ಕ್ರಾಂತಿಕಾರಿಯೊಬ್ಬನ ಬದುಕಿನ ರೋಚಕ ಕತೆ
ಎಲ್ಲ ಮಾರ್ಗಗಳ ಸಮಾನತೆಯ ಆಂದೋಲನಗಳು ಹಿನ್ನಡೆ ಅನುಭವಿಸುತ್ತಿರುವ ಇಂದಿನ ದಿನಗಳಲ್ಲಿ ಇಂಥ ಪುಸ್ತಕಗಳ ಓದು ಹೋರಾಡುವ ಜನವರ್ಗಗಳಿಗೆ ಮತ್ತು ಅದರ ಪರವಾಗಿ ಬರೆಯುವ ಸಾಂಸ್ಕೃತಿಕ ಲೋಕದ ಕಾರ್ಯಕರ್ತರಿಗೆ ಹೊಸ ಸ್ಫೂರ್ತಿ ನೀಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಮಾತಾಡಲು ಮಾತ್ರವಲ್ಲ ಉಸಿರಾಡಲೂ ಭಯಪಡುವ ಈ ದಿನಗಳಲ್ಲಿ ನಾವು ಬದುಕಿಯೂ ಸತ್ತಂತಿದ್ದೇವೆ. ಪ್ರತಿರೋಧದ ಧ್ವನಿಗಳನ್ನು ದಮನ ಮಾಡಲು ಪ್ರಭುತ್ವ ಸಕಲಾಸಗಳನ್ನು ಬಳಸುತ್ತಿರುವ ಕಾಲಘಟ್ಟದಲ್ಲಿ ಜ್ಯೋತಿ ಅನಂತಸುಬ್ಬರಾವ್ ಅವರು ರಾಜಿ ರಹಿತ ಕ್ರಾಂತಿಕಾರಿ ಕೋಬಾಡ ಗಾಂಧಿಯವರ ಬದುಕಿನ ರೋಚಕ ಆತ್ಮಕಥೆಯನ್ನು ಕನ್ನಡಕ್ಕೆ ತಂದಿದ್ದಾರೆ. ವರ್ತಮಾನದ ಕಟು ಸತ್ಯವನ್ನು ಕೋಬಾಡ ಗಾಂಧಿಯವರು ದಾಖಲಿಸಿದ ಈ ಪುಸ್ತಕ ನಮ್ಮ ಮನಸ್ಸಾಕ್ಷಿಯನ್ನು ಬಡಿದೆಬ್ಬಿಸುತ್ತದೆ.
ಕರ್ನಾಟಕದಲ್ಲಿ ಅನೇಕ ಹೋರಾಟಗಳು ನಡೆದರೂ ಅವುಗಳು ಅಕ್ಷರ ರೂಪ ಪಡೆದು ಬೆಳಕು ಕಂಡಿದ್ದು ಕಡಿಮೆ. ಕಮ್ಯುನಿಸ್ಟರು ಮತ್ತು ಸೋಶಲಿಸ್ಟರು ನಂತರ ದಲಿತ ಸಂಘಟನೆಗಳು ನಡೆಸಿದ ಹಲವಾರು ಹೋರಾಟಗಳು ಚರಿತ್ರೆಯ ಪುಟಗಳಲ್ಲಿ ಸರಿಯಾಗಿ ದಾಖಲಾಗಿಲ್ಲ.ಹಿರಿಯ ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲ್ಲಾಯರು ಬರೆದ ಆತ್ಮಕಥೆ 'ಬರೆಯದ ದಿನಚರಿಯ ಮರೆಯದ ಪುಟಗಳು' ಹಾಗೂ ಬಿಜಾಪುರದ ಕಮ್ಯುನಿಸ್ಟ್ ನಾಯಕರಾಗಿದ್ದ ಎನ್.ಕೆ.ಉಪಾಧ್ಯಾಯರ ಆತ್ಮಕಥೆ ಹಾಗೂ ಅಂಕೋಲಾದ ಸಮಾಜವಾದಿ ಲೇಖಕ ವಿಷ್ಣುಮೂರ್ತಿ ಅವರು ಬರೆದ ದುಡಿಯುವ ಕೈಗಳ ಹೋರಾಟದ ಕತೆ ಮತ್ತು ಮಹಾರಾಷ್ಟ್ರದ ಕಮ್ಯುನಿಸ್ಟ್ ನಾಯಕಿ ಗೋದಾವರಿ ಪರುಳೇಕರ ಅವರು ಆದಿವಾಸಿಗಳ ನಡುವೆ ಕೆಲಸ ಮಾಡಿದ ಅನುಭವ ಕಥನ ಮಾನವ ಎಚ್ಚೆತ್ತಾಗ ಹೀಗೆ ಕೆಲವು ಪುಸ್ತಕಗಳು ಬಂದಿವೆ.ಇವೆಲ್ಲವುಗಳಿಗಿಂತ ಭಿನ್ನವಾದುದುಕೋಬಾಡ ಗಾಂಧಿಯವರ 'ಅತಂತ್ರ ಸ್ವಾತಂತ್ರ' ಕಾರಣ ಇದು ಜಾಗತೀಕರಣದ ದಿನಗಳಿಗೆ ಮುಖಾ ಮುಖಿಯಾದ ಹೋರಾಟದ ಕತೆ.
