ಮತದಾರರ ನೋಂದಣಿ ಆನ್‍ಲೈನ್‍ನಲ್ಲೇ ಹೆಚ್ಚು: ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ
ಬೆಂಗಳೂರು, ನ.29: ಪ್ರಸ್ತುತ ಸಾಲಿನಲ್ಲಿ ಶೇಕಡ 99 ರಷ್ಟು ಮತದಾರರ ನೋಂದಣಿ ಆನ್‍ಲೈನ್‍ನಲ್ಲಿಯೇ ನಡೆದಿದ್ದು, ಹೊಸ ಮತದಾರರನ್ನು ಸಂಪೂರ್ಣವಾಗಿ ಸೇರ್ಪಡೆಯ ಗುರಿ ಹೊಂದಿದ್ದೇವೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿವಿ ಹಾಗೂ ಕಾನೂನು ಕಾಲೇಜು ಸಹಯೋಗದೊಂದಿಗೆ ಏರ್ಪಡಿಸಿದ್ದ ಮತದಾರರ ನೋಂದಣಿ ಜಾಗೃತಿ ಅಭಿಯಾನ ಮತ್ತು ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದ್ಯಚುನಾವಣಾ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದು ಅವುಗಳಲ್ಲಿ ಮುಖ್ಯವಾದದ್ದು ಅರ್ಹತಾ ದಿನಾಂಕವನ್ನು ತ್ರೈಮಾಸಿಕಗಳಲ್ಲಿ ವಿಂಗಡಿಸಲಾಗಿದೆ. ಇದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ನೋಂದಣಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿ, ಏಳು ದಶಕಗಳ ಸಂವಿಧಾನ ಕಾಲಾವಧಿಯಲ್ಲಿ ಭಾರತದ ಒಬ್ಬ ಕಟ್ಟ ಕಡೆಯ ಪ್ರಜೆಯು ದೇಶದ ಅತ್ಯುನ್ನತ ಪದವಿಗೆ ತಲುಪಬಹುದು.ಒಬ್ಬ ವ್ಯಕ್ತಿಯ ತನ್ನ ಜಾತಿ, ಧರ್ಮ, ಜನಾಂಗ ಭೇದಭಾವವಿಲ್ಲದೆ ಉನ್ನತ ಮಟ್ಟಕ್ಕೆ ತಲುಪಿ ಸಮಾಜದಲ್ಲಿ ಗೌರವವಾಗಿ ಬಾಳುವಂತಹ ಅವಕಾಶವನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ನಾಡಗೌಡರ್, ಡಾ.ಸತೀಶ್ ಗೌಡ ಎನ್. ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.