ಏಡ್ಸ್ ಕುರಿತು ತಪ್ಪುಕಲ್ಪನೆಗಳನ್ನು ಹೋಗಲಾಡಿಸೋಣ
ಇಂದು ಏಡ್ಸ್ ಜಾಗೃತಿ ದಿನ
ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಏಡ್ಸ್ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಪ್ರತೀ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಎಂದು ಆಚರಿಸಲಾಗುತ್ತಿದೆ. 1988ರಿಂದ ಈ ಆಚರಣೆ ಜಾರಿಗೆ ಬಂದಿತು. ಬೀದಿ ನಾಟಕಗಳು, ಜಾಗೃತಿ ಜಾಥಾಗಳು, ವಿಚಾರ ಸಂಕಿರಣಗಳು, ಸಂವಾದಗಳು, ಏಡ್ಸ್ ತಿಳುವಳಿಕಾ ಶಿಬಿರಗಳು ಮುಂತಾದ ಕಾರ್ಯಕ್ರಮ ನಡೆಸಿ ಜನರಲ್ಲಿ ಏಡ್ಸ್ ಬಗ್ಗೆ ಇರುವ ಅಪನಂಬಿಕೆಗಳನ್ನು ತೊಡೆದು ಹಾಕಿ, ಎಚ್‌ಐವಿ ವೈರಾಣುವಿನಿಂದ ಸೋಂಕಿತರಾದವರೂ ಇತರರಂತೆ ಸಾಮಾನ್ಯ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿ ಹೇಳುವ ಕೆಲಸವನ್ನು ಈ ದಿನ ಹೆಚ್ಚು ಮುತುವರ್ಜಿಯಿಂದ ನಡೆಸಲಾಗುತ್ತದೆ. ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳ ಒಳಗೆ ಬರುವ ಏಡ್ಸ್ ರೋಗ ಮನುಷ್ಯಕುಲವನ್ನು ಮಹಾಮಾರಿಯಂತೆ ಕಾಡುತ್ತದೆ. 2021ರ ಅಂಕಿ ಅಂಶಗಳ ಪ್ರಕಾರ 38.5 ಮಿಲಿಯನ್ ಮಂದಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು 38 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ 2021ರ ವರದಿಯಂತೆ 74 ಲಕ್ಷ ಮಂದಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು ವಾರ್ಷಿಕವಾಗಿ ಸರಿಸುಮಾರು 63 ಸಾವಿರ ಮಂದಿ ಪ್ರತೀವರ್ಷ ಹೊಸ ಎಚ್‌ಐವಿ ಸೋಂಕಿತ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ.
ಏನಿದು ಏಡ್ಸ್ ?
ಏಡ್ಸ್ ಎನ್ನುವುದು ಎಚ್‌ಐವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಛವಾಗಿರುತ್ತದೆ. ಎಚ್‌ಐವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್ಸಿ ವೈರಸ್ ಆಗಿರುತ್ತದೆ. ಈ ಎಚ್‌ಐವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೆಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್‌ಐವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ದೇಹದ ರೋಗ ನಿರೋಧಕ ಶಕ್ತಿಗೆ ಸಂಬಂಧಪಟ್ಟ ಕಾಯಿಲೆಯಾಗಿರುತ್ತದೆ. ಎಚ್‌ಐವಿ ವೈರಾಣು ದೇಹಕ್ಕೆ ಸೇರಿದ ಬಳಿಕ ನಮ್ಮ ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ಹೀಗಾದಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ, ರೋಗಿಯು ಬ್ಯಾಕ್ಟೀರಿಯಾ, ಫಂಗಸ್, ವೈರಾಣು ಅಥವಾ ಇನ್ನಾವುದೇ ರೋಗಗಳ ಸೋಂಕಿಗೆ ಬೇಗನೆ ತುತ್ತಾಗುತ್ತಾನೆ. ಒಟ್ಟಿನಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟು ಹೋಗಿ ರೋಗಿಗಳಲ್ಲಿ ಕಂಡುಬರುವ ರೋಗಗಳ ಸಮೂಹಕ್ಕೆ ಒಟ್ಟಾಗಿ ಏಡ್ಸ್ ರೋಗ ಎಂದು ಸಂಬೋಧಿಸಲಾಗುತ್ತದೆ. ಪದೇ ಪದೇ ಕಾಡುವ ಜ್ವರ, ತಲೆ ನೋವು, ನಿರಂತರ ಭೇದಿ, ವಿಪರೀತ ಸುಸ್ತು, ಅಪೌಷ್ಟಿಕತೆ, ಗಂಟಲು ಉರಿ, ಗಂಟಲು ನೋವು, ಕೆಮ್ಮು, ದಮ್ಮು, ದೇಹದ ತೂಕ ಕಡಿಮೆಯಾಗುವುದು, ಕುತ್ತಿಗೆಯ ಸುತ್ತ ಗಡ್ಡೆ ಬೆಳೆಯುವುದು ಹೀಗೆ ಹತ್ತು ಹಲವು ತೊಂದರೆಗಳು ಒಟ್ಟಾಗಿ ಕಾಡಿ ವ್ಯಕ್ತಿಯನ್ನು ಹಿಂಡಿ ಹಿಪ್ಪೆಮಾಡಿ ಆತನನ್ನು ರೋಗಗಳ ಹಂದರವನ್ನಾಗಿ ಮಾಡಿ, ರಸ ಹೀರಿದ ಕಬ್ಬಿನ ಜಲ್ಲೆಯಂತೆ ವ್ಯಕ್ತಿಯನ್ನು ಹೈರಾಣಾಗಿಸಿಬಿಡುತ್ತದೆ.