ಮಾವೋವಾದಿಯಾದ ಕೋಬಾಡ ಗಾಂಧಿಯವರದು ಓದಿಸಿಕೊಂಡು ಹೋಗುವ ಕುತೂಹಲವನ್ನು ನಿರಂತರವಾಗಿ ಕಾಯ್ದಿಟ್ಟುಕೊಳ್ಳುವ ಶೈಲಿ.ಜ್ಯೋತಿ ಅನಂತಸುಬ್ಬರಾವ್ ಅವರು ಅಷ್ಟೇ ಸರಳ ಕನ್ನಡದಲ್ಲಿ ಅನುವಾದ ಎಂಬ ಭಾವನೆ ಬರದಂತೆ, ಕನ್ನಡದ ಒರಿಜಿನಲ್ ಕೃತಿ ಎಂಬಂತೆ ತರ್ಜುಮೆ ಮಾಡಿದ್ದಾರೆ.
ಬಾಯಿಯಲ್ಲಿ ಬಂಗಾರದ ಚಮಚೆಯನ್ನು ಇಟ್ಟುಕೊಂಡೇ ಜನಿಸಿದ ಕೋಬಾಡ ಗಾಂಧಿ ಎಂಬ ಮುಂಬೈನ ಪಾರ್ಸಿ ಯುವಕ ಕೋಟ್ಯಧಿಶರು ಓದುವ ಡೆಹರಾಡೂನ್‌ನ ಡೂನ್ ಸ್ಕೂಲ್‌ನಲ್ಲಿ ಓದಿದವರು.ಅಲ್ಲಿ ಇಂದಿರಾಗಾಂಧಿ ಅವರ ಪುತ್ರ ಸಂಜಯ ಗಾಂಧಿ ಇವರ ಸಹಪಾಠಿ. ಅಲ್ಲಿ ವ್ಯಾಸಂಗ ಮುಗಿಸಿ ಚಾರ್ಟರ್ಡ್ ಅಕೌಂಟೆಂಟ್ ಆಗಲು ಲಂಡನ್ ಗೆ ಹೋದ ಕೋಬಾಡ ಗಾಂಧಿ ವಾಪಸಾದುದು ಮಾರ್ಕ್ಸ್‌ವಾದಿಯಾಗಿ.
ಮುಂಬೈಯ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕಿ ಯಾಗಿದ್ದ ಅನುರಾಧಾ ಅನ್ಯಾಯ ಕಂಡರೆ ಸಿಡಿದೇಳುವ ಯುವತಿ.ಅನುರಾಧಾ ಅವರದು ಕಮ್ಯುನಿಸ್ಟ್ ಕುಟುಂಬ. ತಂದೆ ಕರ್ನಾಟಕದ ಕೊಡಗು ಮೂಲದವರು. ಮುಂಬೈನ ಹೈಕೋರ್ಟ್ ನಲ್ಲಿ ಸರಕಾರಿ ಅಭಿಯೋಜಕರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಕುಮುದ್ ಮಹಾರಾಷ್ಟ್ರದ ಔರಂಗಾಬಾದ್‌ನವರು. ಹಿರಿಯ ಕಮ್ಯುನಿಸ್ಟ್ ನಾಯಕ, ಶಾಸಕ ಚಂದ್ರಗುಪ್ತ ಚೌಧರಿ ಅವರ ಸಹೋದರಿ.ಈ ಹಿನ್ನೆಲೆಯ ಇವರು ಸಹಜವಾಗಿ ಆಕರ್ಷಿತರಾಗಿದ್ದು ಕಡುಗೆಂಪಿನ ಕಮ್ಯುನಿಸ್ಟ್ ಚಳವಳಿ ಕಡೆಗೆ.
