ಕಣ್ಮರೆಯಾಗುತ್ತಿರುವ ಹಾಲಕ್ಕಿ ಸಂಸ್ಕೃತಿಯ ಚಿಹ್ನೆ - ಅಕ್ಕಿ ಮುಡಿ
‘‘ಮೀನ ಪಳದಿಯ ಜೊತೆಗೆ ಕೊರಸಕ್ಕಿ ಅನ್ನ
ಕನ್ನಡ ಕರಾವಳಿಯ ನಿತ್ಯ ಪಕ್ವಾನ್ನ
ಇದರ ರುಚಿ ನೋಡಿದರೆ ದೇವರೂ ಕೊನೆಗೆ
ಸ್ವರ್ಗವನ್ನಿಳಿದು ಬರುವನು ನಮ್ಮ ಮನೆಗೆ’’
ಎನ್ನುವ ಡಾ.ದಿನಕರ ದೇಸಾಯಿ ಅವರ ಚುಟುಕಿನಲ್ಲಿ ಕರಾವಳಿ ಜನರ ಆಹಾರ ಪದ್ದತಿಯನ್ನು ಅರಿಯಬಹುದು. ಕೊರಸಕ್ಕಿ (ಕುಚ್ಚಕ್ಕಿ), ಬೆಣ್ತಕ್ಕಿಯನ್ನು ಮೋಡಿಯಲ್ಲಿ ಕಟ್ಟುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿತ್ತು. ಇದು ಕರಾವಳಿ ಭಾಗದ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲಿ ಒಂದು.
ಒಣ ಹುಲ್ಲಿನಿಂದಲೇ ಕಟ್ಟಲ್ಪಡುವ ಈ ಮುಡಿಯ ಒಳಭಾಗದಲ್ಲಿ ನಿರ್ದಿಷ್ಟವಾದ ಉಷ್ಣತೆ ಇರುತ್ತಿದ್ದು, ಮಳೆಗಾಲದಲ್ಲಿ ಅಕ್ಕಿ ಕೆಡದಂತೆ ಸುರಕ್ಷಿತವಾಗಿ ಶೇಖರಿಸಲು ಈ ವಿಧಾನವನ್ನು ಹಿಂದಿನ ತಲೆಮಾರಿನವರು ಅಳವಡಿಸಿಕೊಂಡಿದ್ದರು. ಅಂದಿನ ಕೆಲವು ಗಾದೆ ಮಾತುಗಳನ್ನು ಕೇಳಿದಾಗ ಅಕ್ಕಿಮುಡಿಯ ಮಹತ್ವ ಎಂತಹದ್ದು ಎಂದು ಅರಿವಾಗುತ್ತದೆ. ‘‘ಅಕ್ಕಿಮುಡಿ ಲೆಕ್ಕ ಮಾಡು, ನೆಂಟಸ್ತಿಕಿಗೆ ಪ್ರಸಾದ ನೋಡು’’ ಹಾಗೂ ಗೇಣುದ್ದ ಕೋಣೆಲಿ ಅಕ್ಕಿ ಮುಡಿ, ಮಾರುದ್ದ ಬಾಯಲ್ಲಿ ಮಾತ್ನೋಡು’’ ಎಂಬ ಗಾದೆ ಅಂದು ಜೀವಂತವಾಗಿತ್ತು. ಇಂದಿನದು ಅಕ್ಕಿ ಮುಡಿ ಎಂದರೇನು ಎಂಬುದೇ ತಿಳಿಯದ ಪೀಳಿಗೆ.
ಅಕ್ಕಿ ಮುಡಿಯನ್ನು ಕಟ್ಟುವ ವ್ಯಕ್ತಿಯ ನೈಪುಣ್ಯತೆ ಮೆಚ್ಚುವಂಥದ್ದು. ಇದೊಂದು ಕೌಶಲ್ಯವೇ ಸರಿ. ಮೊದಲು ಆಯ್ದ ಒಣ ಹುಲ್ಲಿನಿಂದ ಉದ್ದನೆಯ ಹಗ್ಗವನ್ನು ತಯಾರಿಸಿಕೊಳ್ಳುವರು. ಮಡೆ ಹಗ್ಗ ಎಂದು ಅದನ್ನು ಕರೆಯುತ್ತಾರೆ.