ಏಡ್ಸ್ ರೋಗಕ್ಕೆ ಚಿಕಿತ್ಸೆ ಇಲ್ಲ. ಯಾವುದೇ ಹಳ್ಳಿ ಮದ್ದು, ಆಯುರ್ವೇದ ಮದ್ದು, ಮಂತ್ರ ತಂತ್ರಗಳಿಂದ ಚಿಕಿತ್ಸೆ ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಆರ್‌ಟಿ ಅಂದರೆ ಆ್ಯಂಟಿ ರಿಟ್ರೋವೈರಲ್‌ಥೆರಪಿ ನೀಡಿ ವೈರಾಣುವಿನ ಆರ್ಭಟವನ್ನು ತಗ್ಗಿಸಲಾಗುತ್ತದೆ. ಆ ಮೂಲಕ ಸಿಡಿ-4 ಎಂಬ ಬಿಳಿರಕ್ತಕಣಗಳ ಸಂಖ್ಯೆ ವೃದ್ಧಿಸುವಂತೆ ಮಾಡಲಾಗುತ್ತದೆ. ಉತ್ತಮ ಪೋಷಕಾಂಶಯುಕ್ತ ಆಹಾರ, ನಿರಂತರವಾದ ಔಷಧಿ ಮತ್ತು ನುರಿತ ವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿ ರೋಗಿಗೆ ಸಂಪೂರ್ಣ ಸಹಕಾರ, ಧೈರ್ಯ ಮತ್ತು ಸಾಂತ್ವನ ನೀಡಬೇಕು.
ಹೇಗೆ ಹರಡದು?
1. ಬೆವರು, ಎಂಜಲು, ಸಿಂಬಳ, ಕಣ್ಣೀರು, ಮಲ, ಮೂತ್ರ ಮುಂತಾದವುಗಳನ್ನು ಮುಟ್ಟುವುದರಿಂದ ಹರಡುವುದಿಲ್ಲ.
2. ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ ಹರಡುವುದಿಲ್ಲ.
3. ಸೊಳ್ಳೆಗಳ ಕಡಿತದಿಂದ ಎಚ್‌ಐವಿ ಹರಡುವುದಿಲ್ಲ
4. ಕೈ ಕುಲುಕುವುದು, ಸೀನುವುದು, ಕೆಮ್ಮುವುದು ಇತ್ಯಾದಿಗಳಿಂದಲೂ ಹರಡುವುದಿಲ್ಲ.
ಕೊನೆ ಮಾತು
ಚಿಕಿತ್ಸೆ ಇಲ್ಲದ ರೋಗವಾಗಿದ್ದರೂ ಸಾಕಷ್ಟು ಮುಂಜಾಗರೂಕತೆ ವಹಿಸಿ ರೋಗವನ್ನು ನಿಯಂತ್ರಿಸಬಹುದು, ಕಟ್ಟು ನಿಟ್ಟಿನ ಆಹಾರ ಪದ್ಧತಿ, ನಿರಂತರ ಆಪ್ತಸಮಾಲೋಚನೆ, ಜೀವನ ಶೈಲಿ ಮಾರ್ಪಾಡು ಮತ್ತು ನಿರಂತರ ಔಷಧಿಗಳಿಂದ ಎಚ್‌ಐವಿ ಸೋಂಕಿತರೂ ಸಹಜ ಜೀವನ ನಡೆಸಬಹುದು ಎಂದು ಸಮಾಜಕ್ಕೆ ತಿಳಿ ಹೇಳಬೇಕಾದ ಅನಿವಾರ್ಯತೆ ಇದೆ. ಸಮಾಜ ಇಂತಹ ರೋಗಿಗಳನ್ನು ನೋಡುವ ದೃಷ್ಟಿ ಬದಲಾಗಬೇಕು ಹಾಗಾದಲ್ಲಿ ಮಾತ್ರ ಏಡ್ಸ್ ದಿನಾಚರಣೆ ಹೆಚ್ಚಿನ ಮೌಲ್ಯ ಬಂದಿತು.
ಹೇಗೆ ಹರಡುತ್ತದೆ?
* ಎಚ್‌ಐವಿ ಸೋಂಕು ಇರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಬಹುದು.
* ಎಚ್‌ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಎದೆಹಾಲಿನ ಮುಖಾಂತರ ಹರಡಬಹುದು. * ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳಿಂದಲೂ ಹರಡಬಹುದು.
* ಎಚ್‌ಐವಿ ಸೋಂಕು ಇರುವ ವ್ಯಕ್ತಿ ಬಳಸಿದ ಸೂಜಿ ಅದೇ ಸಿರಿಂಜ್‌ಗಳನ್ನು ಬೇರೆಯವರಿಗೆ ಬಳಸುವುದರಿಂದ ಹರಡುತ್ತದೆ.
* ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಎಚ್‌ಐವಿ ಸೋಂಕಿತ ಸಿರಿಂಜ್‌ನ್ನು ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ.
* ದೇಹದಲ್ಲಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್‌ಐವಿ ಸೋಂಕು ಇರುವವರಿಗೆ ಬಳಸಿದ ಸೂಜಿಗಳನ್ನು ಮಗದೊಮ್ಮೆ ಬಳಸುವುದರಿಂದ ಹರಡುತ್ತದೆ.