ಅದು ಕಳೆದ ಶತಮಾನದ ಎಪ್ಪತ್ತರ ದಶಕ.ಭಾರತದ ಲ್ಲಿ ಸಂಸದೀಯ ಕಮ್ಯುನಿಸ್ಟ್ ಪಕ್ಷಗಳ ಆಕರ್ಷಣೆ ಕಡಿಮೆಯಾಗುತ್ತಿದ್ದ ದಿನಗಳವು. ಕಮ್ಯುನಿಸ್ಟ್ ಚಳವಳಿ ಟ್ರೇಡ್ ಯುನಿಯನ್ ಚಟುವಟಿಕೆಗಳಿಗೆ, ಆರ್ಥಿಕ ಹೋರಾಟ ಗಳಿಗೆ ಸೀಮಿತವಾಗಲಾರಂಭಿಸಿದ ಆ ದಿನಗಳಲ್ಲಿ ವಿದ್ಯಾವಂತ ಯುವಕರನ್ನು ಆಕರ್ಷಿಸಿದ್ದು ನಕ್ಸಲ್ ಚಳವಳಿ. 'ಬ್ಯಾಲೆಟ್ ಬೇಡ ಬುಲೆಟ್' ಎಂಬ ರೋಷಾವೇಶದ ಧಾರೆಯತ್ತ ಕೋಬಾಡ ಗಾಂಧಿಯವರು ಹೊರಳಿದರು.ಅವರೊಬ್ಬರೇ ಅಲ್ಲ.ಮುಂದೆ ಅವರ ಜೊತೆಗಾತಿಯಾದ ಅನುರಾಧಾ ಶಾನ್‌ಬಾಗ್ ಕೊಡ ಅವರೊಂದಿಗೆ ಹೆಜ್ಜೆ ಹಾಕಿದರು.
ಇಂಥ ಕೋಬಾಡ ಗಾಂಧಿಯವರು ಮಾವೋವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯರೆಂಬ ಆರೋಪ ಹೊತ್ತು ಸುಮಾರು ಹತ್ತು ವರ್ಷಗಳ ಕಾಲ ಜೈಲು ವಾಸ ಅನುಭವಿಸಿ ತಮ್ಮ ತಿಹಾರ್ ಜೈಲಿನ ಅನುಭವಗಳನ್ನು ಅತ್ಯಂತ ಪರಿಣಾಮಕಾರಿ ಯಾಗಿ ದಾಖಲಿಸಿದ್ದಾರೆ. ಈ ಜೈಲಿನಲ್ಲಿ ನಾನಾ ಕ್ರಿಮಿನಲ್ ಆರೋಪ ಹೊತ್ತು ಬರುವ ಕೈದಿಗಳ ಒಡನಾಟ ಮಾತ್ರವಲ್ಲ 2011 ರ ವೇಳೆಗೆ ಓಟಿಗಾಗಿ ನೋಟು ಹಗರಣದ ಆಪಾದಿತರ ಜೊತಗೆ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅವರೂ ತಿಹಾರ ಜೈಲನ್ನು ಪ್ರವೇಶಿಸುತ್ತಾರೆ. ಅವರೊಂದಿಗಿನ ಮಾತುಗಳನ್ನು ಕೋಬಾಡ ಗಾಂಧಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಜೊತೆಗೆ ಸೆರೆಮನೆಯ ಜಗತ್ತಿನ ಒಳಗಿನ ಅನೇಕ ಕುತೂಹಲಕಾರಿ, ಸ್ವಾರಸ್ಯಕರ ಅಂಶಗಳು ವ್ಯವಸ್ಥೆಯ ಕ್ರೌರ್ಯದ ಜೊತೆಗೆ ದಾಖಲಾಗಿವೆ.ಓದುತ್ತ ಹೋದಂತೆ ಮುಂದೇನು ಎಂಬ ಕುತೂಹಲ ಹೆಚ್ಚುತ್ತ ಹೋಗುತ್ತದೆ.
