ಪಾತಕಿಗಳ ಮೂಲಕ ಗುಜರಾತ್‌ನಲ್ಲಿ ಶಾಂತಿ ಸ್ಥಾಪಿಸಲು ಹೊರಟವರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
2002ರ ಗುಜರಾತ್ ಸಾಮೂಹಿಕ ಹತ್ಯಾಕಾಂಡ ಭಾರತಕ್ಕೆ ಅಂಟಿದ ಕಳಂಕ. ಭಾರತದ ವರ್ಚಸ್ಸಿಗೆ ಇದು ಮಾಡಿದ ಹಾನಿ ಬಹುದೊಡ್ಡದು. ಈ ಕಳಂಕದ ಕಾರಣಕ್ಕಾಗಿಯೇ, ನರೇಂದ್ರ ಮೋದಿಯವರು ಪ್ರಧಾನಿಯಾಗುವವರೆಗೂ ಕೆಲವು ಪ್ರಮುಖ ರಾಷ್ಟ್ರಗಳಿಂದ 'ಬಹಿಷ್ಕಾರ'ಕ್ಕೊಳಗಾದರು. ಈ ಹತ್ಯಾಕಾಂಡಕ್ಕಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತ ಛೀಮಾರಿ ಹಾಕಿಸಿಕೊಂಡಿತು. ಅಂದಿನ ಗುಜರಾತ್ ಸರಕಾರದ ವೈಫಲ್ಯ ಮತ್ತು ಪರೋಕ್ಷ ಕುಮ್ಮಕ್ಕು ಈ ಹತ್ಯಾಕಾಂಡಕ್ಕೆ ಕಾರಣ ಎಂದು ಸಾಮಾಜಿಕ ಸಂಘಟನೆಗಳು ಆರೋಪಿಸಿ, ನ್ಯಾಯಾಲಯದ ಮೊರೆ ಹೋದವು. ಪ್ರಕರಣದಲ್ಲಿ ಮೋದಿಯವರನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪದಲ್ಲಿ, ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ ತೀಸ್ತಾ ಸೆಟಲ್ವಾಡ್ ಅವರು ಇತ್ತೀಚೆಗೆ ಕೆಲ ಕಾಲ ಜೈಲುವಾಸವನ್ನೂ ಅನುಭವಿಸಬೇಕಾಯಿತು. ಗುಜರಾತ್ ಗಲಭೆಯನ್ನು ನಿಯಂತ್ರಿಸಲು ಸರಕಾರ ಸಕಲ ಪ್ರಯತ್ನವನ್ನು ಮಾಡಿತ್ತು ಎಂದು ಗುಜರಾತ್‌ನ ಸರಕಾರ ಪದೇ ಪದೇ ಹೇಳಿಕೊಂಡು ಬರುತ್ತಿದೆ. ವಿಪರ್ಯಾಸವೆಂದರೆ, ಮಹಿಳೆಯರ ಸಾಮೂಹಿಕ ಅತ್ಯಾಚಾರ, ಗರ್ಭಿಣಿಯರು, ಮಕ್ಕಳ ಹತ್ಯೆ ಮೊದಲಾದ ರಾಕ್ಷಸೀಯ ಕೃತ್ಯಗಳಿಗೆ ಸಾಕ್ಷಿಯಾದ 2002ರ ಈ ಹತ್ಯಾಕಾಂಡವನ್ನು ಇದೀಗ ಈ ದೇಶದ ಗೃಹ ಸಚಿವರು 'ಪಾತಕಿಗಳಿಗೆ ತಕ್ಕ ಪಾಠ' ಎಂದು ಕರೆದು ಸಮರ್ಥಿಸಿಕೊಂಡಿದ್ದಾರೆ. ಗುಜರಾತ್‌ನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಖೇಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ''2002ರಲ್ಲಿ ಪಾತಕಿಗಳಿಗೆ ತಕ್ಕ ಪಾಠವನ್ನು ಕಲಿಸುವ ಮೂಲಕ ಬಿಜೆಪಿಯು ಗುಜರಾತ್‌ನಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಿತು'' ಎಂದು ಅವರು ಪರೋಕ್ಷವಾಗಿ ಗುಜರಾತ್ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದಾರೆ ಮಾತ್ರವಲ್ಲ, ಅದರ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
