ಲಿಂಗ ಸಮಾನತೆಯ ಹೋರಾಟದಲ್ಲಿ ಗೆಲುವಿನ ಗಳಿಗೆ
ಲಿಂಗ ಸಮಾನತೆಯ ಕೆಲಸಕ್ಕಾಗಿ ಮೊದಲ ಕಮಲಾ ಭಾಸಿನ್ ಪ್ರಶಸ್ತಿಯನ್ನು ಆ ಇಬ್ಬರು ಗೆದ್ದಿದ್ದಾರೆ. ಎಷ್ಟೆಲ್ಲ ಹಿಂಸೆ, ಅವಮಾನ ಮತ್ತು ತಾರತಮ್ಯದ ದೃಷ್ಟಿಯನ್ನು ಎದುರಿಸಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟದ ಹಾದಿಯಲ್ಲಿ ಹೆಜ್ಜೆ ಮೂಡಿಸಿದ ಆ ಇಬ್ಬರು ದಿಟ್ಟೆಯರು ನತಿಸಾರಾ ರೈ ಮತ್ತು ವಿದ್ಯಾ ರಜಪೂತ್.
2021ರ ಸೆಪ್ಟ್ಟಂಬರ್‌ನಲ್ಲಿ ನಿಧನರಾದ ಸ್ತ್ರೀವಾದಿ ಹೋರಾಟಗಾರ್ತಿ, ಕವಯಿತ್ರಿ ಮತ್ತು ಲೇಖಕಿ ಕಮಲಾ ಭಾಸಿನ್ ಅವರ ಹೆಸರಿನ ಪ್ರಶಸ್ತಿ ಇದಾಗಿದೆ. ಭಾರತ ಮತ್ತು ಇತರ ದಕ್ಷಿಣ ಏಶ್ಯದ ದೇಶಗಳಲ್ಲಿನ ಮಹಿಳಾ ಚಳವಳಿಯಲ್ಲಿ ಭಾಸಿನ್ ಪ್ರಮುಖ ಧ್ವನಿಯಾಗಿದ್ದರು. ವೇಶ್ಯಾವೃತ್ತಿಗೆ ತಳ್ಳಲ್ಪಟ್ಟಾಗ ಆಕೆಗೆ ಬರೀ 13 ವರ್ಷ. ಆ ಕೂಪದಿಂದ ರಕ್ಷಿಸಲ್ಪಟ್ಟು ಹೊರಬಂದ ಬಳಿಕವೂ ಎಚ್‌ಐವಿ ಪಾಸಿಟಿವ್ ಆಗಿದ್ದುದರಿಂದಾಗಿ ಸಮಾಜದ ಬಹಿಷ್ಕಾರವನ್ನು ಎದುರಿಸಬೇಕಾಯಿತು. ಹೀಗೆ ಬದುಕನ್ನೇ ಕಂಗೆಡಿಸಿದ ಹಲವು ವರ್ಷಗಳನ್ನು ದಾಟಿ ಬಂದು, ಆ ಕಟು ಅನುಭವವನ್ನೇ ತನ್ನ ಸಾಧನೆಯ ಹಾದಿಗೆ ಸೋಪಾನ ಮಾಡಿಕೊಂಡು, ತನ್ನಂತೆಯೇ ಬಹಿಷ್ಕೃತರಾದವರ ಜೊತೆ ನಿಲ್ಲುವ ಛಲದೊಂದಿಗೆ ಗಟ್ಟಿಯಾದ ಆಕೆಯ ಹೆಸರು ನತಿಸಾರಾ ರೈ.
ನೇಪಾಳದಲ್ಲಿ ಅವರು ಸಹ ಸಂಸ್ಥಾಪಕಿಯಾಗಿ ಕಟ್ಟಿದ ‘ಶಕ್ತಿ ಮಿಲನ್ ಸಮಾಜ್’ ಸಾವಿರಕ್ಕೂ ಹೆಚ್ಚು ಎಚ್‌ಐವಿ ಪಾಸಿಟಿವ್ ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ದುಡಿಯುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ನೊಂದವರ ಆತ್ಮಗೌರವವನ್ನು ಕಾಯುತ್ತಿದೆ. ಅನ್ಯಾಯವನ್ನು ವಿರೋಧಿಸಲು ಒಗ್ಗಟ್ಟನ್ನು ವಿಸ್ತರಿಸಲು ಅವರೆಲ್ಲರೊಡನೆ ನಿಂತಿದ್ದಾರೆ ನತಿಸಾರಾ.
ಇದೇ ಬಗೆಯ ಕಷ್ಟಗಳನ್ನು ಬೇರೊಂದು ಕಾರಣಕ್ಕೆ ಅನುಭವಿಸಿದ ಮತ್ತೊಬ್ಬರು ಛತ್ತೀಸ್‌ಗಡದ ಬಸ್ತಾರಾದ ಆ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ. ತನ್ನ ಸಮುದಾಯದವರ ನೋವಿಗೆ ದನಿಯಾಗಲು, ಅವರಿಗೆ ಶಿಕ್ಷಣ, ವಸತಿ ಸೇರಿದಂತೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು, ಉದ್ಯೋಗ, ಆರೋಗ್ಯ ವಿಚಾರದಲ್ಲಿ ಕಾಳಜಿವಹಿಸಲು 2009ರಲ್ಲಿ ‘ಮಿತ್ವಾ’ ಎಂಬ ಸಂಸ್ಥೆಯನ್ನು ಕಟ್ಟಿದ ಆಕೆಯ ಹೆಸರು ವಿದ್ಯಾ ರಜಪೂತ್.