ವಿಭಿನ್ನ ಹಿನ್ನೆಲೆಯಿಂದ ಬಂದ ಕೋಬಾಡ ಗಾಂಧಿ ಮತ್ತು ಅನುರಾಧಾರಾನ್‌ಬಾಗ್ ಪರಸ್ಪರ ಇಷ್ಟಪಟ್ಟು 1977 ರ ತುರ್ತು ಪರಿಸ್ಥಿತಿ ನಂತರ ಮದುವೆಯಾಗುತ್ತಾರೆ.ವಿವಾಹವಾದ ನಂತರ ದಮನಿತ ಜನತೆಯ ವಿಮೋಚನಾ ಚಳವಳಿಗೆ ಇಬ್ಬರೂ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಸಮರ್ಪಣೆ ಅಂದರೆ ಬರೀ ಬರಹ,ಭಾಷಣಗಳಿಗೆ ಮಾತ್ರ ಸೀಮಿತವಾಗಿ ಅಲ್ಲ.ಕೊಳಚೆ ಪ್ರದೇಶದ ನಿವಾಸಿಗಳ ಜೊತೆಗೆ, ದಲಿತ ಸಂಘಟನೆಗಳ ಜೊತೆಗೆ ಹಲವಾರು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಗ ಮಹಾರಾಷ್ಟ್ರದಲ್ಲಿ ಅದೇ ತಾನೇ ದಲಿತ ಪ್ಯಾಂಥರ್ ಸಂಘಟನೆ ಉದಯವಾಗಿತ್ತು. ನಾಮದೇವ ಢಸಾಳ, ದಯಾ ಪವಾರ್, ಅರ್ಜುನ ದಾಂಗ್ಲೆ, ಜೆ.ವಿ.ಪವಾರ್ ಅವರಂಥ ಉತ್ಸಾಹಿ ಯುವ ಲೇಖಕರು ದಲಿತ ಆಂದೋಲನದ ನಾಯಕತ್ವ ವಹಿಸಿದ್ದರು. ಅವರೊಂದಿಗೆ ಗುರುತಿಸಿಕೊಳ್ಳಲು ಕೋಬಾಡ ಗಾಂಧಿ ಹಿಂಜರಿಯಲಿಲ್ಲ.
ಕೋಬಾಡ ಗಾಂಧಿಯವರು 240 ಪುಟಗಳ ಈ ಪುಸ್ತಕದಲ್ಲಿ ತಮ್ಮ ಬಾಲ್ಯ, ವ್ಯಾಸಂಗ, ಕ್ರಾಂತಿಕಾರಿ ಹೋರಾಟದ ಜೊತೆಗಿನ ಒಡನಾಟ, ಅನುರಾಧಾ ಅವರ ಜೊತೆಗಿನ ಪ್ರೀತಿ,ವೈವಾಹಿಕ ಜೀವನ, ದಲಿತ ಚಳವಳಿಯ ಜೊತೆಗಿನ ಸಂಪರ್ಕ, ಮಾವೋವಾದಿ ಚಳವಳಿಯಿಂದ ಪಡೆದ ಸ್ಫೂರ್ತಿ ಮತ್ತು ಅದರಲ್ಲಿನ ಒಡಕುಗಳು, ಏಕಾಏಕಿ ಬಂಧನಕ್ಕೊಳಗಾಗಿ ತಿಹಾರ್ ಜೈಲು ಸೇರಿದ್ದು, ದೋಷ ಮುಕ್ತರಾಗಲು ನಡೆಸಿದ ನ್ಯಾಯಾಂಗ ಹೋರಾಟ, ನಡೆದು ಬಂದ ದಾರಿಯ ಪುನರಾವಲೋಕನ ಮಾಡಿದ್ದಾರೆ. ಯಾವುದೇ ಮುಚ್ಚು ಮರೆಯಿಲ್ಲದೆ, ಸ್ವಯಂ ವೈಭವೀಕರಣವಿಲ್ಲದೆ ಬರೆದಿದ್ದಾರೆ.