'2002ರಲ್ಲಿ ಗುಜರಾತ್‌ನಲ್ಲಿ ಪಾತಕಿಗಳಿಗೆ ತಕ್ಕ ಪಾಠ' ಎನ್ನುವ ಗೃಹ ಸಚಿವರ ಮಾತಿನ ಅರ್ಥವಾದರೂ ಏನು? 2002ರಲ್ಲಿ ಗುಜರಾತ್‌ನಲ್ಲಿ ಪಾತಕಿಗಳು ಬೃಹತ್ ಅಕ್ರಮ, ಅನ್ಯಾಯಗಳನ್ನು ಮೆರೆದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಮಾಧ್ಯಮಗಳಲ್ಲಿ ಬಹುಕಾಲದವರೆಗೆ ಈ ಅಕ್ರಮಗಳು ಚರ್ಚೆಯಲ್ಲಿದ್ದವು. ಹೀಗಿರುವಾಗ ಇಲ್ಲಿ , ಅಮಿತ್ ಶಾ ನೇತೃತ್ವದ ಸರಕಾರ ಪಾತಕಿಗಳಿಗೆ ಯಾವ ರೀತಿಯಲ್ಲಿ ಪಾಠವನ್ನು ಕಲಿಸಿದ್ದಾರೆ ಎನ್ನುವುದು ಅವರ ಮಾತಿನಲ್ಲಿ ಸ್ಪಷ್ಟವಿಲ್ಲ. ಗುಜರಾತ್ ಹತ್ಯಾಕಾಂಡದಲ್ಲಿ ಭಾಗವಹಿಸಿದ ಆರೋಪಿಗಳಿಗೆ ಶಿಕ್ಷೆ ನೀಡಿದ್ದೇವೆ ಎನ್ನುವ ದಾಟಿಯಲ್ಲಿ ಅವರ ಮಾತುಗಳಿಲ್ಲ. ಬದಲಿಗೆ, ಗುಜರಾತ್ ಹತ್ಯಾಕಾಂಡ ನಡೆಸುವ ಮೂಲಕ, ಪಾತಕಿಗಳಿಗೆ ನಾವು ಪಾಠ ಕಲಿಸಿದ್ದೇವೆ ಎನ್ನುವ ಧ್ವನಿಯನ್ನು ಅವರ ಮಾತುಗಳು ನೀಡುತ್ತವೆ. ಗುಜರಾತ್ ಹತ್ಯಾಕಾಂಡದಲ್ಲಿ ಭಾಗವಹಿಸಿದ ಯಾವ ಪಾತಕಿಗಳಿಗೆ ಯಾವ ರೀತಿಯಲ್ಲಿ ಶಿಕ್ಷೆಯಾಗಿವೆ? ಅತ್ಯಾಚಾರ, ಕೊಲೆ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿದಿಸಿದ್ದರೆ, ಗುಜರಾತ್ ಸರಕಾರ ಹಸ್ತಕ್ಷೇಪ ನಡೆಸಿ ಅವರನ್ನು ಬಿಡುಗಡೆ ಮಾಡಿದೆ. ಅಂದರೆ ಅಮಿತ್ ಶಾ ಸ್ಪಷ್ಟವಾಗಿ, ಗುಜರಾತ್ ಹತ್ಯಾಕಾಂಡದ ಸಂತ್ರಸ್ತರನ್ನೇ ಪಾತಕಿಗಳು ಎಂದು ಕರೆಯುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈ ಪಾಠ ಕಲಿಸಿದ ಪ್ರಕರಣವನ್ನು ತಮ್ಮ ಸರಕಾರದ ಹೆಗ್ಗಳಿಕೆಯಾಗಿ ಅವರು ಭಾಷಣದಲ್ಲಿ ಪ್ರತಿಪಾದನೆ ಮಾಡಿದ್ದಾರೆ. ಆ ಮೂಲಕ, ಇಡೀ ಗುಜರಾತ್ ಹತ್ಯಾಕಾಂಡದ ಹೊಣೆಗಾರಿಕೆಯನ್ನು ನೇರವಾಗಿ ಗೃಹ ಸಚಿವರೇ ಹೊತ್ತುಕೊಂಡಂತಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಗುಜರಾತ್ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು, ಮತ್ತೆ ಕೋಮುಹಿಂಸಾಚಾರವನ್ನು ಮುಂದಿಟ್ಟು ಚುನಾವಣೆಯನ್ನು