ಲೈಂಗಿಕ ಅಲ್ಪಸಂಖ್ಯಾತರಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಅವರ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಮಿತ್ವಾ ಮೂಲಕ ಅವರ ಹೋರಾಟ ನಡೆದೇ ಇದೆ. ಲಿಂಗ ಸಮಾನತೆಯ ಕಡೆಗೆ ಜಗತ್ತನ್ನು ಮುನ್ನಡೆಸಿದ್ದಕ್ಕಾಗಿ ಮೊತ್ತಮೊದಲ ಕಮಲಾ ಭಾಸಿನ್ (ದಕ್ಷಿಣ ಏಶ್ಯ) ಪ್ರಶಸ್ತಿಯನ್ನು ಈ ಇಬ್ಬರು ಸಾಧಕಿಯರಿಗೆ ನೀಡಲಾಗಿದೆ. ಇಬ್ಬರೂ ತಲಾ ಒಂದು ಲಕ್ಷ ರೂಪಾಯಿಯ ನಗದು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಯನ್ನು ಆಝಾದ್ ಫೌಂಡೇಶನ್, ಐಪಾರ್ಟ್ನರ್ ಇಂಡಿಯಾ ಮತ್ತು ನ್ಯಾಷನಲ್ ಫೌಂಡೇಶನ್ ಫಾರ್ ಇಂಡಿಯಾ ಸಂಸ್ಥೆಗಳು ಸ್ಥಾಪಿಸಿವೆ. ‘‘ಲಿಂಗ ಸಮಾನತೆಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ನಮಗೆ ಮಾರ್ಗದರ್ಶನ ನೀಡಿದ ಕಮಲಾ ದೀದಿ ಅವರ ಹೆಸರಿನ ಈ ಮನ್ನಣೆಯನ್ನು ಸ್ವೀಕರಿಸಲು ನನಗೆ ಅತ್ಯಂತ ಹೆಮ್ಮೆಯಾಗುತ್ತಿದೆ’’ ಎಂದಿದ್ದಾರೆ ನತಿಸಾರಾ ರೈ.
‘‘ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಮಾನವ ಹಕ್ಕುಗಳಿಗಾಗಿ ಕಮಲಾ ದೀದಿಯ ಹೋರಾಟವನ್ನು ಮುನ್ನಡೆಸುವ ಹಾದಿಯಲ್ಲಿ ನಾನೂ ಒಬ್ಬಳಾಗಿರುತ್ತೇನೆಂಬ ನನ್ನ ಮಾತು ಉಳಿಸಿಕೊಳ್ಳುವೆ’’ ಎಂದಿದ್ದಾರೆ ಅವರು. ವಿದ್ಯಾ ರಜಪೂತ್, ‘‘ಈ ಪ್ರಶಸ್ತಿ ಒಂದು ಪ್ರೋತ್ಸಾಹ; ಇದು ನನಗೆ ಮಾತ್ರವಲ್ಲದೆ ನನ್ನಂತಹ ಎಲ್ಲರಿಗೂ ಧೈರ್ಯವನ್ನು ನೀಡುತ್ತದೆ.
ಏಕೆಂದರೆ ಇಂದಿನವರೆಗೂ ನಾವು ಲೈಂಗಿಕ ಅಲ್ಪಸಂಖ್ಯಾತರು ನಮ್ಮ ಕುಟುಂಬ ಮತ್ತು ಸಮಾಜದಿಂದ ನಿರಾಕರಿಸಲ್ಪಟ್ಟಿದ್ದೇವೆ. ಈ ಗೌರವವು ನಮ್ಮ ಸಮುದಾಯದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಮತ್ತು ಭವಿಷ್ಯದಲ್ಲಿ ಇದು ಬಹಳಷ್ಟು ಧನಾತ್ಮಕ ಬದಲಾವಣೆಗಳನ್ನು ತರಲಿದೆ’’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಮಲಾ ಅವರ ಜೀವನ ಮತ್ತು ಕೆಲಸವು ಏನನ್ನು ಪ್ರತಿನಿಧಿಸುತ್ತದೆಯೋ ಅದಕ್ಕೆ ಅನುಗುಣವಾಗಿರುವ ಇಬ್ಬರ ಈ ಆಯ್ಕೆ ಸಂತಸ ತಂದಿದೆ ಎಂಬುದು ಐವರು ತೀರ್ಪುಗಾರರ ಅಭಿಮತ. ಮಹಿಳಾ ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ ಅನು ಅಗಾ ನೇತೃತ್ವದ ತೀರ್ಪುಗಾರರ ಸಮಿತಿಯಲ್ಲಿ ಇದ್ದ ಇತರರೆಂದರೆ ಖುಷಿ ಕಬೀರ್ (ಬಾಂಗ್ಲಾದೇಶ), ಬಿಂದಾ ಪಾಂಡೆ (ನೇಪಾಳ), ಸಲೀಲ್ ಶೆಟ್ಟಿ (ಭಾರತ) ಮತ್ತು ನಮಿತಾ ಭಂಡಾರೆ (ಭಾರತ).