ಕೋಬಾಡ ಗಾಂಧಿ ಮತ್ತು ಅನುರಾಧಾ ಶಾನ್‌ಬಾಗ್ ಅತ್ಯಂತ ಅನುಕೂಲಸ್ಥ ಕುಟುಂಬಗಳಿಂದ ಬಂದವರು. ಕಮ್ಯುನಿಸ್ಟರಾದರೂ ಸುಖ, ಸಂತೋಷದ ಐಷಾರಾಮಿ ಜೀವನ ಮಾಡುವ ಅನೇಕರಿದ್ದಾರೆ.ಎಲ್ಲಾ ಸೌಕರ್ಯಗಳಿದ್ದರೂ ಇವರು ಆಯ್ದು ಕೊಂಡ ಮಾರ್ಗ ಅತ್ಯಂತ ಕಷ್ಟಕರವಾದ ಕಲ್ಲು ಮುಳ್ಳಿನ ಮಾರ್ಗ. ತುಂಬಿದ ರೈಲು,ಬಸ್ಸು ಗಳಲ್ಲಿ ಓಡಾಟ, ಸಿಕ್ಕ ಸಿಕ್ಕಲ್ಲಿ ಸ್ಲಂಗಳಲ್ಲಿ ಊಟ,ಹೀಗೇಕೆ ಎಂದು ಅನೇಕರು ಪ್ರಶ್ನಿಸಿದಾಗ ಇದರಲ್ಲೇ ನಮಗೆ ನೆಮ್ಮದಿ ಎಂಬುದು ಇಬ್ಬರ ಉತ್ತರ.ಪಂಡಿತ ಜವಾಹರಲಾಲ್ ನೆಹರೂ ಒಂದೆಡೆ ಹೇಳುತ್ತಾರೆ. ನಂಬಿದ ಆದರ್ಶಗಳಿಗೆ ಬದ್ಧವಾಗಿ ಬದುಕುವುದೇ ಸಂತೋಷ ಎಂದು. ಕೋಬಾಡ ಗಾಂಧಿ ಮತ್ತು ಅನುರಾಧಾ ಬಯಸಿದ್ದರೆ ಬಹುದೊಡ್ಡ ಕಾರ್ಪೊರೇಟ್ ಕಂಪೆನಿಯಲ್ಲಿ ಲಕ್ಷಾಂತರ ರೂ. ಕೈಗೆ ಬರುವ ಕೆಲಸ ಮಾಡಿ ಉಳಿದ ಸಮಯದಲ್ಲಿ ಮಾರ್ಕ್ಸ್‌ವಾದದ ಪಾಠ ಮಾಡಬಹುದಿತ್ತು.ಆದರೆ ಜಾತಿ ಮತ್ತು ವರ್ಗದ ಬಂಧನ ಕಳಚಿ ಮಾತು ಮತ್ತು ಕೃತಿಯಲ್ಲಿ ಕಮ್ಯುನಿಸ್ಟರಾದವರಿಗೆ ಇದೇ ಖುಷಿ ಕೊಡುವ ಸಂಗತಿ.