ಅದನ್ನು ಗೋಲಾಕಾರದಲ್ಲಿ ನೆಲದ ಮೇಲೆ ಹಾಕಿ ನಂತರ ಬಿಡಿ ಹುಲ್ಲನ್ನು ತಳಭಾಗದಿಂದ ಒಟ್ಟುಗೂಡಿಸಿಕೊಂಡು ನುಗ್ಗಾದ ಹುಲ್ಲನ್ನು ಹದವಾಗಿ ಹಾಸಿ ಹಂತ ಹಂತವಾಗಿ ಅಕ್ಕಿಯನ್ನು ಅಳೆದು ವೃತ್ತಾಕಾರವಾದ ಹುಲ್ಲಿನ ಕೇಂದ್ರ ಭಾಗದಿಂದ ರಾಶಿ ಹಾಕುತ್ತ ಕುಡ್ತ್ಗಿ ಎಂಬ ಮುಡಿ ಕಟ್ಟಲೆಂದೇ ಇರುವ ವಿಶಿಷ್ಟ ಬಡಿಗೆಯಿಂದ ಬಡಿಯುತ್ತ ಅಕ್ಕಿಯನ್ನು ಕೀಲಿಸುತ್ತ ಮುಡಿಕಟ್ಟುವ ಕಲೆ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಬೆತ್ತವನ್ನು ಕೂಡ ಮುಡಿ ಕಟ್ಟುವ ಕೆಲಸದಲ್ಲಿ ಬಳಸಲಾಗುತ್ತದೆ. ಕೊಳಗ, ಖಂಡಗ, ಮಾನಗಿ ಎಂಬ ಅಳತೆ ಮಾಪನವನ್ನು ಬಳಸಿ ಅಕ್ಕಿ ಮುಡಿ ಹಾಗೂ ಬೀಜದ ಮುಡಿ ಕಟ್ಟಲಾಗುತ್ತದೆ.
ಅಕ್ಕಿಮುಡಿ ಕಟ್ಟಲು ಬಳಸುವ ಕುಡ್ತ್ಗಿಯನ್ನು ಹೆಚ್ಚಾಗಿ ಹುಣಸೆಮರದ ಕಿಂಚಿನಿಂದ ತಯಾರಿಸಲಾಗುತ್ತದೆ. ಕುಡ್ತ್ಗಿ ಸುಮಾರು ಎರಡೂಕಾಲು ಅಡಿ ಉದ್ದವಿರುತ್ತಿದೆ. ಹೆಚ್ಚು ಭಾರವಾಗಿರುತ್ತದೆ. ಹುಣಸೆಯಲ್ಲದೆ ಇನ್ನುಳಿದಂತೆ ಸಾಗ, ಸಿಸಂ ಮರದಿಂದಲೂ ತಯಾರಿಸಿದ ಕುಡ್ತ್ಗಿಯು ಬಳಕೆಯಲ್ಲಿತ್ತು. ಅಕ್ಕಿಮುಡಿ ಕಟ್ಟುವಾಗ ಕುಡ್ತ್ಗಿಯಿಂದ ಹೊಡೆಯುವ ಸಪ್ಪಳ ಒಂದು ತೆರನಾದ ಸಂಗೀತದಂತೆ ಕೇಳುತ್ತದೆ. ಕುಡ್ತ್ಗಿಯ ಪೆಟ್ಟಿಗೆ ತಕ್ಕಂತೆ ಅಕ್ಕಿಮುಡಿ ರೂಪ ತಾಳುತ್ತದೆ.
ಹಿಂದೆ ಶುಭ ಸಮಾರಂಭಗಳಲ್ಲಿ ಈ ಅಕ್ಕಿಮುಡಿಯನ್ನು ಬಳಸಲಾಗುತ್ತಿತ್ತು. ಹಾಲಕ್ಕಿ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ವರನನ್ನು ಅಕ್ಕಿಮುಡಿ ಮೇಲೆ, ವಧುವನ್ನು ಬೀಜದ ಮುಡಿಯ ಮೇಲೆ ಕೂರಿಸಿ ಮದುವೆ ಮಾಡಿಸಲಾಗುತ್ತಿತ್ತು. ಅಂಕೋಲಾದ ಬಡಿಗೇರಿಯ ಕೆಲವು ಮನೆತನಗಳು ಇಂದಿಗೂ ಅಕ್ಕಿಮುಡಿಯನ್ನು ಶಾಸ್ತ್ರಕ್ಕೆ ಕಟ್ಟುವುದುಂಟು.
ಭತ್ತದ ಕೃಷಿಯೇ ಇಲ್ಲವಾಗುತ್ತಿರುವ ಈ ಕಾಲದಲ್ಲಿ ಅಕ್ಕಿಮುಡಿ ಬಗ್ಗೆ ಕುಡ್ತ್ಗಿಯ ಬಗ್ಗೆ ಯುವ ಪೀಳಿಗೆ ತಿಳಿದಿರುವುದು ದೂರದ ಮಾತೇ ಸರಿ. ಪರಿಸರ ಸ್ನೇಹಿಯಾದ ಈ ವಿಧಾನವಿಂದು ಕಣ್ಮರೆಯಾಗುತ್ತಿದೆ.