ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು RSS ಬಿಡುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಕನಕ ಜಯಂತಿ ಕಾರ್ಯಕ್ರಮದಲ್ಲಿ ಎಚ್.ವಿಶ್ವನಾಥ್ ಜೊತೆಗಿನ ಒಡನಾಟ ಮೆಲುಕು ಹಾಕಿದ ವಿಪಕ್ಷ ನಾಯಕ
ಮೈಸೂರು,ನ.30: 'ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಆರೆಸ್ಸೆಸ್ ಬಿಡುವುದಿಲ್ಲ. ಆರೆಸ್ಸೆಸ್ ನವರು ಕಳ್ಳರು, ಸುಳ್ಳು ಹೇಳುತ್ತಾರೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಕನಕ ಜಯಂತಿ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದ ಅವರು, ''ಆರೆಸ್ಸೆಸ್ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಿಡುವುದಿಲ್ಲ. ಅಸಮಾನತೆ ಇಲ್ಲದಿದ್ದರೆ ಅವರಿಗೆ ಶೋಷಣೆ ಮಾಡಲು ಸಾಧ್ಯವಿಲ್ಲ. ಮುಸ್ಲಿಮರನ್ನು ಬೆದರು ಗೊಂಬೆಯಂತೆ ಬಳಸಿಕೊಂಡು ಆಟವಾಡುತ್ತಿದ್ದಾರೆ. ನೀವು ಇಂದು ಬದಲಾಗಬೇಕಿದೆ . ಸುಮ್ಮನೆ ಕನಕ ದಾಸರಿಗೆ ಹಾರ ಹಾಕಿ ಹೊರಟರೆ ಸಾಧ್ಯವಿಲ್ಲ. ಆರೆಸ್ಸೆಸ್ ದೇಶ ಭಕ್ತರನ್ನು ಹುಟ್ಟು ಹಾಕುವ ಸಂಸ್ಥೆ ಎಂದು ಸುಳ್ಳು ಹೇಳುತ್ತಾರೆ . ಇವರಲ್ಲಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ?. ಆರೆಸ್ಸೆಸ್ ನ ಯಾರು ತ್ಯಾಗ ಬಲಿದಾನದಲ್ಲಿ ಪಾಲ್ಗೊಂಡಿದ್ದಾರೆ?.ನೀವೆಲ್ಲರೂ ಇದನ್ನು ಅರಿತು ಬದಲಾಗಬೇಕಿದೆ'' ಎಂದು ಹೇಳಿದರು.
ಇದೇ ವೇಳೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಜೊತೆಗಿನ ಒಡನಾಟ ಮೆಲುಕು ಹಾಕಿದ ಸಿದ್ದರಾಮಯ್ಯ, 'ಹಿಂದೆ ಕುರುಬ ಎಂದು ಹೇಳಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದರು. ನಾನು ಮತ್ತು ವಿಶ್ವನಾಥ್ ಎಲ್ಲಾ ಕಾಲೇಜುಗಳನ್ನು ಸಂಚರಿಸಿ ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಸಂಘಟಿಸಿ, ಕಾಳಿದಾಸ ವಿದ್ಯಾರ್ಥಿ ಸಂಘ ಮಾಡಿದ್ದೆವು. ನಾನು ಅಧ್ಯಕ್ಷನಾಗಿದ್ದೆ ವಿಶ್ವನಾಥ್ ಜನರಲ್ ಸೆಕ್ರೆಟರಿ ಆಗಿದ್ದ. ನಾನು ಲಾಯರ್ ಆದ ಮೇಲೆ ವಿಶ್ವನಾಥ್ ಅಧ್ಯಕ್ಷನಾದ' ಎಂದು ತಿಳಿಸಿದರು.