ಪುಸ್ತಕದ ಕೊನೆಯ ಭಾಗದಲ್ಲಿ ಕೋಬಾಡ ಗಾಂಧಿಯವರು ತಮ್ಮ ನಲುವತ್ತು ವರ್ಷಗಳ ಹೋರಾಟದ ಬದುಕಿನಲ್ಲಿ ಸಾಧಿಸಿದ್ದೇನು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಪರಾಮರ್ಶೆ ಮಾಡಿಕೊಂಡಿದ್ದಾರೆ. 1960 ರಲ್ಲಿ ಜಗತ್ತನ್ನೇ ಚಾಚಿಕೊಂಡು ತಮ್ಮನ್ನೂ ಸೆಳೆದ ಕಮ್ಯುನಿಸಂ ಈಗ ಬಹುತೇಕವಾಗಿ ಬಲ ಹೀನವಾಗಿ ಕುಸಿದಿದೆ.ಭಾರತದಲ್ಲೂ ಕ್ರಿಯಾಶೀಲ ವಾಗಿ ಮುನ್ನಡೆಯುತ್ತಿಲ್ಲ. ದುಡಿಯುವ ಜನರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಬಂಡವಾಳವಾದ ತನ್ನ ಹಾದಿಯಲ್ಲಿ ಏನೇ ಬಂದರೂ ಧ್ವಂಸ ಮಾಡುತ್ತ,ಜನರು ಮತ್ತು ಪರಿಸರ ಯಾವುದನ್ನೂ ಬಿಡದೆ ವಿನಾಶ ಮಾಡುತ್ತಿರುವಾಗ ಪರಿಸ್ಥಿತಿ ನಿರಾಶಾದಾಯಕವಾಗಿದೆ ಎಂದು ಕಳವಳವನ್ನು ವ್ಯಕ್ತಪಡಿಸುತ್ತಲೇ ಉತ್ತಮ ಸಮಾಜದ ನಿರ್ಮಾಣದ ಬಗ್ಗೆ ಭರವಸೆಯನ್ನು ಕಳೆದುಕೊಳ್ಳಬೇಕಾಗಿಲ್ಲ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಕೋಬಾಡ ಗಾಂಧಿಯವರ ಈ ಪುಸ್ತಕವನ್ನು ಶಬ್ದಾನುವಾದಕ್ಕಿಂತ, ಭಾವಾನುವಾದದ ಶೈಲಿಯಲ್ಲಿ ಕನ್ನಡಕ್ಕೆ ತಂದ ಜ್ಯೋತಿ ಅನಂತಸುಬ್ಬರಾವ್ ಮೂಲ ಲೇಖಕರ ರಾಜಕೀಯ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರೂಅದೆಲ್ಲೂ ಇಣುಕದಂತೆ ಎಚ್ಚರ ವಹಿಸಿದ್ದಾರೆ. ಅನುವಾದಕರಿಗೆ ಈ ಪ್ರಾಮಾಣಿಕತೆ ಇರಬೇಕು.
ಕೋಬಾಡ ಗಾಂಧಿಯವರ ಈ ಪುಸ್ತಕವನ್ನು ಓದುವ ಮುನ್ನ ದಾವಣಗೆರೆಯ ಇಮ್ತಿಯಾಝ್ ಹುಸೇನ್ ತಮ್ಮ ಊರಿನಲ್ಲಿ ತಾವು ತೊಡಗಿಸಿಕೊಂಡ ಕಮ್ಯುನಿಸ್ಟ್ ಚಳವಳಿಯ ಏಳು ಬೀಳುಗಳ ಬಗ್ಗೆ ಬರೆದುದನ್ನು ಓದಿದ್ದೆ.ಅದು ಸಂಸದೀಯ ಕಮ್ಯುನಿಸ್ಟ್ ಪಕ್ಷದ ಬಗೆಗಿನ ಇತಿಹಾಸವಾದರೆ ಇದು ಸಂಸದೀಯ ಮಾರ್ಗಕ್ಕೆ ಭಿನ್ನವಾದ ಹೋರಾಟದ ಕತೆ. ಒಟ್ಟಾರೆ ಎಲ್ಲ ಮಾರ್ಗಗಳ ಸಮಾನತೆಯ ಆಂದೋಲನಗಳು ಹಿನ್ನಡೆ ಅನುಭವಿಸುತ್ತಿರುವ ಇಂದಿನ ದಿನಗಳಲ್ಲಿ ಇಂಥ ಪುಸ್ತಕಗಳ ಓದು ಹೋರಾಡುವ ಜನವರ್ಗಗಳಿಗೆ ಮತ್ತು ಅದರ ಪರವಾಗಿ ಬರೆಯುವ ಸಾಂಸ್ಕೃತಿಕ ಲೋಕದ ಕಾರ್ಯಕರ್ತರಿಗೆ ಹೊಸ ಸ್ಫೂರ್ತಿ ನೀಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