ಗೆಲ್ಲುವುದಕ್ಕೆ ಬಿಜೆಪಿ ಹೊರಟಿದೆ. ಈ ಹಿನ್ನೆಲೆಯಲ್ಲಿ, ತನ್ನ ಸರಕಾರದ ವೈಫಲ್ಯವಾಗಿರುವ 2002ರ ಹತ್ಯಾಕಾಂಡವನ್ನು, ಗುಜರಾತ್ ರಾಜ್ಯಕ್ಕೆ ನೀಡಿದ ಕೊಡುಗೆಯಾಗಿ ಬಿಂಬಿಸಲು ಹೊರಟಿದ್ದಾರೆ. ಗುಜರಾತ್‌ನ ಅಭಿವೃದ್ಧಿಯಲ್ಲಿ ಸರಕಾರ ಸಂಪೂರ್ಣ ಎಡವಿರುವುದರಿಂದ, ಚುನಾವಣೆಯಲ್ಲಿ ಆ ಕುರಿತಂತೆ ಮಾತನಾಡದ ಸ್ಥಿತಿಯಲ್ಲಿದ್ದಾರೆ ಬಿಜೆಪಿ ನಾಯಕರು. ಆದುದರಿಂದ, 2002ರ ಹತ್ಯಾಕಾಂಡದ ಗೋರಿಯನ್ನು ಅಗೆದು, ಸಂತ್ರಸ್ತರ ತಲೆಬುರುಡೆಗಳನ್ನೇ ಮತದಾರರಿಗೆ ಉಡುಗೊರೆಗಳಾಗಿ ನೀಡಲು ಮುಂದಾಗಿದ್ದಾರೆ. ಹಿಂಸೆ, ಅತ್ಯಾಚಾರ, ಕೊಲೆಗಳೆಲ್ಲವೂ ತನ್ನ ಸರಕಾರ ಗುಜರಾತ್‌ಗೆ ನೀಡಿದ ಉಡುಗೊರೆಯಾಗಿಯೂ, ಆ ಮೂಲಕವೇ ಗುಜರಾತ್‌ನಲ್ಲಿ ಇಂದು ಶಾಂತಿಸ್ಥಾಪನೆಯಾಗಿದೆ ಎಂದು ಜನರನ್ನು ನಂಬಿಸಲು ಮುಂದಾಗಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದದ್ದೇ ಆದರೆ ಭವಿಷ್ಯದಲ್ಲಿ ಗುಜರಾತ್‌ನಲ್ಲಿ ಅನ್ಯಾಯ, ಅತ್ಯಾಚಾರ, ಅಕ್ರಮಗಳು ಸಂವಿಧಾನಬದ್ಧವಾಗಲಿದೆ ಎನ್ನುವ ಪರೋಕ್ಷ ಭರವಸೆ ಗೃಹ ಸಚಿವ ಅಮಿತ್ ಶಾ ಅವರ ಮಾತಿನಲ್ಲಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಭಾಗವಹಿಸಿದ ಪಾತಕಿಗಳ ಮೂಲಕ ಗುಜರಾತ್‌ನ್ನು ಕಟ್ಟುವ ಭರವಸೆಯನ್ನು ಅವರು ನೀಡುತ್ತಿದ್ದಾರೆ. ಗುಜರಾತ್‌ನ ಜನರಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೇನಿದೆ? ಮಹಿಳೆಯರ ಸಾಮೂಹಿಕ ಅತ್ಯಾಚಾರ, ಮಕ್ಕಳ ಬರ್ಬರ ಕೊಲೆಗಳನ್ನು ಎಸಗಿದ ಜನರಿಗೆ ಮತಗಳನ್ನು ನೀಡುವ ಮೂಲಕ ಗುಜರಾತ್‌ನ್ನು ರಕ್ಷಿಸಿಕೊಳ್ಳಬೇಕಾದ ದೈನೇಸಿ ಸ್ಥಿತಿಯನ್ನು ಅಲ್ಲಿನ ಜನರಿಗೆ ಒದಗಿಸಲು ಹೊರಟಿರುವುದು, ಬಿಜೆಪಿ ನಾಯಕರು ತಲುಪಿರುವ ಪಾತಾಳದ ಆಳವನ್ನು ಹೇಳುತ್ತದೆ. ''2002ರ ಗುಜರಾತ್ ಹತ್ಯಾಕಾಂಡದ ಬಳಿಕ ಗುಜರಾತ್‌ನಲ್ಲಿ ಕೋಮುಗಲಭೆಗಳು ಶಾಶ್ವತವಾಗಿ ನಿಂತವು'' ಎನ್ನುವ ಹಸಿ ಸುಳ್ಳನ್ನು ಕೂಡ ಅಮಿತ್ ಶಾ ಅವರು ಗುಜರಾತ್‌ನ ಜನರ ಕಿವಿಗೆ ಇಟ್ಟಿದ್ದಾರೆ. ಗುಜರಾತ್‌ನಲ್ಲಿ ಆ ಬಳಿಕ ಕೋಮುಗಲಭೆ ನಡೆಯಲಿಲ್ಲ ಎನ್ನುವುದು ಅತಿ ದೊಡ್ಡ ಸುಳ್ಳು.
