ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ...: ನಿರ್ದೇಶಕ ಕವಿರಾಜ್ ಆತಂಕ
ಬೆಂಗಳೂರು: ಎನ್ಡಿಟಿವಿ ಮಾಲಕತ್ವ ಅದಾನಿ ಸಮೂಹದ ತೆಕ್ಕೆಗೆ ಬಿದ್ದ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿಗೆ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು 'ಗೋದಿ ಮೀಡಿಯಾದ ವಿರುದ್ಧ ಜನರೇ ಹೋರಾಡುವುದು ಅನಿವಾರ್ಯ' ಎಂದು NDTV ಬಿಟ್ಟ ರವೀಶ್ ಕುಮಾರ್ ಖುದ್ದು ಜನರಿಗೆ ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ NDTV ವಿಷಯವನ್ನು ಪ್ರಸ್ತಾಪಿಸದೇ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಿರ್ದೇಶಕ, ಗೀತ ಸಾಹಿತಿ ಕವಿರಾಜ್ (Kavi Raj) ಅವರು, 'ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳ ವಿಪ್ಲವಗಳು ಹೇಗಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕವಿರಾಜ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...
'ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ... ವಿಮಾನ ನಿಲ್ದಾಣಗಳಿಂದ ಹಿಡಿದು ಬಂದರು , ರೈಲು, ವಿದ್ಯುತ್ , ನೀರು ಸರಬರಾಜು , ಸಂಪರ್ಕ ಜಾಲ , ಎಲ್ಲಾ ಪತ್ರಿಕೆ , ಟೀವಿ ಚಾನೆಲ್ ಸಹಿತ ತರಕಾರಿ ಮಾರಾಟ ಕೂಡಾ ಅವರದ್ದೇ. ಎಲ್ಲವೂ ಅವರ ನಿಯಂತ್ರಣದಲ್ಲಿರುತ್ತದೆ. ಬೆಲೆಯೇರಿಸಿದರೆ ಮುಂದಿನ ಚುನಾವಣೆಯಲ್ಲಿ ಮತದಾರರು ಮನೆದಾರಿ ತೋರಿಸಬಹುದೆಂಬ ಭಯ ಅವರಿಗಿರುವುದಿಲ್ಲ. ಕಾರಣ ಅವರೇನು ಚುನಾವಣೆಗೆ ನಿಂತು ಮತ ಬಿಕ್ಷೆ ಬೇಡುವವರಲ್ಲ, ಅವರಿಗೆ ಬೇಕಿರೋದು ಹೂಡಿದ ಹಣದ ಹಲವಾರು ಪಟ್ಟು ಲಾಭದ ಹರಿವಷ್ಟೇ' ಎಂದು ಕವಿರಾಜ್ ಹೇಳಿದ್ದಾರೆ.
'ಲಕ್ಷ ಲಕ್ಷ ಕೋಟಿ ಸಂಪತ್ತಿನ ಒಡೆಯರಿಗೆ ತಮಗೆ ಬೇಕಾದ ಜನಾಭಿಪ್ರಾಯ ರೂಪಿಸಿ ಅವರ ಆಜ್ಞಾಪಾಲಕ ಸರ್ಕಾರ ಸ್ಥಾಪಿಸಲು ಖರ್ಚಾಗುವುದು ಅವರಿಗೆ ಕೇವಲ 'ಪೀ ನಟ್' ( ಕಡಲೆಕಾಯಿ ) ಎನ್ನಬಹುದಾದ ಕೆಲವು ಸಾವಿರ ಕೋಟಿಗಳಷ್ಟೇ. ಇದರ ಪ್ರಯೋಗ ಈಗಾಗಲೇ ಯಶಸ್ವಿಯಾಗಿ ನಡೆದಾಗಿದೆ. ಅದರಾಚೆ ಇವನು ಮಾತು ಕೇಳದಿದ್ದರೆ ಮುಲಾಜಿಲ್ಲದೇ ಎತ್ತಿ ಬಿಸಾಕಿ ಅವನನ್ನು ಉತ್ಸವ ಮೂರ್ತಿಯಾಗಿಸಿ ಕೂರಿಸುವುದು ಅವರಿಗೆ ಕಿರು ಬೆರಳಿನ ಕೆಲಸ. ಮುಂದಿನ ದಿನಗಳ ವಿಪ್ಲವಗಳು ಹೇಗಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕವಿರಾಜ್ ಅವರ ಈ ಪೋಸ್ಟ್ ಅನ್ನು ಹಲವರು ಬೆಂಬಲಿಸಿದ್ದು, ' ಅಬ್ದುಲ್ ಕಲಾಂ ಅವರು 2 ಪುಸ್ತಕ ಹೆಸರು ನೆನಪಾಗ್ತಾ ಇದೆ wings of fire ,India 2020 ಇವರೇ ಆ ವಿಂಗ್ಸ್ 2020ರ ನಂತರ ಅಂತ ಅವರಿಗೂ ಭಾಸವಾಗದೆ ಹೋಯಿತೇನೋ, ಶಿಕ್ಷಣದಲ್ಲಿ ಖಾಸಗೀಕರಣದ ಹೊಡೆತ ಯಾವ ಮಟ್ಟಕ್ಕೆ ಇದೆ ಅಂತ ಅರಿವಿಗೆ ಬಂದಾಗಿದೆ ಇನ್ನ ಎಲ್ಲಾ ಕ್ಷೇತ್ರಕ್ಕೆ ಲಗ್ಗೆ ಇಟ್ಟರೆ ಮುಂದಿನ ದಿನಗಳು ದುಸ್ತರ' ಎಂದು ಮಧು ಗೌಡ ಎಂಬುವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮುಳಬಾಗಿಲು | ಕ್ಷುಲ್ಲಕ ಕಾರಣಕ್ಕೆ ಮರಕ್ಕೆ ಕಟ್ಟಿ ಹಲ್ಲೆ; ನೊಂದ ದಲಿತ ಯುವಕ ಆತ್ಮಹತ್ಯೆ: ಆರೋಪ