಿಧಿಯಿಂದ ಕಾರ್ಯೋನ್ಮುಖವಾಗಿದ್ದೆ. ಮೈಸೂರು ಪಾರಂಪರಿಕ ನಗರಿಯಾಗಿದ್ದು ಪರಂಪರೆಯ ಮೊದಲು ಕುರುಹು ವಿಶ್ವವಿಖ್ಯಾತ ಮೈಸೂರು ಅರಮನೆ. ಈ ಮಾದರಿಯಲ್ಲಿ ಪಾರಂಪರಿಕ ಬಸ್ ತಂಗುದಾಣ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಅದಕ್ಕೆ ಅನಾವಶ್ಯಕ ಧರ್ಮದ ಲೇಪನ ನೀಡಿ ಅದೊಂದು ವಿವಾದ ಸ್ಥಳವಾಗಿ ಪರಿವರ್ತನೆ ಮಾಡುವ ಪ್ರಯತ್ನ ಮನಸ್ಸಿಗೆ ತುಂಬ ನೋವುಂಟು ಮಾಡಿರುತ್ತದೆ. ಅದ್ದರಿಂದ ಎಲ್ಲ ಹಿರಿಯರು, ಸಲಹೆಗಾರರ ಜೊತೆಯಲ್ಲಿ ನನ್ನ ಅಳಲು ತೋಡಿಕೊಂಡು ಮುಂದೆ ಎಂದೂ ಇದೊಂದು ವಿವಾದಿತ ಕೇಂದ್ರ ಎಂಬ ಕಪ್ಪು ಚುಕ್ಕೆ ಕೆಲವರು ನಿರ್ಮಾಣ ಮಾಡಬಾರದೆಂದು ಬಸ್ ನಿಲ್ದಾಣದ ಎರಡು ಡೂಮ್ ಅನ್ನು ತೆಗೆದು ಮದ್ಯದ ಡೂಮ್ ಅನ್ನು ಯಥಾಸ್ಥಿತಿಯಲ್ಲಿ ಬಿಟ್ಟು ಇದೇ ಮಾದರಿಯಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಪಡೆಯಲಾಗಿದೆ. ಸಾರ್ವಜನಿಕರ ಅಭಿವೃದ್ಧಿ ಮಂತ್ರ ನನ್ನ ಧ್ಯೇಯ ಇದನ್ನು ಯಾರು ಅನ್ಯತಾ ಭಾವಿಸಬಾರದೆಂದು ಕೋರುತ್ತೇನೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)