2002ರ ಬಳಿಕವೂ ಗುಜರಾತ್‌ನಲ್ಲಿ ಕೋಮುಗಲಭೆಗಳು ಸಂಭವಿಸಿವೆ. ಸಾವು - ನೋವುಗಳಾಗಿವೆ. ದಲಿತರ ಮೇಲೆ ದೌರ್ಜನ್ಯಗಳು, ಹಿಂಸಾಚಾರಗಳು ಹೆಚ್ಚಿವೆ. ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಸ್ಫಾಪಿಸಬೇಕಾದವರು, ಪಾತಕಿಗಳ ಮೂಲಕ ಶಾಂತಿಸ್ಥಾಪಿಸಿದ್ದೇವೆ ಎಂದು ಸಾರ್ವಜನಿಕ ಭಾಷಣವೊಂದರಲ್ಲಿ ಕೊಚ್ಚಿಕೊಳ್ಳುವುದು ಈ ದೇಶದ ದುರಂತವೇ ಸರಿ. ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನಲ್ಲಿ ಇಲ್ಲಿ ಏನನ್ನು ಪ್ರತಿಪಾದಿಸಿದ್ದಾರೆಯೋ ಅದನ್ನು ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗವಹಿಸಿದ ಭಯೋತ್ಪಾದಕರೂ ಪ್ರತಿಪಾದಿಸಿದ್ದರು. ಮುಂಬೈಯ ಭೀಕರ ಕೋಮುಗಲಭೆಗಳ ಬಳಿಕ ಅಲ್ಲಿ ಭಯಾನಕವಾದ ಸರಣಿ ಸ್ಫೋಟಗಳು ಸಂಭವಿಸಿದವು. ತನಿಖೆಯ ಸಂದರ್ಭದಲ್ಲಿ ಸರಣಿ ಸ್ಫೋಟದಲ್ಲಿ ಭಾಗವಹಿಸಿದ ಭಯೋತ್ಪಾದಕರು, ಕೋಮುಗಲಭೆಯಲ್ಲಾದ ಅನ್ಯಾಯವೇ ಸ್ಫೋಟ ನಡೆಸಲು ಕಾರಣ ಎಂದರು. ಕೋಮುಗಲಭೆಯ ತನಿಖೆ ನಡೆಸಿದ ಶ್ರೀ ಕೃಷ್ಣ ಆಯೋಗ ಕೂಡ ಇದನ್ನೇ ಹೇಳಿತು. ಆದರೆ ಒಂದು ಅನ್ಯಾಯಕ್ಕೆ ಇನ್ನೊಂದು ಭೀಕರ ಅನ್ಯಾಯ ಪರಿಹಾರವಲ್ಲ. ಯಾರೋ ದುಷ್ಕರ್ಮಿಗಳು ಮಾಡಿದ ತಪ್ಪನ್ನು, ಅಮಾಯಕರ ಕಗ್ಗೊಲೆ ನಡೆಸುವ ಮೂಲಕ ಸರಿಪಡಿಸುವುದಕ್ಕಾಗುವುದಿಲ್ಲ. ಮುಂಬೈ ಸರಣಿ ಸ್ಫೋಟದಲ್ಲಿ ಭಾಗವಹಿಸಿದ ಆರೋಪಿಯನ್ನು ಗಲ್ಲಿಗೇರಿಸಲಾಗಿದೆ. ಆದರೆ ಗುಜರಾತ್ ಹತ್ಯಾಕಾಂಡ ಆರೋಪಿಗಳು ಬಹಿರಂಗವಾಗಿ ಓಡಾಡುತ್ತಿದ್ದಾರೆ. ಸರಣಿ ಸ್ಫೋಟಗಳ ಬಳಿಕ ಮುಂಬೈಯಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಯಿತು ಎಂದು ಪ್ರತಿಪಾದಿಸಿ ಉಗ್ರರ ಕೃತ್ಯವನ್ನು ಸಮರ್ಥಿಸುವವರು ಈಗಲೂ ಇದ್ದಾರೆ. ಗೃಹ ಸಚಿವ ಅಮಿತ್ ಶಾರ ಮಾತುಗಳು ಸರಣಿ ಸ್ಫೋಟ ಸಮರ್ಥಕರ ಪ್ರತಿಪಾದನೆಗಿಂತ ಭಿನ್ನವಾಗಿಲ್ಲ. ಇಲ್ಲಿರುವ ವಿಪರ್ಯಾಸವೆಂದರೆ, ಅಮಿತ್ ಶಾ ಈ ದೇಶದ ಗೃಹ ಸಚಿವರು ಎನ್ನುವುದು.