ನ್ಯಾಯಾಲಯದಲ್ಲಿ ಗದ್ದಲ: ಬೇಷರತ್ ಕ್ಷಮೆ ಕೋರಿದ ವಕೀಲ ಜಗದೀಶ್ ಗೆ ದಂಡ ವಿಧಿಸಿ, ಪ್ರಕರಣ ಕೈಬಿಟ್ಟ ಹೈಕೋರ್ಟ್
ಬೆಂಗಳೂರು, ನ.29: ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ನಗರದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಗದ್ದಲ ಉಂಟು ಮಾಡಿದ್ದ ಬಗ್ಗೆ ವಕೀಲ ಕೆ.ಎನ್.ಜಗದೀಶ್ ಬೇಷರತ್ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಕೇಸ್‍ನ್ನು ಹೈಕೋರ್ಟ್ ಕೈಬಿಟ್ಟಿದೆ.
ಈ ಕುರಿತಂತೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಪಿ.ವರಾಲೆ ಅವರಿದ್ದ ವಿಭಾಗೀಯ ಪೀಠಕ್ಕೆ ಜಗದೀಶ್ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, ನ್ಯಾಯಾಲಯದ ವಿಚಾರಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಈ ರೀತಿ ನಡೆದುಕೊಳ್ಳುವುದಿಲ್ಲ ಎಂಬುದಾಗಿ ಕ್ಷಮಾಪಣಾ ಪತ್ರ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿತು.
ಕೋರ್ಟ್‍ನಲ್ಲಿ ಗದ್ದಲ ಉಂಟು ಮಾಡಿದ್ದಕ್ಕೆ ವಕೀಲ ಜಗದೀಶ್‍ಗೆ 2 ಲಕ್ಷ ರೂ ದಂಡ ವಿಧಿಸಿದ ನ್ಯಾಯಪೀಠ, ದಂಡದ ಮೊತ್ತದಲ್ಲಿ 1 ಲಕ್ಷ ರೂ.ಅನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರ, 50 ಸಾವಿರ ರೂಪಾಯಿಯನ್ನು ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ಮತ್ತು 50 ಸಾವಿರ ರೂ.ವನ್ನು ಹೈಕೋರ್ಟ್‍ನ ಗುಮಾಸ್ಥರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮುಂದಿನ ಎರಡು ವಾರಗಳಲ್ಲಿ ಪಾವತಿಸಬೇಕು ಸೂಚನೆ ನೀಡಿತು. ಅಲ್ಲದೆ, ಈ ಆದೇಶವನ್ನು ಪಾಲಿಸಿರುವ ಕುರಿತಂತೆ ಡಿ.16ರಂದು ನ್ಯಾಯಾಲಯಕ್ಕೆ ವಿವರಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣವೇನು?: ಕೇಸ್‍ವೊಂದರ ವಿಚಾರಣೆಗೆ ನಗರದ ಸಿಟಿ ಸಿವಿಲ್ ಕೋರ್ಟ್‍ಗೆ ಆಗಮಿಸಿದ್ದ ವಕೀಲ ಜಗದೀಶ್, ನ್ಯಾಯಾಲಯ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದರು. ಅಲ್ಲದೆ, ನ್ಯಾಯಾಲಯದಲ್ಲಿ ಟೇಬಲ್ ಮೇಲೆ ಗುದ್ದಿ ಗದ್ದಲ ಉಂಟು ಮಾಡಿದ್ದರು. ಈ ಬಗ್ಗೆ ನ್ಯಾಯಾಧೀಶರು ಹಲವು ಬಾರಿ ಮನವಿ ಮಾಡಿದರೂ ಗಲಾಟೆ ಮುಂದುವರೆಸಿದ್ದರು. ಈ ಬಗ್ಗೆ ಜಗದೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಹೈಕೋರ್ಟ್‍ಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಇದೀಗ ದಂಡ ವಿಧಿಸಿ ಪ್ರಕರಣವನ್ನು ಕೈಬಿಟ್ಟಿದೆ.